spot_img
spot_img

ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳ ಮೌನ; ಕಣ್ಣೀರಿನ ಗಡಾದಗೆ ಲಾಭವಾಗುವುದೆ?

Must Read

- Advertisement -

ಒಂದು ಕೊಳೆತ ಹಣ್ಣು ಇಡಿ ಬುಟ್ಟಿಯನ್ನೇ ಕೆಡಿಸುತ್ತದೆ

ಮೂಡಲಗಿ: ಅರಭಾವಿ ಕ್ಷೇತ್ರದ ಚುನಾವಣಾ ಅಖಾಡ ವಿಚಿತ್ರ ತಿರುವು ಪಡೆದುಕೊಂಡಿದೆ. ಇಲ್ಲಿಯವರೆಗೂ ಇಲ್ಲಿ ಬಿಜೆಪಿ ಅಂದರೆ ಸಾವಕಾರ ಬಾಲಚಂದ್ರ ಜಾರಕಿಹೊಳಿಯವರ ಅಧಿಕಾರಕ್ಕೆ ಯಾವುದೇ ತೊಡಕು ಇರಲಿಲ್ಲ. ಯಾವಾಗ ಮೂಡಲಗಿ ತಾಲೂಕಾ ಹೋರಾಟ ಪ್ರಾರಂಭವಾಯಿತೋ ಆಗ ಕೇವಲ ಮಾಹಿತಿ ಹಕ್ಕಿನ ಅಡಿಯಲ್ಲಿ ‘ಜನಸೇವೆ’ ಮಾಡಿಕೊಂಡು ತನ್ನಷ್ಟಕ್ಕೆ ಇದ್ದ ಭೀಮಪ್ಪ ಗಡಾದ ಆ ಹೋರಾಟದಲ್ಲಿ ಮಿಂಚಿದರು. ಹಾಗೆ ನೋಡಿದರೆ ಘೋಷಣೆಯಾಗಿದ್ದ ಮೂಡಲಗಿ ತಾಲೂಕನ್ನು ರದ್ದು ಮಾಡಿಸಿದ ರಮೇಶ ಜಾರಕಿಹೊಳಿ ತಮ್ಮ ಸಹೋದರನ ರಾಜಕೀಯ ಭವಿಷ್ಯವನ್ನು ಸ್ವಲ್ಪ ಜಟಿಲವಾಗಿಸಿದರು ಎನ್ನಬೇಕು. 

ಘೋಷಣೆಯಾಗಿದ್ದ ಮೂಡಲಗಿ ತಾಲೂಕನ್ನು ರಮೇಶ ಅವರು ಯಾವ ಉದ್ದೇಶದಿಂದ ರದ್ದು ಮಾಡಿಸಿದರೋ, ಅದರಿಂದ ಅವರು ಸಾಧಿಸಿದ್ದಾದರೂ ಏನು ಎಂಬುದು ಇನ್ನೂ ನಿಗೂಢ. ಆದರೆ ಮೂಡಲಗಿ ಜನರಲ್ಲಿ ಕೆಚ್ಚು ಮೂಡಿಸಿದ್ದು ಮಾತ್ರ ಸುಳ್ಳಲ್ಲ. ಅದೇ ಕೆಚ್ಚು ಆ ಹೋರಾಟದ ನಂತರದ ಚುನಾವಣೆ ಅಂದರೆ ೨೦೧೮ ರ ಚುನಾವಣೆಯಲ್ಲಿ ಬಾಲಚಂದ್ರ ಜಾರಕಿಹೊಳಿಯವರಿಗೆ ಚುರುಕು ಮುಟ್ಟಿಸಿತು. ಹೇಗೋ ಏನೋ ಅದನ್ನು ನಿಭಾಯಿಸಿ ಬಾಲಚಂದ್ರ ಜಾರಕಿಹೊಳಿಯವರು ಡ್ಯಾಮೇಜ್ ಕಂಟ್ರೋಲ್ ಮಾಡಿದರು, ಚುನಾವಣೆಯಲ್ಲಿ ಆಯ್ಕೆಯೂ ಆದರು. ಕೆಎಮ್ಎಫ್ ಅಧ್ಯಕ್ಷರಾಗಿ ಒಂದು ಹೊಸ ಇಮೇಜ್ ಕೂಡ ಪಡೆದುಕೊಂಡರು.

- Advertisement -

ಆದರೆ ಅರಭಾವಿಯಲ್ಲಿ ಪ್ರವಾಹ ಪೀಡಿತರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸರಿಯಾದ ನ್ಯಾಯ ಒದಗಿಸಿಲ್ಲ ಎಂಬ ಅಸಮಾಧಾನವಿದೆ. ಇದೀಗ ಹಳ್ಳಿ ಹಳ್ಳಿಗಳಲ್ಲಿ ತಿರುಗಾಡುತ್ತ ಕಣ್ಣೀರು ಹಾಕುತ್ತಿರುವ ಪಕ್ಷೇತರ ಅಭ್ಯರ್ಥಿ ಅದೇ ಪ್ರವಾಹ ಪೀಡಿತರ ಕಷ್ಟನಷ್ಟಗಳನ್ನು ಕೆದಕಿ ಜಾರಕಿಹೊಳಿಯವರ ಮೇಲೆ ಸುಪ್ತವಾಗಿದ್ದ ಜನರ ಕೋಪವನ್ನು ಕೆದಕುತ್ತಿದ್ದಾರೆ. ಚುನಾವಣೆಯ ಸಮಯದಲ್ಲಿ ಇದು ಸಹಜವಾದದ್ದು. ಹಿಂದಿನ ಶಾಸಕರು ಬಡವರ, ಪ್ರವಾಹ ಸಂತ್ರಸ್ತರ ವಿಷಯದಲ್ಲಿ ನ್ಯಾಯವಾಗಿ ನಡೆದುಕೊಂಡಿದ್ದರೆ ಅದನ್ನು ಮನವರಿಕೆ ಮಾಡಿ ಓಟು ಗಳಿಸಬೇಕಾದ ದೊಡ್ಡ ಜವಾಬ್ದಾರಿ ಜಾರಕಿಹೊಳಿಯವರ ಮೇಲಿದೆ. ಇದಷ್ಟೇ ಅಲ್ಲದೆ ಕ್ಷೇತ್ರದಲ್ಲಿ ಇರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ನಿರ್ಲಕ್ಷ್ಯ ಧೋರಣೆಗಳನ್ನೇ ಭೀಮಪ್ಪ ಗಡಾದ ಅವರು ತಮ್ಮ ಭಾವನಾತ್ಮಕ ನಟನೆಯಿಂದ ಜನರ ಮುಂದೆ ಇಡುತ್ತಿದ್ದಾರೆ. ಗಡಾದ ಅವರ ವರ್ತನೆ ನಟನೆ ಎಂದು ಯಾಕೆ ಹೇಳಿದೆನೆಂದರೆ, ಭೀಮಪ್ಪ ಗಡಾದ ಅವರು ತಾವು ಕಡು ಬಡತನದಿಂದ ಬಂದವನು, ರಾಜಕೀಯ ಮಾಡುವ ಇರಾದೆ ತನಗಿಲ್ಲ ಎಂದು ಹೇಳುತ್ತ ಜನರ ಹತ್ತಿರ ಭಿಕ್ಷೆ ಬೇಡುತ್ತಾರೆ. ಹಣವಿಲ್ಲ ಎಂದು ಕಣ್ಣೀರು ಸುರಿಸುತ್ತಾರೆ. ಆದರೆ ೧೮ ಲಕ್ಷದ ಎಸಿ ಕಾರಿನಲ್ಲಿ ರಾಜ್ಯಾದ್ಯಂತ ಸಂಚರಿಸುವ ಶಕ್ತಿ ಹೊಂದಿದ್ದಾರೆ. ಹಲವು ಕಾರ್ಯಕರ್ತರನ್ನು ಕರೆದುಕೊಂಡು ಹೋಗಿ ಅವರ ಖರ್ಚುವೆಚ್ಚಗಳನ್ನೆಲ್ಲ ನೋಡಿಕೊಳ್ಳುತ್ತಾರೆ ಅದಕ್ಕೆಲ್ಲ ದುಡ್ಡು ಅವರ ಹತ್ತಿರ ಇದೆ. ಚುನಾವಣೆಗೆ ಸ್ಪರ್ಧೆ ಅಂದಾಗ ಜನರಿಂದ ಭಿಕ್ಷೆ ಬೇಡುವೆ ಎಂದು ಭಾವನಾತ್ಮಕವಾಗಿ ಜನರ ಮೇಲೆ ದಾಳಿ ಮಾಡುತ್ತಾರೆ. ಅಷ್ಟೇ ಯಾಕೆ ಅಜ್ಜಿಯೊಬ್ಬರು ಹಿಂದಿನ ದಿನಗಳನ್ನು ನೆನೆಸಿಕೊಂಡು ಹಾಡಾಡಿಕೊಂಡು ಅಳುವಂತೆ ಮಾಡುವಲ್ಲಿ ಗಡಾದ ಅವರು ಯಶಸ್ವಿಯಾಗಿ ಆಕೆಯ ಕೈಯಿಂದ ಕಾಲುಗಳನ್ನು ಕೂಡ ಮುಟ್ಟಿಸಿಕೊಂಡ ವೀಡಿಯೋ ಎಲ್ಲೆಡೆ ಹರಿದಾಡಿ ಎಲ್ಲರ ಎದೆಗಳನ್ನು ನೀರಾಗಿಸುತ್ತಿದೆ.

- Advertisement -

ಇತ್ತ ಬಿಜೆಪಿ ಅಭ್ಯರ್ಥಿ ಮಾತ್ರ ಯಾಕೋ ಮೌನವಾಗಿದ್ದು ಈ ಸಲದ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಇನ್ನು ಕಾಂಗ್ರೆಸ್ ನ ಅರವಿಂದ ದಳವಾಯಿಯವರು ನಾಮ್ ಕೆ ವಾಸ್ತೆ ಚುನಾವಣೆಗೆ ಸ್ಪರ್ಧಿಸಿದ್ದು ಪರೋಕ್ಷವಾಗಿ ಜಾರಕಿಹೊಳಿಯವರಿಗೆ ಅನುಕೂಲ ಮಾಡಿಕೊಡಲು ದಳವಾಯಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದಾರೆ ಎಂದು ಗಡಾದ ಹಾಗೂ ಬೆಂಬಲಿಗರು ಆರೋಪಿಸುತ್ತಾರೆ. ದಳವಾಯಿಯವರು ಒಂದು ರೀತಿಯಲ್ಲಿ ಅದೆ ರೀತಿ ನಡೆದುಕೊಳ್ಳುತ್ತಿದ್ದು ಪ್ರಚಾರಕ್ಕೆ ಅಥವಾ ಆಯ್ಕೆಯಾಗಿ ಬರುವುದಕ್ಕೆ ಹೆಚ್ಚು ತಲೆ ಕೆಡಿಸಿಕೊಂಡಂತಿಲ್ಲ. ಅಲ್ಲದೆ ಗಡಾದ ಅವರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಲು ಜಾರಕಿಹೊಳಿಯವರೇ ಕಾರಣ ಎಂಬುದು ಅವರ ಆರೋಪ. ಇದು ಅರಭಾವಿ ಕ್ಷೇತ್ರಕ್ಕಷ್ಟೇ ಸೀಮಿತವಾಗದೆ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿಯವರ ತನಕವೂ ಹೋಗಿದ್ದು ಇದರಲ್ಲಿ ಅವರ ಪಾತ್ರವೂ ಇದೆ, ಅವರು ಕಾಂಗ್ರೆಸ್ ನವರಾದರೂ ಬಿಜೆಪಿಯ ತಮ ಸಹೋದರ ಬಾಲಚಂದ್ರರನ್ನು ಗೆಲ್ಲಿಸಲು ಕುತಂತ್ರ ಮಾಡಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಯಾಗಿರುವ ಗಡಾದ ಆಪಾದನೆ.

ಫಲಿತಾಂಶ ಏನೇ ಇರಲಿ, ಜನರ ಭಾವನೆಗಳ ಜೊತೆ ಗಡಾದ ಉತ್ತಮವಾಗಿಯೇ ಆಡುತ್ತಿದ್ದಾರೆನ್ನಬಹುದು. ಯಾಕೆಂದರೆ ಕಣ್ಣೀರಿಗೆ ಕರಗದ ಜನರೇ ಇಲ್ಲ. ಹಳ್ಳಿಯ ಜನ ಬೇಗ ಮರುಳಾಗುತ್ತಾರೆ ಆದರೆ ಗಡಾದ ಅವರ ನೆರಳಿನಲ್ಲಿಯೇ ಭ್ರಷ್ಟ ವ್ಯಕ್ತಿಯೊಬ್ಬ ಸೇರಿಕೊಂಡು ಅವರನ್ನೇ ಆಟವಾಡಿಸುವಷ್ಟು ಪ್ರಬಲನಾಗಿರುವ ಬಗ್ಗೆ ಅವರಿಗೇ ಅರಿವಿಲ್ಲ. ಉಳಿದವರಿಗೆ ಇದು ಗೊತ್ತಿದ್ದರೂ ಗಡಾದ ಅವರಿಗೆ ತಿಳಿ ಹೇಳುವ ಮನಸ್ಸಿಲ್ಲ. ಚುನಾವಣೆಯ ಪೂರ್ವದಲ್ಲಿಯೇ ಹೀಗೆ ಇನ್ನು ನಾಳೆ ಗಡಾದ ಆಯ್ಕೆಯಾದರೆ ಈ ಭ್ರಷ್ಟ ಹುಳ ಒಂದು ದೊಡ್ಡ ಮೊಸಳೆಯಾಗಿ ಹೊರಹೊಮ್ಮಬಹುದು. ಆಗ ಏನಾಗುತ್ತದೆಯೆಂದರೆ, ಈಗ ಇರುವ ಶಾಸಕರು ಏನೋ ಸ್ವಲ್ಪ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮಾಡಿರಬಹುದು. ಇವರನ್ನು ಮೀರಿಸುವ ಮಟ್ಟಕ್ಕೆ ಇದು ಮುಟ್ಟಬಾರದು. ಈ ವಿಷಯ ಗಡಾದ ಅವರ ಬೆಂಬಲಿಗರು ಮನದಲ್ಲಿ ಇಟ್ಟುಕೊಳ್ಳಬೇಕಾಗಿದೆ, ಎಚ್ಚರವಾಗಬೇಕಾಗಿದೆ. ಯಾಕೆಂದರೆ ಒಂದು ಬುಟ್ಟಿ ಒಳ್ಳೆಯ ಹಣ್ಣು ಕೆಡಲು ಒಂದೇ ಒಂದು ಕೊಳೆತ ಹಣ್ಣು ಸಾಕು ಅಲ್ಲವೆ ?


ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಗುರ್ಲಾಪೂರ ಗ್ರಾಮಕ್ಕೆ ಸಂಸದೆ ಮಂಗಳಾ ಅಂಗಡಿ ಭೇಟಿ

ಗುರ್ಲಾಪೂರ- ಮೂಡಲಗಿ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಗುರ್ಲಾಪೂರ ಗ್ರಾಮಕ್ಕೆ ಇತ್ತಿಚೆಗೆ ಬೆಳಗಾವಿಯ ಲೋಕಸಭಾ ಸದಸ್ಯರಾದ ಶ್ರೀಮತಿ ಮಂಗಳಾ ಸುರೇಶ ಅಂಗಡಿ ಇವರು ಪ್ರಥಮ ಬಾರಿಗೆ ಭೇಟಿ...
- Advertisement -

More Articles Like This

- Advertisement -
close
error: Content is protected !!
Join WhatsApp Group