ಶಾಸಕ ಮನಗೂಳಿ ರಾಜಕೀಯ ಭವಿಷ್ಯಕ್ಕೆ ಪೆಟ್ಟು ಬಿಳಬಹುದೇ?
ವರದಿ; ಪಂಡಿತ ಯಂಪೂರೆ.
ಸಿಂದಗಿ; ಪಟ್ಟಣದ ಅಭಿವೃದ್ಧಿಗೆ ಹೊಸ ಆಯಾಮ ಕೊಡಲು ನಿತ್ಯ ಜೆಸಿಬಿಗಳ ಸದ್ದು ಕೇಳಿ ಬುಲ್ ಡೋಜರ್ ಬಾಬಾ ಎಂಬ ನಾಮಕರಣಕ್ಕೆ ಸಾಕ್ಷಿಯಾದ ಅಧ್ಯಕ್ಷ ಶಾಂತವೀರ ಬಿರಾದಾರ ಅವರ ವಿರುದ್ಧ ಬರೀ ೬ ತಿಂಗಳಲ್ಲಿಯೇ ಅವಿಶ್ವಾಸ ಮಂಡನೆಗೆ ಮುಂದಾಗಿ ಬಿರಾದಾರ ಮತ್ತು ಮನಗೂಳಿ ಮನೆತನಗಳ ನಡುವೆ ಮುಸುಕಿನ ಗುದ್ದಾಟ ನಡೆದಿರುವುದು ಬಿರಾದಾರ ಅವರ ಅಧ್ಯಕ್ಷ ಸ್ಥಾನ ಹಾಗೂ ಶಾಸಕ ಅಶೋಕ ಮನಗೂಳಿ ಅವರು ಮುಂದಿನ ರಾಜಕೀಯಕ್ಕೆ ಪೆಟ್ಟು ಬಿಳುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ.
ಹೌದು. ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಮುಗಿದು ಹಲವು ವರ್ಷಗಳು ಕಳೆದು ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿತ್ತು ಅದು ೨೦೨೪ ಸೆ.೯ ರಂದು ನಡೆದ ಚುನಾವಣೆಯಲ್ಲಿ ೨೩ ವಾರ್ಡಗಳ ಪೈಕಿ ೧೮ ಜನ ಸದಸ್ಯರು ಹಾಜರಿದ್ದು ೫ ಜನ ಸದಸ್ಯರು ಗೈರು ಉಳಿದರೂ ಸಹ ಅಧ್ಯಕ್ಷರಾಗಿ ಶಾಂತವೀರ ಬಿರಾದಾರ ಅವರು ಅವಿರೋಧವಾಗಿ ಆಯ್ಕೆಯಾದ ನಂತರವು ವೈಷಮ್ಯದ ಗಾಸಿ ತೆರೆಮರೆಯಲ್ಲಿ ಹಾಗೆಯೇ ಉಳಿದಿತ್ತು. ಅದು ಈಗ ೬ ತಿಂಗಳಾದ ನಂತರ ಮತ್ತೆ ಸ್ಪೋಟ ಗೊಂಡು ಅವಿಶ್ವಾಸ ಮಂಡನೆ ಮಾಡುವ ತಂತ್ರಗಾರಿಕೆ ರೂಪಿಸಿ ಅಧ್ಯಕ್ಷರ ಗಾದಿಯಿಂದ ಇಳಿಸಲು ಶಾಸಕ ಅಶೋಕ ಮನಗೂಳಿ ಅವರ ಸಹೋದರಾದ ಮಾಜಿ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಹಾಗೂ ಡಾ. ಮುತ್ತು ಮನಗೂಳಿ ಯವರು ಟೊಂಕ ಕಟ್ಟಿ ನಿಂತು ರಿಸಾರ್ಟ್ ರಾಜಕಾರಣಕ್ಕೆ ಮುಂದಾಗಿರುವುದು ನೇರವಾಗಿ ಶಾಸಕರ ಹೆಸರಿನ ಮೇಲೆ ಬುಲೆಟ್ ಹಾರಿಸಿದಂತಾಗಿ ಹಳೇ ದ್ವೇಷ ಕೆದಕಿದಂತಾಗಿದೆ ಎಂದು ಕ್ಷೇತ್ರದಲ್ಲೆಡೆ ಸಾರ್ವಜನಿಕರ ಬಾಯಲ್ಲಿ ಸದ್ದು ಮಾಡಿದೆ.
ಪುರಸಭೆ ಅಧ್ಯಕ್ಷನಾಗುವ ಮುನ್ನ ಶಾಸಕ ಅಶೋಕ ಮನಗೂಳಿ ಸೇರಿದಂತೆ ಎಲ್ಲರ ಅಭಿಪ್ರಾಯ ತೆಗೆದುಕೊಂಡೆ ಅಧಿಕಾರ ವಹಿಸಿಕೊಂಡು ಅವರ ಮಾರ್ಗದರ್ಶನದಲ್ಲಿಯೇ ಪಟ್ಟಣದ ಅಭಿವೃದ್ಧಿ ಕಾರ್ಯದಲ್ಲಿ ಅವರ ಸಲಹೆ ಪಡೆದುಕೊಂಡು ಹೆಜ್ಜೆ ಇಟ್ಟಿದ್ದೇನೆ ಅದಕ್ಕೆ ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಕೆಲವರಿಗೆ ನೋವಾಗಿರಬಹುದು ಸಾರ್ವಜನಿಕವಾಗಿ ಒಳ್ಳೆಯ ಕಾರ್ಯ ಮಾಡಿದ್ದೇನೆ ಎನ್ನುವ ಸಂತೋಷ ನನ್ನಲ್ಲಿದೆ. ಪುರಸಭೆಯನ್ನು ಲಿಗಲ್ ಮಾಡಲು ಪ್ರಯತ್ನಿಸುತ್ತಿದ್ದೇನೆ ಅದು ಅವರಿಗೆ ಸರಿ ಅನಿಸುತ್ತಿಲ್ಲ. ನನ್ನಲ್ಲಿ ತಪ್ಪುಗಳನ್ನು ತೋರಿಸಿದ್ದಾದಲ್ಲಿ ನಾನೇ ರಾಜೇನಾಮೆ ನೀಡುವೆ.
ಶಾಂತವೀರ ಬಿರಾದಾರ.
ಅಧ್ಯಕ್ಷರು ಪುರಸಭೆ ಸಿಂದಗಿ.
ಶಾಂತವೀರ ಬಿರಾದಾರ ಅವರು ಕಂಡ ಕನಸ್ಸಿನಂತೆ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಪಟ್ಟಣದ ಬಸವೇಶ್ವರ ವೃತ್ತದಿಂದ ಡಾ. ಅಂಬೇಡ್ಕರ ವೃತ್ತ, ಗಾಂಧೀಜಿ ವೃತ್ತದವರೆಗೆ ಹಾಗೂ ಡಾ. ಅಂಬೇಡ್ಕರ ವೃತ್ತದಿಂದ ಬಸ್ ನಿಲ್ದಾಣದ ಮಾರ್ಗವಾಗಿ ಡೋಹರ ಕಕ್ಕಯ್ಯ ವೃತ್ತದವರೆಗಿನ ಮತ್ತು ಟಿಪ್ಪು ಸುಲ್ತಾನ ವೃತ್ತದಿಂದ ಸ್ವಾಮಿ ವಿವೇಕಾನಂದ ವೃತ್ತದವರೆಗೆ ಅತಿಕ್ರಮಣ ಶೆಡ್ಡ್ಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅಲ್ಲದೆ ಬಹುದಿನಗಳಿಂದ ಅತಿಕ್ರಮಣ ಮಾಡಿಕೊಂಡ ಉಧ್ಯಾನವನ ತೆರವುಗೊಳಿಸಿದ್ದು ಕೆಲವರಿಗೆ ಅಧಿಕಾರದ ಬಿಸಿ ತಟ್ಟಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ತಂತ್ರ ಹೆಣದಿರುವುದು ಶಾಸಕರ ಘನತೆ ಕುಗ್ಗಿಸುವಂತಾಗಿದೆ.
ಸಂತೋಷ ಮಣಿಗೇರಿ
ಉತ್ತರ ವಲಯ ಅದ್ಯಕ್ಷರು
ರಣಧೀರ ಪಡೆ.
ಪಟ್ಟಣದ ಇಕ್ಕಟಾದ ರಸ್ತೆಗಳಲ್ಲಿ ಪಾದಾಚಾರಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ತಿರುಗಾಡುವ ಸಂದಿಗ್ದ ಪರಿಸ್ಥಿತಿಯಲ್ಲಿ ಶಾಂತಗೌಡ್ರು ಅಧ್ಯಕ್ಷರಾದ ಬಳಿಕ ಪಟ್ಟಣದ ಎಲ್ಲ ರಸ್ತೆಗಳಲ್ಲಿದ್ದ ಗೂಡಂಗಡಿಗಳನ್ನು ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡಿದ್ದರಿಂದ ಭಯಬಿಟ್ಟು ತಿರುಗಾಡುವಂತಾಗಿದೆ. ಪುರಸಭೆಗೆ ಆಯ್ಕೆಯಾದ ಪ್ರತಿಯೊಬ್ಬ ಸದಸ್ಯರು ಅಭಿವೃದ್ಧಿಯ ಮನಸ್ಥಿತಿ ಹೊಂದಿದವರಾಗಿರಬೇಕು ವಿನಃ ಹಣದ ಲಾಲಸೆಗಾಗಿ ೬ ತಿಂಗಳಿಗೊಮ್ಮೆ ರಿಸಾರ್ಟ ರಾಜಕಾರಣಕ್ಕೆ ಕೈ ಜೋಡಿಸಿ ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನ ನಡೆಸಿರೋದು ಹೇಸಿಗೆ ಪಡುವಂಥ ಕೃತ್ಯವಾಗಿದೆ.
ಡಾ. ದಸ್ತಗೀರ ಇಂಗಳಗಿ(ಮುಲ್ಲಾ).
ರಾಜ್ಯ ಕಾರ್ಯದರ್ಶಿಗಳು ಬಿಎಸ್ಪಿ