ಬೆಳಗಾವಿ-ನೀವು ಕಷ್ಟಪಟ್ಟು ಕೆಲಸ ಮಾಡಲು, ಕಲಿಯಲು ಅಥವಾ ನಿರ್ದಿಷ್ಟ ಗುರಿಯನ್ನು ಸಾಧಿಸಲು ಬಯಸಿದಾಗ, ಗುರಿ ಸಾಧಿಸಲು ಯಾವುದೇ ಭಾಷಾ ಮಾಧ್ಯಮವು ಅಡ್ಡಿಯಾಗುವುದಿಲ್ಲ ಎಂದು ಸಮಾಜ ಸೇವಕಿ ಸಂಜನಾ ಸಾಮಂತ್ ಅಭಿಪ್ರಾಯ ವ್ಯಕ್ತ ಪಡಿಸಿ, ನಮ್ಮ ಭಾಷೆ ಶುದ್ಧ ಹಾಗೂ ಅಚ್ಚುಕಟ್ಟಾಗಿರಬೇಕು, ನಮ್ಮ ಭಾಷೆ ಎಲ್ಲರಿಗೂ ತಲುಪುವಂತಾಗಬೇಕು ಮತ್ತು ನಮ್ಮ ಭಾಷೆಯಲ್ಲಿ ನಾವು ನಿರಂತರವಾಗಿರಬೇಕು ಮತ್ತು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಈ ಕಲ್ಪನೆಯನ್ನು ಮೂಡಿಸಬೇಕು ಎಂದು ಹೇಳಿದರು.
ಟಿಳಕವಾಡಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.9ರ ಸ್ಮಾರ್ಟ್ ಸ್ಕೂಲ್ ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ಸಮಾಜ ಸೇವಕ ಶ್ರೀಕಾಂತ ಅಜಗಾಂವಕರ ಶಿಕ್ಷಕರನ್ನು ಅಭಿನಂದಿಸಿ, ಶಿಕ್ಷಕರು ಮನಸ್ಸು ಮಾಡಿದರೆ ಸರಕಾರಿ ಶಾಲೆಗಳು ಖಂಡಿತವಾಗಿಯೂ ಉತ್ತಮ ಗುಣಮಟ್ಟದಿಂದ ತಯಾರಾಗುತ್ತವೆ ಎಂಬುದಕ್ಕೆ ನಂ.9 ಉತ್ತಮ ನಿದರ್ಶನವಾಗಿದೆ ಎಂದರು ಹಾಗೂ ಶಾಲೆಯ ಅಭಿವೃದ್ಧಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಕುಡಾಳ್ ದೇಶಕರ್ ಆದ್ಯಗೌಡ ಬ್ರಾಹ್ಮಣ ಸಮಾಜ, ಕೈಗಾರಿಕೋದ್ಯಮಿ ಪ್ರದೀಪ ಹೊಸಮನಿ, ರೋಮಾ ಹೊಸಮನಿ, ಇಂಜಿನಿಯರ್ ತೇಜರಾಮ ಸುತಾರ, ಉದ್ಯಮಿ ವಿನಾಯಕ ಪಾಟೀಲ, ಹಳೆ ವಿದ್ಯಾರ್ಥಿಗಳು, ಶಿಕ್ಷಕರು ಶಾಲಾ ಶೈಕ್ಷಣಿಕ ಸಾಮಗ್ರಿ, ನೆಲಕ್ಕೆ ಹಾಸುವ ರೆಡ್ ಕಾರ್ಪೆಟ್, ವರ್ಣರಂಜಿತ ಡೆಸ್ಕ್, ಜಾರುಬಂಡಿ,ಸೈಕಲ್, ಆಟದ ಸಾಮಗ್ರಿ, ಸ್ಪೀಕರ ವ್ಯವಸ್ಥೆ, ಕಂಪ್ಯೂಟರ್ ಮತ್ತು ಇತರ ಸೌಲಭ್ಯಗಳನ್ನು ಒದಗಿಸಿದರು.
ಸ್ಮಾರ್ಟ್ ಕ್ಲಾಸ್ ಅನ್ನು ವಿಜಯ್ ಪರುಳೇಕರ್ ಮತ್ತು ಶ್ರೀಕಾಂತ್ ಅಜಗಾಂವಕರ್ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ವಿಶ್ವಭಾರತ ಸೇವಾ ಸಮಿತಿಯ ಅಧ್ಯಕ್ಷರಾದ ವಿಜಯರಾವ್ ನಂದಿಹಳ್ಳಿಯವರಿಂದ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಶಾಲೆ ನಂ.5 ರ ಪ್ರಾಚಾರ್ಯರಾದ ಸುಮನ್ ದೇಶಪಾಂಡೆ ವಹಿಸಿದರು. ಶಾಂತಾ ಸಾಮಂತ್, ರಾಜನ್ ಸಾಮಂತ್ ಮತ್ತು ಟಿಳಕವಾಡಿ ಕ್ಲಸ್ಟರ್ ಮುಖ್ಯಸ್ಥರಾದ ವಂದನಾ ಬರ್ಗೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗಣ್ಯರಿಂದ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು. ಕಾರ್ಯಕ್ರಮದ ಪ್ರಸ್ತಾವನೆ ಮತ್ತು ಸ್ವಾಗತವನ್ನು ಪ್ರಾಚಾರ್ಯ ಸತೀಶ ಪಾಟೀಲ, ಹಾಗೂ ನಿರೂಪಣೆಯನ್ನು ವರ್ಷಾ ಲಗರಕಂಡೆ ಮಾಡಿದರು.ಹಾಗೂ ರಾಜಶ್ರೀ ವರಾಳೆ ವಂದಿಸಿದರು.