ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಲ್ಲಿ ಒಂದಾಗಿರುವ ʻಶ್ರೀಮತಿ ಟಿ. ಗಿರಿಜಾ ಸಾಹಿತ್ಯ ದತ್ತಿ ಪ್ರಶಸ್ತಿʼ ಪ್ರಕಟವಾಗಿದೆ. ೨೦೨೨ನೆಯ ಸಾಲಿನ ʻಶ್ರೀಮತಿ ಟಿ. ಗಿರಿಜಾ ಸಾಹಿತ್ಯ ದತ್ತಿ ಪ್ರಶಸ್ತಿʼಗೆ ನಾಡಿನ ಹಿರಿಯ ಲೇಖಕಿಯರಾದ, ದಾವಣಗೆರೆಯ *ಶ್ರೀಮತಿ ಜಿ.ಎಸ್. ಸುಶೀಲಾದೇವಿ ಆರ್. ರಾವ್ ಹಾಗೂ ೨೦೨೩ನೆಯ ಸಾಲಿನ ಪ್ರಶಸ್ತಿಗಾಗಿ ಮೈಸೂರಿನ ಶ್ರೀಮತಿ ಚಂಪಾವತಿ ಶಿವಣ್ಣ ಅವರು ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀಮತಿ ಟಿ.ಎಸ್. ಶೈಲಜಾ ದಾವಣಗೆರೆ ಅವರು ನಾಡಿನ ಲೇಖಕಿಯರಿಗಾಗಿ ಕನ್ನಡಿಗರ ಸಾರ್ವಭೌಮ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಲಾಗಿರುವ ʻಶ್ರೀಮತಿ ಟಿ. ಗಿರಿಜಾ ಸಾಹಿತ್ಯ ದತ್ತಿ ಪ್ರಶಸ್ತಿʼಯು ಕನ್ನಡ ಸಾರಸ್ವತ ಲೋಕದಲ್ಲಿ ಗಣನೀಯ ಸಾಧನೆ ಮಾಡಿರುವ ಮಹಿಳಾ ಸಾಹಿತಿಯೊಬ್ಬರಿಗೆ ಪ್ರತಿ ವರ್ಷ ಪ್ರದಾನ ಮಾಡುವ ಆಶಯವನ್ನು ಹೊಂದಿರುತ್ತದೆ. ಪ್ರಸ್ತುತ ಪ್ರಶಸ್ತಿಯು ೧೩,೦೦೦ (ಹದಿಮೂರು ಸಾವಿರ) ರೂ. ನಗದು, ಸ್ಮರಣಿಕೆ, ಫಲ ತಾಂಬೂಲಗಳನ್ನು ಒಳಗೊಂಡಿರುತ್ತದೆ ಎಂದು ಕಸಾಪ ಅಧ್ಯಕ್ಷರು ತಿಳಿಸಿದ್ದಾರೆ.
ಇದುವರೆಗೂ ನಾಡಿನ ೮ ಜನ ಲೇಖಕಿಯರಿಗೆ ಪರಿಷತ್ತಿನ ಪ್ರತಿಷ್ಠಿತ ʻಶ್ರೀಮತಿ ಟಿ. ಗಿರಿಜಾ ಸಾಹಿತ್ಯ ದತ್ತಿ ಪ್ರಶಸ್ತಿʼ ಪ್ರದಾನ ಮಾಡಲಾಗಿದೆ. ಈ ಬಾರಿಯ ಆಯ್ಕೆ ಸಮಿತಿಯು ೨೦೨೨ನೆಯ ಸಾಲಿನ ಪ್ರಶಸ್ತಿʼ ಗಾಗಿ ಶ್ರೀಮತಿ ಜಿ.ಎಸ್. ಸುಶೀಲಾದೇವಿ ಆರ್. ರಾವ್ ಅವರನ್ನು ಅಯ್ಕೆ ಮಾಡಿದೆ. ಮೂಲತಃ ಚಿತ್ರದುರ್ಗ ಜಿಲ್ಲೆಯ ಗುಂಜಿಗನೂರಿನವರಾದ ಇವರು ಸದ್ಯ ದಾವಣಗೆರೆಯಲ್ಲಿ ನೆಲೆಸಿದ್ದಾರೆ, ಕಥೆ, ಕಾದಂಬರಿ, ಮಕ್ಕಳ ಸಾಹಿತ್ಯ, ನಾಟಕ ಮೊದಲಾದ ಸಾಹಿತ್ಯ ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ೨೦೨೩ನೆಯ ಸಾಲಿನ ಪ್ರಶಸ್ತಿಗಾಗಿ ಆಯ್ಕೆಯಾಗಿರುವ ಶ್ರೀಮತಿ ಚಂಪಾವತಿ ಶಿವಣ್ಣ ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗದವರಾದ ಇವರು ಸದ್ಯ ಮೈಸೂರಿನಲ್ಲಿ ನೆಲೆನಿಂತಿದ್ದಾರೆ. ಕಥಾ ಸಂಕಲನಗಳು, ಕವನ ಸಂಕಲನಗಳು, ಹನಿಗವನ ಸಂಕಲನಗಳು, ವಚನ ಸಂಕಲನ, ಹನಿಗವನ ಸಂಕಲನಗಳು, ವಚನ ಸಂಕಲನ, ಅಭಿನಂದನಾ ಗ್ರಂಥಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುತ್ತಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ದತ್ತಿದಾನಿಗಳ ಪರವಾಗಿ ಶ್ರೀಮತಿ ಅರುಂಧತಿ ರಮೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ. ಪಟೇಲ್ ಪಾಂಡು ಅವರು ಉಪಸ್ಥಿತರಿದ್ದರು.
ಪೋಟೋದಲ್ಲಿ ಶ್ರೀಮತಿ ಜಿ.ಎಸ್. ಸುಶೀಲಾದೇವಿ ಆರ್.ರಾವ್ ಮತ್ತು ಶ್ರೀಮತಿ ಚಂಪಾವತಿ ಶಿವಣ್ಣ
ಶ್ರೀನಾಥ್ ಜೆ.
ಮಾಧ್ಯಮ ಸಲಹೆಗಾರರು
ಕನ್ನಡ ಸಾಹಿತ್ಯ ಪರಿಷತ್ತು
ಬೆಂಗಳೂರು