ಸಮಾಜ ಸುಧಾರಕ ಜಂಗಮ ಪ್ರೇಮಿ ಬಸವಣ್ಣ

0
112

ಗುರುವಾದರೂ ಲಿಂಗವ ಪೂಜಿಸಬೇಕು,         ಲಿಂಗವಾದರೂ ದೇವತ್ವವಿರಬೇಕು,          ಜಂಗಮವಾದರೂ ಲಿಂಗವ ಪೂಜಿಸಬೇಕು,

ಜಂಗಮಕ್ಕೆ ಲಿಂಗವಿಲ್ಲದೆ ಪ್ರಮಾಣವಿಲ್ಲ,
ಅದಿಯಾಧಾರವಿಲ್ಲದೆ ಜಗವೇನೂ ಇಲ್ಲ,
ಆರಿದಹನೆಂದರೆ ಅಂಗದಲ್ಲಿ ಲಿಂಗವಿರಬೇಕು,
ಕಲಿದೇವಯ್ಯನರಿಯುವುದಕ್ಕೆ,
ಇದೇ ಮಾರ್ಗ ಚಂದಯ್ಯ. ಮಡಿವಾಳ ಮಾಚಿದೇವ

ಶತಮಾನದದಿಂದಲೂ ನಮ್ಮ ಸಮಾಜವು ಶೋಷಣೆ ದಬ್ಬಾಳಿಕೆ ಸುಲಿಗೆ ಕಂದಾಚಾರದಿಂದ ಭಾರತದ ಸಾಮಾಜಿಕ ವ್ಯವಸ್ಥೆ ಜಿಡ್ಡು ಗಟ್ಟಿ ಮೃತ ಪ್ರಾಯವಾಗಿತ್ತು .ವೈದಿಕರ ಮನುವಾದಿಗಳ ಅಸ್ಪ್ರಶ್ಯತೆ ಆಚರಣೆ , ಜಾತಿ ಪದ್ಧತಿ ತಾಂಡವವಾಡುತಿತ್ತು .ಯಜ್ಞ ಹವನ ಹೋಮ ಪ್ರಾಣಿ ಬಲಿ ಸ್ತ್ರೀ ಶಿಶು ಹತ್ತ್ಯೆ ಸತಿ ಪದ್ಧತಿ ಹೀಗೆ ದಲಿತರು ಪಂಚಮ ಸ್ತ್ರೀ ಕುಲವು ನಲುಗಿ ಹೋಗಿತ್ತು.

ಹನ್ನೆರಡನೆಯ ಶತಮಾನವು ಈ ಜಗವು ಕಂಡ ಸುವರ್ಣ ಯುಗ . ಬಸವಣ್ಣನೆಂಬ ವೈಚಾರಿಕ ಪುರುಷ ಕರ್ನಾಟಕದ ಇಂದಿನ ಬಿಜಾಪುರದ ಬಾಗೇವಾಡಿಯಲ್ಲಿ ಮಧುವರಸ ಮಾದಲಾ೦ಬಿಕೆಯರ ಹೊಟ್ಟೆಯಲ್ಲಿ 1131 ರಲ್ಲಿ ಹುಟ್ಟಿದನು. ಬಸವಣ್ಣ ಜಗವು ಕಂಡ ಶ್ರೇಷ್ಠ ದಾರ್ಶನಿಕ ಚಿಂತಕ ಮುಕ್ತ ಸಮಾಜದ ಕಾರಣಕರ್ತ. ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆ ಶಾಂತಿ ಸಹ ಬಾಳ್ವೆ ,ದುಡಿಮೆ ಕಾಯಕ ದಾಸೋಹ ಬದುಕಿನಲ್ಲಿ ಧರ್ಮದ ಸರಳ ಆಚರಣೆ ,ನೀತಿ,ತತ್ವ ವೈಚಾರಿಕತೆ ಅಭಿವ್ಯಕ್ತಿ ಸ್ವಾತಂತ್ರ ಧಾರ್ಮಿಕ ಸಾಮಾಜಿಕ ಚಿಂತನೆ ಹೀಗೆ ಪ್ರತಿ ಹಂತದಲ್ಲೂ ಬಸವಣ್ಣ ಗಟ್ಟಿ ಮುಟ್ಟಾದ ಆಯಾಮವನ್ನು ಸೃಷ್ಟಿಸಿದನು.

ಲಿಂಗಾಯತ ಧರ್ಮವು ಹಿಂದುಯೇತರ ಅವೈದಿಕ ಸ್ವತಂತ್ರ ಧರ್ಮ,ಬುದ್ಧನಿಂದ ಆಗದ ಅಂತರ ಜಾತಿ ವಿವಾಹ ಬಸವಣ್ಣನವರು ನೆರವೇರಿಸಿದರು .
ಶತಮಾನದ ಜಾತಿ ಶೋಷಣೆ ದಬ್ಬಾಳಿಕೆ ಮೋಸ ಸುಲಿಗೆಗೆ ಬಸವಣ್ಣನವರು ಕೊನೆ ಹಾಡಿದರು . ದೇವರು ಮತ್ತು ಭಕ್ತನ ಮಧ್ಯೆ ಇರುವ ಪುರೋಹಿತರ ದಲ್ಲಾಳಿತನಕ್ಕೆ ಏಟು ಬಿತ್ತು. ಬಸವ ಪೂರ್ವದಲ್ಲಿ ದಲಿತರು ಮಹಿಳೆಯರು ಪಂಚಮರು ಪ್ರಾಣಿಗಳಿಗಿಂತ ಕೀಳಾಗಿ ಬದುಕಿದ್ದರು.ಅವರಿಗೆ ಧಾರ್ಮಿಕ ಸಾಮಾಜಿಕ,ಆರ್ಥಿಕ ರಾಜಕೀಯ ಹಕ್ಕು ಸಿಕ್ಕಿರಲಿಲ್ಲ .ಬಸವಣ್ಣ ಆಗಮನದಿಂದ ಎಲ್ಲರೂ ಎಲ್ಲಾ ಬಂಧನದಿಂದ ಮುಕ್ತವಾದರು . ಕರ್ಮಠತೆಯ ಜನಿವಾರ ಕಿತ್ತು ಸನಾತನಿಗಳಿಗೆ ಸವಾಲು ನೀಡಿದ ಬಸವಣ್ಣ ಮನುವಾದಿಗಳಿಗೆ ನಡುಕ ಹುಟ್ಟಿಸಿದನು . ಬಸವಣ್ಣ ವರ್ಗ ವರ್ಣ ಲಿಂಗ ಆಶ್ರಮ ಬೇಧಗಳನ್ನು ಕಿತ್ತು ಸರ್ವಕಾಲಿಕ ಸಮಾನತೆಯ ಸಮಾಜವನ್ನು ಸುಂದರಗೊಳಿಸಿದರು.

ಶರಣರ ಕ್ರಾಂತಿ ರಸಿಯಾ ,ಫ್ರೆಂಚ್ ಕ್ರಾಂತಿಗೆ ಬಿನ್ನವಾದ ಕ್ರಾಂತಿ. ಇಲ್ಲಿ ರಾಜ್ಯ ಭೂಮಿ ಹೆಣ್ಣು ಹೊನ್ನು ಮಣ್ಣಿಗಾಗಿ ಯುದ್ಧ ನಡೆದಿಲ್ಲ .ಅರಸೊತ್ತಿಗೆ ಖಜಾನೆ ಅಧಿಕಾರದ ಕ್ಷಿಪ್ರ ಕ್ರಾಂತಿಯಲ್ಲ . ಒಬ್ಬ ಸಮಾಜವಾದಿ ಚಿಂತಕ ಹೇಳಿದಂತೆ *Karl Marx has taught us the dignity of labour but Basavanna has taught us dignity and divinity of labour* ,ಎಂದು ಬಸವಣ್ಣನವರ ಕಾರ್ಯ ಮುಕ್ತ ಕಂಠದಿಂದ ಹೊಗಳಿದ್ದಾನೆ. ಅಂದಿನ ಜಿಡ್ಡು ಗಟ್ಟಿದ ಸಮಾಜಕ್ಕೆ ಬಸವಣ್ಣನವರು ಹೊಸ ಚೇತನ ನೀಡಿದರು . ಬತ್ತಿ ಹೋಗಿದ್ದ ಬದುಕಿಗೆ ಭರವಸೆ ಆದನು ಬಸವಣ್ಣ .

ಬಸವ ಪೂರ್ವ ಯುಗದಲ್ಲಿ ದಲಿತರಿಗೆ ಪಂಚಮರಿಗೆ ಹೊಲೆಯರಿಗೆ ಮಂದಿರ ದೇವಾಲಯಗಳಲ್ಲಿ ಪ್ರವೇಶವಿರಲಿಲ್ಲಾ.ಬ್ರಾಹ್ಮಣರ ಹೊರತು ಪಡಿಸಿ ಇನ್ನೊಬ್ಬರಿಗೆ ಪೂಜಿಸುವ ಅಧಿಕಾರವಿರಲಿಲ್ಲ . ಅವರನ್ನು ಪಶುಗಳಂತೆ ಕಾಣುವ ಕಾಲವದು.ನಾಯಿ ಬೆಕ್ಕು ಆಕಳು ಕುರಿಗಳನ್ನೂ ಮುಟ್ಟುವ ಬ್ರಾಹ್ಮಣರು ಮನುಷ್ಯರನ್ನು ಮುಟ್ಟುತ್ತಿರಲಿಲ್ಲ .ಇಂತಹ ಅಸಮಾನತೆ ಕೊನೆಗಾಣಿಸಲು ಬಸವಣ್ಣನವರು ಇಷ್ಟ ಲಿಂಗವನ್ನು ಕಂಡು ಹಿಡಿದರು .

ನಿರಾಕಾರ ನಿರ್ಗುಣ ನಿರಹಂಕಾರ ಕುರುಹನ್ನು ತಮ್ಮ ಕರಸ್ಥಲಕ್ಕೆ ಕೊಟ್ಟರು ಬಸವಣ್ಣನವರು.
ಶರಣರ ಅರಿವೇ ಗುರು ಆಚಾರವೇ ಲಿಂಗ ಶರಣರ ಅನುಭಾವವೇ ಜಂಗಮ ,ಇಂತಹ ಒಂದು ಸರಳ ಸುಂದರ ಸಿದ್ಧಾಂತವೇ ಶರಣ ಸಾಹಿತ್ಯ .

ಎತ್ತೆತ್ತ ನೋಡಿದಡತ್ತತ್ತ ನೀನೇ ದೇವ!
ಸಕಲ ವಿಸ್ತಾರದ ರೂಹು ನೀನೇ ದೇವ.
ವಿಶ್ವತಶ್ಚಕ್ಷು ನೀನೇ ದೇವ,
ವಿಶ್ವತೋಮುಖ ನೀನೇ ದೇವ.
ವಿಶ್ವತೋಬಾಹು ನೀನೇ ದೇವ.
ವಿಶ್ವತೋಪಾದ ನೀನೇ ದೇವ.
ಕೂಡಲಸಂಗಮದೇವ.

ವಿಶ್ವಾತ್ಮನನ್ನು ನಿರಾಕಾರಗೊಳಿಸಿ ಅವನ ಬಾಹು ಅವನ ಕಣ್ಣು ಅವನ ಮುಖ ಅವನ ರೂಪ ಆತನ ಜ್ಞಾನ ಸಮಾಜವೇ ಆಗಿರುತ್ತದೆ .ಒಂದು ಕಡೆಗೆ ಸ್ಥಾವರವನ್ನು ವಿರೋಧಿಸಿದ ಬಸವಣ್ಣ ಮತ್ತು ಶರಣರು ಇಷ್ಟಲಿಂಗವನ್ನು ಪ್ರತಿಪಾದಿಸಿದರು.

ಬಸವಣ್ಣ ಮೂರ್ತಿ ಭಂಜಕ , ಸ್ಥಾವರವನ್ನು ವಿರೋಧಿಸಿದವನು . ತನ್ನ ನಂಬಿದವರಿಗೆ ಒಂದು ಪರ್ಯಾಯ ಮತ್ತು ನಿಶ್ಚಿತ ಉಪಾಸನ ಆಯಾಮ ನೀಡಲು ಇಷ್ಟಲಿಂಗವನ್ನು ಕಂಡು ಹಿಡಿದರು. ಇದು ಮನುಷ್ಯನ ಚಿತ್ಕಳೆ ಪ್ರತಿಬಿಂಬಿಸುತ್ತದೆ , ಬಸವ ಕಾಲದ ಎಲ್ಲ ಶರಣರಿಗೆ ಸ್ತ್ರೀ ಮತ್ತು ಪುರುಷರಿಗೆ ಇಷ್ಟಲಿಂಗ ಕಡ್ಡಾಯ ,ಕಾಯಕ ಅನಿವಾರ್ಯ, ದಾಸೋಹ ಅಗತ್ಯತೆ . ಜಗತ್ತಿನಲ್ಲಿ ದುಡಿದು ತಿನ್ನುವ ಧರ್ಮ ಬಂದ ಮತ್ತು ಆದಾಯದಲ್ಲಿ ಹಂಚಿ ತಿನ್ನುವ ಧರ್ಮವಿದ್ದರೆ ಅದು ಬಸವ ಧರ್ಮ,ಲಿಂಗಾಯತ ಧರ್ಮ .

ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಸವಯ್ಯ
ಕೂಡಲ ಸಂಗಮ ದೇವ ನೀ ಕೇಳಯ್ಯ ,ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ

ಗುಡಿ ಗುಂಡಾರ ಮಠಗಳ ಸಂಸ್ಕೃತಿ ಗಟ್ಟಿಯಾಗಿ ವಿರೋಧಿಸಿದ ಬಸವಣ್ಣ ಮನುಷ್ಯನ ಚೈತನ್ಯವೇ ದೇವರು ಆ ಪರಮಾತ್ಮನ ಕುರುಹು ಇಷ್ಟಲಿಂಗ .
ತನ್ನ ತಾ ಅರಿವ ಅನನ್ಯ ಪ್ರಯೋಗವೇ ಇಷ್ಟಲಿಂಗ ಸಾಧನೆ .ಆದರೆ ಇದನ್ನೇ ಆದರಿಸಿ ಕುಳಿತು ಕೊಳ್ಳುವ ಸಾಧಕರಿಗೆ ಬಸವಣ್ಣ ಕಿವಿ ಮಾತು ಹೇಳುತ್ತಾನೆ .
ಕಾಯಕದಲ್ಲಿ ನಿರತನಾದರೆ ಗುರುಲಿಂಗ ಜಂಗಮದ ಹಂಗು ತೊರೆಯಬೇಕು . ಕಾಯಕವೇ ಕೈಲಾಸ , ದುಡಿಯದೆ ಇನ್ನೊಬ್ಬರ ಹಂಗಿನಲ್ಲಿ ಉಣ್ಣುವ ಹಾಗಿಲ್ಲ

ಮಾಡುವಂತಿರಬೇಕು ಮಾಡದಂತಿರಬೇಕು
ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು
ಕೂಡಲ ಸಂಗಮ ದೇವನ ನೆನೆಯುತ್ತ ನೆನೆಯುತ್ತ ನೆನೆಯದಂತಿರಬೇಕು.

ಅಧ್ಯಾತ್ಮವೇ ಸರ್ವಸ್ವವಲ್ಲ ಕಾಯಕ ದಾಸೋಹದಿಂದ ಮಾಡುವ ಅನುಭಾವವೇ ಅಧ್ಯಾತ್ಮದ ಮೂಲ ಮಂತ್ರವಾಗಿತ್ತು .ರಾಜನಾಗಲಿ ರಂಕನಾಗಲಿ,ಮಂತ್ರಿಯಾಗಲಿ ಸೇವಕನಾಗಲಿ ಎಲ್ಲರಿಗೂ ಕಾಯಕ ಮತ್ತು ದಾಸೋಹ ಕಡ್ಡಾಯ ಮತ್ತು ಅನಿವಾರ್ಯವಾಗಿತ್ತು .

ಭಕ್ತನ ಶರೀರವೇ ಲಿಂಗಮಯವಾಗಬೇಕು.ಆತನ ಚಿಂತನವು ಸಮಾಜ ಮುಖಿಯಾಗಿರಬೇಕು. ಮರದ ಬಾಯಿ ಬೇರು ಮತ್ತು ಲಿಂಗದ ಬಾಯಿ ಜಂಗಮವಾಗಿರಬೇಕು ಇದು ಬಸವ ವಚನದ ಆಶಯವಾಗಿದೆ . ಇಲ್ಲಿ ಜಂಗಮ ಜಾತಿ ಅಲ್ಲ ಅದು ಸಮಾಜ ವ್ಯವಸ್ಥೆ ,ಸಮುದಾಯಮಾತ್ರ .ಲಿಂಗವು ನಮ್ಮ ಅರಿವಿನ ಕುರುಹು ಇತ್ತೀಚೆಗೆ ನಮ್ಮ ಶರೀರದ ಪ್ರಮುಖ ಕೇಂದ್ರ ಮೆದುಳು ಅಲ್ಲಿ ಆಜ್ಞಾ ಚಕ್ರವನ್ನು ವಿಜ್ಞಾನಿಗಳು ಉಪಕರಣಗಳ ಮುಖಾಂತರ ಅರಿವಿನ ಆಜ್ಞಾ ಚಕ್ರ ಕೇಂದ್ರವನ್ನು Pineal Gland ನೋಡಿದಾಗ ಅದು ಲಿಂಗದ ಆಕಾರದ್ದಾಗಿದೆ . ಶರಣರು ವಿಜ್ಞಾನವನ್ನು ಬಲ್ಲವರು .

ಇದನ್ನು ಅಲ್ಲಮರು

ಅರಿವನರಿಯಲೆಂದು ಗುರು ಕೊಟ್ಟ ಕುರುಹ
ಕುರುಹ ಹಿಡಿದು ಅರಿವ ಮರೆತ ಕುರುಬನ ನೋಡ ಗುಹೇಶ್ವರ

ಇಂದು ಲಿಂಗಾಯತರಾದ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಕೇವಲ ಲಿಂಗವ ಕಟ್ಟಿದರೆ ಲಿಂಗಾಯತರೇ ಅಥವಾ ಲಿಂಗಾಯತರ ಮನೆಯಲ್ಲಿ ಹುಟ್ಟಿದರೆ ಲಿಂಗಾಯತರೇ ,ಇವು ಎರಡೂ ಅಲ್ಲ ,ಲಿಂಗ ಜಂಗಮದ ಸಮಷ್ಟಿ ಪ್ರಜ್ಞೆ ಹೊಂದಿ ಕಾಗೆ ಕೋಳಿ ಪಶು ಪಕ್ಷಿಗಳನೋಳಗೊಂಡ ಸಕಲ ಜೀವಾತ್ಮರ ಲೇಸ ಬಯಸುವವನೆ ಲಿಂಗಾಯತ
ಲಿಂಗಾಯತ ಎನ್ನುವುದು ಧರ್ಮವೆನ್ನುವದಕ್ಕಿ೦ತಲೂ ಶೋಷಣೆ ಮುಕ್ತ ಸಮಾಜ ನಿರ್ಮಾಣದ ಗುರಿಯ ಚಳವಳಿ ಎನ್ನಬಹುದು. ಅತ್ಯಂತ ಸಾಮಾನ್ಯರಿಂದ ರೂಪಗೊಂಡ ಈ ಚಳವಳಿಯ ನೇತಾರ ಬಸವಣ್ಣನವರು .
ಬಸವಣ್ಣ ಬರುವಾಗ ಬಿಸಿಲು ಬೆಳದಿಂಗಳು ಅಂತ ಜನಪದಿಗರು ಬಸವನ ಆಗಮನವನ್ನು ಹೊಗಳಿದ್ದಾರೆ ಅದೇ ರೀತಿ ಕಾಯಕವ ಕಲಿಸುದಕೆ ನಾಯಕನು ಬಸವನಯ್ಯ ತಂದು ಚೆಲ್ಲಿದನು ಹೊಸಬೆಳಕ ,ಹೊಸಮತದ ಸೂರ್ಯ ಉದಯಿಸಿದ .ಬಸವಣ್ಣ ಲಿಂಗಾಯತ ಧರ್ಮದ ಚಳವಳಿಯ ನೇತಾರ ಎಂದು ನಮ್ಮ ಮೂಲನಿವಾಸಿಗಳು ಹಾಡಿ ಹೊಗಳಿದ್ದಾರೆ .

Istalinga is not an object , it is subject to realize consciousness 

ಇಷ್ಟಲಿಂಗವೂ ಒಂದು ಸ್ಥಾವರವೇ? ಎಂದು ವಾದಿಸುವರೂ ಉಂಟು ಅಹುದು ಸಮುದಾಯದ ಪ್ರಜ್ಞೆ ಮರೆತು ,ಕೇವಲ ಆಸ್ತಿ ಹಣ ಸುಖಕ್ಕಾಗಿ ಹಪಹಪಿಸುವ ಜನರಿಗೆ ಬಸವಣ್ಣ ಚಾಟಿ ಏಟು ಕೊಡುತ್ತಾರೆ .

ಕಲ್ಲ ನಾಗರ ಕಂಡರೆ ಹಾಲನೆರೆವರಯ್ಯ
ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯ
ಉಂಬುವ ಜಂಗಮನಿಗೆ ಎಡೆಯಿಲ್ಲ ನಡೆಯೆ೦ಬರು
ಉಂಬದಾ ಲಿಂಗಕ್ಕೆ ಬೋಣವ ಹಿಡಿವರು
ಕೂಡಲ ಸಂಗನ ಶರಣರ ಉದಾಸೀನವ ಮಾಡಿದರೆ
ಕಲ್ಲು ತಾಗಿದ ಮಿಟ್ಟೆ ಎಂತಿರ್ಪರಯ್ಯಾ

ಅದೇ ರೀತಿ ಬಸವಣ್ಣನವರು ವೃಥಾ ಆಚರಣೆಗೆ ಮಹತ್ವ ಕೊಡದೆ ಕಾಯಕ ದಾಸೋಹಕ್ಕೆ ಮಹತ್ವ ನೀಡಿ ಸಮಾಜವನ್ನು ಉನ್ನತಿಗೆ ತರಲು ಪ್ರಯತ್ನಿಸಿದರು..

ಎರೆದರೆ ನೆನೆಯದು ಮರೆದರೆ ಬಾಡದು
ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ
ಕೂಡಲ ಸಂಗಮ ದೇವಾ
ಜಂಗಮಕ್ಕೆ ಎರೆದರೆ ಸ್ಥಾವರವು ನೆನೆದಿತ್ತು.

ಇಲ್ಲಿಯೂ ಕೂಡ ಬಸವಣ್ಣ ಲಿಂಗವನ್ನು ಪೂಜಿಸಿ ಅದರ ಹಿಂದಿನ ಕರ್ತವ್ಯ ಮತ್ತು ಸಮಾಜ ನಿರ್ವಹಣೆಯ ಆದ್ಯತೆಯ ಬಗ್ಗೆ ಬಸವಣ್ಣ ಎಚ್ಚರಿಸುತ್ತಾನೆ . ಸಮಾಜಕ್ಕೆ ನೀಡಿದರೆ ಲಿಂಗವು ಸಂತೋಷದಿಂದ ಉಬ್ಬಿ ಉಬ್ಬಿ ನೆನೆಯುವುದು ಅಂತಾ ಅರ್ಥ .
ಬಸವಣ್ಣನವರಿಗೆ ಇಂತಹ ಭಕ್ತಿಯ ಮಾಡುವವರನ್ನು ಕಂಡರೆ ಎಲ್ಲಿಲ್ಲದ ಸಂತೋಷ .

ಅಡವಿಯಲ್ಲೊಬ್ಬ ಕಡು ನೀರಡಿಸಿ,
ಎಡೆಯಲ್ಲಿ ನೀರ ಕಂಡಂತಾಯಿತ್ತಯ್ಯ!
ಕುರುಡ ಕಣ್ಣ ಹಡೆದಂತೆ, ಬಡವ ನಿಧಾನವ ಕಂಡಂತಾಯಿತ್ತಯ್ಯ!
ನಮ್ಮ ಕೂಡಲಸಂಗನ ಶರಣರ ಬರವೆನ್ನ ಪ್ರಾಣ ಕಂಡಯ್ಯಾ.

ನೀರಡಿಕೆಯಾದವ ಕಾಡಿನಲ್ಲಿ ಅಲೆದು ಸುಸ್ತಾದಾಗ ಕಾಲಿನ ಬಳಿಯೇ ನೀರು ಕಂಡಂತೆ ,ಮತ್ತು ಹುಟ್ಟು ಕುರುಡುನಿಗೆ ಕಣ್ಣು ಬಂದಂತೆ ಮತ್ತು ಬಡವನಿಗೆ ನಿಧಿ ಸಿಕ್ಕಂತೆ ಶರಣರ ಬರವು ಅಂತ ಹೇಳುತ್ತಾ ವಿಷಯ ನಿಷ್ಠತೆಗೆ ಆದ್ಯತೆ ನೀಡಿದ್ದಾನೆ .

ಶರಣರು ಹಿಂದುಗಳಂತೆ ಬಹುದೇವೊಪಾಸನೆ ಆಚರಿಸಲಿಲ್ಲ, ಅವರಿಗೆ ತಮ್ಮ ಆತ್ಮದ ಚಿತ್ಕಳೆಯನ್ನು ಪೂಜಿಸುವ ಸರಳ ವಿಧಾನ ಸಿಕ್ಕಿತು . ಭಾರತಿಯ ಸಂಸ್ಕೃತಿಯಲ್ಲಿ ಧಾರ್ಮಿಕ ಆಚರಣೆಯಲ್ಲಿ ಕಲ್ಲು ಮಣ್ಣು ಮರ ಪೂಜಿಸುತ್ತಾರೆ ,ಇದನ್ನು ವ್ಯಂಗವಾಗಿ ಹೇಳಿದ ಬಸವಣ್ಣನವರು .ಕಲ್ಲು ದೈವ ಮರ ದೈವ ಮಡಿಕೆ ದೈವ ಕೊಳಗ ದೈವ ಬಿಲ್ಲು ನಾರಿ ದೈವ ದೈವ ದೈವ ಕಾಲಿಡಲಿ೦ಬಿಲ್ಲಾ ಎಂದಿದ್ದಾರೆ.

ನೀರ ಕಂಡಲ್ಲಿ ಮುಳಗುವರಯ್ಯ ಮರವ ಕಂಡಲ್ಲಿ ಸುತ್ತುವರಯ್ಯ
ಬತ್ತುವ ಜಲವ ಒಣಗುವ ಮರವ ನೆಚ್ಚಿದವರ
ನಿಮ್ಮನೆತ್ತ ಬಲ್ಲ ನಮ್ಮ ಕೂಡಲ ಸಂಗಮದೇವ

ನೀರು ನದಿ ಭಾವಿ ಕೆರೆಯಲ್ಲಿ ಬತ್ತಿಹೋಗುವದು ,ಮರವು ನೀರಿಲ್ಲದೆ ಒಣಗುವದು ಇಂತಹ ಭೌತಿಕ ವಸ್ತುಗಳನ್ನು ದೇವರು ಅಂತ ನಂಬಿದ ನಿಮ್ಮನ್ನು ಯಾರು ನಂಬುವರು . ಇದು ಅಪ್ಪ ಬಸವನ ವಚನ
ದೇವಲೋಕ ಮರ್ತ್ಯಲೋಕದ ಬೇರೆ ಬೇರೆ ಕಲ್ಪನೆಗಳನ್ನು ಶರಣರು ಒಪ್ಪುವದಿಲ್ಲ

ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ ?
ಇಹಲೋಕದೊಳಗೇ ಮತ್ತನಂತಲೋಕ! ಶಿವಲೋಕ ಶಿವಾಚಾರವಯ್ಯ,
ಶಿವಭಕ್ತನಿದ್ದ ಠಾವೇ ದೇವಲೋಕ, ಭಕ್ತನಂಗಳವೇ ವಾರಾಣಸಿ,
ಶಿವಭಕ್ತನ ಕಾಯವೇ ಕೈಲಾಸ, ಇದು ಸತ್ಯ ಕೂಡಲಸಂಗಮದೇವ.

ಇದು ಭಕ್ತ ಪ್ರಧಾನವಾದ ಚಿಂತನೆ ಕಾರಣ ಭಕ್ತನ ಕಾಯಕ ಪರಿಶುದ್ಧವಾಗಿದ್ದು ಆತನ ದಾಸೋಹವು ಶ್ರೇಷ್ಠತೆಯನ್ನು ಪಡೆದು ಸಮಾಜ ಮುಖಿಯಾದ ಜೀವನಕ್ಕೆ ನಾಂದಿ ಹಾಡುತ್ತದೆ .
ಇಹಕೊಬ್ಬ ಗಂಡನೆ? ಪರಕೊಬ್ಬ ಗಂಡನೆ?
ಲೌಕಿಕಕ್ಕೊಬ್ಬ ಗಂಡನೆ? ಪಾರಮಾರ್ಥಕ್ಕೊಬ್ಬ ಗಂಡನೆ?
ನನ್ನ ಗಂಡ ಚೆನ್ನಮಲ್ಲಿಕಾರ್ಜುನ ದೇವರಲ್ಲದೆ
ಮಿಕ್ಕಿದ ಗಂಡರೆಲ್ಲ ಮುಗಿಲ ಮರೆಯ ಬಣ್ಣದ ಬೊಂಬೆಯಂತೆ

ಬಸವಣ್ಣನವರ ಮಾನಸ ಪುತ್ರಿ ಅಕ್ಕ ಮಹಾದೇವಿ ತಾನು ಕಲ್ಯಾಣದಲ್ಲಿ ಗುರು ಲಿಂಗ ಜಂಗಮ ಕಂಡೆನು ಎಂದು ಶರಣರ ಬಳಗವನ್ನು ಕೊಂಡಾಡುವಳು.

ಅಕ್ಕ ತನಗೆ ಒಬ್ಬನೇ ಗಂಡ ಅದುವೇ ಚೆನ್ನ ಮಲ್ಲಿಕಾರ್ಜುನ ಉಳಿದ ಗಂಡನ್ದಿರರು ದೇವರು ಮುಗಿಲ ಮರೆಯ ಬಣ್ಣದ ಬೊಂಬೆಗಳು ಅಂತ ಉಗ್ರವಾಗಿ ಟೀಕಿಸುತ್ತಾಳೆ

ಆದಿ ಲಿಂಗ ಅನಾದಿ ಜಂಗಮವು
ಆ ಜಂಗಮಕ್ಕೆ ಮಾಡಿದಡೆ ಪರಮಾನಂದ ಸುಖವಯ್ಯ
ಗುರುವಿಂಗೆ ಪರಮಗುರು ಜಂಗಮವೆಂದುದು
ಕೂಡಲ ಸಂಗಯ್ಯನ ವಚನ 

ಇಲ್ಲಿ ಜಂಗಮವು ಪುರಾತನವು ಮತ್ತು ಇತ್ತೀಚೆಗೆ ಹುಟ್ಟಿದೆ ನಮ್ಮ ಅರಿವಿನ ಗುರುವಿಗೆ ಪರಮ ಗುರು ಜಂಗಮವಾದಾಗ ಆ ಜಂಗಮಕ್ಕೆ ಮಾಡಿದ ಸುಖ ಸೇವೆಗಳು ಪರಮಾನ೦ದವ ನೀಡುವ ಕ್ರಿಯೆ .

ಧರ್ಮದ ವ್ಯಾಖ್ಯಾನ ಬಸವಣ್ಣನವರು ಅತ್ಯಂತ ಸರಳವಾಗಿ ವಿವರಿಸಿದ್ದಾರೆ .

ದಯವಿಲ್ಲದ ಧರ್ಮವದಾವುದಯ್ಯ
ದಯವಿರಬೇಕು ಸರ್ವ ಪ್ರಾಣಿಗಳೆಲ್ಲರಲ್ಲಿ
ದಯವೇ ಧರ್ಮದ ಮೂಲವಯ್ಯ
ಕೂಡಲಸಂಗಯ್ಯ೦ತಲ್ಲದೊಲ್ಲನಯ್ಯ

ದಯೆಯೇ ಧರ್ಮವು ನಮಗೆ ಪ್ರಾಣಿ ಪಕ್ಷಿ ಹತ್ಯೆ ಮಾಡುವ ಅಧಿಕಾರವಿಲ್ಲ ಮಾ೦ಸ ಭಕ್ಷಣೆಗೆ ಅವಕಾಶವಿಲ್ಲ .ಹಬ್ಬಕ್ಕೆ ತಂದ ಹರಕೆಯ ಕುರಿಯು ತೋರಣಕ್ಕೆ ತಂದ ತಳಿರವ ಮೇದಿತ್ತು ಮುಂದೆ ಕೊಂದಿಹೇನೆಂಬುದನರಿಯದೆ ಬೆಂದೊಡಲ ಹೊರೆಯ ಮೇಯಿತ್ತು .ಅದೊಂದೇ ಹುಟ್ಟಿತ್ತು ಅದೊಂದೇ ಸತ್ತಿತ್ತು ಕೊಂದವರುಲಿದರೆ ಕೂಡಲ ಸಂಗಮದೇವ ಎನ್ನುವ ಕಳಕಳಿ ಭಾವ ಬಸವಣ್ಣನವರದು.ಲಿಂಗ ನಿಷ್ಠೆ ಜಂಗಮ ಪ್ರಜ್ಞೆ ಬಸವ ಧರ್ಮದ ಧ್ಯೇಯಗಳು.ಬಸವಣ್ಣ ವಿಶ್ವ ಮಾನವನ ಸಾಲಿನಲ್ಲಿ ನಿಲ್ಲಲು ಅವನ ಚಿಂತನೆ ಸಾಮಾಜಿಕ ಕಳಕಳಿ ಮುಖ್ಯವಾದದ್ದು.ಇಂತಹ ದಿಟ್ಟ ವೈಚಾರಿಕ ಪುರುಷನನ್ನು ಪಡೆದ ಕನ್ನಡ ಮಾತೆ ಧನ್ಯ .ಶರಣು.
—————————————–
ಡಾ.ಶಶಿಕಾಂತ ಪಟ್ಟಣ ಪೂನಾ 9552002338