spot_img
spot_img

ಸಮಾಜಮುಖಿ ಪ್ರಾಧ್ಯಾಪಕಿ ಡಾ. ರಾಜಶ್ರೀ

Must Read

ಜೀವನ ಮೌಲ್ಯಗಳೇ ಕುಸಿದು ಬೀಳುತ್ತಿರುವ ಇಂದಿನ ದಿನಗಳಲ್ಲಿ ನಮಗೆ ಉಳಿದಿರುವ ಆಶಾಕಿರಣಗಳೆಂದರೇ ಶಿಕ್ಷಕರು. ಇಂದಿನ ಸಂಕೀರ್ಣ ಬದುಕಿನಲ್ಲಿ ಹಿಂದೆಂದಿಗಿಂತಲೂ ಶಿಕ್ಷಕರ ಹೊಣೆಗಾರಿಕೆ ಹೆಚ್ಚಾಗಿದೆ. ಶಿಕ್ಷಕರ ಆದರ್ಶದ ನಡೆನುಡಿ ವಿದ್ಯಾರ್ಥಿಗಳ ಮೇಲೆ ಖಂಡಿತವಾಗಿ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ಅಂತಹಅಪ್ಪಟ ಬಹುಮುಖ ಪ್ರತಿಭೆ, ಶಿಕ್ಷಣ ಕ್ಷೇತ್ರವನ್ನೇ ಸಾಧನೆಯ ಮಾರ್ಗವಾಗಿಸಿಕೊಂಡು ವಿದ್ಯಾರ್ಥಿಗಳ ಪ್ರತಿಭೆ ಬೆಳಗಿದ ಪ್ರಾಧ್ಯಾಪಕಿ ಡಾ.ರಾಜಶ್ರೀ ಗುದಗನವರ.

ಪ್ರೊ.ಸುರೇಶ ಗುದಗನವರ ನನಗೆ ಪರಿಚಿತವಾಗಿದ್ದು ಚಂದರಗಿಯಲ್ಲಿ ತಮ್ಮ ತಂದೆಯ ಸ್ಮರಣಾರ್ಥ ಕವಿಗೋಷ್ಠಿ ಏರ್ಪಡಿಸಿದ ಸಂದರ್ಭದಲ್ಲಿ ಅಂದು ಪತಿಯ ಪ್ರತಿಯೊಂದು ಚಟುವಟಿಕೆಗಳನ್ನು ಬಹಳ ಕಾಳಜಿಪೂರ್ವಕವಾಗಿ ನಿರ್ವಹಿಸುತ್ತಿದ್ದವರು ಡಾ.ರಾಜಶ್ರೀ ಗುದಗನವರ. ಕವಿಗೋಷ್ಠಿ ಮುಗಿದ ನಂತರ ನಾನು ಕನ್ನಡ ಪ್ರಭ ದಿನಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ ಚರಿತ್ರೆಗೊಂದು ಕಿಟಕಿ ಅಂಕಣದಲ್ಲಿ ಸ್ಥಳನಾಮ ವಿವೇಚನೆ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಗುದಗನವರ ಗುರುಗಳಿಗೆ ಪೋನ್ ಮಾಡಿ ರಾಮದುರ್ಗ ತಾಲೂಕಿನ ಶಬರಿಕೊಳ್ಳ ಕಿಲ್ಲಾ ತೊರಗಲ್ ಸೇರಿದಂತೆ ಹಲವು ಸ್ಥಳಗಳಿಗೆ ಹೋಗಿ ಬರಬೇಕು ನನ್ನ ಜೊತೆಗೆ ಪರಿಚಿತರನ್ನು ಕಳಿಸುವ ವ್ಯವಸ್ಥೆ ಮಾಡುವಿರಾ ಅಂತ ಹೇಳಿದಾಗ. ಸ್ವತಃ ಗುದಗನವರ ಗುರುಗಳು ನನ್ನೊಡನೆ ಬಂದು ಇಡೀ ದಿನ ರಾಮದುರ್ಗದ ಹಲವು ಸ್ಥಳಗಳಿಗೆ ಕರೆದುಕೊಂಡು ಹೋಗಿ ಮನೆಗೆ ಬಂದಾಗ ಸಹೋದರಿ ರಾಜಶ್ರೀ ಗುದಗನವರ ಸಿಹಿ ಬೋಜನ ವ್ಯವಸ್ಥೆ ಮಾಡಿದ್ದರು.ನಂತರ ಅವರ ಪಿ.ಎಚ್.ಡಿ ಸಂದರ್ಭದಲ್ಲಿ ಹಲವು ಮಾಹಿತಿಯನ್ನು ನೀಡಿದ್ದೆನು. ಹೀಗೆ ಸಾಹಿತ್ಯಾಸಕ್ತ ದಂಪತಿಗಳು ನಮ್ಮ ಕುಟುಂಬದ ಸದಸ್ಯರಂತೆ ಹಚ್ಚಿಕೊಂಡಿರುವರು.ಇಷ್ಟೆಲ್ಲ ಹೇಳಲು ಕಾರಣ ಡಾ.ರಾಜಶ್ರೀ ಗುದಗನವರ ಇದೇ ಜುಲೈ ೩೦ ರಂದು ತಮ್ಮ ಸೇವೆಯಿಂದ ನಿವೃತ್ತಿ ಹೊಂದುತ್ತಿರುವರು.ಅಂದು ಕಾಲೇಜಿನಲ್ಲಿ ವಿಶೇಷ ಬೀಳ್ಕೊಡುಗೆ ಜರಗುತ್ತಿರುವುದು.ಇಂಥಹ ಸಹೃದಯ ಸಹೋದರಿಯ ಕಿರು ಪರಿಚಯವನ್ನಿಲ್ಲಿ ಮಾಡುವೆನು.

ಬೆಳಗಾವಿ ಜಿಲ್ಲೆಯ ಗಡಿಭಾಗವಾದ ಚಿಕ್ಕೋಡಿಯ ಸುಸಂಸ್ಕೃತ ಮನೆತನದಲ್ಲಿ ರಾಜಶ್ರೀಯವರು ೧೯೬೨ರ ಜುಲೈ ೧೫ರಂದು ಜನಿಸಿದರು. ತಂದೆ ಸದಾಶಿವರಾವ್ ಕೊಟಬಾಗಿ, ತಾಯಿ ಶಕುಂತಲಾ. ಚಿಕ್ಕಂದಿನಿಂದಲೂ ಚುರುಕುತನದ ಸ್ವಭಾವ ಹೊಂದಿದ ರಾಜಶ್ರೀ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನು ಆರ್.ಡಿ.ಹೈಸ್ಕೂಲಿನಲ್ಲಿ ಪೂರೈಸಿದ್ದಾರೆ. ರಾಜಶ್ರೀ ಬುದ್ಧಿವಂತ ವಿದ್ಯಾರ್ಥಿನಿ. ಪ್ರಾಥಮಿಕ ಹಂತದಿಂದ ಕಾಲೇಜು ಮಟ್ಟದವರೆಗೂ ವರ್ಗಕ್ಕೆ ಪ್ರಥಮ ಸ್ಥಾನ. ನಗದು ಬಹುಮಾನಗಳನ್ನು ಬಿಟ್ಟುಕೊಡದ ಜಾಣೆ. ಕ್ರೀಡಾ ಚಟುವಟಿಕೆಗಿಂತಲೂ ಬುದ್ಧಿ ಗ್ರಾಹ್ಯ ಆಶುಭಾಷಣ, ಚರ್ಚಾ ಸ್ಪರ್ಧೆಗಳ ವಿಜೇತೆ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ, ಶಿಕ್ಷಕರ ನೆಚ್ಚಿನ ವಿದ್ಯಾರ್ಥಿನಿ. ಅರ್ಥಶಾಸ್ತ್ರ, ಇತಿಹಾಸ, ಇಂಗ್ಲೀಷ ಅಚ್ಚುಮೆಚ್ಚಿನ ವಿಷಯಗಳು. ಗಣಿತವೆಂದರೇ ಅಷ್ಟಕಷ್ಟೇ. ಚಿಕ್ಕೋಡಿಯ ಬಿ.ಕೆ.ಕಾಲೇಜಿನಲ್ಲಿ ಕಲಾ ಪದವಿ. ಇಡೀ ಕಾಲೇಜಿಗೆ ಪ್ರಥಮ ಅಲ್ಲದೇ ಅತ್ಯುತ್ತಮ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆ. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ.

ಬದುಕಿನ ನೆಲೆಗಾಗಿ ಬೆಳಗಾವಿ ಜಿಲ್ಲೆಯ ರಾಮದುರ್ಗದ ಸಿ.ಎಸ್.ಬೆಂಬಳಗಿ ಪದವಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಷಯದ ಉಪನ್ಯಾಸಕರಾಗಿ ಕೆಲಸ ಪ್ರಾರಂಭಿಸಿದರು. ಹೊಸ ಹೊಸ ಪರಿಕಲ್ಪನೆಗಳ ಮೂಲಕ ವಿದ್ಯಾರ್ಥಿಗಳ ಮನದಲ್ಲಿ ಚಿತ್ತಾರ ಬಿಡಿಸಿ ಸತ್ಯದದರ್ಶನ ಮಾಡಿಸುವ ಯತ್ನ ಸಫಲ. ಉದ್ಯೋಗದ ಬೆನ್ನಿಗೆ ಮದುವೆಯ ಬಂಧನ. ಪ್ರೇಮದ ಭಾವ ಬಂಧನ. ಪತಿ ಸುರೇಶ ಜ್ಯೂನಿಯರ ಕಾಲೇಜಿನಲ್ಲಿ ಸಂಖ್ಯಾಶಾಸ್ತ್ರ ಉಪನ್ಯಾಸಕರಾಗಿ ಸೇವೆಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಅವರಿಗೆ ಒಬ್ಬಳೇ ಮಗಳು ಅನುಪಮಾ. ಮಗಳು ಅನುಪಮಾ ಮತ್ತು ಅಳಿಯ ಗಣೇಶ, ಈರ್ವರು ಸ್ಪಾಫ್ಟ್ ವೇರ್ ಇಂಜಿನೀಯರ್‌ರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ನಂತರ ಅವರು ಸಂಶೋಧನೆಯತ್ತ ಚಿತ್ತ ಹರಿಸಿದರು. ರಾಮದುರ್ಗ ತಾಲೂಕಿನ ನೇಕಾರರ ಬದುಕು ಬವಣೆಗಳನ್ನು ಕಣ್ಣಾರೆ ಕಂಡ ಅನುಭವಗಳನ್ನೇ ಆಧರಿಸಿ ೨೦೧೨ರಲ್ಲಿ ಕರ್ನಾಟಕ ಕಾಲೇಜಿನ ಡಾ.ಶಾರದಾಅವರ ಮಾರ್ಗದರ್ಶನದಲ್ಲಿ “ಎಕಾನಮಿಕ್‌ ಅಸೆಸ್ಸಮೆಂಟ್‌ ಆಫ್ ಹ್ಯಾಂಡಲೂಮಆ್ಯಂಡ್ ಪಾವಲರ್‌ಲೂಮ ಇಂಡಸ್ಟ್ರೀ ಇನ್ ಕರ್ನಾಟಕ-ಕೇಸ್ ಸ್ಟಡಿ ಆಫ್ ರಾಮದುರ್ಗ ತಾಲೂಕಾ” ಎಂಬು ಪ್ರೌಢ ಪ್ರಬಂಧವನ್ನು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿ ಪಿಹೆಚ್.ಡಿ. ಪದವಿಗೆ ಭಾಜನರಾದರು.

ಅಧ್ಯಯನ, ಅಧ್ಯಾಪನ, ಶೈಕ್ಷಣಿಕ ಸುಧಾರಣೆಯಲ್ಲಿ ಹೆಜ್ಜೆಗುರುತು ಮೂಡಿಸಿರುವ ಡಾ.ರಾಜಶ್ರೀ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಐವತ್ತಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಪ್ರಚಲಿತ ವಿಷಯಗಳಾದ ರೈತರ ಆತ್ಮಹತ್ಯೆ, ಅನ್ನದಾತನ ಆರ್ತನಾದ, ಸ್ತ್ರೀ ಸಬಲೀಕರಣದಲ್ಲಿ ಎನ್.ಜಿ.ಓ.ಗಳ ಪಾತ್ರ ಮುಂತಾದ ಲೇಖನಗಳು ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಧಾರವಾಡ ಆಕಾಶವಾಣಿಯಿಂದ ಮಹತ್ವಾಕಾಂಕ್ಷೆಗೆ ಮಹಿಳೆಯೇ ಸ್ಪೂರ್ತಿ, ಪರೋಪಕಾರ, ಗಂಡ-ಹೆಂಡಿರಲ್ಲಿ ಸಾಮರಸ್ಯ, ಜೀವನದಲ್ಲಿ ಕಷ್ಟಗಳು ಇತ್ಯಾದಿಗಳ ಕುರಿತು ಮಾತನಾಡಿ ಸಮಾಜದಲ್ಲಿ ಗುರುತಿಸಿ ಕೊಂಡಿದ್ದಾರೆ. ಡಾ.ರಾಜಶ್ರೀ ಗುದಗನವರ ಅವರು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಸಮ್ಮೇಳನಗಳಲ್ಲಿ ಭಾಗವಹಿಸಿ ಮೌಲಿಕವಾದ ಪ್ರಬಂಧಗಳನ್ನು ಮಂಡಿಸಿದ್ದಾರೆ. ರಾಜ್ಯದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಪುನಶ್ಚೇತನ ಶಿಬಿರ ಮತ್ತು ಪುನರ್‌ಮನನ ಶಿಬಿರಗಳಲ್ಲಿ ಭಾಗವಹಿಸಿ ಮಹತ್ವದ ಪ್ರಬಂಧಗಳನ್ನು ಮಂಡಿಸಿದ್ದಾರೆ. ಇಂತಹ ಬಹುಮುಖಿ ಪ್ರತಿಭೆ ಮತ್ತು ವ್ಯಕ್ತಿತ್ವ ಹೊಂದಿದ ಡಾ.ರಾಜಶ್ರೀ ಅವರು ೧೯೮೬ ರಿಂದ ಅರ್ಥಶಾಸ್ತ್ರ ಅಧ್ಯಾಪಕಿ ಹುದ್ದೆಗೆ ಸೇರ್ಪಡೆಯಾಗಿ ೨೦೨೨ರವರೆಗೆ ಅಂದರೆ ೩೬ ವರ್ಷಗಳ ಕಾಲ ಸುಧೀರ್ಘವಾಗಿ ವಿದ್ಯಾರ್ಥಿ ಬಳಗಕ್ಕೆ ಜ್ಞಾನವನ್ನು ಧಾರೆಯರೆಯುತ್ತಾ, ಜನಸಮುದಾಯಕ್ಕೆ ನೈತಿಕ ಮತ್ತು ವೈಚಾರಿಕ ಬೋಧನೆ ಮಾಡುತ್ತ ಅವರು ಅಧ್ಯಯನ, ಅಧ್ಯಾಪನ, ಬೋಧನೆ ಮತ್ತು ಉಪನ್ಯಾಸಗಳನ್ನು ಬಿಟ್ಟು ಬಿಡದೆ ನಿರರ್ಗಳವಾಗಿ ಮುಂದುವರೆಸಿಕೊಂಡು ಬಂದಿರುವರು.

ಅವರು ಜೀವನವನ್ನು ಗಂಭೀರವಾಗಿ ಸ್ವೀಕರಿಸುತ್ತ ತಮ್ಮ ಗುರಿ ತಲುಪಲು ಅತ್ಯಂತ ಕಠಿಣ ಪರಿಶ್ರಮ, ಅಧ್ಯಯನಶೀಲತೆ, ಛಲದಿಂದ ಬದುಕುವ, ಬದುಕುತ್ತ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಮತ್ತು ಇತರರಿಗೆ ಮಾದರಿಯಾಗುವ ಆತ್ಮವಿಶ್ವಾಸ ಹೊಂದಿದ್ದಾರೆ.

ಡಾ.ರಾಜಶ್ರೀ ಯು.ಜಿ.ಸಿ.ಅಡಿಯಲ್ಲಿ ಎರಡು ಮೈನರ್ ರಿಸರ್ಚ ಪ್ರೊಜೆಕ್ಟ್ಗಳನ್ನು ಪೂರ್ಣಗೊಳಿಸಿ ಅಲ್ಲದೇ ಮೇಜರ್ ರಿಸರ್ಚ ಪ್ರೊಜೆಕ್ಟರಗೆ ಕೋ ಇನ್‌ವೆಸ್ಟಿಗೇಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಾಲೇಜಿನ ಲೇಡಿಸ್ ಹಾಸ್ಟೇಲ್ ವಾರ್ಡನ್ ಹಾಗೂ ನ್ಯಾಕ್ ಕೋ ಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸಿ ಸೈ ಅನಿಸಿಕೊಂಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಪ್ರಸಾರಂಗದಿಂದ ‘ಮಹಿಳಾ ಶಿಕ್ಷಣ ಮತ್ತು ಲಿಂಗ ಸಮಾನತೆ’ ಹಾಗೂ ಗ್ರಾಮೀಣ ಅಭಿವೃದ್ಧಿಯಲ್ಲಿ ಕಿರು ಹಣಕಾಸು ಸಂಸ್ಥೆ’ ಎಂಬ ಅವರ ಉಪನ್ಯಾಸಗಳು ಪ್ರಕಟಗೊಂಡಿದ್ದು ವಿಶೇಷ. ಅವರು ಸಮರ್ಥವಾಗಿ ನಿಭಾಯಿಸಿದ ಬಹುದೊಡ್ಡ ಜವಾಬ್ದಾರಿಯಾದ ಪ್ರತಿಷ್ಠಿತ ವಿದ್ಯಾ ಪ್ರಸಾರಕ ಸಮಿತಿಯ ಸಿ.ಎಸ್.ಬೆಂಬಳಗಿ ಕಲಾ, ಶಾ.ಎಂ.ಆರ್.ಪಾಲರೇಶಾ ವಿಜ್ಞಾನ ಹಾಗೂ ಜಿ.ಎಲ್.ರಾಠಿ ವಾಣಿಜ್ಯ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರ ಪಟ್ಟ. ೩೬ ವರ್ಷ ಅರ್ಥಶಾಸ್ತ್ರ ಪ್ರಾಧ್ಯಾಪಕಿಯಾಗಿದ್ದು, ಪದವಿ ಕಾಲೇಜಿನ ಪ್ರಾಂಶುಪಾಲರ ಹುದ್ದೆ ದೊರೆತಾಗ ಕಾಲೇಜನ್ನು ಶಿಸ್ತು, ಸಮಯ ಪಾಲನೆಗಳಿಂದ ಸುಧಾರಿಸುವಲ್ಲಿ ಅವರಿಗೆ ಸಾಧ್ಯವಾಗಿದ್ದು ಅವರ ವ್ಯಕ್ತಿತ್ವದಲ್ಲಿ ಹಾಸು ಹೊಕ್ಕಾಗಿರುವ ಆತ್ಮಸ್ಥೆöÊರ್ಯ, ಕಷ್ಟಸಹಿಷ್ಣುತೆ, ಛಲಬಿಡದೆ ಹೋರಾಡುವ ಮನೋಧರ್ಮದಿಂದ. ಆಗಿನ ನೋವು, ಅಪಮಾನಗಳನ್ನು ಸಹಿಸುವ ಅಪಾರ ತಾಳ್ಮೆ, ಎಂಥ ಪ್ರಸಂಗದಲ್ಲೂ ಕಂಗೆಡದಂತೆ ಜತೆಗಿರುವ ಆಶಾವಾದ ಇವು ಅವರ ಮುಖ್ಯ ಸ್ವಭಾವವೆ ಆಗಿವೆೆ. ಹೀಗಾಗಿ ತಂದೆ-ತಾಯಿ ಪ್ರೇರಣೆ, ಪತಿಯ ಪ್ರೋತ್ಸಾಹ ಇವುಗಳು ಅವರು ವೃತ್ತಿ ಮತ್ತು ಪ್ರವೃತ್ತಿಯ ಜೀವನದಲ್ಲಿ ಒಬ್ಬ ಉನ್ನತ ಮಹಿಳೆಯಾಗಿ, ಪದವಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆಸಲ್ಲಿಸುತ್ತಿರುವ ಡಾ.ರಾಜಶ್ರೀ ಅವರು ಅತ್ಯಂತ ಸಮರ್ಪಕವಾಗಿ ನಿಭಾಯಿಸಿರುವದು ಹೆಮ್ಮೆಯ ಸಂಗತಿ.

ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಆರ್ಥಿಕ ಸಹಾಯ ಮಾಡುವದು ಅವರ ಮತ್ತೊಂದು ವಿಶೇಷ ಗುಣ, ಅವರ ಸಹಕಾರದಿಂದ ಸಾಪ್ಟವೇರ್ ಕಂಪನಿ, ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಕಂದಾಯ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸಾಧನೆ ಗುರುತಿಸಿ ಬೆಂಗಳೂರಿನ ಜ್ಞಾನ ಮಂದಾರ ಶೈಕ್ಷಣಿಕ ಅಕಾಡೆಮಿಯು ‘ಸಮಾಜ ರತ್ನ’ ಹಾಗೂ ರಾಮದುರ್ಗದ ಲಯನ್ಸ್ ಸಂಸ್ಥೆ ‘ಅತ್ಯುತ್ತಮ ಶಿಕ್ಷಕಿ’ ಪ್ರಶಸ್ತಿ ನೀಡಿ ಗೌರವಿಸಿವೆ. ಡಾ.ರಾಜಶ್ರೀ ಸದ್ದಿಲ್ಲದೇ ಸಾಧಿಸಿದ ಸಾಧಕಿ, ನಿಸ್ಪೃಹತೆ, ನಿಸ್ವಾರ್ಥ ಸೇವೆ, ಮಮತೆಯಗುರು ಮಡಿಲಿಗೆ ಮಾದರಿಯೆಂಬುದು ಉತ್ಪ್ರಕ್ಷೇಯಲ್ಲ. ಇಂಥವರು ಇತರ ಮಹಿಳೆಯರಿಗೆ ಭಿನ್ನ ವಿಭಿನ್ನ.

ದಂಪತಿಳಿಬ್ಬರದೂ ಪೇಮ ವಿವಾಹ ಇನ್ನೊಂದು ವಿಶಿಷ್ಟ ಸಂಗತಿಯೆಂದರೆ ಜನ್ಮ ದಿನಾಂಕ ಪ್ರೊ. ಸುರೇಶ ಗುದಗನವರ ಅವರದು ೧೫-೭-೧೯೬೧ ಜನ್ಮ ದಿನಾಂಕವಾದರೆ ಡಾ.ರಾಜಶ್ರೀಯವರದು ೧೫-೭-೧೯೬೨ ತಿಂಗಳು ಮತ್ತು ದಿನಾಂಕ ಒಂದೇ ವರ್ಷ ಮಾತ್ರ ಹಿಂದೆ ಮುಂದೆ ಹೇಗಿದೆ ನೋಡಿ ಇದೊಂದು ಅಪರೂಪದ ದಾಂಪತ್ಯ ಜೋಡಿ. ದಂಪತಿಯರಿಬ್ಬರದೂ ಒಂದೇ ದಿನ ಹುಟ್ಟಿದ ದಿನಾಂಕ ಮತ್ತು ತಿಂಗಳು ಆಗಿರುವ ಕಾರಣ ಹುಟ್ಟು ಹಬ್ಬದ ಸಂಭ್ರಮ ಕೂಡ ಒಂದೇ ದಿನ ಜರಗುತ್ತಿರುವುದು ವಿಶೇಷ.

ರಾಜಶ್ರೀಯವರು ತಾಯಿಯವರ ಸ್ಮರಣೆಗಾಗಿ ರಾಮದುರ್ಗದ ಮಹಾಂತೇಶ ನಗರದ ಶಿವಲಿಂಗ ಹಾಗೂ ನಾಗದೇವತೆ ದೇವಾಲಯದ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ೧.೬ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಶಾರದಾ ಮಂಟಪವನ್ನು ನಿರ್ಮಿಸುವ ಮೂಲಕ ಧಾರ್ಮಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವರು. ಈ ದಂಪತಿಗಳ ನಿವೃತ್ತಿಯ ಬದುಕು ಸಂತಸ ನೆಮ್ಮದಿಯಿಂದ ಕೂಡಿರಲಿ. ಸಹೋದರಿ ಇನ್ನೂ ಹೆಚ್ಚು ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲೆಂದು ಈ ಕಿರಿಯ ಸಹೋದರನ ಹಾರೈಕೆ.


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮುನವಳ್ಳಿ
೯೪೪೯೫೧೮೪೦೦ ೮೯೭೧೧೧೭೪೪೨

- Advertisement -
- Advertisement -

Latest News

ಈಗಿನಿಂದಲೇ ತಟ್ಟಿದ ಚುನಾವಣೆಯ ಬಿಸಿ

ಬೀದರನ ಭಾಲ್ಕಿಯಲ್ಲಿ ತಂದೆ - ಮಗನ ವಿಭಿನ್ನ ಹೋರಾಟ ಬೀದರ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ  ಹತ್ತಿರ ಬರುತ್ತಿದ್ದಂತೆ ಜಿಲ್ಲೆಯ  ಭಾಲ್ಕಿ ಕ್ಷೇತ್ರವು ಎರಡು ರೀತಿಯ ಪ್ರಕರಣಗಳಿಂದ ಸುದ್ದಿಗೆ...
- Advertisement -

More Articles Like This

- Advertisement -
close
error: Content is protected !!