ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಹಾಸನ ಜಿಲ್ಲಾ ಘಟಕ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಭಾನುವಾರ ಹಾಸನ ನಗರದ ಅರಳಿಕಟ್ಟೇ ವೃತ್ತದ ಬಳಿ ಇರುವ ಸಂಸ್ಕೃತ ಭವನದಲ್ಲಿ ಹಾಸನ ಜಿಲ್ಲಾಮಟ್ಟದ ಕವಿಕಾವ್ಯ ಕುಂಚ ಗಾಯನ ನೃತ್ಯ ವಿಮರ್ಶೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಹಾಸನ ಆಕಾಶವಾಣಿ ನಿರ್ದೇಶಕ ವಿಜಯ ಅಂಗಡಿ ಮಾತನಾಡಿ ಪ್ರಕೃತಿ ಎಂಬುದು ನಮಗೆ ಪ್ರಥಮ ಗುರು. ಕವಿ, ಸಾಹಿತಿ, ವೈದ್ಯರು ಒಳಗೊಂಡು ಎಲ್ಲರಿಗೂ ಪಾಠ ಕಲಿಸುತ್ತದೆ. ಪ್ರಕೃತಿಯಿಂದ ಎಲ್ಲಾ ಸಾಹಿತ್ಯ, ಕಥೆ, ಕವನ, ಚಿತ್ರಗಳು ಸೃಷ್ಟಿಯಾಗುತ್ತವೆ. ನಿಸರ್ಗ ಇಲ್ಲದೆ ನಾವುಗಳಿಲ್ಲ ಆದರೆ ನಾವು ಇಲ್ಲದಿದ್ದರೂ ನಿಸರ್ಗ ಇರುತ್ತದೆ ಎಂದರು.
ಸಾಹಿತಿ ಗೊರೂರು ಅನಂತರಾಜು ಪ್ರಸ್ತಾವಿಕವಾಗಿ ಮಾತನಾಡಿ ಬಹಳ ವರ್ಷಗಳ ಹಿಂದೆ ಹಲ್ಮಿಡಿ ಗ್ರಾಮದಲ್ಲಿ ನಡೆದ ಹೊಯ್ಸಳೋತ್ಸವದಲ್ಲಿ ಕವಿಕಾವ್ಯ ಕುಂಚ, ಸಂಗೀತ ಗಾಯನ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೊಯ್ಸಳೋತ್ಸವ ಕಾರ್ಯಕ್ರಮ ಪ್ರತಿವರ್ಷ ನಡೆದುಕೊಂಡು ಬಂದಿದ್ದರೆ ಎಷ್ಟೋ ಕವಿ ಕಲಾವಿದರು ಚಿತ್ರಕಾರರಿಗೆ ವೇದಿಕೆ ಒದಗಿ ಅವರ ಪ್ರತಿಭೆ ಹೊರಬರುತ್ತಿತ್ತು. ಈ ದಿಶೆಯಲ್ಲಿ ಸಂಘ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಭ್ವಾನಿತ ಹೆಸರಾಂತ ಕವಿಗಳು, ಕಲಾವಿದರು, ಗಾಯಕರು, ವಿಮರ್ಶಕರು ಮತ್ತು ಯುವ ಪ್ರತಿಭೆಯ ನೃತ್ಯಪಟುಗಳನ್ನು ಒಂದೇ ವೇದಿಕೆಯಲ್ಲಿ ಸಮ್ಮಿಲನಗೊಳಿಸಲಾಗಿದೆ. ಪ್ರಸಿದ್ಧರ ಜೊತೆಗೆ ಉದಯೋನ್ಮುಖ ಕವಿಗಳು, ಉತ್ತಮ ಕಂಠ ಸಿರಿಯ ಗಾಯಕರ ಜೊತೆಗೆ ಗಾಯನ ಕ್ಷೇತ್ರದಲ್ಲಿ ಎಲೆಮರೆಕಾಯಿಯಂತಿರುವ ಗಾಯಕರು, ಪರಿಣಿತ ಚಿತ್ರಕಲಾವಿದರ ಜೊತೆಗೆ ವಿದ್ಯಾರ್ಥಿ ಚಿತ್ರಕಲಾವಿದರು ಪಾಲ್ಗೊಂಡು ಹಳೆ ಬೇರು ಹೊಸ ಚಿಗುರು ನಾಣ್ಣುಡಿಗೆ ಅನುಸಾರ ಕಾರ್ಯಕ್ರಮ ಆಯೋಜಿಸಲಾಗಿದೆ. ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯ ಘಟಕದ ಕರೆಗೆ ಸ್ಪಂಧಿಸಿ ರಾಜ್ಯದ ೨೬ ಜಿಲ್ಲೆಗಳಲ್ಲಿ ಒಂದೆ ದಿನ ಕವಿಗೋಷ್ಠಿ ಉಪನ್ಯಾಸ, ಪ್ರತಿಭೆಗಳಿಗೆ ಸನ್ಮಾನ ಕಾರ್ಯಕ್ರಮ ನಡೆಸಿವೆ. ಹಾಸನ ಜಿಲ್ಲೆಯಲ್ಲಿ ಹೊಯ್ಸಳೋತ್ಸವ ಮತ್ತೆ ಪ್ರಾರಂಭವಾಗಿ ಕವಿ ಕಲಾವಿದರಿಗೆ ಸೂಕ್ತ ವೇದಿಕೆ ಒದಗಿಬರಲಿ ಎಂಬುದು ಕಾರ್ಯಕ್ರಮದ ಸದುದ್ದೇಶವಾಗಿದೆ ಎಂದರು.
ವೇದಿಕೆಯಲ್ಲಿ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಉಡುವೇರೆ ಡಿ. ಸುಂದರೇಶ್, ನಿ. ತಹಸೀಲ್ದಾರ್ ರುದ್ರಪ್ಪಾಜಿರಾವ್, ಗಾಯಕರು ಗ್ಯಾರಂಟಿ ರಾಮಣ್ಣ, ಚಿತ್ರಕಲಾವಿದರು ಶಂಕರಪ್ಪ ಕಲ್ಯಾಡಿ, ಬಿ.ಎಸ್.ದೇಸಾಯಿ, ಆರ್.ಶಿವಕುಮಾರ್. ನೇತ್ರಾವತಿ, ಎಂ.ಆರ್.ಚಂದ್ರಶೇಖರ್, ಶೈಲಜಾ ಹಾಸನ, ಕಲಾವತಿ ಮಧುಸೂಧನ್ ಇದ್ದರು. ದಿಬ್ಬೂರು ರಮೇಶ್ ಪ್ರಾರ್ಥಿಸಿದರು. ಗಿರಿಜಾ ನಿರ್ವಾಣಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ೩೭ ಕವಿಗಳು ರಚಿತ ಕವಿತೆಗಳನ್ನು ೨೫ಕ್ಕೂ ಗಾಯಕರು ವೇದಿಕೆಯಲ್ಲಿ ರಾಗ ಸಂಯೋಜಿಸಿ ಹಾಡಿದರು. ಗಾಯನ ಕಾರ್ಯಕ್ರಮ ನಡೆಯುವಾಗ ಚಿತ್ರ ಕಲಾವಿದರು ಸಭಿಕರೆದುರು ಚಿತ್ರ ಬಿಡಿಸಿ ಪ್ರಶಂಸೆಗೆ ಪಾತ್ರರಾದರು. ಹಾಡಲ್ಪಟ್ಟ ಕವಿತೆಗಳನ್ನು ಡಾ.ಬರಾಳು ಶಿವರಾಂ, ಜಿ.ಎನ್.ಅನುಸೂಯ, ಗೊರೂರು ಶಿವೇಶ್, ಜಿ.ಎಸ್.ಶಿವಶಂಕರಪ್ಪ, ಕೊಟ್ರೇಶ್ ಎಸ್.ಉಪ್ಪಾರ್, ಸಿ.ಎನ್.ಚಿದಾನಂದ, ಜಿ.ಟಿ.ಲೋಕೇಶ್, ಎನ್.ಎಲ್.ಚನ್ನೇಗೌಡ, ಗೊರೂರು ಅನಂತರಾಜು ಸೊಗಸಾಗಿ ವಿಮರ್ಶಿಸಿದರು.