ಮೂಡಲಗಿ: ಶೈಕ್ಷಣಿಕವಾಗಿ ಸದೃಢರಾಗಲು ಕ್ರೀಡಾಕೂಟಗಳು ಅತ್ಯವಶ್ಯಕವಾಗಿವೆ. ಸಂಪತ್ತುಗಳಲ್ಲಿ ಆರೋಗ್ಯ ಸಂಪತ್ತು ಸರ್ವ ಶ್ರೇಷ್ಠ ಹಾಗೂ ಸಾರ್ವಕಾಲಿಕವಾಗಿ ಮನುಷ್ಯನ ಪರಿಪಕ್ವ ಜೀವನ ನಡೆಸುವಲ್ಲಿ ಮಹತ್ವದ ಪಾತ್ರವನ್ನು ಕ್ರೀಡೆಗಳು ನಿರ್ವಹಿಸುತ್ತವೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಆರೀಪ್‍ಹುಸೇನ ಟೋಪಿಚಾಂದ ಹೇಳಿದರು.
ಅವರು ಸಮೀಪದ ಕೌಜಲಗಿಯ ಕರ್ನಾಟಕ ಪಬ್ಲಿಕ್( ಉರ್ದು) ಶಾಲೆಯಲ್ಲಿ ಜರುಗಿದ ಪ್ರಸಕ್ತ ಸಾಲಿಕ ಸಮೂಹ ಮಟ್ಟದ ಕ್ರೀಡಾಕೂಟದ ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಇಂದಿನ ಶೈಕ್ಷಣಿಕ ಪೈಪೋಟಿಯ ಯುಗದಲ್ಲಿ ಅಂಕಗಳಿಗೆ ಮಾನ್ಯತೆಯ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಭಾಗವಹಿಸುವಿಕೆಗೆ ಹೆಚ್ಚಿನ ಆದ್ಯತೆ ನೀಡುವದು ಅತ್ಯವಶ್ಯಕವಾಗಿದೆ. ದೈಹಿಕ ಹಾಗೂ ಮಾನಸಿಕವಾಗಿ ಮಕ್ಕಳು ಪ್ರಬಲರಿದ್ದಾಗ ಮಾತ್ರ ಕಲಿಕೆ ಫಲಪ್ರದವಾಗುವದು. ಶೈಕ್ಷಣಿಕವಾಗಿ ಮಗುವಿನ ಸರ್ವಾಂಗೀಣ ಅಭಿವೃದ್ಧಿಯ ಹಿತದೃಷ್ಠಿಯಲ್ಲಿ ಕಾರ್ಯನಿರ್ವಹಿಸಿದಾಗ ಮಾತ್ರ ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ನಮ್ಮಯ ಪಾತ್ರ ಯಶಸ್ವಿಯಾಗುವದು ಎಂದರು.
ಕ್ರೀಡಾಜ್ಯೋತಿ ಸ್ವಾಗತಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಮೊರಾರ್ಜಿ ವಸತಿ ಶಾಲೆಯಲ್ಲಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಿದ್ದರು. ವಿಜೇತರಿಗೆ ಬಹುಮಾನಗಳನ್ನು ನೀಡಿದರು.
ಕ್ರೀಡಾಕೂಟದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಿ.ಜೆ ಕಲಾರಕೊಪ್ಪ, ತಾಲೂಕಾ ಉಪಾಧ್ಯಕ್ಷ ಬಿ.ಎ ಡಾಂಗೆ, ನಿರ್ದೇಶಕ ಕೆ.ಎಲ್ ಮೀಶಿ, ಪ್ರಧಾನ ಗುರುಗಳಾದ ಡಿ.ಕೆ ಜಮಾದಾರ, ಎಸ್.ಎ ಮುಲ್ಲಾ, ಎ.ಜಿ ಮನಿಯಾರ, ನಿರ್ಣಾಯಕರಾಗಿ ಎಸ್.ಎಮ್ ನಾಗನೂರ ಹಾಗೂ ಶಿಕ್ಷಕರು ಮತ್ತು ಮೂಡಲಗಿ (ಉರ್ದು) ಸಮೂಹ ವ್ಯಾಪ್ತಿಯ ಮಕ್ಕಳು ಭಾಗವಹಿಸಿದ್ದರು.