ಬೀದರ – ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲೇ ಕ್ರೀಡಾಪಟುಗಳನ್ನು ಓಡಿಸಿ ಕ್ರೀಡಾಕೂಟ ಪೂರೈಸಿದ ಆಯೋಜಕರು ಅಮಾನವೀಯತೆ ಮೆರೆದ ಘಟನೆ ಬೀದರನಲ್ಲಿ ನಡೆದಿದೆ.
ವಿದ್ಯಾಭಾರತಿ ಖಾಸಗಿ ಶಾಲೆಯಿಂದ ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಾದೇಶಿಕ ಮಟ್ಟದ ಕ್ರೀಡಾ ಕೂಟ ಆಯೋಜಕ ರಿಂದ ಸುರಿಯುತ್ತಿರುವ ಧಾರಾಕಾರ ಮಳೆಯಲ್ಲೇ ಕ್ರೀಡಾ ಪಟುಗಳು ರನಿಂಗ್ ಮಾಡಿದರು.ಸತತ ಸುರಿದ ಮಳೆಯಿಂದಾಗಿ ಕ್ರೀಡಾಂಗಣ ಕೆಸರು ಗದ್ದೆಯಂತಾಗಿದ್ದು ಇದು ಕೆಸರು ಗದ್ದೆ ಓಟವೋ ಎಂಬ ಸಂದೇಹ ಉಂಟುಮಾಡುತ್ತಿತ್ತು. ಇಂಥದರಲ್ಲಿಯೇ ಕ್ರೀಡಾಳುಗಳು ಓಟ ಆರಂಭಿಸಿದರು. ಅತ್ತ ಆಯೋಜಕರು ತಮಗಾಗಿ ಛತ್ರಿ ಹಿಡಿದುಕೊಂಡು ನಿರ್ವಹಣೆ ಮಾಡುತ್ತಿದ್ದರು. ವೇದಿಕೆಯಿಂದ ಬಹುಮಾನ ವಿತರಣೆಯ ಘೋಷಣೆಗಳೂ ಕೇಳಿಬರುತ್ತಿದ್ದವು.
ಜಿಲ್ಲೆ ಸೇರಿದಂತೆ ಪ್ರಾದೇಶಿಕ ಮಟ್ಟದ ಕ್ರಿಡಾ ಪಟುಗಳು ಭಾಗಿಯಾಗಿದ್ದ ಈ ಕ್ರೀಡಾಕೂಟದ ಸಮಯದಲ್ಲಿಯೇ ಧಾರಾಕಾರ ಮಳೆ ಶುರುವಾಯಿತು. ಇಂಥ ಸಮಯದಲ್ಲಿ ಕ್ರೀಡಾಕೂಟ ರದ್ದು ಮಾಡಬೇಕಿದ್ದ ಆಯೋಜಕರು ಕ್ರೀಡಾಳುಗಳ ಆರೋಗ್ಯವನ್ನೂ ಲೆಕ್ಕಿಸದೆ ಓಡಿಸಿದರು. ಇದೇ ಸಮಯದಲ್ಲಿ ರನ್ನಿಂಗ್ ಮಾಡುವಾಗ ಓರ್ವ ಕ್ರೀಡಾಪಟು ಜಾರಿ ಬಿದ್ದರು.
ಮಳೆಯಲ್ಲಿಯೇ ಕ್ರೀಡಾಕೂಟಕ್ಕೆ ಪರವಾನಿಗೆ ನೀಡಿದ ಕ್ರೀಡಾ ಇಲಾಖೆಯ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ