ಸಿಂದಗಿ: ಬಾದಾಮಿ ಅಮವಾಸ್ಯೆಯ ದಿನ ದಂದು ನಡೆಯುವ ಸಿಂದಗಿ ನಗರದ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವವು ಬಾರಿ ಅದ್ದೂರಿಯಿಂದ ನಡೆಯಿತು.
ಪಟ್ಟಣದ ಶ್ರೀ ನೀಲಗಂಗಾದೇವಿಯ ದೇವಸ್ಥಾನದ ಮುಂದೆ ಬೇವಿನ ತೊಪ್ಪಲದ ಚಪ್ಪರದಲ್ಲಿ ಮಜ್ಜಿಗೆಯನ್ನು ಮಾಡಿ ಶ್ರೀ ಚೌಡೇಶ್ವರಿಯು ಅಗ್ಗಿಯನ್ನು(ಅಗ್ನೀ ಕುಂಡ) ಹಾಯ್ದು ಊರಿನ ಸಕಲ ಕಷ್ಟಗಳನ್ನು ಬೆಂಕಿಯ ಹೊಂಡದಲ್ಲಿ ಹಾಕಿ ಹೋದಳು.
ದಿ 29 ರಂದು ಸಂಜೆ ಪಟ್ಟಣದ ಮೂಲ ದೇವಸ್ಥಾನದಿಂದ ನೂತನ ದೇವಸ್ಥಾನಕ್ಕೆ ಪಲ್ಲಕ್ಕಿ ಉತ್ಸವವು ವಿವಿಧ ವಾದ್ಯವೈಭವಗಳ ಮೂಲಕ ಶ್ರೀ ದೇವಿ ತೆರಳಿ ಅಂದು ರಾತ್ರಿ 12 ಗಂಟೆಯ ವೇಳೆಗೆ ಬಾಳ ಬಟ್ಟಲ (ಭೂತ ಪ್ರೇತಗಳ ಸಂಹಾರ) ಪಟ್ಟಣದ ಮನೆಮನೆಗಳಿಗೆ ತೆರಳಿ ಉಡಿಅಕ್ಕಿ ಹಾಕಿಕೊಂಡು ಭಕ್ತರ ಮನೆಯಲ್ಲಿ ಯಾವುದೆ ಭೂತಪ್ರೇತಗಳನ್ನು ಬಾರದಂದೆ ಹರಕೆ ನೀಡಿ ಹರಿಸಿದಳು.
30 ರಂದು ಪುರವಂತರ ಸೇವೆಯೊಂದಿಗೆ ಶ್ರೀ ಚೌಡೇಶ್ವರಿ ದೇವಿ ಗಂಗಸ್ಥಳಕ್ಕೆ ಹೋಗಿ ಶ್ರೀ ನೀಲಗಂಗಾದೇವಿಯ ದೇವಸ್ಥಾನದ ಮುಂದೆ ಹಾಕಿರುವ ಬೇವಿನ ತೊಪ್ಪಲದ ಚಪ್ಪರದಲ್ಲಿ ಮಜ್ಜಿಗೆಯನ್ನು ಮಾಡಿ ಅಗ್ಗಿಯನ್ನು ಹಾಯ್ದು ಬಜಾರದಲ್ಲಿ ಕೋಲಾಟವನ್ನಾಡಿದಳು. ಚಾವಡಿಯ ಮುಂದೆ ಊರ ಗೌಡರ ಸಮ್ಮುಖದಲ್ಲಿ ಕೊಬ್ಬರಿ ಸಮೇತ ಕೋಲಾಟವನ್ನು ಆಡಿದಳು. ಇದೇ ಸಂದರ್ಭದಲ್ಲಿ ಪಟ್ಟಣದ ನೂರಾರು ಭಕ್ತರ ಮನೆ ಮನೆಗೆ ತೆರಳಿ ಹರಕೆಗಳನ್ನು ಹೇಳಿ ಭಕ್ತರಿಗೆ ಶುಭ ಹಾರೈಸುತ್ತ ಮೂಲ ದೇವಸ್ಥಾನಕ್ಕೆ ತೆರಳಿದಳು.
ದೇವಿಯು ಬರುವ ಸಂದರ್ಭದಲ್ಲಿ ಭಕ್ತರು ದಿಂಡರಿಕೆಯನ್ನು ಹಾಕಿ ದೇವಿಯ ಕೃಪೆಗೆ ಪಾತ್ರರಾದರು. ಅಗ್ಗಿಯನ್ನು ಹಾಯುವ ಮೊದಲು ಕುಂಬಾರ ಮನೆಗಳಿಗೆ ತೆರಳಿ ಶ್ರೀ ದೇವಿಯು ಉಡಿಅಕ್ಕಿಯನ್ನು ಹಾಕಿಕೊಂಡು ಅವನ್ನು ಹರಸಿದಳು.
ಜಾತ್ರಾ ಮಹೋತ್ಸವದಲ್ಲಿ ವಿವಿಧ ರೂಪಕಗಳು, ಹಲವಾರು ಕಲಾತಂಡಗಳು ತುಮಕೂರಿನ ಸೋಮನ ಕುಣಿತ. ವೀರಗಾಸೆ ಕುಣಿತ. ಆನೆ ಉತ್ಸವ. ನವೀಲು ಕುಣಿತ. ಕುದುರೆ ಕುಣಿತ. ಹನುಮಂತನ ವೇಷ. ಶಹನಾಯಿ. ಕೊಂಬು(ಕಹಳೆ) ಸಂಬಳ ಸೇರಿದಂತೆ ಹಲವಾರು ಜಾನಪದ ಕಲಾತಂಡಗಳು ಪಾಲ್ಗೋಂಡಿದ್ದವು.
ಸಂಜೆಯಾಗುತ್ತಿದ್ದಂತೆ ಬಣ್ಣ ಬಣ್ಣದ ಪಟಾಕಿಯು ಸುರಿಮಳೆಯಂತೆ ಆಕಾಶದಲ್ಲಿ ಚಿತ್ತಾರವಾಗಿ ಹಾರಿ ನೋಡುಗರಿಗೆ ಮನತಣಿಸಿದವು.