ವೇಣುಗೋಪಾಲನಿಗೆ ನವನೀತ ಅಲಂಕಾರ
ಪಾಂಚಜನ್ಯ ಪ್ರತಿಷ್ಠಾನದ ಸಹಯೋಗದಲ್ಲಿ ಗೋವಿಂದ ಗಾನಾಮೃತ
ಬೆಂಗಳೂರು ಹೊರ ವಲಯದ ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಕಾಕೋಳಿನ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಆಗಸ್ಟ್ 26ರಂದು ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಸಜ್ಜಾಗಿದೆ.
ಹೆಸರುಘಟ್ಟ ಕೆರೆ ಸಮೀಪದ ಕಾಕೋಳಿನ ಪ್ರಧಾನ ಆಕರ್ಷಣೆ ಊರ ಮಧ್ಯಭಾಗದಲ್ಲಿರುವ ಶ್ರೀ ಶ್ರೀಪಾದರಾಜರಿಂದ ಪ್ರತಿಷ್ಠಾಪಿತ ತುಳಸಿ ಬೃಂದಾವನದಲ್ಲಿರುವ ಚತುರ್ಭುಜ ವೇಣುಗೋಪಾಲಕೃಷ್ಣ, ಎರಡು ಕೈಗಳಲ್ಲಿ ಶಂಖ ಚಕ್ರ ಇನ್ನೆರಡು ಕೈಗಳಲ್ಲಿ ಎಡಬದಿಗೆ ಕೊಳಲದುತ್ತಿರುವ ಮನಮೋಹಕ ಶಿಲಾ ಪ್ರತಿಮೆಯಾಗಿ ಕಂಗೊಳಿಸುತ್ತಿರುವ ದಿವ್ಯ ಕ್ಷೇತ್ರ.
ಪೌರಾಣಿಕ ಚಾರಿತ್ರಿಕ ನೆಲೆಯಾಗಿ ಧಾರ್ಮಿಕ ಸೊಗಡಿನ ಕಾಕೋಳು ಶಾನುಭೋಗರಾಗಿದ್ದ ಕೀರ್ತಿಶೇಷ ನರಸಣ್ಣ ಮತ್ತು ಶೇಷಗಿರಿರಾಯರ ಮಾರ್ಗದರ್ಶನದೊಡನೆ ಕೃಷ್ಣ ಭಕ್ತಿಗೆ ಪ್ರೇರಕವೆನಿಸುವ ಗ್ರಾಮೀಣ ಭಾಗದಲ್ಲಿ ಆಧ್ಯಾತ್ಮಿಕತೆಯನಾಧರಿಸಿದ ಸಂಘಟನೆ ಧರ್ಮ ಸಂಸ್ಕೃತಿ ಜಾಗೃತಿಗೆ ಪ್ರಸ್ತುತ ವ್ಯವಸ್ಥಾಪನ ಮಂಡಳಿ ಕಂಕಣ ಬದ್ಧವಾಗಿದೆ.
ಶ್ರೀ ವ್ಯಾಸರಾಜನಿಂದ ಸ್ಥಾಪಿತ ಕಂಬದ ಆಂಜನೇಯ ಸ್ವಾಮಿ, ಹಾಗೂ ಅರ್ಜುನ ಪೂಜಿತ ದಕ್ಷಿಣೇಶ್ವರ ಸ್ವಾಮಿ ಹಾಗು ದ್ವೈತ ಮತ ಸ್ಥಾಪನಾಚಾರ್ಯ ಆಚಾರ್ಯ ಮಧ್ವರ ಸನ್ನಿಧಾನದಲ್ಲಿ ಪಾಂಚಜನ್ಯ ಪ್ರತಿಷ್ಠಾನದ ಸಹಯೋಗದಲ್ಲಿ ಸೋಮವಾರ ಸಂಜೆ ಶ್ರೀ ಕೃಷ್ಣ ಜನ್ಮಾಷ್ಟಮಿ ಮೂಲ ದೇವರಿಗೆ ನವನೀತ ಬೆಣ್ಣೆಯ ಅಲಂಕಾರ, ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ವಿನಯ್ ಆರ್ ಕುಲಕರ್ಣಿ ಮತ್ತು ಅಪರ್ಣ ಕುಲಕರ್ಣಿ ರವರಿಂದ ಗೋವಿಂದ ಗಾನಾಮೃತ ಭಕ್ತಿ ಸಂಗೀತ ಕಾರ್ಯಕ್ರಮ, ವೈಭವದ ತೊಟ್ಟಿಲು ಪೂಜೆ, ಪ್ರಸಾದ ವಿನಿಯೋಗ ಆಯೋಜಿಸಲಾಗಿದೆ.
ದೇವಾಲಯದ ಆವರಣದಲ್ಲಿ ಸುಸಜ್ಜಿತವಾದ ಪಾಂಚಜನ್ಯ ಮತ್ತು ಸುದರ್ಶನ ಎಂಬ ಸಭಾಂಗಣ, ಬ್ರಹ್ಮರಥೋತ್ಸವದ ಅಷ್ಟದಶಮಾನೋತ್ಸವದ ಸ್ಮರಣಾರ್ಥ ನಡೆದ ಶ್ರೀ ಕೃಷ್ಣ ಕಲಾ ದರ್ಶನ ಆರ್ಟ್ ಗ್ಯಾಲರಿ ಕಣ್ತುಂಬಿ ಕೊಳ್ಳಬಹುದು. ಗೋಸೇವೆಗಾಗಿ ನಂದಗೋಕುಲ ಗೋಶಾಲೆ ಇದ್ದು ಈ ತಾಣ ವನ್ನು ತಲುಪಲು ಸಾಕಷ್ಟು ಬಸ್ಸಿನ ಅನುಕೂಲವಿದೆ. ದೇವಸ್ಥಾನದ ವತಿಯಿಂದ ಲೇಖಕ ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ ಶ್ರೀ ಕೃಷ್ಣಾರ್ಪಣ ಸಂಗ್ರಹ ಯೋಗ್ಯ ಸಂಪುಟ ಪ್ರಕಟವಾಗಿದೆ.ವಿವರಗಳಿಗೆ 9739369621 ಸಂಪರ್ಕಿಸಿ.