(ಪುರಂದರದಾಸರ ಪುಣ್ಯದಿನ – ತನ್ನಿಮಿತ್ತ ಸಕಾಲಿಕ ನುಡಿ ನಮನ)
ಕರ್ನಾಟಕದ ಹರಿದಾಸ ಪರಂಪರೆಯ ಅದ್ಯಮಣಿಗಳಲ್ಲಿ ಶ್ರೀ ಪುರಂದರದಾಸರ ಹೆಸರು ಪ್ರಾತಃಸ್ಮರಣೀಯವಾದದ್ದು. ಶ್ರೀ ಪುರಂದರದಾಸರನ್ನು ‘ಕರ್ನಾಟಕ ಸಂಗೀತ ಪಿತಾಮಹ’ ಎಂದೂ ಕರೆಯುತ್ತೇವೆ. ಭಕ್ತರಷ್ಟೇ ಅಲ್ಲದೆ, ಉತ್ತಮ ಸಾಹಿತಿ ಸಂಗೀತ ಶಾಸ್ತ್ರಸಂಸ್ಥಾಪಕ ಸಹ ಆದ್ದರಿಂದ ಅವರ ಹೆಸರು ಈಗಲೂ ಲೋಕಪೂಜ್ಯವಾಗಿದೆ.
ವೈಷ್ಣವಭಕ್ತಿಪಂಥದ ಮುಖ್ಯ ಗ್ರಹಿಕೆಗಳನ್ನು ದ್ವೈತಸಿದ್ದಾಂತದ ನೆಲೆಯಲ್ಲಿ ಪಾಮರರಿಗೆ ತಿಳಿಸುವಂಥ ಅತಿ ತೊಡಕಿನ ಕೆಲಸವನ್ನು ತಮ್ಮ ಜೀವನದ ಪರಮಧ್ಯೇಯವನ್ನಾಗಿ ಮಾಡಿಕೊಂಡು ಅದನ್ನು ಯಶಸ್ವಿಯಾಗಿ ಸಾಧಿಸಿದವರು ಕನ್ನಡದ ಹರಿದಾಸರು. ನರಹರಿತೀರ್ಥರಿಂದ ಪ್ರಾರಂಭವಾದ ಶ್ರೀಪಾದರಾಜರು, ವ್ಯಾಸತೀರ್ಥರ ಮುಖಾಂತರ ಸುವ್ಯವಸ್ಥಿತಗೊಂಡ ಈ ಕಾರ್ಯಕ್ಕೆ ತಮ್ಮ ಜೀವನವನ್ನೇ ಸಮರ್ಪಿಸಿ ಕೃತಕೃರ್ತಾರಾದವರು ವ್ಯಾಸರಾಯರ ಶಿಷ್ಯತ್ವ ಗ್ರಹಿಸಿದ ಶ್ರೀಪುರಂದರದಾಸರು.
ಕನ್ನಡಭಾಷೆಯ ಬಳಕೆಯ ದೃಷ್ಟಿಯಿಂದ ಗಮನಿಸಿದಾಗ, ಪುರಂದರದಾಸರದ್ದು ಅತ್ಯಂತ ಸರಳ ಆಡುಮಾತಿನ ಧಾಟಿ. ಇಡಿಯ ಹರಿದಾಸ ಸಾಹಿತ್ಯವೇ ಹಾಗೆ. ಈ ವಿಷಯವನ್ನು ಹಿಡಿದು ಯೋಚಿಸಿದರೆ, ಇದೇ ಆಡುಮಾತು ಸುಮಾರು ಐದುನೂರು ವರುಷಗಳ ಕಾಲದಲ್ಲಿ ಹೆಚ್ಚೇನೂ ಬದಲಾವಣೆಗಳನ್ನು ಕಾಣದೆ ಕನ್ನಡನಾಡಿನ ಜನಜೀವನದಲ್ಲಿ ಹರಿದು ಬಂದಿದೆ ಎನ್ನುವುದು ಸಹ ಆಶ್ಚರ್ಯಕರವಾದ ಸಂಗತಿ. ಪುರಂದರ ಮತ್ತು ನಂತರದ ಹರಿದಾಸರ ಹಾಡುಗಳಲ್ಲಿನ ಭಾಷೆ, ಭಾವ ಮತ್ತು ಅಂತರ್ಲಯಗಳು ತೀರ ಇತ್ತೀಚಿನ ಕನ್ನಡದ ನವೋದಯ ಸಾಹಿತ್ಯಕ್ಕೂ ಪ್ರೇರಕ ಸ್ಥಾನದಲ್ಲಿ ನಿಂತಿವೆ ಎನ್ನುವುದನ್ನು ವಿಶೇಷವಾಗಿ ಗಮನಿಸಲೇಬೇಕು.
ಪರಮಲೋಭಿಯಾಗಿದ್ದ ಶ್ರೀನಿವಾಸ ನಾಯಕರು ದೈವಕೃಪೆಯಿಂದ ವೈರಾಗ್ಯ ಪಡೆದು ಪುರಂದರದಾಸರಾದದ್ದು ಕನ್ನಡ ನಾಡಿನ ಭಾಗ್ಯ. ವೃತ್ತಿಯಿಂದ ವ್ಯಾಪಾರಸ್ಥದಾಗಿದ್ದರೂ ಅವರು ಸಾಕಷ್ಟು ವಿದ್ಯಾರ್ಜನೆ ಮಾಡಿದ್ದಿರಬೇಕು, ಕಾವ್ಯ-ಸಾಹಿತ್ಯ-ಸಂಗೀತಗಳಲ್ಲಿ ಪ್ರಾವೀಣ್ಯತೆ ಗಳಿಸಿರಬೇಕು. ಮುಂದೆ ಅವರು ತೊಡಗಿಕೊಂಡ ಸಂಗೀತ ಮತ್ತು ಭಕ್ತಿ ಸಾಧನೆಗೆ ಪೂರಕವಾದ ಈ ಎಲ್ಲ ಸಂಸ್ಕಾರಗಳು ಅವರಿಗೆ ಎಳವೆಯಿಂದಲೇ ಪ್ರದತ್ತವಾಗಿರಬೇಕು ಎನ್ನುವುದೊಂದೆ ಸಹಜ ಊಹೆ. ಕೇವಲ ಇಂತಹ ಸಂಸ್ಕಾರಗಳಿಂದಲೇ ಮನುಷ್ಯನ ಜೀವನ ಪೂರ್ಣತೆಯನ್ನು ಪಡೆಯಲು ಭಗವತ್ಕೃಪೆಯೂ ಅತ್ಯಗತ್ಯ ಎನ್ನುವುದಕ್ಕೆ ಶ್ರೀಪುರಂದರದಾಸರ ಜೀವನವೇ ಪರಮ ದೃಷ್ಟಾಂತ.
ಅಲೌಕಿಕ, ಆಧ್ಯಾತ್ಮಿಕ ಚಿಂತನೆಗಳನ್ನು ಹೇಳುವ ಜೊತೆ ಜೊತೆಗೇ ಅವರು ಶ್ರೀ ಸಾಮಾನ್ಯರ, ಪರಮ-ಪಾಮರದ ಒಳಿತಿಗೂ ಹಿತವಾಗುವ ಲೋಕೋದ್ದಾರಕ ಗೀತ ಸಂಗೀತವನ್ನು ನೀಡಿ ಮಹದುಪಕಾರ ಮಾಡಿದ್ದಾರೆ. ಕ್ಷಣದ ನೆಮ್ಮದಿಗೂ ಬಿಡುವಿರದ ಇಂದಿನ ಜಂಜಡದ, ಯಾಂತ್ರಿಕ ಬದುಕಿನಲ್ಲಿ ಜೀವಗಳಿಗೆ ‘ಸ್ಟ್ರೆಸ್’ಗಳೇ ಜೀವಾಳಗಳಾಗಿವೆ. ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆಯ ಪಾಶಕ್ಕೆ ಕೊರಳೊಡ್ಡುವವರಿಗೆಂದೇ ದಾಸರು‘ ಮಾನವ ಜನುಮ ದೊಡ್ಡದು| ಅದ ಹಾನಿ ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ||’ ಎನ್ನುತ್ತಾರೆ. ಎಂತಹ ದಿವ್ಯ ಸಂದೇಶ ಅಡಗಿದೆ ಇಲ್ಲಿ! ಮಾನವರೂಪಿ ಶರೀರ ದೊರಕಿರುವ ದಿವ್ಯಾವಕಾಶವನ್ನು, ವ್ಯರ್ಥ ಮಾಡಿಕೊಳ್ಳಬೇಡಿ. ಸತ್ಕಾರ್ಯ, ಸತ್ ಚಿಂತನೆ, ಸತ್‍ಸಾಧನೆಗಳ ಮೂಲಕ ಸಾರ್ಥಕಗೊಳಿಸಿಕೊಳ್ಳಿ ಎಂದವರು ಕಿವಿ ಹಿಂಡುತ್ತಾರೆ.
ಪುರಂದರರು ಮೊದಲು ಲೌಕಿಕ ಜೀವನಕ್ಕೆ ಅಂಟಿಕೊಂಡವರು. ಬದುಕಲ್ಲಿ ಎದುರಾದ ಒಂದು ಮಹತ್ತರ ತಿರುವಿನಿಂದ ಭಗವದ್ಬಕ್ತರಾಗಿ ಮನಶ್ಯಾಂತಿ ಗಳಿಸಿಕೊಂಡವರು. ಗುರು ವ್ಯಾಸರಾಜರ ಶಿಷ್ಯತ್ವ ಕನಕರಂಥವರ ಸಹಚರ್ಯದಲ್ಲಿ ಜೀವನದ ಮಹತಿಯನ್ನು ಅರಿತು ಮುನ್ನಡೆದವರು, ನಡೆದಲ್ಲೆಲ್ಲಾ ನೆರವು ನೀಡಿತ್ತಾ ಉಪದೇಶ ಮಾಡುತ್ತಾ ಕಷ್ಟದಲ್ಲಿದ್ದವರಿಗೆ ಸಾಂತ್ವನ ಹೇಳುತ್ತ ತಾವು ಹರ್ಷಚಿತ್ತರಾಗಿ ತಮ್ಮ ಸುತ್ತಮುತ್ತಲಿನವರನ್ನೂ ಸಂತೋಷಪಡಿಸುತ್ತಾ ಭೂಲೋಕವನ್ನೇ ಭೂವೈಕುಂಠವನ್ನಾಗಿಸಿದರು.
ದೈನಂದಿನ ಬದುಕಿನ ದಾರಿದೀಪ:
ಕಣ್ಣಿಗೆ ಬಿದ್ದ ಪರಿಯನ್ನು ಜನರಿಗೆ ಅರ್ಥವಾಗುವಂತೆ ಪದಗಳ ಮಾಲಿಕೆಯಲ್ಲಿ ಜನ ಮನ ತಣಿಯುವಂತೆ ಮಾಡಿದರು. ನಾಡಿನ ಚರಿತ್ರೆ,ಸಂಸ್ಕೃತಿ ಅವರ ತಲೆ ತುಂಬ ಇದ್ದ ಪುರಾಣ ಇತಿಹಾಸ, ಸಂಗತಿಗಳನ್ನು ಉದಾಹರಣೆಗಳ ಮೂಲಕ ತಿಳಿಸಿದರು. ಜನರಿಗೆ ಒಪ್ಪಿಗೆಯಾಗುವ ಉಪಮೆ, ರೂಪಕ, ಲೋಕೋಕ್ತಿ, ಗಾದೆ ಮಾತನ್ನು ಅವರು ಬಳಸಿದರು. ಅವರ ಹಾಡುಗಳಲ್ಲಿನ ಹೃದ್ಭಾವ, ಚಿಂತನ, ಧ್ವನಿ, ದಾಟಿ, ಲಯ, ತಾಳಗಳು ಸಂಗೀತಗಾರರ ಪರಮ ಪ್ರಿಯ ಕೀರ್ತನೆಗಳಾದವು. ಧನ್ಯತೆಯ ಎತ್ತರಕ್ಕೆ ಕೊಂಡೊಯ್ದಿತು. ನಮ್ಮ ಅನೇಕ ನೆಲೆಯ ಸಂಗೀತ ಸಾಧಕರಿಂದ ಸಂಗೀತೋಪಕರಣ ಪರಿಕರಗಳಿಂದ, ಸಂಗ್ರಹಗಳಿಂದ, ಜನಜನಿತವಾಯಿತು.
ಇಂದಿನ ಸ್ಪರ್ಧಾತ್ಮಕ ಓಟ, ಅಂಕ, ಅಂತಸ್ತು, ಅಧಿಕಾರ ಅದು ಬೇಕು ಇದು ಬೇಕೆಂಬ ಅಮಿಷ ಬದುಕಿನಲ್ಲಿ ಬಯಸಿದ್ದು ಸಿಕ್ಕದಿದ್ದಾಗ ವ್ಯಥೆ ಪಡುತ್ತಾ ಕೊರಗುತ್ತ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗುವವರಿಗೆ ಅವರ ಸಾಂತ್ವನ ಬಹು ಸರಳವಾಗಿದೆ. ಆದದ್ದೆಲ್ಲಾ ಒಳಿತೇ ಆಯಿತು ಅಥವಾ ಇಟ್ಟಾಂಗ ಇರುವೆನೋ ಹರಿಯೇ ಈ ಕೀರ್ತನೆಗಳಲ್ಲಿ ದಾಸರು ಸೂಚಿಸುವ ಪರಿಹಾರ ಎಷ್ಟು ಸಕಾರಾತ್ಮಕ ಹಾಗೂ ಸುಲಭಗ್ರಾಹ್ಯ.
ಇನ್ನು ಎಡಬಿಡಂಗಿತನ, ಢೋಂಗಿ ಬದುಕು, ಒಳಗೊಂದು ಹೊರಗೊಂದು ಮಾಡುವವರೆಲ್ಲರನ್ನು ಉದ್ದೇಶಿಸಿ ದಾಸರು ಹೇಳಿರುವ ನಗೆಯು ಬರುತಿದೆ ಎನಗೆ ನಗೆಯು ಬರುತಿದೆ, ಜಗದೊಳಿರುವ ಮನುಜರೆಲ್ಲಾ ಹರಗಣ ಮಾಡುವ ಕಂಡು ವರ್ತಮಾನದ ಬದುಕಿ, ಮಾಧ್ಯಮಗಳಲ್ಲಿ ನಾವಿಂದು ಕಾಣುತ್ತಿರುವ ಚಿತ್ರಣಕ್ಕೆ ದಾಸರ ಈ ಹಾಡು ಎಂಥ ಮಾರ್ಮಿಕ ಪ್ರತಿಕ್ರಿಯೆಯಲ್ಲವೇ ಹಾಗೆಯೇ ಎಲ್ಲಾರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂಬ ಪದವಾಗಲೀ ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆಯಾಗಲಿ, ಉದರ ವೈರಾಗ್ಯವಿದು ನಮ್ಮ ಪದುಮನಾಭನಲಿಲೇಶ ಭಕುತಿಯಿಲ್ಲಾ ಆಗಲಿ ಢಾಂಬಿಕ ಬದುಕಿನ ಬಂಡವಾಳವನ್ನು ಬಯಲಿಗೆಳೆಯುವುದೇ ಆಗಿದೆ ಮನಸ್ಸು ತೊಳೆದು ಶುಚಿಯಾಗದ ಹೊರತು ಯಾವ ಕೊಳೆಯೂ ಅಶುಚಿಯೂ ಶುದ್ಧವಾಗಲಾರದು. ಮಲವು ತಳೆಯ ಬಲ್ಲುದೇ ಮನವು ತೊಳೆಯದ ತನಕ ಹಾಗೆಯೇ ತನುವ ನೀರೊಳಗೆ ಅದ್ದಿ ಫಲವೇನು, ಇಂತಹ ಪದ್ಯಗಳಲ್ಲಿ ಇದರ ನಿದರ್ಶನ ಧಾರಾಳವಾಗಿ ದೊರೆಯುತ್ತದೆ.
ಮನದಲ್ಲಿ ದೃಢ ಭಕುತಿ ಇಲ್ಲದವ ತನ್ನ ತನುವನ್ನು ನೀರೊಳದ್ದಿ ಏನು ಫಲ, ಯಾವುದು ನಿಜವಾದ ಸ್ನಾನ ಯಾವುದಲ್ಲಾ ಎನ್ನುವಾಗ ಕ್ರಿಯೆ, ಆಲೋಚನೆ, ಸತ್ಸಂಗಗಳ ಮಹತ್ವವನ್ನು ಅವರು ಸಾರುತ್ತಾರೆ.
ಪುರಂದರದಾಸರು ಮನೆಯಿಂದ ಮನೆಗೆ ನಡೆಯುತ್ತಲೇ ಮನಸ್ಸಿನಿಂದ ಮನಸ್ಸಿಗೆ ಸ್ಪಂದಿಸಿದರು, ಮನುಷ್ಯನ ಬಂಧನಕ್ಕೆ ಹಾಗೂ ಮುಕ್ತಿಗೆ ಎರಡಕ್ಕೂ ಮನಸ್ಸೇ ಕಾರಣವೆಂದರು, ಕೆಟ್ಟ ವಿಷಯಗಳತ್ತ ಹಾರುವ ಮನಸ್ಸು, ಅವನ್ನೇ ಚಿಂತಿಸುತ್ತಾ ಕಡೆಗೆ ಇಡೀ ಮನಸ್ಸು ದುರಾಚಾರ, ದುರ್ವಿಚಾರಗಳ ನೆರೆಮನೆಯಂತಾಗುತ್ತದೆ ಎಂದು ಎಚ್ಚರಿಸಿದರು. ಹಾಗೆ ಕೊಳೆತ ಮನಸ್ಸುಗಳನ್ನು ದುಷ್ಟ, ಚಂಚಲ, ಖೋಡಿ ಎಂದು ಮೂದಲಿಸಿದರು. ಮನಸ್ಸನ್ನು ನಿಗ್ರಹಿಸಿ ಭಗವಂತನೆಲ್ಲಿ ತೊಡಗಿಸಬೇಕೆಂದರು. ವಿಷಯಗಳತ್ತ ಧಾವಂತದಿಂದ ಧಾವಿಸುವ ಮನಸ್ಸನ್ನು ನಿಗ್ರಹಿಸಿ ಭಗವಂತನ ಧ್ಯಾನದಲ್ಲಿ ತೊಡಗಿಸುವುದೇ ಮುಕ್ತಿ ಮಂಟಪದ ಹೆಬ್ಬಾಗಿಲು.
ಮನವ ಶೋಧಿಸಬೇಕು ನಿತ್ಯ:
ದಾಸರು ಓಡಾಡಿದ್ದೇ ಜನಸಾಮಾನ್ಯರ ನಡುವೆ, ಸಮಾಜದ ಮಧ್ಯೆ ನಿಂತೇ ಅವರು ತಮ್ಮ ಕಾರ್ಯಸಾಧನೆ ಮಾಡಿದರು, ಅವ ಕುಲದವನಾದರೇನು ಆತ್ಮಭಾವ ಅರಿತಮೇಲೆ ಎಂದರು, ದಾಸರ ಸಾಮಾಜಿಕ ಪ್ರಜ್ಞೆಗೆ ಅಂತಃಕರಣದ ನೂರಾರು ಮುಖಗಳು, ದಾಸರು ಸಮಾಜ ಮುಖಿಯಾಗಿ ಹೊರಟವರು. ಹಾಗಾಗಿಯೇ ಗುರುಮನೆ, ಅರಮನೆಗಳ ಹಂಗವನ್ನು ತೊರೆದವರು, ಜನಪರ ಚಿಂತನಕ್ಕೆ ಮನಸ್ಸನ್ನು ಕೊಟ್ಟವರು. ಜನಹಿತ ಸಂದೇಶಕ್ಕಾಗಿಯೇ ತಮ್ಮನ್ನು ತೊಡಗಿಸಿಕೊಂಡವರು, ಸಮಾಜದ ಕಣ್ಣಿಗೆ ಕಂಡಿದ್ದನ್ನು ಕಂಡಂತೆಯೇ ಹೇಳುವ ನಿರ್ಭೀತಿ ಅವರಲ್ಲಿದೆ. ಧರ್ಮ ಪ್ರಸರಣ ಕಾರ್ಯವು ಸಮಾಜದ ಸುಧಾರಣೆಯ ಮೂಲಕವೇ ಹೆಚ್ಚಿನ ಸಾಧ್ಯ ಹಾಗೂ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂಬುದು ದಾಸರ ವಿಶ್ವಾಸ.
ಪುರಂದರದಾಸರ ಕೃತಿಗಳೆಲ್ಲವೂ ಸೂತ್ರ, ಅವರ ಹಾಡುಗಳು ಭಾಷ್ಯ. ಅವರದು ಗರುಡದೃಷ್ಟಿ, ಜನಜೀವನದ ಅಂತರಂಗವನ್ನು ಸ್ಪಂದಿಸಿ ಅದನ್ನು ಮೃದುಗೊಳಿಸುವ ಹವಣಿಕೆ ಅವರ ಕಾವ್ಯದ್ದು. ದಾಸರ ಹಾಡುಗಳಿಗೆ ಅಂತಹ ಸಾರ್ವಕಾಲಿಕ ಶಕ್ತಿ ಬರಲು ಅವರ ಆದರ್ಶ ವ್ಯಕ್ತಿತ್ವವೇ ಕಾರಣ. ಪಾಂಡಿತ್ಯವನ್ನು ತೋರಿಸುವ ತೋರಿಕೆಗೆ ಅವರು ಪರೋಪದೇಶ ಮಾಡಿದ್ದಲ್ಲ. ಅವರ ಹಾಡುಗಳಲ್ಲಿಯ ಸಂದೇಶಗಳು ಸಹಜವಾಗಿಯೇ ಅವರ ಬದುಕಿನ ರೀತಿಯಾಗಿದ್ದರಿಂದ ಅವು ಚೈತನ್ಯ ಪಡೆದವು. ಪರಿಣಾಮಕಾರಿಯಾದುವು. ವಿಚಾರವಿಲ್ಲದೆ ಪರರ ದೂಷಿಸುವವರಿಗೆ ಬುದ್ಧಿ ಹೇಳಿದರು. ಉಳಿದವರು ಹತ್ತು ಮಾತುಗಳಲ್ಲಿ ಹೇಳುವುದನ್ನು ದಾಸರು ಒಂದು ಮಾತಲ್ಲೇ ಹೇಳಿದರು.
ಇಂದಿನ ಮನುಕುಲದ ಅನೇಕಾನೇಕ ಸಂಕೀರ್ಣ ಸಮಸ್ಯೆಗಳಿಗೆ ಉತ್ತರ, ದಾರಿಯ ಬೆಳಕು ಪುರಂದರದಾಸರ ಕೃತಿಗಳಲ್ಲಿ ನಮಗೆ ದೊರೆಯುತ್ತದೆ. ನೈತಿಕ ಮೌಲ್ಯಗಳನ್ನು ಕುರಿತ ಶಿಕ್ಷಣವನ್ನು ಈ ಕೃತಿಗಳು ಸ್ವೋಪಜ್ಞವಾಗಿ ನಮ್ಮ ಮುಂದಿಡುತ್ತವೆ. ಇವು ಭಾವತೀವ್ರತೆಯ ಭಕ್ತಿಮಾರ್ಗದ ಮೂಲಕವೇ ನಮಗೆ ಮಹತ್ತಾದುದನ್ನು ಪಡೆಯುವುದಕ್ಕೆ ಸೂಚಿಗಳಾಗುತ್ತವೆ.
ದೈವ ಹಾಗೂ ಮಾನವನ ನಡುವಿನ ಸಂಬಂಧವನ್ನು ಕಲಾತ್ಮಕವಾಗಿ ತೆರೆದಿಟ್ಟ ಅವರ ಕೀರ್ತನೆಗಳಲ್ಲಿ ಮಾನವೀಯವಾದ ಎಲ್ಲ ಭಾವನೆಗಳ ತೀವ್ರ ಸಂಚಲನವಿದೆ ಮಾನವ ಬದುಕಿಗೆ ಅನಿವಾರ್ಯ ಆಗಿಬಿಡುವ ದೈನ್ಯ, ಭಯ, ಶೋಕಗಳಲ್ಲದೆ, ನಿರಾಶೆ, ಹತಾಶೆಗಳಲ್ಲದೆ, ಅವಶ್ಯಕವೂ ಆಗುವ ಕಾರುಣ್ಯ, ಪ್ರೇಮ, ಪ್ರಸನ್ನತೆ, ವೈರಾಗ್ಯ, ಭಕ್ತಿ ಆಶ್ರಯದ ಹಂಬಲಿಕೆ ಈ ಎಲ್ಲ ಭಾವಗಳ ತೀವ್ರ ಮಿಡಿತವು ಪುರಂದರದಾಸರ ಹಾಡುಗಳಲ್ಲಿ ಮಿಳಿತವಾಗಿವೆ.
ಡಾ. ಗುರುರಾಜ ಪೋಶೆಟ್ಟಿಹಳ್ಳಿ ಸಂಸ್ಕೃತಿ ಚಿಂತಕರು ಮೊಬೈಲ್ : 9739369621 ಇ-ಮೇಲ್ : [email protected]