ಬೆಂಗಳೂರು – ಭಾರತೀಯ ಸನಾತನ ಸಂಸ್ಕೃತಿಯ ಜೀವಸ್ವರವಾಗಿರುವ ಸಾಹಿತ್ಯ ಮತ್ತು ಸಂಗೀತ ಪೋಷಣೆಯಲ್ಲಿ ಮತ್ತು ಸಾಮಾಜಿಕ ಸೇವಾ ಕೈಂಕರ್ಯದಲ್ಲಿ ತೊಡಗಿರುವ ಶ್ರೀನಿವಾಸ ಉತ್ಸವ ಬಳಗಕ್ಕೆ ಈಗ ದಶಮಾನೋತ್ಸವದ ಸಂಭ್ರಮ.
ಕರ್ನಾಟಕ ಸಂಗೀತ ಪಿತಾಮಹ ದಾಸಶ್ರೇಷ್ಠ ಪುರಂದರದಾಸರ ಸ್ಮರಣೆ ನಿತ್ಯ ನಿರಂತರವಾಗುವಂತೆ ಬೆಂಗಳೂರು ಉತ್ತರಾದಿಮಠದ ದಿಗ್ವಿಜಯ ಲಕ್ಷ್ಮೀನರಸಿಂಹ ದೇವರ ಸನ್ನಿಧಿಯ ಆವರಣದಲ್ಲಿ ಶ್ರೀನಿವಾಸ ಉತ್ಸವ ಬಳಗದ ವತಿಯಿಂದ ಪೂಜ್ಯ ಶ್ರೀಸತ್ಯಾತ್ಮತೀರ್ಥರಿಂದ ಸ್ಥಾಪಿತ ಪುರಂದರದಾಸರ ಏಕಶಿಲಾ ವಿಗ್ರಹ ಅನಾವರಣಗೊಂಡಿದ್ದು ಸಜ್ಜನರ ಪಾವನತಾಣವಾಗಿದೆ.
ಸಂಸ್ಕೃತಿಯ ಪ್ರಸರಣದಲ್ಲಿ ನಿರತ ಸಾಧಕರ ಸೇವಾ ಸಾಧನೆಯನ್ನು ಗುರುತಿಸಿ ಹರಿದಾಸ ಅನುಗ್ರಹ’ ಪ್ರಶಸ್ತಿಯನ್ನು ನಗರದ ಬಸವನಗುಡಿ ನ್ಯಾಷನಲ್ ಕಾಲೇಜು ಸಮೀಪದ ಸತ್ಯಪ್ರಮೋದ ಕಲ್ಯಾಣ ಮಂಟಪದಲ್ಲಿ ಇದೇ ಜುಲೈ 15 ರಿಂದ 17ರವರೆಗೆ 3 ದಿನಗಳ ಕಾಲ ನಡೆದ ಗಾನ-ಜ್ಞಾನ ಯಜ್ಞ ಕಾರ್ಯಕ್ರಮ ; ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಶ್ರೀ ಕನಕ ಪುರಂದರ ಸಂಸ್ಮರಣಾ ಮಹೋತ್ಸವ ಹಾಗೂ ಉತ್ಸವ ಬಳಗದ ದಶಮಾನೋತ್ಸವದಲ್ಲಿ ಉಪಸ್ಥಿತ ಪೂಜ್ಯ- ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು.
ಹಿರಿಯ ವಿದ್ವಾಂಸ ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯರು ದಶಮಾನೋತ್ಸವ ಸಮಾರಂಭವನ್ನು ಉಧ್ಘಾಟಿಸಿ ನೆನಪಿನ ಸಂಚಿಕೆ ‘ಸ್ತುತಿಮಾಲಾ’ ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲ ಡಾ.ಸತ್ಯಧ್ಯಾನಾಚಾರ್ಯ ಕಟ್ಟಿ , ಬಿಬಿಎಂಪಿ ವಿಶೇಷ ಆಯುಕ್ತ ಕೆ.ಎಸ್.ರಂಗಪ್ಪ, ಮುಖ್ಯ ಆಯುಕ್ತರ ಸಂಪರ್ಕಾಧಿಕಾರಿ ಎಸ್.ಎನ್.ಶಂಕರ್, ಹರಿದಾಸವಾಹಿನಿಯ ಸಂಪಾದಕ ಡಾ.ಎ.ಬಿ.ಶ್ಯಾಮಾಚಾರ್, ಹಾಗು ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಅಧ್ಯಕ್ಷ ಡಾ.ಮುರಳಿಧರ ಭಾಗವಹಿಸುವರು.
ಖ್ಯಾತ ಗಾಯಕ ಶಶಿಧರ ಕೋಟೆ, ಕನ್ನಡ ತಿಂಡಿ ಕೇಂದ್ರದ ಡಾ.ಕೆ.ವಿ.ರಾಮಚಂದ್ರ, ದೊಡ್ಡ ಗಣಪತಿ ದೇವಾಲಯದ ಪ್ರಧಾನ ಅರ್ಚಕ ವೇ.ಬ್ರ.ಶ್ರೀ ವೈ.ಹರೀಶ್ , ಹಿರಿಯ ಪತ್ರಕರ್ತರಾದ ನ.ಶ್ರೀ ಸುಧೀಂದ್ರ ರಾವ್ ಹಾಗು ಬಿ.ಜಿ.ರವಿಕುಮಾರ್ ರವರಿಗೆ ‘ಹರಿದಾಸಾನುಗ್ರಹ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಶೇಷ ತ್ರಿವಳಿ ಶಾಸ್ತ್ರೀಯ ವಾದ್ಯ ಸಂಗೀತ ಕಾರ್ಯಕ್ರಮದಲ್ಲಿ ವಿದುಷಿ ಶುಭಸಂತೋಷ್ – ವೀಣೆ, ವಿದುಷಿ ಪ್ರೇಮಾ ವಿವೇಕ್ ವಯೋಲಿನ್ ಹಾಗು ವಿದುಷಿ ವಾಣಿ ಮಂಜುನಾಥ್ರಿಂದ ವೇಣುವಾದನ ನಡೆಯಿತು.
ಜು. 16 ಶನಿವಾರ ಸಂಜೆ ಆಕಾಶವಾಣಿ ಕಲಾವಿದೆ ಡಾ.ಆರ್ ಚಂದ್ರಿಕ, ಗಾಯನ ಸಮಾಜ ಅಧ್ಯಕ್ಷ ಡಾ.ಎಂ.ಆರ್.ಪ್ರಸಾದ್ ಮತ್ತು ಶಿಕ್ಷಣ ತಜ್ಞ ಡಾ.ಕೆ.ಎಸ್.ಸಮೀರ ಸಿಂಹ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಹಿರಿಯ ತಬಲಾ ವಾದಕ ಡಾ.ರಾಜಗೋಪಾಲ ಕಲ್ಲೂರ್ಕರ್ , ಚಲನಚಿತ್ರ ಕಲಾವಿದೆ ಪದ್ಮಕಲಾ ಕೆ.ಗುಂಡೂರಾವ್ , ಪುರಂದರ ಇಂಟರ್ನ್ಯಾಷನಲ್ ಟ್ರಸ್ಟ್ ನ ಕಾರ್ಯದರ್ಶಿ ಡಾ.ಸುವರ್ಣ ಮೋಹನ್ , ಬಾಗಲಕೋಟೆಯ ಗಾಯಕ ಪಂ. ಸಂತೋಷ್ ವಿ.ಗದ್ದನಕೇರಿರವರಿಗೆ ‘ಹರಿದಾಸಾನುಗ್ರಹ’ ಪ್ರಶಸ್ತಿ ನೀಡಿ ಗೌರವಿಸಿದರು. ನಂತರ ಕನಕ-ಪುರಂದರ ಕೀರ್ತನೆಗಳ ಗಾಯನ ಹಾಗೂ ವಿಶ್ಲೇಷಣೆ ಸಂಪ್ರವಚನ ; ಅನುಗ್ರಹ ಸಂಗೀತ ಮಹಾವಿದ್ಯಾಲಯದ ವಿದ್ವಾನ್ ಶ್ರೀಕಂಠ ಭಟ್ ರವರಿಂದ ಗಾಯನ – ಉಡುಪಿ ಪುತ್ತಿಗೆ ಮಠದ ಶ್ರೀವಾದಿರಾಜ ಸಂಶೋಧನಾ ಪ್ರತಿಷ್ಠಾನ ನಿರ್ದೇಶಕ ಡಾ.ಬಿ.ಗೋಪಾಲಾಚಾರ್ಯರವರಿಂದ ವಿಶ್ಲೇಷಣೆ ನಡೆಯಿತು.
ಜು. 17 ಭಾನುವಾರ ಸಂಜೆ ನಡೆದ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಭಂಡಾರಕೇರಿ ಮಠದ ಪೂಜ್ಯ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ವಹಿಸಿ ಜಯತೀರ್ಥ ವಿದ್ಯಾಪೀಠದ ಕುಲಪತಿ ಪಂ.ರಂಗಾಚಾರ್ಯ ಗುತ್ತಲ್ ರವರಿಗೆ ‘ಶ್ರೀ ಮಧ್ವ ಪುರಂದರ ಪ್ರಶಸ್ತಿ” ನೀಡಿ ಗೌರವಿಸಿದರು. ಅಂತರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ಸಂಶೋಧಕ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ, ,ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಎಂ.ಆರ್.ಸತ್ಯನಾರಾಯಣ, ಹಿರಿಯ ಹೃದ್ರೋಗ ತಜ್ಞ ಡಾ .ವೇಣುಗೋಪಾಲ್,ಹಿರಿಯ ಉದ್ಯಮಿ ಪತ್ತಿ ಎ.ಶ್ರೀಧರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪಂ. ಕಲ್ಲಾಪುರ ಪವಮಾನಾಚಾರ್ಯರು ‘ಕನಕ-ಪುರಂದರ ದಾಸರ ಕೃತಿಗಳಲ್ಲಿ ಭಾಗವತ ಧರ್ಮ’ ಕುರಿತು ಉಪನ್ಯಾಸ ನಡೆಸಿಕೊಟ್ಟರು.
ಹರಿದಾಸ ಸಾಹಿತ್ಯ ಸೇವಾನಿರತ ಮೈಸೂರು ಜಗನ್ನಾಥ ರಾವ್ , ಜಯರಾಮಾಚಾರ್ಯ ಬೆಣಕಲ್ , ರಾಯಚೂರಿನ ಪ್ರಾಧ್ಯಾಪಕ ಡಾ.ಲಕ್ಷ್ಮೀಕಾಂತ ಮೊಹರೀರರವರಿಗೆ ‘ಹರಿದಾಸಾನುಗ್ರಹ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಂತರ ವಿದುಷಿ ದಿವ್ಯಾ ಗಿರಿಧರ್ ಹಾಗು ಗುಲಬರ್ಗಾದ ವಿದ್ವಾನ್ ಅನಂತರಾಜ್ ಮಿಸ್ತ್ರಿ ರವರಿಂದ ಕನಕ- ಪುರಂದರದಾಸರ ಕೀರ್ತನ ಲಹರಿ ಗಾಯನ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು .ಡಾ.ಗುರುರಾಜ ಪೋಶೆಟ್ಟಿಹಳ್ಳಿ ಕಾರಕ್ರಮ ನಿರೂಪಿಸಿದರು. ಆಯೋಜಕರಾದ ಸಂಸ್ಥಾಪಕ ಅಧ್ಯಕ್ಷ ಡಾ.ಟಿ ವಾದಿರಾಜ , ಕೆ.ಆರ್.ಗುರುರಾಜರಾವ್ , ಬಿ ಆರ್ ವಿ ಪ್ರಸಾದ್, , ಶ್ರೀನಿವಾಸ್, ಮೊದಲಾದವರು ವೇದಿಕೆಯಲ್ಲಿದ್ದರು.