ಭಾರತೀಯ ಆರ್ಷ ವಿದ್ಯೆಗಳಾದ ವೇದ, ಆಗಮ, ಸಂಗೀತ, ನಾಟ್ಯ, ಯೋಗ, ಜ್ಯೋತಿಷ್ಯಾದಿ ವಿಷಯಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ಅಮೇರಿಕಾದ ಫ್ಲೋರಿಡಾ ರಾಜ್ಯದ ಇಂಡಿಪೆಂಡೆಂಟ್ ಎಜುಕೇಶನ್ ವಿಭಾಗದಡಿಯಲ್ಲಿ ಸ್ಥಾಪಿಸಲ್ಪಟ್ಟು, ವಿಶ್ವದಾದ್ಯಂತ ತನ್ನ ಶಾಖೆಗಳನ್ನು ಶ್ರೀವಿದ್ಯಾ ವಿಶ್ವಸಂಶೋಧನಾ ಪ್ರತಿಷ್ಠಾನಮ್ (ರಿ.) ಸಂಸ್ಥೆಯು ಹೊಂದಿದೆ.
ಪ್ರಸ್ತುತ ವಿಶ್ವವಿದ್ಯಾಲಯದ 2ನೇ ಘಟಿಕೋತ್ಸವವು ದಿನಾಂಕ : 30.07.2022ರಂದು ಬೆ. 10.30 ಕ್ಕೆ ಬೆಂಗಳೂರಿನ ಜಯನಗರ 8ನೇ ಬ್ಲಾಕ್ನಲ್ಲಿರುವ ಜಿ.ವಿ.ಜನ್ಮ ಶತಾಬ್ದಿ ಕಲಾಭವನದಲ್ಲಿ ನೆರವೇರಲಿದೆ. ಘಟಿಕೋತ್ಸವ ಕಾರ್ಯಕ್ರಮದಲ್ಲಿ ಬೇಲಿ ಮಠ ಮಹಾಸಂಸ್ಥಾನದ ಶ್ರೀ ಶ್ರೀ ಶಿವರುದ್ರ ಮಹಾಸ್ವಾಮಿಗಳು ಮತ್ತು ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಬಾರಿ ನಾಡಿನ ಅತ್ಯಂತ ಹಿರಿಯ ವೇದ-ಶಾಸ್ತ್ರ-ಸಂಗೀತ ವಿದ್ವಾಂಸರುಗಳಿಗೆ ‘ಗೌರವ ಡಾಕ್ಟರೇಟ್’ ನೀಡಿ ಗೌರವಿಸಲಾಗುತ್ತಿದೆ. ಬೆಂಗಳೂರಿನ ಹಿರಿಯ ವೇದ ವಿದ್ವಾಂಸ ಧಾಳೀ ಲಕ್ಷ್ಮೀನರಸಿಂಹ ಭಟ್ಟರು, ಶಿರಸಿಯ ಜ್ಯೋತಿಷ್ಯ ವಿದ್ವಾಂಸರಾದ ಹಿತ್ಲಳ್ಳಿ ನಾಗೇಂದ್ರ ಭಟ್, ಕಾಸರಗೋಡಿನ ಸಂಸ್ಕೃತ ವಿದ್ವಾಂಸ ಬಿ. ಮಾಧವ ಉಪಾಧ್ಯಾಯರು, ಆಗಮ ವಿದ್ವಾಂಸ ಸಭೇಶ್ ಗುರುಕ್ಕಳ್, ಸಂಗೀತ ವಿದ್ವಾಂಸರಾದ ಪ್ರೊ. ವಿ. ಅರವಿಂದ ಹೆಬ್ಬಾರ್, ವಿದುಷಿ ಡಿ.ಶಶಿಕಲಾ, ಭರತನಾಟ್ಯ ವಿದುಷಿ ಬಿ.ಕೆ.ವಸಂತ ಲಕ್ಷ್ಮೀ ಇವರುಗಳು ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.
ನಾಡಿನ ಹೆಮ್ಮೆಯ ಸಂಗೀತ ವಿದ್ವಾಂಸರಾದ ಮೈಸೂರಿನ ಕರ್ನಾಟಕ ಕಲಾಶ್ರೀ ಡಾ. ಆರ್.ಎಸ್.ನಂದಕುಮಾರ್ ರವರಿಗೆ “ಸಂಗೀತ ಶಾಸ್ತ್ರ ವಾರಿಧಿ” ಎಂಬ ವಿಶೇಷ ಗೌರವವನ್ನು ನೀಡಲಾಗುತ್ತಿದೆ.
ಇದರೊಡನೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ ವಿದ್ವಾಂಸರುಗಳಿಗೆ ‘ಮಹೋಪಾಧ್ಯಾಯ’ ಎಂಬ ಪದವಿ ನೀಡಲಾಗುತ್ತಿದೆ. ಹಿರಿಯ ಸಂಗೀತ ಗುರು ಜಿ.ಶಂಕರಾನಂದ, ವೇದ ವಿದ್ವಾನ್ ಗಣೇಶ ಘನಪಾಠಿ, ವೇದ ಗುರು ಡಾ. ಎಸ್.ಶ್ರೀನಿವಾಸ್, ಆಗಮ ವಿದ್ವಾಂಸ ಗಣಪತಿ ಎಂ. ಶಾಸ್ತ್ರೀ, ಯೋಗ ಗುರು ಶ್ರೀಮತಿ ರತ್ನ ಮೋಹನ್ರಾಮ್, ಕೊಲ್ಲಾಪುರರ ಶ್ರೀವಿದ್ಯಾ ಗುರು ಸುಹಾಸ್ ಮಧುಕರ್ ಜೋಷಿ ಮತ್ತು ಯುವ ವೈಣಿಕ ವಿದ್ವಾಂಸರಾದ ಎಂ. ಪ್ರಶಾಂತ್ ಐಯ್ಯಂಗಾರ್ ಇವರುಗಳು ಮಹೋಪಾಧ್ಯಾಯ ಪದವಿಗೆ ಪಾತ್ರರಾಗುತ್ತಿದ್ದಾರೆ.
ವಿವರಗಳಿಗೆ ಮೊ. 98867 14586 ಸಂಪರ್ಕಿಸಲು ಕೋರಲಾಗಿದೆ.