ಮೂಡಲಗಿ: ಗಣೇಶ ಹಬ್ಬದ ಸಂದರ್ಭದಲ್ಲಿ ಯಾರೂ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಗಣೇಶ ಹಬ್ಬ ಆಚರಿಸಬೇಕು ಎಂದು ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೋಡ ಹೇಳಿದರು.
ಸಾರ್ವಜನಿಕವಾಗಿ ಗಣೇಶೋತ್ಸವ ಏರ್ಪಡಿಸುವ ಆಯೋಜಕರು ಸ್ಥಳೀಯ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಮುಂಬರುವ ಗಣೇಶ ಹಬ್ಬದ ಅಂಗವಾಗಿ ಶನಿವಾರ ರಂದು ಮುಂಜಾನೆ ಹಮ್ಮಿಕೊಂಡಿದ್ದ ಶಾಂತಿ ಪಾಲನಾ ಸಭೆಯಲ್ಲಿ ಅವರು ಮಾತನಾಡಿದರು.
ಗಣೇಶೋತ್ಸವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ, ಅವಘಡಗಳು ಸಂಭವಿಸದಂತೆ ಎಚ್ಚರ ವಹಿಸಬೇಕು ಮತ್ತು ಹಬ್ಬದ ಸಂದರ್ಭದಲ್ಲಿ ಎಲ್ಲರೂ ಶಾಂತಿ ಕಾಪಾಡಬೇಕು. ಶಾಂತಿ ಕಡದುವುದಕ್ಕಾಗಿ ಕಿಡಿಗೇಡಿಗಳು ಹಬ್ಬಿಸುವ ಸುಳ್ಳು ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದರು.
ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಪಾಲಿಸಬೇಕಾದ ಕೆಲವು ನಿಯಮಗಳನ್ನು ತಿಳಿಸಿದರು.
ಮಂಟಪದಲ್ಲಿ ಬೆಳಗ್ಗೆ 6 ರಿಂದ ರಾತ್ರಿ 10ರ ವರೆಗೆ ಮಾತ್ರ ಧ್ವನಿವರ್ಧಕ ಬಳಕೆ ಸೇರಿದಂತೆ ಹಲವು ಷರತ್ತುಗಳನ್ನು ಪಾಲಿಸಬೇಕು. ಆಯೋಜಕರು ಮೂರ್ತಿ ವಿಸರ್ಜನೆ ಮಾಡುವ ಸ್ಥಳ ಮತ್ತು ಸಾಗುವ ಮಾರ್ಗದ ಬಗ್ಗೆಯೂ ಠಾಣೆಗೆ ಮಾಹಿತಿ ನೀಡಬೇಕು.
ಯಾವುದೇ ಕಾರಣಕ್ಕೂ ಮಾರ್ಗ ಬದಲಿಸುವಂತಿಲ್ಲ, ಡಾಲ್ಬಿ ಸೌಂಡ್ ಬಳಸಬಾರದು, ಹಬ್ಬದ ನೆಪದಲ್ಲಿ ಜೂಜಾಟ ಆಡುವುದನ್ನು ನಿಷೇಧಿಸಲಾಗಿದೆ, ಪಟಾಕಿಗಳನ್ನು ಯಾರಿಗೂ ತೊಂದರೆಯಾಗದಂತೆ ಹಚ್ಚಬೇಕು ಎಂದು ಸಿಪಿಐ ತಿಳಿಸಿದರು.
ಸಭೆಯಲ್ಲಿ ಮೂಡಲಗಿ ಹಾಗೂ ಸುತ್ತಮುತ್ತಲ ಗ್ರಾಮಗಳ ಗಣೇಶ ಮಂಡಳಿಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು. ವೇದಿಕೆಯ ಮೇಲೆ ಪಿಎಸ್ಐ ಹಾಲಪ್ಪ ಬಾಲದಂಡಿ, ತಹಶೀಲ್ದಾರ ಬಬಲಿ, ವಿದ್ಯುತ್ ವಿಭಾಗಾಧಿಕಾರಿ ಎಸ್ಎಸ್ ಮಠ ಹಾಗೂ ಇತರರು ಉಪಸ್ಥಿತರಿದ್ದರು.