ಸಿಂದಗಿ: ವಿದ್ಯಾರ್ಥಿಗಳು ಬದುಕಿನಲ್ಲಿ ಯಶಸ್ವಿಯಾಗಬೇಕಾದರೆ ತಾವು ಮಾಡುವ ಕಾರ್ಯದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಹೊಂದಿರಬೇಕು ಅಂದಾಗ ಮಾತ್ರ ಬದುಕು ಉಜ್ವಲಗೊಳಿಸಿಕೊಳ್ಳಲು ಸಾಧ್ಯವೆಂದು ವಿಜಯಪುರದ ನೂತನ ಚಾಣಕ್ಯ ಕರಿಯರ್ ಅಕಾಡೆಮಿಯ ನಿರ್ದೇಶಕ ಬಿ.ಡಿ. ಪಾಟೀಲ ಹೇಳಿದರು.
ಪಟ್ಟಣದ ಪಿ.ಇ.ಎಸ್ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಶ್ರೀಮತಿ ಪ್ರೇಮಾ. ಭೀ. ಕರ್ಜಗಿ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ 2021-22ನೇ ಸಾಲಿನ ಪಠ್ಯಪೂರಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಮಕ್ಕಳ ದಿನಾಚರಣೆಯ ಪ್ರಯುಕ್ತ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುನ್ನುಗ್ಗುತ್ತಿರುವ ನಾವುಗಳು ಸದಾ ಕ್ರಿಯಾಶೀಲ ಹಾಗೂ ಸೃಜನಶೀಲತೆಯಿಂದ ಕೂಡಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ರಮೇಶ ಭೂಸನೂರ ಮಾತನಾಡಿ, ವಿದ್ಯಾರ್ಥಿ ಜೀವನ ರೂಪಿಸಬೇಕಾದರೆ ತಂದೆ-ತಾಯಿ ಹಾಗೂ ಶಿಕ್ಷಕರ ಪಾತ್ರ ಅಮೋಘವಾದದ್ದು ಕಾರಣ ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಲ್ಲಿ ತಂದೆ-ತಾಯಿಗಳ ಅಣತಿಯಂತೆ ಶಿಕ್ಷಣ ಪಡೆದು ಬದುಕು ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದರು.
ಇದೇ ವೇಳೆ ರಾಂಪೂರ ಆರ್.ಎಮ್.ಎಸ್.ಎ. ಪ್ರೌಢಶಾಲೆಯ ದೈಹಿಕ ಶಿಕ್ಷಕಿ ಡಾ. ಎಸ್.ಎಮ್. ಬಿರಾದಾರ, ಇನ್‍ಸ್ಪೈರ್ ಅವಾರ್ಡ್‍ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ನಾದ ಬಿ.ಕೆ. ಸರಕಾರಿ ಪ್ರೌಢಶಾಲೆಯ ಸಮಸ್ತ ಗುರುವೃಂದಕ್ಕೂ ಹಾಗೂ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ ಪಿ.ಇ.ಎಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ಪಿ. ಕರ್ಜಗಿ ಮಾತನಾಡಿ, ವಿದ್ಯಾರ್ಥಿ ಜೀವನ ಕರ್ತವ್ಯಗಳನ್ನು ಹೊತ್ತುಕೊಂಡ ದೋಣಿಯಿದ್ದಂತೆ ಅದನ್ನು ಸರಿಯಾದ ರೀತಿಯಲ್ಲಿ ನಿಬಾಯಿಸಿದರೆ ಮಾತ್ರ ದಡ ಸೇರಲು ಸಾಧ್ಯ ಎಂದರು.
ಪಿ.ಇ.ಎಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಆಯ್.ಬಿ. ಬಿರಾದಾರ, ವಿಶ್ರಾಂತ ಉಪನ್ಯಾಸಕ ಎಸ್.ವಾಯ್. ಬೀಳಗಿ, ವಿಶ್ರಾಂತ ದೈಹಿಕ ನಿರ್ದೇಶಕ ಕೆ.ಹೆಚ್. ಸೋಮಪೂರ ಅವರು ಉಪಸ್ಥಿತರಿದ್ದರು.
ಪ್ರಾಚಾರ್ಯ ಆರ್.ಬಿ.ಗೋಡಕರ ಪ್ರಾಸ್ತಾವಿಕ ಮಾತನ್ನಾಡಿದರು. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಎಸ್.ಕಡಣಿ ಸ್ವಾಗತಿಸಿದರು. ಉಪನ್ಯಾಸಕ ಎಸ್.ಎಸ್. ವಾಲಿಕಾರ ಸ್ವಾಗತಿಸಿದರು. ಪರಮಾನಂದ .ಎಸ್. ಬಿರಾದಾರ ನಿರೂಪಿಸಿದರು. ವಿ.ವಿ. ಪಾಟೀಲ ವಂದಿಸಿದರು.