ಸಿಂದಗಿ: ಶಾಲೆಯ ಪಠ್ಯಪುಸ್ತಕಗಳ ಜೊತೆಯಲ್ಲೇ ಮೌಲ್ಯಾಧಾರಿತ ಸಾಹಿತ್ಯವುಳ್ಳ ಕಥೆ, ಕವನ,ನಾಟಕ ಹಾಗೂ ಕಾದಂಬರಿಗಳಂತಹ ಉತ್ತಮ ಪುಸ್ತಕಗಳನ್ನು ಓದುವ ಸಂಸ್ಕೃತಿ ಬೆಳೆಯಬೇಕಿದೆ. ವಿದ್ಯಾರ್ಥಿಗಳು ಶಾಲಾ ಗ್ರಂಥಾಲಯದ ಸದುಪಯೋಗ ಪಡಿಸಿಕೊಂಡು ಹೆಚ್ಚೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳೋಣ ಎಂದು ವಿದ್ಯಾರ್ಥಿ ಪ್ರತಿನಿಧಿ ಕು. ಸೃಷ್ಟಿ ತಿಪರಾದಿ ಕರೆ ನೀಡಿದರು.
ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಸಿಂದಗಿಯ ವಿದ್ಯಾಚೇತನ ಪ್ರಕಾಶನ- ಮಕ್ಕಳ ಬಳಗ ಹಾಗೂ ಶ್ರೀ ಸಿದ್ಧರಾಮ ಸ್ವಾಮೀಜಿ ಪ್ರೌಢ, ಪದವಿ ಪೂರ್ವ ಮಹಾವಿದ್ಯಾಲಯದ ಸಹಯೋಗದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಡೆದ ಅಮೃತ ಪುಸ್ತಕ ಸಂಸ್ಕೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿನಿ ಮಾತನಾಡಿದರು.
ವಿದ್ಯಾಚೇತನ ಪ್ರಕಾಶನದ ಪ್ರಕಾಶಕರು, ಖ್ಯಾತ ಮಕ್ಕಳ ಸಾಹಿತಿ ಹ.ಮ.ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿ, ಸುಮಾರು 45 ವರ್ಷಗಳಿಂದ ಸತತವಾಗಿ ಮಕ್ಕಳ ಸಾಹಿತ್ಯ ಹಾಗೂ ಮಕ್ಕಳ ಕಾರ್ಯಕ್ರಮ ಆಯೋಜಿಸುತ್ತ ಬಂದಿರುವುದು ಸಾರ್ಥಕ ಬದುಕಿನ ಮೈಲಿಗಲ್ಲುಗಳಾಗಿವೆ ಎಂದರು.
ಎಂ.ಪಿ.ಎಸ್ ಕೋರವಾರ ಶಾಲೆಯ ಮುಖ್ಯಾಧ್ಯಾಪಕ ಎಸ್.ಎಸ್.ಸಾತಿಹಾಳ ಮಾತನಾಡಿ, ವಿದ್ಯಾಚೇತನ ಪ್ರಕಾಶನವು ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯು ಶ್ಲಾಘನೀಯ ಎಂದರು.
ಭಾರತ ದೇಶದೆಲ್ಲೆಡೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಭಾರತದ ಇತಿಹಾಸ ಸಾರುವ, ದೇಶಪ್ರೇಮದ ಪುಸ್ತಕಗಳನ್ನು ಓದಬೇಕೆಂದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಹ ಸವೆಸಿದ ಮಹನೀಯರನ್ನು ನೆನೆಯಬೇಕೆಂದರು.
ಗೋಲಗೇರಿ ಕ್ಲಸ್ಟರಿನ ಸಿ.ಆರ್.ಪಿ ಜಿ.ಎನ್.ಪಾಟೀಲ ಮಾತನಾಡಿ, ಶಿಕ್ಷಣ ಇಲಾಖೆಯು ಮಕ್ಕಳ ಪ್ರತಿಭೆಯನ್ನು ಹೊರತರಲು ಶ್ರಮಿಸುತ್ತಿದ್ದು, ಮಕ್ಕಳು ಸ್ವಾತಂತ್ರೋತ್ಸವದ ಕುರಿತಾದ ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾಗಬೇಕೆಂದರು. ಶಿಕ್ಷಣ ಸಂಸ್ಥೆಯ ನಿರ್ದೇಶಕ ಎಚ್.ಬಿ.ಚಿಂಚೊಳ್ಳಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡಲ್ಲಿ ಅವರ ಭವಿಷ್ಯವು ಉಜ್ವಲವಾಗುತ್ತದೆ ಎಂದರು.
ಶಿಕ್ಷಕ ಸಾಹಿತಿ ವ್ಯಂಗ್ಯಚಿತ್ರಕಾರ ಶರಣು ಚಟ್ಟಿ ಮಾತನಾಡಿ, ಪುಸ್ತಕಗಳನ್ನು ಓದುತ್ತ ವಿದ್ಯಾರ್ಥಿಗಳು ನಿಮ್ಮದೇ ಶೈಲಿಯಲ್ಲಿ ಕಥೆ, ಕವನ, ನಾಟಕಗಳನ್ನು ಬರೆಯಲು ಪ್ರಯತ್ನಿಸಬೇಕು. ಪಠ್ಯದ ಜೊತೆಯಲ್ಲಿ ಸಹಪಠ್ಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯರಾಗಿ, ತಮ್ಮ ಆಸಕ್ತಿಯ ಕ್ಷೇತ್ರದಲ್ಲೇ ಬೆಳೆಯಲು ಶಿಕ್ಷಕರ ಮಾರ್ಗದರ್ಶನ ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕುರಿತು ಕು.ಸುಜಾತಾ ಆಂದೇಲಿ, ನಾನು ಮೆಚ್ಚಿದ ಕಥೆಯ ಕುರಿತು ಕು.ಮುತ್ತು ಮಣೂರ, ಕು.ಸವಿತಾ ಯಂಕಂಚಿ , ನಾನು ಮೆಚ್ಚಿದ ಕವನದ ಕುರಿತು ಕು. ಭಾರ್ಗವಿ ಕಳಸ, ಕು.ಕಾಂಚನಾ ಜಂಬಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮಕ್ಕಳ ಸಾಹಿತಿ ಹ.ಮ.ಪೂಜಾರ, ಸಿ.ಆರ್.ಪಿ ಜಿ.ಎನ್.ಪಾಟೀಲ ಹಾಗೂ ಶಿಕ್ಷಕ ಸಾಹಿತಿ ವ್ಯಂಗ್ಯಚಿತ್ರಕಾರ ಶರಣು ಚಟ್ಟಿ ಅವರನ್ನು ಸನ್ಮಾನಿಸಲಾಯಿತು.
ಪೂಜ್ಯ ಶ್ರೀ ಡಾ.ಶಂಭುಲಿಂಗಯ್ಯ ದೇವರು ಆಶೀರ್ವಚನ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ವಿ.ಟಿ.ಹಿರೇಕುರುಬರ, ಮುಖ್ಯೋಪಾಧ್ಯಾಯರಾದ ಜಿ.ಎಂ.ಕಂಬಾರ, ಎಸ್.ಎಚ್.ಕುಂಬಾರ, ಸಾಹಿತಿ ಶಿವಕುಮಾರ ಶಿವಸಿಂಪಿಗೇರ, ಶಿಕ್ಷಕರಾದ ಸಂತೋಷ ಬಿರಾದಾರ, ಅಶೋಕ ಪಾಟೀಲ, ಮಂಜುನಾಥ ಸೊರಟೂರು, ಶಿವಕುಮಾರ ಪವಾರ, ಶ್ರೀಕಾಂತ ನಾಯ್ಕೋಡಿ, ಎಸ್.ಎಸ್.ಬಿರಾದಾರ ಸೇರಿದಂತೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಕು.ಲಕ್ಷ್ಮೀ ಜಂಬಗಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕು.ಲಕ್ಷ್ಮೀ ಯಂಕಂಚಿ ಹಾಗೂ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಶಿಕ್ಷಕ ಸಾಹಿತಿ ಮಲ್ಲಿಕಾರ್ಜುನ ಧರಿ ಸ್ವಾಗತಿಸಿದರು, ಶಿಕ್ಷಕ ವೈ.ಎಸ್.ಪೂಜಾರಿ ನಿರೂಪಿಸಿದರು. ಶಿಕ್ಷಕ ಬಿ.ಎಸ್.ಪೂಜಾರಿ ವಂದಿಸಿದರು.