ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕತೆ ಹಾಗೂ ವೈಚಾರಿಕ ಸ್ಪರ್ಷವನ್ನು ನೀಡಿ ಅಕಾಲಿಕವಾಗಿ ಅಗಲಿದ ಅಪರೂಪದ ಕಥೆಗಾರ ಸಾಲಹಳ್ಳಿಯ ಬಿ ಸಿ ದೇಸಾಯಿಯವರ ಸಮಗ್ರ ಸಾಹಿತ್ಯದ ಓದು ಹಾಗೂ ಚಿಂತನೆಗಳ ಮರು ಅಭ್ಯಾಸ ಈಗ ಅಗತ್ಯವಾಗಿದೆಯೆಂದು ಖ್ಯಾತ ಸಾಹಿತಿ ಹಾಗೂ ಪತ್ರಕರ್ತ ಡಾ ಸರಜೂ ಕಾಟ್ಕರ್ ಅಭಿಪ್ರಾಯ ಪಟ್ಟರು.
ಬಿ ಸಿ ದೇಸಾಯಿಯವರ ಊರಾದ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದ ಕಿತ್ತೂರು ಚೆನ್ನಮ್ಮ ಬಾಲಿಕೆಯರ ವಸತಿ ಶಾಲೆಯಲ್ಲಿ ದೇಸಾಯಿಯವರ ಅರ್ಧ ಪ್ರತಿಮೆಯ ಅನಾವರಣ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದ ಡಾ ಸರಜೂ ಕಾಟ್ಕರ್ ಅವರು, ದೇಸಾಯಿಯವರ ವೈಚಾರಿಕ ಪ್ರತಿಭೆ ಅಗಾಧವಾಗಿತ್ತು. ಅವರು ಈಗಿನ ಕಾಲದಕ್ಕಿಂತ ಐವತ್ತು ವರ್ಷದ ಮುಂದಿನದನ್ನು ವಿಚಾರ ಮಾಡುತ್ತಿದ್ದರು ಎಂದು ಹೇಳಿದರು.
ದೇಸಾಯಿಯವರ ಆಪ್ತ ಗೆಳೆಯರಾಗಿರುವ ಖ್ಯಾತ ಕಾದಂಬರಿಕಾರ ಡಾ.ಚಂದ್ರಶೇಖರ ಕಂಬಾರ ಅವರು ದೇಸಾಯಿಯವರು ಹುಟ್ಟಿದಾಗಲೇ ಮೂವತ್ತು ವರ್ಷದವರಾಗಿದ್ದರು ಎಂದು ಹೇಳಿದ್ದನ್ನು ಪ್ರಸ್ತಾಪಿಸಿದ ಡಾ ಸರಜೂ ಕಾಟ್ಕರ್ ಅವರು ದೇಸಾಯಿಯವರ ಕಥೆಗಳು ಆಗ ಕನ್ನಡ ಸಾಹಿತ್ಯಕ್ಕೆ ಶಾಕ್ ನೀಡಿದ್ದವು. ಕಥೆಗಳಲ್ಲಿಯ ಹೊಸತನ ಸಾಹಿತ್ಯ ಲೋಕವೇ ಬೆರಗಾಗಿ ನೋಡಿತ್ತು ಎಂದು ಹೇಳಿದರು.
ಪ್ರತಿಮೆಯನ್ನು ಅನಾವರಣ ಮಾಡಿದ ಪ್ರಖ್ಯಾತ ಕವಿ ಸತೀಶ ಕುಲಕರ್ಣಿ ಯವರು ದೇಸಾಯಿಯವರ ಜೊತೆಗಿನ ತಮ್ಮ ಗೆಳೆತನವನ್ನು ಸ್ಮರಿಸಿ ದೇಸಾಯಿಯವರ ಸಮಗ್ರ ಸಾಹಿತ್ಯ ಪ್ರಕಟವಾಗಬೇಕೆಂದು ಹೇಳಿದರು.
ದೇಸಾಯಿಯವರು ತೀಕ್ಷ್ಣ ಪ್ರತಿಭಾವಂತ ರಾಗಿದ್ದರೂ ಕನ್ನಡ ಸಾಹಿತ್ಯ ಕ್ಷೇತ್ರವು ಅವರನ್ನು ನಿರ್ಲಕ್ಷಿಸಿದ್ದರ ಬಗ್ಗೆ ಬೇಸರವನ್ನು ವ್ಯಕ್ತ ಪಡಿಸಿದರು.
ರಾಮದುರ್ಗದ ಪ್ರಗತಿಪರ ಸಾಹಿತಿ ಹಾಗೂ ದೇಸಾಯಿಯವರ ಒಡನಾಡಿ ಪ್ರೊ ಚಿಕ್ಕನರಗುಂದ ಅವರೂ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಸಿರಿಗನ್ನಡ ವೇದಿಕೆ ಪರವಾಗಿ ಸಿರಿಗನ್ನಡ ವೈದ್ಯ ರತ್ನ ಪ್ರಶಸ್ತಿಯನ್ನು ಜಾಫರ್ ಪಾನಾರಿರವರಿಗೆ, ಸಿರಿಗನ್ನಡ ನಿರ್ವಾಹಕ ರತ್ನ ಪ್ರಶಸ್ತಿಗಳನ್ನು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ನಿರ್ವಾಹಕರಾದ ಬಸಪ್ಪ ಹವಳಕೋಡ, ಸುರೇಶ ಬಡಿಗೇರ, ಸಿದ್ಧಲಿಂಗೇಶ್ವರ ಆರಿಬೆಂಚಿ ಮತ್ತು ಉಡಚಪ್ಪ ಪೂಜಾರಿ ಅವರಿಗೆ ನೀಡಲಾಯಿತು. ಸಿರಿಗನ್ನಡ ವೇದಿಕೆ ಬೆಳಗಾವಿ ಜಿಲ್ಲಾ ಗೌರವಾಧ್ಯಕ್ಷ ಸುರೇಶ ಗೋ. ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಆರ್.ಎಸ್.ಪಾಟೀಲ, ಎನ್. ಎಸ್. ಪರೀಟ, ಗ್ರಾಮ ಪಂಚಾಯತಿ ಅಧ್ಯಕ್ಷ ಹನುಮಂತ ವಡ್ಡರ, ಉಪಾಧ್ಯಕ್ಷ ರೂಪಾ ಅರಮನಿ, ಮಾಜಿ ಅಧ್ಯಕ್ಷ ಹಜರತ ಪೈಲವಾನ, ಸುನೀಲ ದೇಸಾಯಿ ಉಪಸ್ಥಿತರಿದ್ದರು. ಪ್ರಾಚಾರ್ಯ ವಿಠ್ಠಲ ಪೂಜೇರ ಸ್ವಾಗತಿಸಿದರು, ಶಿವಾನಂದ ಕೊಪ್ಪದ ಕಾರ್ಯಕ್ರಮ ನಿರೂಪಿಸಿದರು.