spot_img
spot_img

ನಿರುತ್ಸಾಹವನು ಹಣ್ಣಾಗಿಸುವುದು ಹೀಗೆ…

Must Read

- Advertisement -

ಏನೇನೋ ಮಾಡುವ ಮನಸ್ಸು ಇದ್ದರೂ ದೈನಂದಿನ ಜೀವನದಲ್ಲಿ ಒಂದು ತೀವ್ರತರವಾದ ಅಸಮಾಧಾನ. ನಿರುತ್ಸಾಹ, ನಿಸ್ತೇಜ, ನಿಸ್ಸಾರ ಬೆಂಬಿಡದೇ ಕಾಡಿಸುತ್ತದೆ. ಇದು ನಮಗೆಲ್ಲರಿಗೂ ಒಂದಿಲ್ಲೊಂದು ಸಲ ಆಗುವ ಅನುಭವವೇ ಆಗಿದೆ. ಕೆಲವೊಮ್ಮೆ ಒಬ್ಬರೇ ಕುಳಿತು ಯೋಚನೆ ಮಾಡುವ ಪ್ರಸಂಗ ಬಂದಾಗ ಈ ನಿರುತ್ಸಾಹ ನನ್ನ ಸುಂದರ ಬದುಕನ್ನು ಹಾಳುಗೆಡುವುತ್ತಿದೆ ಎಂದೆನಿಸದೇ ಇರದು. ಬದುಕಿನ ಪಯಣದಲ್ಲಿ ನಿರುತ್ಸಾಹದ ನಿಲ್ದಾಣವು ಏಕಾದರೂ ಬರುತ್ತದೆಯೋ ಎಂದು ಹಲಬುತ್ತೇವೆ. ನಿರುತ್ಸಾಹ ಒಮ್ಮೆ ಪಾಯ ತೋಡಿದರೆ ಸಾಕು ಅದೇ ಅರಸ. ನಾವು ಗುಲಾಮರು. ಮುಸ್ಸಂಜೆ ಬಾನಂಚಿನಲ್ಲಿ ಮೂಡಿದ ಮಳೆಬಿಲ್ಲು ಕಂಡರೂ ಮಂಕು ಕಣ್ಣಿಗೆ. ಹೊಸದಾಗಿ ಅರಳಿದ ಹೂಗಳ ಹಿತವಾದ ಸುವಾಸನೆಗೂ ನಿರಾಸಕ್ತಿ. ನಿರುತ್ಸಾಹದ ನದಿ ಸರಾಗವಾಗಿ ಹರಿದುಕೊಂಡು ಹೋಗುತ್ತದೆ. ಅದು ಒಂದು ತರಹ ಜೀವಚ್ಛವದ ಹಾಗೆ. ಆಕಾಶದ ಉದ್ದಗಲ ಹಾರುವ ಹಕ್ಕಿ ಆಗಬೇಕು ಎಂದು ಕನಸು ಕಾಣುವ ಕಂಗಳಿಗೆ ನಿರುತ್ಸಾಹ ನಕ್ಷತ್ರಕನಂತೆ ಬೆನ್ನು ಬಿದ್ದು ತಲೆ ಗಿರ್ ಅನಿಸುವಷ್ಟು ಕಾಡಿಸುತ್ತದೆ. ನಿರುತ್ಸಾಹದ ತೋಳ ತೆಕ್ಕೆಯಲ್ಲಿ ಬಿದ್ದರೆ ಸಾಕು ಹವಾ ನಿಯಂತ್ರಿತ ಕೊಠಡಿಯಲ್ಲಿದ್ದರೂ ತಿರುಗುವ ಮೆತ್ತನೆಯ ಕುರ್ಚಿಯಲ್ಲಿ ಕುಳಿತಿದ್ದರೂ ಚಳಿ ಜ್ವರ ಬಂದವರಂತೆ ಪ್ರತಿಯೊಂದಕ್ಕೂ ನೀರಸ ಪ್ರತಿಕ್ರಿಯೆ ತೋರುತ್ತೇವೆ.

ನಿರುತ್ಸಾಹವೆಂದರೆ…?

ನಿರುತ್ಸಾಹವೆನ್ನುವುದು ಒಂದು ಮನಸ್ಥಿತಿ ಉದ್ಯೋಗ ಆರೋಗ್ಯ ಚೆನ್ನಾಗಿರುವ ಆರ್ಥಿಕ ಸ್ಥಿತಿ ಇದ್ದರೂ ಸ್ಥಿತಿವಂತಿಕೆ ಸರಿಯಿಲ್ಲ ಎನ್ನುವ ಮನಸ್ಥಿತಿ. ನಿಮಗೇನು ಮಾಡಬೇಕೆಂದಿದೆಯೋ ಅದನ್ನು ಮಾಡಲು ಬಿಡದಿರುವ, ಹಿಂದಕ್ಕೆ ತಡೆದು ನಿಲ್ಲಿಸುವ ಸ್ಥಿತಿ . ಕನಸುಗಳನ್ನು ಪ್ರಾಮಾಣಿಕವಾಗಿ ಬೆನ್ನು ಹತ್ತಲು ಬಿಡದ, ತುಕ್ಕು ಹಿಡಿದ ಸ್ಥಿತಿ. ಬದುಕು ಯಾವಾಗಲೂ ನ್ಯಾಯಬದ್ಧವಾಗಿರುತ್ತದೆ ಎನ್ನುವ ತತ್ವ ನಂಬದ ಸ್ಥಿತಿ. ಬದುಕಿನ ಪ್ರತಿ ಹೆಜ್ಜೆಯೂ ನಮ್ಮ ಮನಸ್ಥಿತಿಯಂತೆ ನಡೆಯಲಿ ಎನ್ನುವ ಮನಸ್ಥಿತಿ. ನಮ್ಮಲ್ಲಿರುವ ಅತ್ಯುನ್ನತ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಹಿಂದೇಟು ಹಾಕುವ ಸ್ಥಿತಿ. ನಿರುತ್ಸಾಹ ತೊಲಗಿದರೆ ನಿಟ್ಟುಸಿರು ಬಿಡಬಹುದು. ಉತ್ಸಾಹದ ಕಾರಂಜಿ ಚಿಮ್ಮಿಸಬಹುದು. ಉತ್ಸಾಹದ ಗಂಧದ ಪರಿಮಳ ಸೂಸಬಹುದು. ತಂಪಿನ ಅನುಭವ ಪಡೆದು ನಾವಂದುಕೊಂಡಿದ್ದನ್ನು ಸಾಧಿಸಬಹುದು. ಹಾಗಾದರೆ ನಿರುತ್ಸಾಹದ ಸಹವಾಸದಿಂದ ಬಿಡಿಸಿಕೊಳ್ಳುವುದು ಹೇಗೆ? ಅದನ್ನು ಹಣ್ಣಾಗಿಸುವುದು ಹೇಗೆ ಅಂತ ತಿಳಿಯೋಣ ಬನ್ನಿ.

ದೃಷ್ಟಿಕೋನ ಬದಲಿಸಿ:

‘ದೃಷ್ಟಿಕೋನ ಎನ್ನುವುದು ಮಹತ್ತರ ವ್ಯತ್ಯಾಸಗಳನ್ನು ತರಬಲ್ಲ ಸಣ್ಣ ವಿಷಯ.’ ಎನ್ನುವುದು ವಿನಸ್ಟನ್ ಚರ್ಚಿಲ್ ಮಾತು. ಈಗಿನ ಗಡಿಬಿಡಿ ಜೀವನದಲ್ಲಿ ಒತ್ತಡಗಳೇ ತುಂಬಿವೆ. ಇದರಲ್ಲಿ ಉತ್ಸಾಹ ತುಂಬಿಕೊಳ್ಳುವುದು ಅಸಾಧ್ಯದ ಮಾತಿನಂತೆ ತೋರುತ್ತದೆ. ಕಷ್ಟವೆನಿಸಿದರೂ ಸಾಧ್ಯದ ಸಂಗತಿ. ಕಿರಲುವ ಚಕ್ರಕ್ಕೆ ಎಣ್ಣೆ ಹಾಕಲಾಗುವುದು. ಹಾಗೆಯೇ ತುಕ್ಕು ಹಿಡಿದ ಮನಸ್ಸಿಗೆ ಭರವಸೆ ನೀಡಿ. ಅಂದುಕೊಂಡದ್ದನ್ನು ಚಿಕ್ಕದಾಗಿ ಆರಂಭಿಸಿ.ಮನೋಲ್ಲಾಸ ಕಾಪಿಟ್ಟುಕೊಂಡು ನಿರಂತರವಾಗಿ ಸಾಗಿ. ನಿರಂತರತೆ ಸದಾ ಗೆಲ್ಲುತ್ತದೆ.ಹೋಮರ್ ಹೇಳಿದಂತೆ, ‘ಶ್ರಮ ಎಲ್ಲವನ್ನೂ ಜಯಿಸುತ್ತದೆ.’ ಈಗಿನ ತಲೆಮಾರಿನವರಲ್ಲಿ ಉತ್ಸಾಹವೇ ಇಲ್ಲ. ಯುವ ಜನತೆಯಲ್ಲಿ ಉತ್ಸಾಹದ ಬುಗ್ಗೆಯನ್ನು ನವೀಕರಿಸಬೇಕಿದೆ ಎನ್ನುವುದು ಹಿರಿಯರ ಅಂಬೋಣ. ಇತಿ ಮಿತಿಗಳನ್ನು ಅರಿಯದೇ ಅತಿಯಾದ ನಿರೀಕ್ಷೆಗಳನ್ನಿಟ್ಟುಕೊಳ್ಳುವುದು ನಿರುತ್ಸಾಹದ ಬೊಬ್ಬೆಗೆ ಕಾರಣವಾಗುವುದು. ಬಿರುಗಾಳಿ ತೀಕ್ಷ್ಣವಾದಷ್ಟೂ ಬೇಗ ಕಡಿಮೆಯಾಗುತ್ತದೆ. ಹಾಗೆಯೇ ನಿರುತ್ಸಾಹ ಹೆಚ್ಚಿದಷ್ಟು ಜೀವನ ಮೂಲೆಗೆ ತಳ್ಳಲ್ಪಡುತ್ತದೆ.. ಶುದ್ಧ ಮನಸ್ಸಿನ ಮಾತು ಕೇಳಿಸಿಕೊಳ್ಳುವ ಶಕ್ತಿ ಬರುವುದನೆಲ್ಲವನ್ನೂ ಸುಲಭವಾಗಿ ದಕ್ಕಿಸಿಕೊಳ್ಳುವ, ಬೆಳೆಸಿಕೊಳ್ಳುವ ಛಾತಿ ಬೆಳೆಸಿಕೊಳ್ಳಬೇಕು. ‘ಇಂದು ನಾನು ಮಾಡಬೇಕಾದ ಕೆಲಸಗಳಾವವು ಎಂಬುದರ ಪಟ್ಟಿಯನ್ನು ಬೆಳಿಗ್ಗೆ ಸಿದ್ಧ ಪಡಿಸಿ.ಅದರಂತೆ ಕಾರ್ಯ ನಿರ್ವವಹಿಸಲು ಮನಸ್ಸನ್ನು ಹದಗೊಳಿಸಿ’. ನಿರುತ್ಸಾಹ ಭಯದ ಉತ್ಪಾದನೆ. ಆದರೆ ಭಯವನ್ನು ಹಿಂದಿಕ್ಕಿದರೆ ನಿರುತ್ಸಾಹ ನಿರ್ವಹಿಸುವುದು ಎಡಗೈ ಕೆಲಸ. ನಿರುತ್ಸಾಹ ಹಿಂದಿಕ್ಕಿದರೆ ಹೊಸ ಬದುಕು ಅಪ್ಪಿಕೊಳ್ಳುವುದು ಖಂಡಿತ.

- Advertisement -

ಹೋಲಿಸದಿರಿ:

ಇತರರ ಬದುಕಿಗೆ ಹೋಲಿಸಿಕೊಂಡು ತೀರದ ಕನಸುಗಳನ್ನು ಕಣ್ಣಲ್ಲಿ ತುಂಬಿಕೊಳ್ಳುವುದನ್ನು ಬಿಡಬೇಕು. ನಮ್ಮಲ್ಲಿ ಇರುವುದರ ಬೆಲೆ ತಿಳಿಯದೇ, ಇಲ್ಲದುದರ ಬಗೆಗೆ ತುಡಿಯುವುದನ್ನು ಬಿಡಬೇಕು. ಭ್ರಮೆಯ ಹಿಂದೆ ಓಡುವುದನ್ನು ಬಿಡದೇ ಹೋದರೆ ನಿರುತ್ಸಾಹ ನಮ್ಮನ್ನು ಬಿಟ್ಟು ತೊಲಗದು. ‘ನೀನು ನೀನಾಗೇ ಇರು ಅದೇ ವಾಸ್ತವ.ರಾತ್ರಿ ನಂತರ ಹಗಲು ಹೇಗೆ ಬರುತ್ತದೋ, ಅಷ್ಟೇ ಸಹಜವಾದ ಅಂಶ ಇದು. ಹಾಗಿರುವಾಗ ನೀನು ತಪ್ಪು ಮಾಡಲಾರೆ ಎಂದಿದ್ದಾನೆ ಷೇಕ್ಸ್ ಪಿಯರ್. ಮತ್ತೊಬ್ಬರಂತಾಗುವ ಹುಚ್ಚಿನಲ್ಲಿ,ಮನದಲ್ಲಿ ಹುಟ್ಟುವ ಮಹತ್ವಾಕಾಂಕ್ಷೆಗೆ ತಕ್ಕದಾಗಿ ಪ್ರತಿಸ್ಪಂದಿಸದೇ ಹೋದರೆ ಉತ್ಸಾಹದ ಜೀವನ ಕೈಗೆಟುಕುವುದಿಲ್ಲ. ಯಶಸ್ವಿ ವ್ಯಕ್ತಿಗಳ ಹಾಗೆ ಬದುಕಬೇಕೆನ್ನುವ ಅಭಿಲಾಷೆ. ಆದರೆ ಅವರ ಹಾಗೆ ಪರಿಶ್ರಮದ ಬೆವರು ಹರಿಸಲು ಸಿದ್ಧವಿಲ್ಲದೇ ಇರುವುದು. ಯಶಸ್ವಿ ವ್ಯಕ್ತಿಗಳಿಗೆ ಬದುಕು ವಿಶೇಷವಾದದ್ದೇನನ್ನೂ ಕೊಟ್ಟಿಲ್ಲ. ವಾಸ್ತವದಲ್ಲಿ ಬದುಕು ಎಲ್ಲರಿಗೂ ಎಲ್ಲವನ್ನೂ ಕೊಡುತ್ತದೆ. ನಮ್ಮ ಶ್ರಮ ಶ್ರದ್ಧೆ ಅವಿರತ ಪ್ರಯತ್ನಕ್ಕೆ ತಕ್ಕಂತೆ ಪ್ರತಿಫಲ ಸಿಗುತ್ತದೆ.ದಿನಾಲೂ ನೂರೆಂಟು ಅವಕಾಶಗಳು ಬಾಗಿಲು ಟಕಟಕಾಯಿಸುತ್ತವೆ. ನಿಮಗೆ ಒಪ್ಪವೆನಿಸುವ ಕೆಲಸ ಬಹಳಷ್ಟು ಆಸ್ಥೆಯಿಂದ ಮಾಡಿ. ದುಡ್ಡಷ್ಟೇ ಅಲ್ಲ ಅದರೊಂದಿಗೆ ಉತ್ಸಾಹವೂ ಪುಟಿದೇಳುತ್ತದೆ.

ನೆಪ ಹೇಳದಿರಿ:

ಗೊತ್ತು ಪಡಿಸಿದ ಕೆಲಸ ಮಾಡಲು ಒಳ ಮನಸ್ಸು ಚಟಪಡಿಸಿದರೂ, ಮುಗ್ಗಲಗೇಡಿ ಮನಸ್ಸು ಅದನ್ನು ಮುಂದೂಡಲು ಸಾಕೆನಿಸುವಷ್ಟು ನೆಪ ಹೇಳುತ್ತದೆ. ಇಂದು ಆರೋಗ್ಯ ಸರಿಯಿಲ್ಲ. ಏಕೋ ಮನಸ್ಥಿತಿ ಸರಿಯಿಲ್ಲ ನಾಳೆ ಖಂಡಿತ ಮಾಡುವೆನೆಂದು ಮೈದಡವಿ ಸಮಾಧಾನಿಸುವ ನಿರುತ್ಸಾಹದ ಮಾತಿಗೆ ಮರಳಾಗದಿರಿ. ನೆಪಗಳ ಚೌಕಟ್ಟು ಹಾಕಿಕೊಳ್ಳದೇ ತಿಳಿವಳಿಕೆಯಿಂದ ಕಾರ್ಯ ಮುಂದುವರೆಸಿ. ಕೆಲಸದ ನಡುವೆ ಪುಟ್ಟ ವಿರಾಮವಿರಲಿ. ವಿರಾಮ ಅತಿಯಾಗದಂತೆ ಎಚ್ಚರ ವಹಿಸಿ. ನಿರುತ್ಸಾಹ ನಮ್ಮ ಕುಬ್ಜತನವನ್ನು ಹೆಚ್ಚಿಸುತ್ತದೆ ಹೊರತು ಎತ್ತರಕ್ಕೆ ಏರಿಸುವುದಿಲ್ಲ. ‘ಗೆಲುವಿನ ಬೀಜಗಳನ್ನು ನೆಡಲು ಉತ್ಸಾಹದ ಕಾಲವೇ ಸಕಾಲ.’ ನೆಪಗಳ ಹಾವಳಿ ಇಲ್ಲದಿದ್ದರೆ ಅವಕಾಶಗಳು ಸಾಲುಗಟ್ಟುತ್ತವೆ. ನೆಪೋಲಿಯನ್ ಬೊನಾಪಾರ್ಟಿ ನುಡಿದಂತೆ,’ಅವಕಾಶಗಳು ಇಲ್ಲದಿದ್ದರೆ ಸಾಮರ್ಥ್ಯ ಉಪಯೋಗಕ್ಕೆ ಬರುವುದಿಲ್ಲ.’ ಕಷ್ಟ ಪಡಲೇಬೇಕೆಂಬ ಕಟ್ಟು ಪಾಡಿರುವ ಮನೋಧೋರಣೆ ನಮ್ಮನ್ನು ದೈಹಿಕವಾಗಿ ಮಾನಸಿಕವಾಗಿ ಗಟ್ಟಿಗೊಳಿಸುತ್ತದೆ. ಹೊಂದದಿದ್ದರೆ ನಿರುತ್ಸಾಹ ಕಟ್ಟಿಟ್ಟ ಬುತ್ತಿ. ನಿರುತ್ಸಾಹದ ಧೂಳು ಮೆತ್ತಿಸಿಕೊಂಡ ಮನಸ್ಸನ್ನು ಒಮ್ಮೆ ಯಾವುದೇ ನೆಪ ಹೇಳದೇ ಸ್ವಚ್ಛವಾಗಿ ಒರೆಸಿ ಬಿಡಿ. ಬದುಕು ಬೆಲ್ಲದಚ್ಚಿನಂತೆ ಸವಿಯೆನಿಸುವುದು.

ಇರಲಿ ಸ್ವ ಸ್ಪೂರ್ತಿ:

‘ಏಕೋ ಇತ್ತೀಚಿಗೆ ದಿನವೆಲ್ಲ ನಿರುತ್ಸಾಹದಿಂದಿರುತ್ತೇನೆ. ಏನು ಮಾಡಬೇಕೆಂದು ತೋಚುತ್ತಿಲ್ಲ.’ ಎಂದು ಕೋಳಿಯೊಂದು ಎತ್ತಿನ ಮೇಲೆ ಕುಳಿತು ಗೋಳು ತೋಡಿಕೊಂಡಿತು. ಅದಕ್ಕೆ ಎತ್ತು, ನನ್ನ ಸಗಣಿಯಲ್ಲಿ ಸಾಕಷ್ಟು ಸತ್ವವಿದೆ ತಿಂದು ನೋಡು ಎಂದಿತು. ಕೋಳಿ ಪ್ರತಿದಿನ ಸಗಣಿಯಲ್ಲಿನ ಕಸ ತಿಂದು ಉತ್ಸಾಹ ಪಡೆದುಕೊಂಡಿತು. ಆರಂಭದಲ್ಲಿ ಗಿಡದ ರೆಂಬೆ ಏರಿತಂತೆ. ಬರ ಬರುತ್ತ ಮರದ ಕೊನೆಯ ರೆಂಬೆ ಏರಿತಂತೆ.ಕಸದಲ್ಲೂ ಉತ್ಸಾಹ ಹೆಚ್ಚಿಸುವ ಸತ್ವವಿದೆ ಎಂದಾದರೆ ತಬ್ಬಿಕೊಂಡು ಮುದ್ದಿಸುವ ಅಂತರಂಗದ ಸ್ವ ಸ್ಪೂರ್ತಿ ಮಾತುಗಳಿಗೆ ಅದೆಷ್ಟು ಶಕ್ತಿ ಇರಬೇಡ ನೀವೇ ಊಹಿಸಿ! ಸ್ವ ಸ್ಪೂರ್ತಿ ತೋರಿಸಕೊಳ್ಳುವ ರಹಸ್ಯವನ್ನು ಹೃದಯದೆದುರು ಒಮ್ಮೆ ತೆರೆದಿಟ್ಟರೆ ಸಾಕು ಒಂದು ಕಾರ್ಖಾನೆ ಕಟ್ಟುವಾತ ದೇವಸ್ಥಾನ ಕಟ್ಟಿದಂತೆ. ಕೆಲಸ ಮಾಡುವವನು ಮಾತ್ರ ಪ್ರತಿಭೆ ಗೆದ್ದಲು ಹತ್ತುವ ಮುನ್ನ ಗದ್ದಗೆಗೆ ಏರಿಸಬಲ್ಲ. ನಿರುತ್ಸಾಹದ ಕಾಲು ಮುರಿದು ಬದಿಗಿಡಿ. ಆಗ ನೋಡಿ ಉತ್ಸಾಹದ ಹಕ್ಕಿ ಗರಿ ಬಿಚ್ಚಿ ಘಮ್ಮೆನ್ನಿಸುತ್ತದೆ.

- Advertisement -

ಜಯಶ್ರೀ ಜೆ. ಅಬ್ಬಿಗೇರಿ, ಬೆಳಗಾವಿ
9449234142

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group