ಮೂಡಲಗಿ – ಮೂಡಲಗಿ ತಾಲೂಕು ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಮಹಾಪೂರದಿಂದ ಜನತೆಗೆ ಅಪಾರ ಸಂಕಷ್ಟ ಎದುರಾಗಿದ್ದು ಬೆಳಗಾವಿ ಜಿಲ್ಲೆಯು ಮೂರು ಜಿಲ್ಲೆಗಳಷ್ಟು ದೊಡ್ಡದಿರುವ ಕಾರಣ ಮೂರು ಜಿಲ್ಲೆಗಾಗುವಷ್ಟು ಪರಿಹಾರವನ್ನು ಜಿಲ್ಲೆಯ ಸಚಿವರು ಸಂತ್ರಸ್ತರಿಗೆ ಕೊಡಿಸಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಮೂಡಲಗಿ ತಾಲೂಕಿನ ಮುಸಗುಪ್ಪಿ, ಹುಣಶ್ಯಾಳ ಮುಂತಾದ ಕಡೆ ಪ್ರವಾಹ ಸಮೀಕ್ಷೆ ಮಾಡಿ, ಸಂತ್ರಸ್ತರ ಗಂಜಿ ಕೇಂದ್ರಗಳಿಗೆ ಭೇಟಿ ಕೊಟ್ಟು ಅವರಿಗೆ ಸಾಂತ್ವನ ಹೇಳಿದನಂತರ ಸಮೀಪದ ಗುರ್ಲಾಪೂರ ಅತಿಥಿ ಗೃಹದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶದಲ್ಲಿ ವ್ಯಾಪಕ ಮಳೆ ಆಗಿದ್ದರಿಂದ ಘಟಪ್ರಭಾ ನದಿಗೆ ಹಿಡಕಲ್ ಡ್ಯಾಂನಿಂದ ೫೫ ಸಾವಿರ ಕ್ಯೂಸೆಕ್ಸ್ ನೀರು ಬಿಡಲಾಗಿದೆ ಅದರಿಂದ ನದಿಪಾತ್ರದ ಜನರಿಗೆ ತೊಂದರೆಯಾಗಿದೆ. ಕೃಷ್ಣಾ ನದಿಗೆ ಸುಮಾರು ೩ ಲಕ್ಷ ಕ್ಯೂಸೆಕ್ಸ್ ನೀರು ಬಿಡಲಾಗಿದೆ. ೨೫೦ ಗ್ರಾಮಗಳು ಜಲಾವೃತವಾಗಿವೆ ಎಂದರು.
ಈ ತಾಲೂಕಿನಲ್ಲಿ ೧೧ ಗ್ರಾಮಗಳು ಮುಳುಗಿವೆ, ೧೬ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ, ೩೮೫೦ ಜನ ಆಶ್ರಯ ಪಡೆದಿದ್ದಾರೆ, ೭ ಸೇತುವೆಗಳು ಜಲಾವೃತವಾಗಿವೆ, ೧೧೫೦೦ ಎಕರೆಗಿಂತ ಹೆಚ್ಚು ಜಮೀನು ಜಲಾವೃತವಾಗಿದೆ, ೨೦೦೦ ಕಿಂತ ಹೆಚ್ಚು ಮನೆಗಳು ಹಾನಿಗೊಳಗಾಗಿವೆ ಎಂಬುದಾಗಿ ಕಡಾಡಿ ಮಾಹಿತಿ ಬಿಚ್ಚಿಟ್ಟರು.
ಜನತೆ ತೀವ್ರ ಸಂಕಷ್ಟದಲ್ಲಿದ್ದಾರೆ ಅವರಿಗೆ ಇನ್ನೂ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಬೇಕು. ಜಿಲ್ಲೆಯ ಸಚಿವರು ಶಾಸಕರುಗಳು ಸೋಮವಾರ ಆಗಮಿಸಲಿರುವ ಮುಖ್ಯಮಂತ್ರಿಗಳಿಗೆ ಈ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಬೇಕು. ೩ ಜಿಲ್ಲೆಗಾಗುವಷ್ಟು ಪರಿಹಾರ ಕೊಡಿಸಲು ಜಿಲ್ಲೆಯ ಸಚಿವರು ಪ್ರಯತ್ನಿಸಬೇಕು ಎಂದರು.
ಮುಸಗುಪ್ಪಿ ಬ್ರಿಡ್ಜ್ ಬಗ್ಗೆ ಮನವಿ ಬಂದಿದೆ ಸೇತುವೆ ಎತ್ತರ ಹೆಚ್ಚಿಸಿ ಕಮಾನುಗಳ ಸಂಖ್ಯೆ ಹೆಚ್ಚಿಸಬೇಕು ಇದರಿಂದ ಒತ್ತುವರಿ ಕಡಿಮೆಯಾಗಿ ಗ್ರಾಮಸ್ಥರಿಗೆ ತೊಂದರೆಯಾಗಲಾರದು ಎಂದ ಅವರು ಈ ಬಗ್ಗೆ ನಾನೂ ಕೂಡ ಸರ್ಕಾರದ ಗಮನಸೆಳೆಯುತ್ತೇನೆ ಎಂದು ಈರಣ್ಣ ಕಡಾಡಿ ಹೇಳಿದರು.