ಮೈಸೂರು: ಯುವಜನತೆ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ಪಡೆದು ಭವಿಷ್ಯದ ಸದೃಡ ಭಾರತಕ್ಕೆ ಸುಭದ್ರ ಅಡಿಪಾಯ ಹಾಕಬೇಕೆಂದು ಕೆ.ಆರ್.ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಗಾಯತ್ರಿ ಕರೆ ನೀಡಿದರು.
ಕೆ.ಆರ್.ನಗರದ ಕರುನಾಡು ಶಿಕ್ಷಣ ಸಂಸ್ಥೆಯಲ್ಲಿ ಭಗತ್ ಸಿಂಗ್ ಯೂತ್ ಫೌಂಡೇಶನ್ ಸಂಸ್ಥೆಯು ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಯುವಕರೇ ಭವಿಷ್ಯದ ಆಶಾ ಕಿರಣಗಳು. ಯಾವುದೇ ದುಷ್ಟ ಹವ್ಯಾಸಗಳಿಗೆ ಸಿಲುಕದೇ ಯುವಕರು ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎಂದು ನುಡಿದರು.
ಸಾಹಿತಿ, ಪತ್ರಕರ್ತ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ. ಡಾ.ಭೇರ್ಯ ರಾಮಕುಮಾರ್ ಮುಖ್ಯ ಅತಿಥಿಗಳಾಗಿ ಮಾತನಾಡಿ ಯುವ ಜನತೆ ರಾಷ್ಟ್ರವನ್ನು ಕಾಡುತ್ತಿರುವ ಭಯೋತ್ಪಾದಕತೆ, ಭ್ರಷ್ಟಾಚಾರಗಳಂತಹ ಸಮಸ್ಯೆಗಳ ವಿರುದ್ದ ಸಂಘಟಿತ ಹೋರಾಟ ಮಾಡಬೇಕು.
ನಮ್ಮ ಹಿರಿಯರು ತೀವ್ರ ಹೋರಾಟ ಮಾಡಿ ರಾಷ್ಟ್ರಕ್ಕೆ ಸ್ವಾತಂತ್ರ ತಂದು ಕೊಟ್ಟಿದ್ದಾರೆ. ರಾಷ್ಟ್ರದ ಸ್ವಾತಂತ್ರ ಕಾಪಾಡಿಕೊಂಡು, ರಾಷ್ಟ್ರವು ಅಭ್ಯುದಯದತ್ತ ಸಾಗುವಂತೆ ನೋಡಿಕೊಳ್ಳಬೇಕಾದ್ದು ಯುವಜನತೆಯ ಆದ್ಯ ಕರ್ತವ್ಯವಾಗಿದೆ. ಮೊಬೈಲ್, ಗಾಂಜಾ-ಅಪೀಮುಗಳ, ಮದ್ಯಪಾನದಂತಹ ದುಶ್ಚಟಗಳ ದಾಸರಾಗದೇ ಶಕ್ತಿಯುತ ಸಮಾಜ ಕಟ್ಟಲು ಶ್ರಮಿಸಬೇಕೆಂದು ಕಿವಿಮಾತು ನುಡಿದರು.
ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ ಡಾ.ಭೇರ್ಯ ರಾಮಕುಮಾರ್ ಅವರನ್ನು ಅಭಿನಂದಿಸಿ, ಸನ್ಮಾನಿಸಲಾಯಿತು.
ಭಗತ್ ಸಿಂಗ್ ಯೂತ್ ಫೌಂಡೇಶನ್ ಸಂಸ್ಥೆಯ ಅಧ್ಯಕ್ಷರಾದ ಯೋಗೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕರುನಾಡು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ರವಿಕುಮಾರ್,ಮುಖ್ಯ ಶಿಕ್ಷಕರಾದ ಲೀಲಾವತಿ ವೇದಿಕೆಯಲ್ಲಿದ್ದರು.
ಭಗತ್ ಸಿಂಗ್ ಫೌಂಡೇಶನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಕ್ಷಿತ್,ಉಪಾಧ್ಯಕ್ಷರಾದ ಕಿರಣ್,ಸಂಘಟನಾ ಕಾರ್ಯದರ್ಶಿಗಳಾದ ಚೆಲುವನ್, ರಾಜೇಶ್, ಸ್ವಾಮಿಗೌಡ, ರವಿ, ಪದಾಧಿಕಾರಿಗಳಾದ ಪ್ರಮೋದ್, ಪುರುಷೋತ್ತಮ್, ಶಿವಕುಮಾರ್, ಪುನೀತ್,ಪ್ರದೀಪ್ ಉಪಸ್ಥಿತರಿದ್ದರು
ಇದೇ ಸಂದರ್ಭದಲ್ಲಿ ಭಗತ್ ಸಿಂಗ್ ಯೂತ್ ಫೌಂಡೇಶನ್ ವತಿಯಿಂದ ಏರ್ಪಡಿಸಲಾಗಿದ್ದ ಕೆ.ಆರ್.ನಗರ ಪಟ್ಟಣದ ಪ್ರೌಢಶಾಲೆಗಳ ವಿದ್ಯಾರ್ಥಿಗಳ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಎಂಟು ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕರುನಾಡ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ತಂಡಕ್ಕೆ ಪ್ರಥಮ ಬಹುಮಾನ ದೊರಕಿತು. ಬಿ.ಎಸ್.ಮಾದಪ್ಪ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ತಂಡವು ದ್ವಿತೀಯ ಸ್ಥಾನ ಪಡೆಯಿತು.ಆದರ್ಶ ಶಾಲೆಯ ತಂಡವು ತೃತೀಯ ಸ್ಥಾನ ಗಳಿಸಿತು.ಸ್ಪರ್ದೆಯಲ್ಲಿ ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪತ್ರ ನೀಡಲಾಯಿತು.