Homeಲೇಖನರಂಗ ಸೇವೆಯಲ್ಲಿ ಟಿ. ನಾಗರಾಜು, ಮಾಯಸಂದ್ರ

ರಂಗ ಸೇವೆಯಲ್ಲಿ ಟಿ. ನಾಗರಾಜು, ಮಾಯಸಂದ್ರ

ಹಾಸನ ಜಿಲ್ಲಾ ಕಲಾವಿದರ ಸಂಘದ ವ್ಯಾಟ್ಸಪ್ ಗ್ರುಪ್‌ನಲ್ಲಿ ಟಿ.ನಾಗರಾಜು ಕುರುಕ್ಷೇತ್ರ, ರಾಮಾಯಣ, ಶನಿಮಹಾತ್ಮೆ, ದಾನ ಶೂರ ಕರ್ಣ ನಾಟಕಗಳ ಪ್ರತಿಗಳನ್ನು ಟೈಪ್ ಮಾಡಿ ಹಾಕಿದ್ದರು. ಅದು ಕಲಾತಂಡಗಳು ನಾಟಕಗಳ ಪ್ರತಿಯನ್ನು ಪ್ರಿಂಟ್ ತೆಗೆದುಕೊಂಡು ತಮ್ಮ ಅಭ್ಯಾಸಕ್ಕೆ ಬಳಸಿಕೊಳ್ಳಲು ಸೂಕ್ತವಾಗಿತ್ತು. ಈ ನಾಟಕಗಳ ಪ್ರತಿಯಲ್ಲಿ ಕಲಾವಿದರು ತಮ್ಮ ಕಿರು ಪರಿಚಯ ಜೊತೆಗೆ ನಾಟಕ ಕುರಿತಾಗಿ ಕೆಲ ಅಂಶ ಹಾಕಿದ್ದರು. ಅವರ ನಂಬರ್ ಗಮನಿಸಿ ಪೋನಾಯಿಸಿದೆ. ನಾಗರಾಜು ತಮ್ಮ ಕಲಾ ಪರಿಚಯ ಹೇಳಿಕೊಳ್ಳುತ್ತಾ ತಾವು ಹಾಸನದ ಕಲಾತಂಡಗಳಲ್ಲಿ ಬಂದು ಭಾಗವಹಿಸಿದ್ದೇನೆ ಎಂದರು. ಹನುಮಂತನ ಪಾತ್ರಾಭಿನಯದ ವಿಡಿಯೋ ಶೇರ್ ಮಾಡಿ ಪರಿಚಯ ಮತ್ತು ಪೋಟೋ ಕಳಿಸಿದರು.

ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದ ರಂಗ ನಿರ್ದೇಶಕರು ತಿಮ್ಮಯ್ಯ ಮತ್ತು ಕರಿಯಮ್ಮನವರ ಜೇಷ್ಠ ಪುತ್ರರಾಗಿ ದಿ. ೨೨-೧೦-೧೯೬೨ ರಂದು ಜನಿಸಿದರು. ಇವರ ಪ್ರಾಥಮಿಕ ಶಿಕ್ಷಣ ಸ್ವಗ್ರಾಮ ಮಾಯಸಂದ್ರದಲ್ಲಿ, ಪದವಿ ಶಿಕ್ಷಣ ಆದಿಚುಂಚನಗಿರಿ ಕ್ಷೇತ್ರ (ಬಿ.ಎ). ಬಾಲ್ಯದಿಂದಲೂ ಅಭಿನಯವನ್ನು ಹವ್ಯಾಸವಾಗಿ ಬಾಲ ಕಲಾವಿದರಾಗಿ ತಂದೆ ಮಾರ್ಗದರ್ಶನದಲ್ಲಿ ೯ನೇ ವಯಸ್ಸಿಗೆ ದಾನಶೂರಕರ್ಣ ನಾಟಕದ ವೃಷಕೇತು ಪಾತ್ರದ ಮೂಲಕ ರಂಗಪ್ರವೇಶ ಮಾಡಿದರು. ಉತ್ತಮ ಶಾರೀರವಿದ್ದ ಕಾರಣ ರುಕ್ಮಿಣಿ ಸೀತೆ ದ್ರೌಪದಿ ಸ್ವಯಂಪ್ರಭೆ ಕೊರಮಿ ಸಖಿಯರು ಸ್ತ್ರೀ ಪಾತ್ರಗಳಲ್ಲಿ ಅಭಿನಯಿಸಿ ವಿಶೇಷವಾಗಿ ಕೊರಮಿ ಪಾತ್ರದಲ್ಲಿ ಮಿಂಚಿದರು.

ಕುರುಕ್ಷೇತ್ರ ನಾಟಕದಲ್ಲಿ ದುಶ್ಯಾಸನ ಸಾತ್ಯಕಿ ಶ್ರೀಕೃಷ್ಣ ಕರ್ಣ ವಿದುರ ಅಭಿಮನ್ಯು ಮತ್ತು ರಾಮಾಯಣದಲ್ಲಿ ಭರತ ಶತೃಘ್ನ ವಿಭೀಷಣ ಲಂಕಿಣಿ ಘೋರ ಶೂರ್ಪನಖಿ…. ಹೀಗೆ ಎರಡು ನಾಟಕಗಳ ವಿವಿಧ ಪಾತ್ರಗಳಲ್ಲಿ ಹಾಗೂ ಯಕ್ಷಗಾನದಲ್ಲಿ ತುರುವೇಕೆರೆ ತಾ. ಪುರ ಗ್ರಾಮದ ಭಾಗವತರು ಗಂಗಣ್ಣನವರ ಮಾರ್ಗದರ್ಶನದಲ್ಲಿ ದಕ್ಷಯಜ್ಞ ನಾಟಕದಲ್ಲಿ ದಕ್ಷನ ಪಾತ್ರ ನಿರ್ವಹಿಸಿದ್ದಾರೆ.

ಪಂಚವಟಿ ಯಕ್ಷಗಾನ ನಾಟಕದಲ್ಲಿ ಆಂಜನೇಯನ ಪಾತ್ರ ನಿರ್ವಹಿಸಿ ಜನಮೆಚ್ಚುಗೆ ಗಳಿಸಿದ್ದಾರೆ. ೨೦೦೪ರಲ್ಲಿ ಮಾಯಸಂದ್ರದ ಗ್ರಾಮದೇವತೆ ಹಬ್ಬಕ್ಕೆ ಸಂಪೂರ್ಣ ರಾಮಾಯಣ ನಾಟಕದಲ್ಲಿ ಘಂಟಸಾಲಾ ಖ್ಯಾತಿಯ ಮಾಯಸಂದ್ರದ ಗುರುಗಳು ಎಂ.ಹೆಚ್.ನಾರಾಯಣ್‌ರ ಮಾರ್ಗದರ್ಶನದಲ್ಲಿ ಆಂಜನೇಯ ಪಾತ್ರದಲ್ಲಿ ಹೆಸರು ಪಡೆದರು. ತುರುವೇಕೆರೆ ತಾ. ಪುರ ಗ್ರಾಮದಲ್ಲಿ ೨೦೦೭ರಲ್ಲಿ ಆಂಜನೇಯ ಪಾತ್ರಾಭಿನಯಕ್ಕೆ ಅಂದಿನ ಮುಖ್ಯಮಂತ್ರಿಗಳಿಂದ ಪ್ರಶಂಸಾ ಪತ್ರ ಸಂದಿದೆ.

ತುರುವೇಕೆರೆ ತಾಲ್ಲೂಕು ಮಾತ್ರವಲ್ಲದೆ ಬೆಂಗಳೂರು ತುಮಕೂರು ಮಂಡ್ಯ ಮೈಸೂರು ರಾಮನಗರ ಜಿಲ್ಲೆಗಳಲ್ಲಿ ಹಲವಾರು ಕಲಾಮಂದಿರ ಜಾತ್ರಾ ಮಹೋತ್ಸವಗಳಲ್ಲಿ ಭಾಗವಹಿಸಿ ಅಭಿನಯಿಸಿದ್ದಾರೆ. ಹಾಸನ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆಂಜನೇಯ ಪಾತ್ರಕ್ಕೆ ಪ್ರಶಂಸೆ ಬಂದಿದೆ.

ನನ್ನ ಕಲಾರಂಗಕ್ಕೆ ಮಾರ್ಗದರ್ಶನ ನೀಡಿದ ತಂದೆ ತಿಮ್ಮಯ್ಯರವರು ಪಿಟೀಲು ವಾದಕರು ವೆಂಕಟರಾಮಯ್ಯ, ಗುರುಗಳಾದ ಎಂ.ಹೆಚ್.ನಾರಾಯಣ್ ತಬಲ ವಾದಕರು ಜಯಕುಮಾರಣ್ಣ ಗುರುಗಳಾದ ಚನ್ನರಾಯಪಟ್ಟಣ ತಾ. ದ್ಯಾವೇನಹಳ್ಳಿ ಚೌಡಪ್ಪದಾಸರು ಹಾಸನ ಜಿಲ್ಲೆಯ ದೊಡ್ಡಗೇಣಿಗೆರೆ ರಂಗಪ್ಪದಾಸರು ಅಂಚಿಹಳ್ಳಿ ಸಂಜೀವಮೂರ್ತಿರವರಿಗೆ ನನ್ನ ನಮನಗಳೆಂದು ಸ್ಮರಿಸಿದರು.

ಎಡೆಯೂರು ಸಾಂಸ್ಕೃತಿಕ ವೇದಿಕೆ ಎಡೆಯೂರು. ಶ್ರೀ ಕೊಲ್ಲಾಪುರದಮ್ಮ ಕೃಪಾಪೋಷಿತ ನಾಟಕ ಸಂಘ ಮಾಯಸಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಎಡೆಯೂರು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರು ಶಾಲಾ ಶಿಕ್ಷಕರು ವೈ.ಎಸ್. ಹನುಮಂತಯ್ಯನವರು, ಶಾಲಾ ಶಿಕ್ಷಕರು ಇ.ಶಿವಣ್ಣ, ಸಿ.ಪಿ.ಪ್ರಕಾಶ್ ಸಾರಥ್ಯದಲ್ಲಿ ೨೦೧೭ರಲ್ಲಿ ಮಾಯಸಂದ್ರದ ಗ್ರಾಮದೇವತೆ ಶ್ರೀ ಕೊಲ್ಲಾಪುರದಮ್ಮ ಜಾತ್ರಾ ಮಹೋತ್ಸವದಲ್ಲಿ ಸಂಪೂರ್ಣ ರಾಮಾಯಣ ನಾಟಕದಂದು ಕಲಾಸೇವೆಗೆ ಎಡೆಯೂರು ಕ್ಷೇತ್ರದ ಬಾಳೆಹೊನ್ನೂರು ಶಾಖಾ ಮಠದ ಪಟ್ಟಾಧ್ಯಕ್ಷರಾದ ಶ್ರೀ ಪ:ಬ್ರ: ರೇಣುಕ ಶಿವಾಚಾರ್ಯ ಮಹಾಸ್ವಾಮಿಗಳವರು ರಜತ ಮುಕುಟ ಧಾರಣೆಯೊಂದಿಗೆ ಅಭಿನಯ ಚತುರ ಬಿರುದನ್ನು ನೀಡಿ ಆಶೀರ್ವದಿಸಿದ್ದಾರೆ. ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತುಮಕೂರು ತಾ. ಗಣರಾಜ್ಯೋತ್ಸವ ಸಮಿತಿ. ತುರುವೇಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಯಸಂದ್ರ ಹೋಬಳಿ ಕನ್ನಡ ರಾಜ್ಯೋತ್ಸವ ಸಮಿತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ.

ಜಿಲ್ಲಾ ಕಲಾವಿದರ ಬಳಗ ಮಂಡ್ಯ,  ತುಮಕೂರು ರಂಗಕಲಾವಿದರ ಸಂಘಗಳಿಂದ ಕಲಾಕ್ಷೇತ್ರ ಸಾಧನೆಗೆ ಪುರಸ್ಕಾರ ದೊರೆತಿದೆ. ಸರ್ಕಾರಿ ಸೇವೆಯಲ್ಲಿ ಬೆರಳಚ್ಚುಗಾರನಾಗಿ ಕಾವೇರಿ ನೀರಾವರಿ ನಿಗಮದಲ್ಲಿ ೩೩ ವರ್ಷ ಸೇವೆ ಸಲ್ಲಿಸಿ ಅಕ್ಟೋಬರ್೨೦೨೨ ರಂದು ನಿವೃತ್ತಿ ಹೊಂದಿ ವಿಶ್ರಾಂತ ಜೀವನದಲ್ಲಿ ಕಲಾಸೇವೆ ಮುಂದುವರೆಸಿದ್ದಾರೆ. ನಾಟಕಗಳ ಪ್ರತಿಯನ್ನು ಹಳೆಯ ಪದ್ಯಗಳ ಜೊತೆಗೆ ಪ್ರಸ್ತುತ ಪದ್ಯಗಳನ್ನು ಒಳಗೊಂಡು ಹಿರಿಯ ರಂಗ ಕಲಾವಿದರ ಮಾರ್ಗದರ್ಶನದೊಂದಿಗೆ ನಾಟಕಕಾರರಿಗೆ ಅನುಕೂಲವಾಗಲೆಂದು ಮರು ಮುದ್ರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಗೊರೂರು ಅನಂತರಾಜು, ಹಾಸನ
ಮೊ: ೯೪೪೯೪೬೨೮೭೯.
ವಿಳಾಸ ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group