ಮೂಡಲಗಿ: ‘ಅಕ್ಷರ ಜ್ಞಾನವನ್ನು ಕೊಟ್ಟು ವ್ಯಕ್ತಿತ್ವವನ್ನು ರೂಪಿಸುವ ಗುರು ಸರ್ವಶ್ರೇಷ್ಠರೆನಿಸುತ್ತಾರೆ’ ಎಂದು ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಹೇಳಿದರು.
ಇಲ್ಲಿಯ ಕೆ.ಎಚ್. ಸೋನವಾಲಕರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಮೂಡಲಗಿಯ ಶ್ರೀ ಶಿವಬೋಧರಂಗ ಪ್ರೌಢ ಶಾಲೆಯಲ್ಲಿ 1982-83ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಕಲಿತ ವಿದ್ಯಾರ್ಥಿಗಳ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಗುರು ಶಿಷ್ಯ ಪರಂಪರೆಯು ಭಾರತದಲ್ಲಿ ಪ್ರಾಚೀನ ಕಾಲದಿಂದ ಇಂದಿಗೂ ತನ್ನ ಪಾವಿತ್ರ್ಯವನ್ನು ಉಳಿಸಿಕೊಂಡಿದೆ ಎಂದರು.
ತಂದೆ, ತಾಯಿ ಜನ್ಮ ನೀಡಿದರೆ ಗುರು ಅಕ್ಷರ ಕಲಿಸಿ ಜೀವನವನ್ನು ನಿರ್ವಹಿಸುವುದನ್ನು ಕಲಿಸಿ ಮೋಕ್ಷದ ದಾರಿಯನ್ನು ತೋರಿಸುವುದರಿಂದ ಗುರು ಸದಾ ಸ್ಮರಣೀಯರಾಗಿರುತ್ತಾರೆ. ಒಬ್ಬ ಶಿಷ್ಯ ಸಾಧನೆಯ ಶಿಖರ ಏರಬೇಕಾದರೆ ಗುರುವಿನ ಅನುಗ್ರಹ ಬೇಕಾಗುತ್ತದೆ. ಅದಕ್ಕೆ ಹೇಳುವರು ಗುರುವಿನ ಗುಲಾಮನಾಗುವ ತನಕ ದೊರೆಯದು ಮುಕುತಿ ಎನ್ನುವ ಮಾತು ಸಾರ್ವಕಾಲಿಕ ಸತ್ಯವಾಗಿದೆ ಎಂದರು.
ನಿವೃತ್ತ ಹಿರಿಯ ಶಿಕ್ಷಕ ಎ.ಎಲ್ ಶಿಂಧಿಹಟ್ಟಿ ಮಾತನಾಡಿ ’40 ವರ್ಷಗಳ ಹಿಂದೆ ಕಲಿತ ವಿದ್ಯಾರ್ಥಿಗಳು ನಿಮ್ಮ ಭವಿಷ್ಯವನ್ನು ರೂಪಿಸಿಕೊಂಡು ಗುರುಗಳನ್ನು ಗೌರವಿಸುವ ನಿಮ್ಮ ಕಾರ್ಯವು ಶ್ಲಾಘನೀಯವಾಗಿದೆ ಎಂದರು.
ನಿವೃತ್ತ ಶಿಕ್ಷಕರಾದ ವಿ.ಎಸ್. ಹಂಚಿನಾಳ, ಬಿ.ವೈ. ಶಿವಾಪುರ, ಅತಿಥಿ ಬಾಲಶೇಖರ ಬಂದಿ ಮಾತನಾಡಿದರು.
ನಿವೃತ್ತ ಶಿಕ್ಷಕರಾದ ಡಿ.ಎಂ. ಗಾಡವಿ, ಆರ್.ಟಿ. ಲಂಕೆಪ್ಪನ್ನವರ, ಎಂ.ಐ. ಶೆಟ್ಟರ, ಸಿ.ಐ. ಶೆಟ್ಟರ ವೇದಿಕೆಯಲ್ಲಿದ್ದರು.
ಸಮಾರಂಭದ ಪ್ರಾರಂಭದಲ್ಲಿ 40 ವರ್ಷಗಳ ಹಿಂದೆ ತಮಗೆ ಅಕ್ಷರ ವಿದ್ಯೆ ನೀಡಿದ ಗುರುಗಳಿಎ ಆರತಿ ಮಾಡಿ ತಿಲಕವಿಟ್ಟು ನಂತರ ಪುಷ್ಪವೃಷ್ಟಿ ಮಾಡುವ ಮೂಲಕ ವೇದಿಕೆಗೆ ಬರಮಾಡಿಕೊಂಡು ಅವರ ಪಾದಮುಟ್ಟಿ ನಮಸ್ಕರಿಸಿ ಗೌರವ ಅರ್ಪಿಸಿದರು. ಶಿಷ್ಯ ವೃಂದದವರೆಲ್ಲ ಸೇರಿ ಗುರುಗಳಿಗೆ ಸನ್ಮಾನವನ್ನು ನೆರವೇರಿಸಿ ಧನ್ಯತೆಯನ್ನು ಮೆರೆದರು.
ವಿದ್ಯಾರ್ಥಿಗಳ ಪರವಾಗಿ ಸುಭಾಸ ನಾಯಿಕ, ಯಾಕೂಬ ಸಣ್ಣಕ್ಕಿ, ರಮೇಶ ಬಂಗೆನ್ನವರ, ಸುರೇಖಾ ಬಸ್ತವಾಡ, ಅರ್ಜುನ ನಾಯಿಕವಾಡಿ, ಶ್ರೀರಂಗ ಇತಾಪೆ ಅವರು ತಮ್ಮ ವಿದ್ಯಾರ್ಥಿಗಳ ಅನುಭವ ಹಾಗೂ ಗುರುಗಳು ನೀಡಿದ ಮಾರ್ಗದರ್ಶನದ ಬಗ್ಗೆ ಹೃದಯಸ್ಪರ್ಶಿಯಾಗಿ ಮಾತನಾಡಿದರು.
ರಾಜೇಂದ್ರ ಜರಾಳೆ, ಚನ್ನಬಸು ಹಂಜಿ ಪ್ರಾಸ್ತಾವಿಕ ಮಾತನಾಡಿದರು. ಮೋಹನ ಪತ್ತಾರ, ಬಸವರಾಜ ರಂಗಾಪುರ, ಪ್ರದೀಪ ಲಂಕೆಪ್ಪನವರ, ಪ್ರಕಾಶ ನಿಡಗುಂದಿ, ಮಲ್ಲಪ್ಪ ಮುರಗೋಡ, ಮಹಾದೇವ ಜೋಲಾಪುರೆ, ಮಹಾದೇವಿ ಹಿರೇಮಠ, ದಾನಮ್ಮ ಹಲಸಿ, ಸುವರ್ಣ ಅಂಗಡಿ, ಶಿವಲೀಲಾ ಕೊಟಗಿ, ಸೇವಂತಿ ಮೆಳವಂಕಿ, ಅಲ್ತಾಫ ಹವಾಲ್ದಾರ ಸೇರಿದಂತೆ ಒಟ್ಟು 78 ಹಳೆಯ ವಿದ್ಯಾರ್ಥಿಗಳ ಸಂಗಮವಾಗಿತ್ತು.
ಲಲಿತಾ ಪತ್ತಾರ, ಸುರೇಖಾ ಬಸ್ತವಾಡ ಪ್ರಾರ್ಥಿಸಿದರು. ಗಂಗಾಧರ ಬಿಜಗುಪ್ಪಿ ನಿರೂಪಿಸಿದರು, ಯಲಗೌಡ ಪಾಟೀಲ ವಂದಿಸಿದರು.