ಸಿಂದಗಿ: ಬಿ.ಇಡಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿರುವ ಯುವಜನಾಂಗ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಬೇಕಾದರೆ ಅಗತ್ಯ ತಯಾರಿ ಮಾಡಿಕೊಳ್ಳಬೇಕು ಎಂದು ವಿಜಯಪುರದ ಚಾಣಕ್ಯ ಕರಿಯರ್ ಅಕಾಡಮಿಯ ಸಂಸ್ಥಾಪಕ ಎನ್.ಎಮ್.ಬಿರಾದಾರ ಹೇಳಿದರು.
ಅವರು ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿರುವ ವಿಜಯಪುರದ ಚಾಣಕ್ಯ ಕರಿಯರ್ ಅಕಾಡಮಿ ಹಾಗೂ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ಘಟಕ, ಪ್ಲೇಸ್ ಮೆಂಟ್ ಘಟಕಗಳ ಅಡಿಯಲ್ಲಿ 4 ದಿನಗಳ ಟಿ.ಇ.ಟಿ ಹಾಗೂ ಸಿ.ಇ.ಟಿ ಕಾರ್ಯಗಾರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅಗತ್ಯ ತಯಾರಿ ಮುಖ್ಯ ಆ ನಿಟ್ಟಿನಲ್ಲಿ ಮಾಹಿತಿ ಸಂಗ್ರಹಿಸಿಕೊಳ್ಳುವುದು, ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಅಧ್ಯಯನ ಮಾಡುವುದು ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳುವುದು, ವಿಜ್ಞಾನ, ಇಂಗ್ಲೀಷ್, ಗಣಿತ ಸೇರಿದಂತೆ ಎಲ್ಲ ವಿಷಯಗಳನ್ನು ಹಿಡಿತವಿದ್ದಲ್ಲಿ ಯಶಸ್ಸು ಸಾಧಿಸಬಹುದು. ಆತ್ಮ ವಿಶ್ವಾಸ, ಶ್ರದ್ದೆ ಮತ್ತು ಆಸಕ್ತಿಗಳೆ ನಮ್ಮ ಸಾಧನೆಗೆ ಪ್ರೇರಣೆಯ ಅಂಶಗಳು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಸಾಹಿತಿ ಹ.ಮ.ಪೂಜಾರಿ ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರವಾಗಿದೆ. ಮಕ್ಕಳೊಂದಿಗೆ ಮಕ್ಕಳಾಗಿ ಆಸಕ್ತಿಯಿಂದ ಓದಿಸುವಲ್ಲಿ ಸಿಗುವ ಸಂತೋಷ ಬೇರೆಲ್ಲಿಯು ಸಿಗುವದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಧೈರ್ಯವಾಗಿ ಎದುರಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶರಣಬಸವ ಜೋಗೂರ, ತರಬೇತಿದಾರ ಶ್ರೀಶೈಲ ಹಲಕಟ್ಟಿ, ವಿದ್ಯಾರ್ಥಿ ಕಲ್ಯಾಣ ಘಟಕದ ಮುಖ್ಯಸ್ಥದಾನಯ್ಯ ಮಠಪತಿ, ವಿದ್ಯಾರ್ಥಿ ಕಲ್ಯಾಣ ಘಟಕದ ಸುಧಾಕರ ಚವ್ಹಾಣ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಜೆ.ಸಿ.ನಂದಿಕೋಲ, ಡಾ.ಕವಿತಾ ರಾಠೋಡ, ಎನ್.ಬಿ.ಪೂಜಾರಿ, ವಿದ್ಯಾ ಮೋಗಲಿ, ಸಿ.ಜಿ. ಕತ್ತಿ, ಶಿವುಕುಮಾರ ಕತ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿ ಪ್ರದೀಪ ಹದರಿ ನಿರೂಪಿಸಿದರು, ಅಪ್ರೀತಾ ಕೋಟಿ ಪ್ರಾರ್ಥಿಸಿದರು, ಉಪನ್ಯಾಸಕ ದಾನಯ್ಯ ಮಠಪತಿ ಸ್ವಾಗತಿಸಿದರು, ಸುಮಿತ್ರಾ ಲಯದಗುಂದಿ ವಂದಿಸಿದರು.