ಬೀದರ – ಗೋವಿನಲ್ಲಿ ಎಲ್ಲಾ ದೇವತೆಗಳು ಇದ್ದಾರೆ ಎಂದು ೫ ಸಾವಿರ ವರ್ಷಗಳಿಂದಲೂ ಪೂಜಿಸಿಕೊಂಡು ಬಂದಿದ್ದೇವೆ ಸಿದ್ಧರಾಮಯ್ಯನವರ ಮನೆಯವರೇ ಗೃಹ ಪ್ರವೇಶ ಸಂದರ್ಭದಲ್ಲಿ ಗೋವನ್ನು ಪೂಜಿಸಿ ಒಳ ತಂದಿದ್ದಾರೆ ಅಂಥ ಗೋವಿನ ಮಾಂಸ ತಿನ್ನುವುದಾಗಿ ಹೇಳಿದ ಸಿದ್ಧರಾಮಯ್ಯನಂಥ ಕಟುಕ ಈ ಜಗತ್ತಿನಲ್ಲಿಯೇ ಯಾರೂ ಇಲ್ಲ ಎಂದು ಸಚಿವ ಆರ್. ಅಶೋಕ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಗೋ ಹತ್ಯೆ ಕಾಯಿದೆಯನ್ನು ರದ್ದು ಮಾಡುತ್ತೇನೆ ಹಾಗೂ ಬೀಫ್ ಮಾಂಸ ತಿನ್ನುತ್ತೇನೆ ಎಂದು ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಅವರು ಕಟುವಾಗಿ ಟೀಕಿಸಿದರು.
ಬೀದರನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವರು, ಗೋವಿನಲ್ಲಿ ದೇವರುಗಳು ನೆಲೆಸಿವೆ. ಒಳ್ಳೆಯದಾಗಲಿ ಎಂದು ಎಲ್ಲರೂ ಗೋವು ಪೂಜೆ ಮಾಡುತ್ತಾರೆ. ಅದನ್ನೇ ನಾನು ತಿಂತೀನಿ ಎಂದ್ರೆ ಅವರಿಗಿಂತ ಈ ಪ್ರಪಂಚದಲ್ಲಿ ಕಟುಕರು ಯಾರು ಇಲ್ಲ ಎಂದರು.
ಹಿಂದೂಗಳ ಭಾವನೆಗಳನ್ನು ಕೆರಳಿಸಲು ಹಾಗೂ ಮುಸ್ಲಿಂ ಮತಗಳ ಓಲೈಕೆಗಾಗಿ ಸಿದ್ಧರಾಮಯ್ಯ ಹೀಗೆ ಮಾಡುತ್ತಿದ್ದಾರೆ. ಇದು ನಿಮಗೂ ಒಳ್ಳೆಯದಲ್ಲ ಹಾಗೂ ಸಮಾಜಕ್ಕೂ ಒಳ್ಳೆಯದಲ್ಲ ಎಂದರು.
ಇದೇ ಸಂದರ್ಭದಲ್ಲಿ ಹಾಜರಿದ್ದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಮಾತನಾಡಿ, ಸಿದ್ಧರಾಮಯ್ಯಗೆ ತಾಕತ್ತಿದ್ದರೆ ಈಗಲೇ ನಮ್ಮ ಮುಂದೆ ಗೋ ಮಾಂಸ ತಿಂದು ತೋರಿಸಲಿ ಎಂದು ಸವಾಲೆಸೆದರು.
ಆರ್ ಎಸ್ ಎಸ್ ಮುಖಂಡ ಹೆಡಗೆವಾರ್ ಅವರ ಕುರಿತು ಮಲ್ಲಿಕಾರ್ಜುನ ಖರ್ಗೆ ಮಾತನಾಡಿರುವ ಕುರಿತು ಪ್ರಸ್ತಾಪಿಸಿದಾಗ, ಯಾರೇ ಆಗಲಿ ಒಬ್ಬ ವ್ಯಕ್ತಿಯ ಬಗ್ಗೆ ಪೂರ್ವಾಪರ ವಿಚಾರ ಮಾಡಿ ಮಾತನಾಡಬೇಕು. ಹಿಂದು ಮುಂದು ನೋಡದೆ ಮಾತನಾಡಿ ಅರೆಜ್ಞಾನ ತೋರಿಸಬಾರದು ಎಂದು ಆರ್.ಅಶೋಕ ಹೇಳಿದರು.
ವರದಿ: ನಂದಕುಮಾರ ಕರಂಜೆ, ಬೀದರ