ಹಳ್ಳೂರ : ಗೋದಾವರಿ ಸಕ್ಕರೆ ಕಾರ್ಖಾನೆಯವರನ್ನೊಳಗೊಂಡಂತೆ ಬೆರಳೆಣಿಕೆಯಷ್ಟು ರಾಜಕೀಯೇತರ ಕಾರ್ಖಾನೆಗಳು ಮಾತ್ರ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಾ ಕಾರ್ಮಿಕರನ್ನು ಚೆನ್ನಾಗಿ ನೋಡಿಕೊಳ್ಳುವದು ಮಾತ್ರವಲ್ಲದೆ ರೈತರ ಕಾಳಜಿ ಕೂಡಾ ಮಾಡುತ್ತಾ ರಾಜ್ಯದಲ್ಲಿಯೇ ಗೋದಾವರಿ ಸಕ್ಕರೆ ಕಾರ್ಖಾನೆ ಮಾದರಿ ಕಾರ್ಖಾನೆಯಾಗಿ ಮುನ್ನಡೆಯುತ್ತಿದ್ದು ಸ್ವಾಗತಾರ್ಹ ಎಂದು ರಾಜ್ಯ ಸಕ್ಕರೆ ಕಾರ್ಮಿಕರ ಮಹಾಮಂಡಳ ಬೆಂಗಳೂರು ಇದರ ಅಧ್ಯಕ್ಷ ಬಿ.ನಾಗರಾಜ ಹೇಳಿದರು.
ಸಮೀರವಾಡಿ ಮಜದೂರ ಯುನಿಯನ್ ಕಚೇರಿ ಮುಂಭಾಗದಲ್ಲಿ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು ಆನೇಕ ಸಹಕಾರಿ ಕಾರ್ಖಾನೆಗಳು ಹಾಳಾಗಿದ್ದು ಆದರೆ ಅದರ ಅಧ್ಯಕ್ಷರಾಗಿದ್ದವರು ಮಾತ್ರ ಸ್ವತಃ ತಾವೆ 2-3 ಹೊಸ ಕಾರ್ಖಾನೆ ಪ್ರಾರಂಭಿಸಿದ್ದಾರೆ. ಅವರು ಮಾತ್ರ ಚೆನ್ನಾಗಿದ್ದಾರೆ. ಖಾಸಗಿ ಕಾರ್ಖಾನೆಯವರು ಚೆನ್ನಾಗಿ ನಡೆಸುತ್ತಿದ್ದಾರೆ. ರಾಜಕಾರಣಿಗಳು ಯಾವಾಗ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಿ ಸಕ್ಕರೆ ಉದ್ಯಮಕ್ಕೆ ಕಾಲಿಟ್ಟರೋ ಆವಾಗ ಸಕ್ಕರೆ ಕಾರ್ಖಾನೆಗಳ ಅಸ್ತಿತ್ವ ನಾಶವಾಗಿ ಹೋಯಿತು. ಕೇವಲ 5 ಸಾವಿರ ಟನ್ ಸಾಮರ್ಥ್ಯದ ಕಾರ್ಖಾನೆಗಳು ಇಂದು 25 ಸಾವಿರ ಟನ್ ಸಾಮರ್ಥ್ಯದ ಕಾರ್ಖಾನೆಗಳಾಗಿ ಬೆಳೆದಿವೆ. ಆದರೆ ಅಲ್ಲಿ ಕಾರ್ಮಿಕರಿಲ್ಲ ಅಂದರೆ ದುಡಿಯುವವರು ಇದ್ದಾರೆ ಆದರೆ ಅವರು ಕಾರ್ಮಿಕರಲ್ಲ, ಕಾರ್ಮಿಕರು ಅನ್ನಿಸಿಕೊಳ್ಳಬೇಕಾದರೆ ವೇಜ ಬೋರ್ಡನಿಂದ ಕವರೇಜ ಇರಬೇಕು. ಆದರೆ ಅಲ್ಲಿಯ ಕಾರ್ಮಿಕರಿಗೆ ವೇಜ ಬೋರ್ಡ ವಿಚಾರವೇ ಗೊತ್ತಿಲ್ಲ.ರಾಜ್ಯದಲ್ಲಿ ತಮಗೋಸ್ಕರ ಹೋರಾಟ ಮಾಡುವ ಕಮಿಟಿ ಇದೆ. ಅನೇಕ ಕಾರ್ಖಾನೆಗಳ ಕಾರ್ಮಿಕರು ಅದರ ಫಲ ಪಡೆಯುತ್ತಿದ್ದಾರೆ ಎಂಬುದೇ ಅಮಗೆ ತಿಳಿದಿಲ್ಲ. ವೇಜ ಬೋರ್ಡ ಕವರೇಜ ಇಲ್ಲದವರಿಗೆ ಜಾಬ ಸೆಕ್ಯುರಿಟಿ ಇರುವದಿಲ್ಲ. ಕಾನೂನಿನಲ್ಲಿ ಟ್ರೇನಿ ಅನ್ನುವ ಶಬ್ದಕ್ಕೆ ಅವಕಾಶ ಇಲ್ಲ. ಆದರೆ ಈಗ ಟ್ರೇನಿ ಅಂತಾ ತೆಗೆದುಕೊಂಡು ಅಲ್ಪ ಸಂಬಳ ನೀಡುವುದು ನಡೆದಿದೆ. ರಾಜಕಾರಣಿಗಳು ಪ್ರಾರಂಭಿಸಿದ ಕಾರ್ಖಾನೆಗಳಲ್ಲಿ ಅವರಿಗೆ ಇಷ್ಟ ಬಂದ ಹಾಗೆ ಸಂಬಳ ನೀಡುತ್ತಿದ್ದಾರೆ.ಇಂತಹ ಕಾರ್ಖಾನೆಗಳಲ್ಲಿ ಕಾರ್ಮಿಕರು ಜೀತದಾಳುಗಳಂತೆ ದುಡಿಯುತ್ತಿದ್ದಾರೆ.ಅವರ
ಶೋಷಣೆ ಮಾಡಲಾಗುತ್ತಿದೆ.ದಿ.ದೇವರಾಜ ಅರಸು ಅವರು ಜೀತ ಪದ್ದತಿ ತೆಗೆದುಹಾಕಿದ್ದರೂ ಅದು ಇನ್ನೂ ಸಂಪೂರ್ಣ ಕಡಿಮೆ ಆಗಿಲ್ಲ. ರಾಜ್ಯದ ಹಲವು ಭಾಗಗಳಲ್ಲಿ ಆಗುತ್ತಿರುವ ಕಾರ್ಮಿಕರ ಶೋಷಣೆ ಪ್ರಪಂಚದ ಯಾವ ಭಾಗದಲ್ಲಿ ಕೂಡಾ ಆಗುತ್ತಿಲ್ಲ. ಇದನ್ನು ತಡೆಯಲು ಕಾರ್ಖಾನೆಗಳನ್ನು ಬಂದ ಮಾಡಿ ಹೋರಾಟ ಮಾಡುವ ಅವಶ್ಯಕತೆಯಿದೆ ನೀವು ಹೋರಾಟಕ್ಕೆ ರೆಡಿ ಇದ್ದರೆ ನಿಮಗೆ ನ್ಯಾಯ ಕೊಡಿಸುವದು ನಮ್ಮ ಜವಾಬ್ದಾರಿ ಇದೆ ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ ಮತ್ತು ಕಾರ್ಖಾನೆಯ ಎಜಿಎಂ ಎಂ.ರಾಮಚಂದ್ರ ಮಾತನಾಡಿ, ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ಸಿಗುವ ಸೌಲಭ್ಯಗಳು ಬೇರೆ ಯಾವ ಕಾರ್ಖಾನೆಗಳು ನೀಡಲಿಕ್ಕಿಲ್ಲ. ವೇಜ ಬೋರ್ಡ ಅಳವಡಿಸಲಾಗಿದ್ದು ಇಎಸ್ಕೆ ಸೌಲಭ್ಯ ಇದೆ. ಅನೇಕ ಕಾರ್ಖಾನೆಗಳಲ್ಲಿ ಈ ಸೌಲಭ್ಯ ಇಲ್ಲ.ಸ್ವತಂತ್ರ ಪೂರ್ವದಲ್ಲಿ ಸ್ಥಾಪನೆಯಾದ ಈ ಕಾರ್ಖಾನೆ 7 ನೇ ವೇತನ ಆಯೋಗದ ಶಿಫಾರಸನ್ನು ಸಂಪೂರ್ಣ ಜಾರಿ ಮಾಡಿದ ಪ್ರಥಮ ಕಂಪನಿಯಾಗಿದೆ. ಇದು ಈ ಸಂಸ್ಥೆಯ ರೀತಿ-ನೀತಿಯಾಗಿದ್ದು ಸರ್ಕಾರದ ಗೈಡಲೈ ನಗಳನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತಿದೆ. ಕಳೆದ ಸೀಸನಲ್ಲಿ 24 ಲಕ್ಷ 68 ಸಾವಿರ ಟನ್ ಕಬ್ಬು ನುರಿಸಿದ ದೇಶದ ಏಕೈಕ ಕಾರ್ಖಾನೆಯಾಗಿದ್ದುರೈತರ, ಕಾರ್ಮಿಕ ರ, ಮಾಲಿಕರ ಅಭಿವೃದ್ಧಿ ಮಾತ್ರವಲ್ಲದೆ ದೇಶದ ಅಭಿವೃದ್ಧಿಯಲ್ಲಿ ತನ್ನದೆ ಕೊಡುಗೆ ನೀಡುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮೀರವಾಡಿ ಮಜದೂರ ಯುನಿಯನ್ ಕಾರ್ಯಾಧ್ಯಕ್ಷ ಬಿ.ವಿ.ಮೇಲಪ್ಪಗೋಳ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ಕಾರ್ಯದರ್ಶಿ ರಂಗನಗೌಡ ಪಾಟೀಲ,ಡಿಸ್ಟಿಲರಿ ವಿಭಾಗದ ಎಂಪ್ಲಾಯಿಜ್ ಯುನಿಯನ್ ಅಧ್ಯಕ್ಷ ಬಸವರಾಜ ಭದ್ರಶೆಟ್ಟಿ ಮಾತನಾಡಿದರು.
ಈ ಸಮಯದಲ್ಲಿ ವಿವಿಧ ಕಾರ್ಖಾನೆಗಳ ಗಣ್ಯರಾದ ಬಿ.ಎಲ್.ಕೃಷ್ಣಗೌಡ, ಅಸ್ಲಂ ಪೆಂಡಾರಿ,ಈರನಗೌಡ ಪಾಟೀಲ,ಬಸವರಾಜ ಒಂಟಗೋಡಿ ವೇದಿಕೆ ಮೇಲಿದ್ದರು. ಯುನಿಯನ್ ಕಾರ್ಯದರ್ಶಿ ಎಸ್.ಬಿ.ಬಿರಾದಾರ ಪಾಟೀಲ ನಿರೂಪಿಸಿದರು, ಪ್ರ.ಕಾರ್ಯದರ್ಶಿ ಎನ್.ಪಿ.ಮಾಳಿ, ಪದಾಧಿಕಾರಿಗಳಾದ ಎಸ್.ಬಿ.ಪಾಟೀಲ, ವಿ.ಎಸ್.ಕಮತೆ, ಸಿ.ಎಸ್ ಅಥಣಿ, ರವಿ ಕುರುಬರ, ಮನೋಹರ್ ಬಡಿದಾಳ ಸೇರಿದಂತೆ ಕಾರ್ಮಿಕರಿದ್ದರು.
ವರದಿ: ಮುರಿಗೆಪ್ಪ ಮಾಲಗಾರ.