ಶಿವ ಶಿವ ಎಂದರೆ ಭಯವಿಲ್ಲ. ಶಿವ ನಾಮಕೆ ಸಾಟಿ ಬೇರಿಲ್ಲ ಎಂಬ ಮಾತು ಯಾವತ್ತಿಗೂ ನಿತ್ಯಮಂತ್ರ. ಮಹಾಶಿವರಾತ್ರಿಯ ಈ ವೇಳೆ ಸ್ಯಾಂಡಲ್‍ವುಡ್‍ನಲ್ಲಿ ಪರಮೇಶ್ವರನ ಮಹಿಮೆ ಕುರಿತ ಸಿನಿಮಾಗಳ ಅವಲೋಕನವನ್ನು ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಇಲ್ಲಿ ಮಾಡಿದ್ದಾರೆ.
ತೆರೆಯ ಮೇಲೆ ಶಿವನ ಪಾತ್ರಧಾರಿ ಬಂದರೆ ಸಾಕು, ಪ್ರೇಕ್ಷಕರು ಎದ್ದು ನಿಂತು ಭಕ್ತಿಯಿಂದ ಕೈಮುಗಿಯುತ್ತಿದ್ದ ಕಾಲವೂ ಒಂದಿತ್ತು. ಜನರು ಪೌರಾಣಿಕ ಸಿನಿಮಾಗಳನ್ನು ನೋಡಿ ಪುಳಕಗೊಳ್ಳುತ್ತಿದ್ದ ರೀತಿಯದು.
ವಿಶೇಷವಾಗಿ ಪುರಾಣದ ಪ್ರಸಂಗಗಳಲ್ಲಿ ಶಿವ, ಕೈಲಾಸದ ಪ್ರಸ್ತಾಪವಾಗುವುದರಿಂದ ಶಿವನಿಗೆ ಹೆಚ್ಚಿನ ಮನ್ನಣೆ. ಬೇಡರ ಕಣ್ಣಪ್ಪ, ಭಕ್ತ ಸಿರಿಯಾಳ, ಭಕ್ತ ಮಾರ್ಕಂಡೇಯ, ಭಕ್ತ ಮಲ್ಲಿಕಾರ್ಜುನ, ಭೂ ಕೈಲಾಸ, ಗಿರಿಜಾ ಕಲ್ಯಾಣ, ಗಂಗೆ ಗೌರಿ, ಪಾರ್ವತಿ ಕಲ್ಯಾಣ, ಶಿವಕೊಟ್ಟ ಸೌಭಾಗ್ಯ, ಶ್ರೀ ಮಂಜುನಾಥ, ಶಿವ ಮೆಚ್ಚಿದ ಕಣ್ಣಪ್ಪ, ಸ್ವರ್ಣಗೌರಿ, ಬಾಲ ಶಿವ ಸೇರಿದಂತೆ ಶಿವನ ಕುರಿತಾದ ಹಲವಾರು ಪೌರಾಣಿಕ, ಸಾಮಾಜಿಕ, ಭಕ್ತಿ ಪ್ರಧಾನ ಚಿತ್ರಗಳು ತೆರೆಕಂಡಿವೆ.
ಜನಪ್ರಿಯ ಶಿವನ ಪಾತ್ರಧಾರಿಗಳು:
ದೊಡ್ಡ ಹಣೆ, ಗಿರಿಜಾ ಮೀಸೆ, ನೇರ ನಿಲುವು, ನಿಷ್ಕಲ್ಮಷ ಕಿರುನಗೆ-ಶಿವ ಪಾತ್ರಕ್ಕೆ ಭೂಷಣ. ಯಾವುದೇ ಪೌರಾಣಿಕ ಪಾತ್ರವನ್ನಾದರೂ ಸರಾಗವಾಗಿ ಆವರಿಸಿಕೊಳ್ಳುವ ಡಾ. ರಾಜ್ ಶಿವನ ಪಾತ್ರಧಾರಿಯಾಗಿ ಯಶಸ್ಸು ಕಂಡ ನಟ. ರಾಜ್ ಅವರ ಸಮಕಾಲೀನರಾದ ಕೆ.ಎಸ್. ಅಶ್ವತ್ಥ್ ನಟಿಸಿದ ಶಿವನ ಪಾತ್ರಗಳೂ ಕಣ್ಮುಂದೆ ಬರುತ್ತವೆ. ಡಾ. ರಾಜ್ ನಾಯಕನಾಗಿ ಪಾದಾರ್ಪಣೆ ಮಾಡಿದ ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ರಾಮಚಂದ್ರಶಾಸ್ತ್ರಿಗಳು ಶಿವನಾಗಿ ನಟಿಸಿದ್ದಾರೆ. ರಾಜ್ ಅವರದೇ ‘ಸ್ವರ್ಣಗೌರಿ’ ಚಿತ್ರದಲ್ಲಿ ತೆಲಗು ನಟ ಸತ್ಯನಾರಾಯಣ ಪರಶಿವನಾಗಿದ್ದರು.
ನಂತರದ ದಿನಗಳಲ್ಲಿ ಶ್ರೀನಿವಾಸಮೂರ್ತಿ (ಗುರುಶಿಷ್ಯರು, ನಂಜುಂಡೇಶ್ವರ ಮಹಿಮೆ, ಶಿವಲೀಲೆ), ಶ್ರೀಧರ್ (ಶಬರಿಮಲೆ ಸ್ವಾಮಿ ಅಯ್ಯಪ್ಪ, ಕೊಲ್ಲೂರು ಮೂಕಾಂಬಿಕಾ, ಬಾಲಶಿವ, ಮಹಾಸಾಧ್ವಿ) ಶಿವನಾಗಿ ಮಿಂಚಿದರು. ಭರತನಾಟ್ಯ ಕಲಾವಿದರೂ ಆದ ಶ್ರೀಧರ್ ಮತ್ತು ಡಾ. ಸಂಜಯ್, ಶಿವತಾಂಡವ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದರು. ‘ಪ್ರಚಂಡಕುಳ್ಳ’ ಚಿತ್ರದಲ್ಲಿ ವಿಷ್ಣುವರ್ಧನ್, ‘ಶ್ರೀ ಮಂಜುನಾಥ’ ಚಿತ್ರದಲ್ಲಿ ತೆಲಗು ನಟ ಚಿರಂಜೀವಿ, ಶಿವನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಿದೆ.
ಜನಪ್ರಿಯ ಶಿವಗೀತೆಗಳು:
ಶಿವಸ್ತುತಿ ಶಿವಭಕ್ತಿಗೀತೆಗಳು, ಶಿವರಾತ್ರಿ ಮಹಾತ್ಮೆಯ ನೂರಾರು ಧ್ವನಿಸುರಳಿಗಳು ಮಾರುಕಟ್ಟೆಯಲ್ಲಿವೆ. ಎಸ್. ಪಿ. ಬಾಲಸುಬ್ರಹ್ಮಣ್ಯಂ, ಬಿ.ಕೆ ಸುಮಿತ್ರ, ಕಸ್ತೂರಿ ಶಂಕರ್, ಡಾ.ರಾಜ್, ರಾಜೇಶ್ ಕೃಷ್ಣನ್ ಮತ್ತಿತರು ಶಿವಗೀತೆಗಳಿಗೆ ದನಿಯಾಗಿದ್ದಾರೆ. ಸಿನಿಮಾಗಳಲ್ಲಿ ಬಳಕೆಯಾಗಿರುವ ಹಲವಾರು ಗೀತೆಗಳು ಪ್ರತಿ ಶಿವರಾತ್ರಿಯಂದು ತಪ್ಪದೆ ಜನರ ಕಿವಿ ಮೇಲೆ ಬೀಳುತ್ತವೆ. ಶಿವಪ್ಪ ಕಾಯೋ ತಂದೆ… (ಬೇಡರ ಕಣ್ಣಪ್ಪ), ಶಿವ ಶಿವ ಎಂದರೆ ಭಯವಿಲ್ಲ… (ಭೂಮಿಗೆ ಬಂದ ಭಗವಂತ), ಏಕೋ ಈ ಕೋಪ ಶಂಕರಾ.. (ಭಕ್ತ ಸಿರಿಯಾಳ), ಶಿವನೊಲಿದರೆ… (ಚೆಲ್ಲಿದ ರಕ್ತ), ಏಳು ಶಿವ ಏಳು ಶಿವ.. (ಹಾಲುಂಡ ತವರು) ಸಿಮಾಗಳಲ್ಲಿ ಬಳಕೆಯಾಗಿರುವ ಕೆಲವು ಜನಪ್ರಿಯ ಶಿವಗೀತೆಗಳು.
ತಾರಾ ಶಿವರಾತ್ರಿ:
2011ರಲ್ಲಿ ಬೆಳಗಾವಿಯಲ್ಲಿ ತಾರಾ ಶಿವರಾತ್ರಿ ನಡೆದಿತ್ತು. ಸಂಗೀತ ಸಂಯೋಜಕ ಹಂಸಲೇಖ ನೇತೃತ್ವದಲ್ಲಿ ‘ಚಂದನವನ’ ಶೀರ್ಷಿಕೆಯಡಿ ನಡೆದ ಭವ್ಯ ಕಾರ್ಯಕ್ರಮವಿದು. ಕನ್ನಡ ಚಿತ್ರರಂಗದ ಬಹುತೇಕ ಎಲ್ಲ ಹಿರಿಕಿರಿಯರು ಕಲಾವಿದರು ರಾತ್ರಿಯಿಡೀ ಪ್ರೇಕ್ಷಕರನ್ನು ರಂಜಿಸಿದ್ದರು. ಗಡಿನಾಡಿನ ಬೆಳಗಾವಿ ನಮ್ಮದು ಎನ್ನುವ ಸಂದೇಶ ಸಾರಿದ್ದ ಕಾರ್ಯಕ್ರಮದಲ್ಲಿ ರಾಜಕೀಯ ಪ್ರಮುಖರು, ಕನ್ನಡ ಚಿತ್ರರಂಗದ ತಂತ್ರಜ್ಞರು ಕೂಡ ಭಾಗವಹಿಸಿದ್ದರು. ಸುಮಾರು ಐವತ್ತು ಸಾವಿರ ಜನರು ಈ ಅಭೂತಪೂರ್ವ ತಾರಾ ಶಿವರಾತ್ರಿಗೆ ಸಾಕ್ಷಿಯಾಗಿದ್ದರು.
ಬೆಳ್ಳಿತೆರೆಯ ಮೇಲೆ ಶಿವಲೀಲೆ ವೈಭವ:
ಮಹಾಶಿವರಾತ್ರಿಯಂದು ಜಾಗರಣೆ, ಉಪವಾಸ, ಧ್ಯಾನ ಸೇರಿದಂತೆ ಹಲವು ವಿಧಗಳಲ್ಲಿ ತಮ್ಮ ಭಕ್ತಿಯನ್ನು ಅರ್ಪಿಸಿ ಭಕ್ತರು ಸಂಭ್ರಮಿಸುವ ಕ್ಷಣವಿದು. ಬೆಳ್ಳಿತೆರೆಯಲ್ಲೂ ಈ ಶಿವನ ಮಹಿಮೆಯ ಆರಾಧನೆ ಇದ್ದೇ ಇದೆ. ಗಿರಿಜಾ ಕಲ್ಯಾಣ, ಸತಿ ಶಕ್ತಿ, ಭಕ್ತ ಮಾರ್ಕಂಡೇಯ, ಭಕ್ತ ಸಿರಿಯಾಳ ಸೇರಿದಂತೆ ಸಾಕಷ್ಟು ಸಿನಿಮಾಗಳು ಶಿವನ ಲೀಲೆಯನ್ನು ಪ್ರೇಕ್ಷಕರ ಮುಂದಿಟ್ಟಿವೆ.
ಶಿವಪಾರ್ವತಿ:
1950ರಲ್ಲಿ ತೆರೆ ಕಂಡ ಕಪ್ಪು ಬಿಳುಪಿನ ಸಿನಿಮಾ ಶಿವಪಾರ್ವತಿ. ಓ. ಜಾನಕಿರಾಮ್ ನಿರ್ದೇಶನದಲ್ಲಿ ಮೂಡಿಬಂದ ಚಿತ್ರದಲ್ಲಿ ಕೆಂಪರಾಜ್ ಅರಸ್, ಸುಮತಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಶಿವನ ಪತ್ನಿ ಪಾರ್ವತಿಯ ಜೀವನ ಕುರಿತಾದ ಸಿನಿಮಾ ಇದಾಗಿದ್ದರೂ, ಶಿವನ ಹಲವು ಪವಾಡಗಳು ಇಲ್ಲಿ ಕಾಣಸಿಗುತ್ತವೆ.
ಬೇಡರ ಕಣ್ಣಪ್ಪ:
ರಾಜ್‍ಕುಮಾರ್ ನಟನೆಯ ಅಪರೂಪದ ಚಿತ್ರ ಬೇಡರ ಕಣ್ಣಪ್ಪ 1954ರಲ್ಲಿ ತೆರೆ ಕಂಡ ಈ ಸಿನಿಮಾ, ಬಾಕ್ಸ್ ಆಫೀಸ್‍ನಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಎಚ್.ಎಲ್.ಎನ್. ಸಿಂಹ ನಿರ್ದೇಶನದಲ್ಲಿ ಮೂಡಿಬಂದ ಚಿತ್ರದಲ್ಲಿ ರಾಜ್‍ಕುಮಾರ್ ಬೇಡರ ಕಣ್ಣಪ್ಪನಾಗಿ ಕಾಣಿಸಿಕೊಂಡಿದ್ದಾರೆ. ಜಿ.ವಿ. ಅಯ್ಯರ್, ಪಂಢರಿಬಾಯಿ ಸೇರಿದಂತೆ ಹಲವು ಕಲಾವಿದರು ತಾರಾಗಣ ಈ ಚಿತ್ರಕ್ಕಿದೆ. ಶಿವಪ್ಪ ಕಾಯೋ ತಂದೆ, ಮೂರು ಲೋಕ ಸ್ವಾಮಿ ದೇವ ಹಾಡು ಫೇಮಸ್.
ಭಕ್ತ ಮಾರ್ಕಂಡೇಯ:
1956ರಲ್ಲಿ ತೆರೆಕಂಡ ಸಿನಿಮಾ ಭಕ್ತ ಮಾರ್ಕಂಡೇಯ. ಬಿ.ಎಸ್. ರಂಗಾ ನಿರ್ದೇಶನದಲ್ಲಿ ತಯಾರಾದ ಚಿತ್ರದಲ್ಲಿ ವಿ. ನಾಗಯ್ಯ, ನರಸಿಂಗರಾಜು, ಪುಷ್ಪವಲ್ಲಿ ಸೇರಿದಂತೆ ಹಲವು ಕಲಾವಿದರಿದ್ದಾರೆ. ಶಿವಭಕ್ತ ಮಾರ್ಕಂಡೇಯನ ಅಪರೂಪದ ಕತೆ ಇಲ್ಲಿದ್ದು, ಶಿವನಲ್ಲಿ ಶರಣಾಗಿರಯ್ಯ ಸೇರಿದಂತೆ ಶಿವನ ಕುರಿತಾಗಿಯೇ ಏಳಕ್ಕೂ ಹೆಚ್ಚು ಗೀತೆಗಳು ಈ ಸಿನಿಮಾದಲ್ಲಿವೆ.
ಶಿವಲಿಂಗ ಸಾಕ್ಷಿ:
ಚಂದ್ರಮೋಹನ್ ನಿರ್ದೇಶನದ ಶಿವಲಿಂಗ ಸಾಕ್ಷಿ ಚಿತ್ರವು 1960ರಲ್ಲಿ ತೆರೆ ಕಂಡಿತ್ತು. ಕೈಲಾದ ರುದ್ರಕನ್ಯೆ ಮತ್ತು ಅವಳ ಪ್ರಿಯಕರ ಶಿವನ ಶಾಪದಿಂದಾಗಿ ಭೂಲೋಕದಲ್ಲಿ ಜನಿಸುತ್ತಾರೆ. ಕಲಾಂತರದಲ್ಲಿ ಇವರ ವಿವಾಹಕ್ಕೆ ಅನೇಕ ಅಡೆತಡೆಗಳು ಎದುರಾಗುತ್ತವೆ. ಇದನ್ನು ಬಗೆಹರಿಸಲು ಸ್ವತಃ ಶಿವ ಭೂಲೋಕಕ್ಕೆ ಬರಬೇಕಾಗುತ್ತದೆ ಅನ್ನುವುದು ಸಿನಿಮಾದ ಕತೆ. ಉದಯಕುಮಾರ್, ಪ್ರತಿಮಾದೇವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಪಿ.ಆರ್. ಕೌಂಡಿನ್ಯ ನಿರ್ದೇಶನದ ‘ಶಿವರಾತ್ರಿ ಮಹಾತ್ಮೆ’ ಈ ಯಾದಿಯಲ್ಲಿ ಪ್ರಮುಖ ಚಿತ್ರ. ಶಿವಭಕ್ತಿ ರಾವಣನ ಕಥೆಯಿದ್ದ ‘ಪ್ರಚಂಡ ರಾವಣ’ ಹೆಚ್ಚು ಸದ್ದು ಮಾಡಲಿಲ್ಲ. ತೊಂಬತ್ತರ ದಶಕದ ನಂತರ ಪೌರಾಣಿಕ ಚಿತ್ರಗಳು ಕಡಿಮೆಯಾಗುತ್ತಿದ್ದರೆ ಶಿವಪಾತ್ರಗಳೂ ಕಣ್ಮರೆಯದವು. ಈಗ ಹಿಂದಿ ಸೇರಿದಂತೆ ಪ್ರಾದೇಶಿಕ ಭಾಷೆಗಳ ಕಿರುತೆರೆಯ ಪೌರಾಣಿಕ ಸರಣಿಗಳಲ್ಲಿ ಕೂಡ ಶಿವನ ಪಾತ್ರಗಳನ್ನು ನೋಡಬಹುದಾಗಿದೆ.
ಡಾ.ಗುರುರಾಜ ಪೋಶೆಟ್ಟಿಹಳ್ಳಿ