spot_img
spot_img

ಬಿಜೆಪಿ ವಿರುದ್ಧ ಕಾಣದ ಕೈಗಳ ಕೈವಾಡ; ಬೆಳಗಾವಿಯಲ್ಲಿ ಪಕ್ಷ ಮುಗಿಸಲು ಸಂಚು ನಡೆದಿದೆಯೇ?

Must Read

- Advertisement -

ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಮುಗಿಸಲು ಹಿತ ಶತ್ರುಗಳ ಕೈವಾಡ ಕೆಲಸ ಮಾಡುತ್ತಿದೆಯೆಂಬ ಶಂಕೆ ಉದ್ಭವವಾಗಿದೆ. ಕಳೆದ ಕೆಲವು ದಿನಗಳಲ್ಲಿ ಜಿಲ್ಲೆಯ ಬಿಜೆಪಿಯಲ್ಲಿ ನಡೆದ ಬೆಳವಣಿಗೆಗಳನ್ನು ನೋಡಿದಾಗ ಈ ರೀತಿ ಸಂದೇಹ ವ್ಯಕ್ತವಾಗುತ್ತಿದ್ದು ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳ ಆಯ್ಕೆ ಮಾಡುವಲ್ಲಿ ಸಂಪೂರ್ಣ ಎಡವಿದೆ ಎಂಬ ಅಭಿಪ್ರಾಯಗಳು ಎಲ್ಲೆಡೆಯಿಂದ ವ್ಯಕ್ತವಾಗುತ್ತಿವೆ.

ತಣ್ಣಗೆ ಇದ್ದ ಜಿಲ್ಲಾ ಬಿಜೆಪಿ ಎಂಬ ಜೇನುಗೂಡಿಗೆ ಮೊದಲು ಕೈ ಹಾಕಿದ್ದು ಬೆಳಗಾವಿಯಲ್ಲಿ ನಡೆದ ಪಕ್ಷದ ಹಿರಿಯರ ಸಭೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ನಡುವಿನ ವಾಗ್ವಾದ.

ಹಾಗೆ ನೋಡಿದರೆ ರಮೇಶ ಜಾರಕಿಹೊಳಿಯವರು ಮೊದಲಿನಿಂದಲೂ ತಮ್ಮ ಕ್ಷೇತ್ರವಷ್ಟೆ ಅಲ್ಲದೆ ಪಕ್ಕದ ಕ್ಷೇತ್ರಗಳ ಮೇಲೂ ಹಿಡಿತ ಸಾಧಿಸಬೇಕೆಂಬ ಹಠ ಹೊಂದಿರುವವರು. ಬೇರೆ ಕ್ಷೇತ್ರಗಳಲ್ಲಿಯೂ ತಮ್ಮ ಮಾತನ್ನು ಪಾಲಿಸುವಂಥ ನಾಯಕರನ್ನು ಬೆಳೆಸಿ, ಅವರಿಗೆ ಅಧಿಕಾರ ಸಿಗುವಂತೆ ಮಾಡಿ ತಮ್ಮ ಮುಂದಿನ ರಾಜಕೀಯ ಪ್ರತಿಯೊಂದೂ ನಡೆಗಳಿಗೆ ಅವರ ಬೆಂಬಲ ಸಿಗುವಂತೆ ಇಟ್ಟುಕೊಂಡಿರುವವರು.

- Advertisement -

ಇದನ್ನೇ ಈರಣ್ಣ ಕಡಾಡಿಯವರು ಬೆಳಗಾವಿಯ ಸಭೆಯಲ್ಲಿ ಮುಖಂಡರ ಎದುರು ಪ್ರಸ್ತಾಪಿಸಿ, ರಮೇಶ ಜಾರಕಿಹೊಳಿ ಬೇರೆಯವರ ಕ್ಷೇತ್ರದಲ್ಲಿ ಕೈಯಾಡಿಸದಂತೆ ನೋಡಬೇಕು ಎಂದರು. ಅಲ್ಲದೆ ಬಾಲಚಂದ್ರ ಜಾರಕಿಹೊಳಿಯವರನ್ನು ಯಮಕನಮರಡಿ ಕ್ಷೇತ್ರಕ್ಕೆ ಕಳಿಸಬೇಕು ಎಂದೂ ಹೇಳಿದರೆಂದು ವರದಿ.

ಇದರಿಂದ ಕೆರಳಿದ ರಮೇಶ ಜಾರಕಿಹೊಳಿ ಹಾಗೂ ಈರಣ್ಣ ಕಡಾಡಿಯವರ ಮಧ್ಯೆ ಮಾತಿನ ಚಕಮಕಿ ನಡೆಯಿತೆಂಬುದನ್ನು ಈಗಾಗಲೇ ಕೇಳಿದ್ದೇವೆ. ಬೆಳಗಾವಿ ಜಿಲ್ಲೆಯ ಬಿಜೆಪಿ ಟಿಕೆಟ್ ಗಳನ್ನು ತಾವು ಹೇಳುವ ಕೆಲವು ಅಭ್ಯರ್ಥಿಗಳಿಗೇ ನೀಡಬೇಕೆಂದು ರಮೇಶ ಅವರು ಹಠ ಹಿಡಿದಿದ್ದು ಉಳಿದ ನಾಯಕರನ್ನು ಕೆರಳಿಸಿದೆ ಎನ್ನಲಾಗಿದೆ ಅದರಲ್ಲೂ ಯಡಿಯೂರಪ್ಪ, ಪ್ರಹ್ಲಾದ ಜೋಶಿಯಂಥವರೂ ರಮೇಶ ಅವರ ಹಠಕ್ಕೆ ಮಣಿದಿದ್ದು ಜಿಲ್ಲಾ ಬಿಜೆಪಿ ನಾಯಕರಲ್ಲಿ ಅಸಮಾಧಾನಕ್ಕೆ ಇನ್ನಷ್ಟು ತುಪ್ಪ ಸುರಿದಿದೆ. 

ಈಗ ಇನ್ನೂ ಹೆಚ್ಚಿನ ಬೆಂಕಿ ಹೊತ್ತಿಕೊಂಡಿದ್ದು ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಬಂದ ಕುಮಟಳ್ಳಿಯವರಿಗೆ ಟಿಕೆಟ್ ನೀಡಿ, ಮೂಲ ಬಿಜೆಪಿಗರಾದ ಲಕ್ಷ್ಮಣ ಸವದಿಯವರನ್ನು ಸೈಡಿಗೆ ಸರಿಸಿದ್ದರಿಂದ ಅಥಣಿಯ ಬಿಜೆಪಿ ಕಾರ್ಯಕರ್ತರು ಕುದಿಯುವಂತೆ ಮಾಡಿದೆ. ಅದೂ ಕಾಂಗ್ರೆಸ್ ನಿಂದ ಬಂದ ರಮೇಶ ಜಾರಕಿಹೊಳಿಯವರ ಮಾತು ಕೇಳಿ ಕಾಂಗ್ರೆಸ್ ವಲಸಿಗರಿಗೆ ಬಿಜೆಪಿ ಟಿಕೆಟ್ ನೀಡಿದ್ದು ಜಿಲ್ಲೆಯಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ಕೊಡಬಹುದು ಎಂಬ ಮಾತು ಜೋರಾಗಿ ಕೇಳಿಬರುತ್ತಿದೆ.

- Advertisement -

ತಮ್ಮ ಪಕ್ಷಕ್ಕೆ ಬಂದವರಿಗೆ ಸ್ಥಾನಮಾನ ನೀಡಬೇಕು ಎಂಬ ಉದ್ದೇಶದಿಂದ ವಲಸಿಗರಿಗೆ ಟಿಕೆಟ್ ನೀಡುವುದೇನೋ ಸರಿ ಆದರೆ ಮೂಲ ಬಿಜೆಪಿಗರನ್ನು ಕಡೆಗಣಿಸುವುದು ಎಷ್ಟು ಸರಿ ಎಂದು ಅಸಮಾಧಾನಿತ ಬಿಜೆಪಿಗರು ಕೇಳುತ್ತಿದ್ದಾರೆ.

ಈಗ ಸವದಿಯವರು ಕಾಂಗ್ರೆಸ್ ಸೇರುವುದಾಗಿ ಹೇಳುತ್ತಿದ್ದಾರೆ. ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತ ಕೆಲವು ಶರತ್ತುಗಳೊಂದಿಗೆ  ರವಿವಾರ ಪಕ್ಷ ಸೇರುವುದಾಗಿ ಹೇಳಿದ್ದಾರೆ. ಈ ಮಧ್ಯೆ ಕುಮಾರಸ್ವಾಮಿಯವರು ಕೂಡ ಲಕ್ಷ್ಮಣ ಸವದಿಯವರನ್ನು ಸಂಪರ್ಕಿಸಿದ್ದರು ಎಂಬ ಸಂಗತಿಯೂ ಹರಿದಾಡುತ್ತಿದೆ. 

ಇದೇ ರೀತಿ ಶಶಿಕಾಂತ ನಾಯಕ, ಅನಿಲ ಬೆನಕೆ… ಮುಂತಾದವರು ಪಕ್ಷದ ವಿರುದ್ಧ ಬಂಡಾಯವೆದ್ದಿದ್ದರೆ, ಈರಣ್ಣ ಕಡಾಡಿಯವರ ಮೌನ ಎಲ್ಲರಿಗೂ ಅರ್ಥವಾಗುತ್ತದೆ. 

ಬೆಳಗಾವಿ ಜಿಲ್ಲೆಯ ಬಿಜೆಪಿ ಅತಂತ್ರ ಸ್ಥಿತಿ ಅನುಭವಿಸಲಿದೆಯೆಂದು ಕರಾರುವಾಕ್ಕಾಗಿ ಹೇಳಬಹುದು.  ಇದೇನೇ ಆಗಲಿ ಈ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಎಡವಿತು ಎಂದೇ ಹೇಳಬಹುದು.

ಮೊದಲೇ ಆಡಳಿತ ವಿರೋಧಿ ಅಲೆಯಿಂದ ತತ್ತರಿಸಿದ್ದ ಭಾರತೀಯ ಜನತಾ ಪಕ್ಷ ಡ್ಯಾಮೇಜ್ ಕಂಟ್ರೋಲ್ ಮಾಡುವ ಪ್ರಯತ್ನ ಮಾಡಬೇಕಿತ್ತು. ಅದನ್ನು ಬಿಟ್ಟು ಗುಜರಾತ್ ಮಾದರಿ ಎಂಬ ಕರ್ನಾಟಕದಲ್ಲಿ ನಡೆಯದ ನಾಣ್ಯಕ್ಕೆ ಕೈ ಹಾಕಿತು. 

ಇದಕ್ಕೆಲ್ಲ ಯಾರು ಕಾರಣ ? ಹಲವು ತಿಂಗಳುಗಳಿಂದ ಬಿಜೆಪಿಗೆ ವಿರುದ್ಧವಾಗಿ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದೆನಿಸುತ್ತದೆ. ಅದರಲ್ಲೂ ಬೆಳಗಾವಿ ಬಿಜೆಪಿಯಲ್ಲಿ ಯಾವುದೂ ಸರಿಯಿಲ್ಲ. ಬೆಳಗಾವಿಯ ಸಭೆಯಲ್ಲಿ ರಮೇಶ ಜಾರಕಿಹೊಳಿಯವರ ದರ್ಪ ನೋಡಿದ ಬಿಜೆಪಿ ನಾಯಕರು ಒಳಗೊಳಗೇ ಕೊತ ಕೊತ ಕುದಿಯುತ್ತಿರುವುದಂತೂ ಖಚಿತ. ಟಿಕೆಟ್ ತಪ್ಪಿಸಿಕೊಂಡ ಸವದಿಯವರು, ‘ ನಾನೇನು ಭ್ರಷ್ಟಾಚಾರ ಮಾಡಿದ್ನಾ, ಯಾರನ್ನಾದ್ರೂ ರೇಪ್ ಮಾಡಿದ್ನಾ ….’ಎಂದು ಕೇಳಬೇಕಾದರೆ ಯಾರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ ಎಂಬುದು ಅವರವರ ವಿವೇಚನೆಗೆ ಬಿಟ್ಟಿದ್ದು. ಇದನ್ನೇ ಅವರು ಬೆಳಗಾವಿಯ ಸಭೆಯಲ್ಲಿ ಯಡಿಯೂರಪ್ಪ, ಜೋಶಿಯವರ ಎದುರು ಕೇಳಿದ್ದರೆ ಅಥವಾ ರಮೇಶ ಜಾರಕಿಹೊಳಿ ವಿರುದ್ಧ ಗಟ್ಟಿಯಾದ ದನಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರೆ ಈ ಎಲ್ಲ ಬೆಳವಣಿಗೆ ಯಾವ ದಿಕ್ಕು ಪಡೆಯುತ್ತಿತ್ತು ಎಂಬುದು ಕೂಡಾ ಊಹಾತೀತ. ಆದರೆ ಬೆಳಗಾವಿ ಬಿಜೆಪಿಗೆ ಒಂದು ಉಪಕಾರವಾದರೂ ಆಗುತ್ತಿತ್ತು. ಯಾಕೆಂದರೆ ರಮೇಶ ಜಾರಕಿಹೊಳಿಯವರ ಹಿಂದಿನ ನಡೆಗಳನ್ನು ಗಮನಿಸಿದರೆ ಈ ಸಲ ಬಿಜೆಪಿ ಸಂಪೂರ್ಣ ಬಹುಮತ ಪಡೆದರೂ ( ಶೇ.೯೫ ರಷ್ಟು ಅದು ಆಗುವುದಿಲ್ಲ ಎಂಬ ಸಮೀಕ್ಷೆ ಇದೆ ) ಸರ್ಕಾರ ನೆಮ್ಮದಿಯ ನಿದ್ದೆ ಮಾಡಲು ಅವರು ಬಿಡುವುದಿಲ್ಲ ಎಂಬುದನ್ನು ಹೈಕಮಾಂಡ್ ಗಮನದಲ್ಲಿ ಇಟ್ಟುಕೊಳ್ಳಬೇಕಾಗಿದೆ.


ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಅಭಿವೃದ್ಧಿಯ ಪಯಣದಲ್ಲಿ ಕೆಲವು ಕ್ಷಣ ಅಮರವಾಗುತ್ತವೆ- ನರೇಂದ್ರ ಮೋದಿ

ಹೊಸದಿಲ್ಲಿ: ರಾಷ್ಟ್ರದ ಅಭಿವೃದ್ಧಿಯ ಪ್ರಯಾಣದಲ್ಲಿ ಕೆಲವು ಕ್ಷಣಗಳು ಅಮರವಾಗುತ್ತವೆ ಇಂದು ಅಂತಹ ದಿನವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಭಾನುವಾರದಂದು ವಿವಿಧ ಹೋಮ ಹವನ ನೆರವೇರಿಸಿ ನೂತನ...
- Advertisement -

More Articles Like This

- Advertisement -
close
error: Content is protected !!
Join WhatsApp Group