ಬಾಗಲಕೋಟೆ – ಒಂದು ತುಳಸಿಯಿಂದ ಹಾಗೂ ಸ್ವಲ್ಪ ಗಂಗಾಜಲದಿಂದ ಪೂಜೆ ಮಾಡಿದರೂ ವಿಷ್ಣು ಪ್ರಸನ್ನನಾಗುತ್ತಾನೆ ಅವರನ್ನು ತನ್ನಂತೆ ಮಾಡಿಕೊಳ್ಳುತ್ತಾನೆ. ಆತನು ಭಕ್ತವತ್ಸಲನಾಗಿದ್ದಾನೆ ಭಕ್ತರ ಮೇಲೆ ಅಪಾರ ಪ್ರೀತಿಯುಳ್ಳವನಾಗಿದ್ದಾನೆ ಎಂದು ಶ್ರೀ ಅವಧೂತ ಚಂದ್ರ ದಾಸರು ಹೇಳಿದರು.
ಅವರು ಬಾಗಲಕೋಟೆಯ ವಿನಾಯಕ ನಗರದ ದಿಲೀಪಕುಮಾರ ಜಡರಾಮಕುಂಟೆಯವರ ನಿವಾಸದಲ್ಲಿ ಕೃಷ್ಣ ಭಕ್ತರ ವತಿಯಿಂದ ನಡೆದ ಗೌರ ಪೂರ್ಣಿಮಾ ಪ್ರಯುಕ್ತ ಶ್ರೀ ಕೃಷ್ಣನಿಗೆ ಕೀರ್ತನೆ ಅಭಿಷೇಕ ಆರತಿ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ನಮ್ಮ ಮನಃಪೂರ್ವಕವಾಗಿ ಕೃಷ್ಣಾ ಎಂದು ಕರೆದಾಗ ಓಡಿ ಬಂದು ಭಕ್ತರನ್ನು ರಕ್ಷಿಸುತ್ತಾನೆ. ಅವನನ್ನು ನಾವು ಹೃದಯದಿಂದ ಕೂಗಿದಾಗ ನಮ್ಮ ಕೂಗು ಆತನಿಗೆ ಕೇಳುತ್ತದೆ.
ಹೆಣ್ಣುಮಗಳೊಬ್ಬಳು ಕೃಷ್ಣನಿಗೆ ಪ್ರಸಾದ ಕೊಡುವ ಸಂಭ್ರಮದಲ್ಲಿ ಆನಂದದಿಂದ ಬಾಳೆಹಣ್ಣು ಕೊಡುವಾಗ ತಪ್ಪಿ ಕೇವಲ ಸಿಪ್ಪೆ ಮಾತ್ರ ಕೊಟ್ಟಿದ್ದಳು ಆದರೂ ಕೃಷ್ಣ ಅದನ್ನು ಕೂಡ ಸ್ವೀಕರಿಸಿ ಆಶೀರ್ವಾದ ಮಾಡಿದ್ದ ಯಾಕೆಂದರೆ ಕೃಷ್ಣ ಭಕ್ತಿಯನ್ನು ಮಾತ್ರ ನೋಡುತ್ತಾನೆ.ಪ್ರಾಮಾಣಿಕತೆಯನ್ನು ನೋಡುತ್ತಾನೆ ಎಂದರು.
ಸಮುದ್ರದಲ್ಲಿ ನಮಗೆ ಮುತ್ತು ರತ್ನ ಸಿಗಬೇಕಾದರೆ ಬರೀ ಮೇಲಷ್ಟೇ ಹುಡುಕಿದರೆ ಸಾಲದು ಆಳದಲ್ಲಿ ಹುಡುಕಬೇಕು ಎಂದು ಅವರು ಪ್ತವಚನದಲ್ಲಿ ಹೇಳಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ ನಾಡಗೌಡ ಮಾತನಾಡಿ, ಮಹಾಭಾರತ ಯುದ್ಧದಲ್ಲಿ ಅರ್ಜುನನು ಧರ್ಮ ಸಂಕಟಕ್ಕೆ ಸಿಲುಕಿದಾಗ ಶ್ರೀ ಕೃಷ್ಣನು ಅರ್ಜುನನಿಗೆ ಉಪದೇಶ ಮಾಡಿ ಧರ್ಮ ಕರ್ಮಗಳ ಬಗ್ಗೆ ಹೇಳಿ ಅಧರ್ಮಿಗಳನ್ನು ವಧೆ ಮಾಡಲು ತಿಳಿಸಿದನು. ಅದರ ಸಾರವೇ ಭಗವದ್ಗೀತೆ ಎಂದು ಹೇಳಿ, ಹಿಂದೂ ಧರ್ಮ ಎಂಬುದು ಬಹಳ ಪುರಾತನವಾದದ್ದು ಅನಂತರ ಎಲ್ಲ ಧರ್ಮಗಳು ಬಂದಿವೆ ಹಿಂದೂ ಧರ್ಮವೇ ಅತ್ಯಂತ ಶ್ರೇಷ್ಟವಾದದ್ದು ಎಂದರು.
ಬಾಗಲಕೋಟೆ ನಗರಸಭಾ ಸದಸ್ಯೆ ಶಿವಲೀಲಾ ಪಟ್ಟಣಶೆಟ್ಟಿ ಮಾತನಾಡಿ, ದೇಶದಲ್ಲಿ ಧರ್ಮಯುದ್ಧ ಈಗ ನಡೆದಿದೆ. ಹಿಂದೂ ಧರ್ಮದ ಶ್ರೇಷ್ಠ ಗ್ರಂಥವಾದ ಭಗವದ್ಗೀತೆಯನ್ನು ನಾವೆಲ್ಲ ಪೂಜಿಸಿ ಪಾರಾಯಣ ಮಾಡಬೇಕಾಗಿರುವುದು ಈಗ ಅತಿ ಅವಶ್ಯಕವಾಗಿದೆ ಎಂದರು.
ವೇದಿಕೆಯ ಮೇಲೆ ಅಮೃತ ಕೃಷ್ಣದಾಸ ಚಿಕ್ಕೋಡಿ, ತೀರ್ಥದಾಸರು ದಾವಣಗೆರೆ, ಸತ್ಯನಾರಾಯಣ ದಾಸರು , ಶಿವಪುತ್ರಪ್ಪ ಕಾಮಾ,
ಮಹೇಶ ವಡ್ಡರಕಲ್ಲ ಉಪಸ್ಥಿತರಿದ್ದರು.