spot_img
spot_img

ಹುಚ್ಚು ಮಂಗನ ಹಾವಳಿ!!

Must Read

2003- 2004 ರಲ್ಲಿ ರಬಕವಿಯಲ್ಲಿ ಹತ್ತರಿಂದ ಹದಿನೈದು ಕೆಂಪು ಮೋತಿಯ ಮಂಗಗಳು ಶಂಕರಲಿಂಗ ಸರ್ಕಲ್, ಮಾರ್ಕೆಟ್ ಓಣಿ, ಹರಿಮಂದಿರ ಲೇನ್, ಕೆಳಗಿನ ಕುಂಬಾರ ಓಣಿ ಇಷ್ಟು ತ್ರಿಜ್ಯ ಏರಿಯಾದಲ್ಲಿ ಮಾತ್ರ ಅವು ಸ್ವಚ್ಛಂದವಾಗಿ ಈ ಕುಂಬಿಯಿಂದ ಆ ಕುಂಬಿಗೆ , ಆ ಕುಂಬಿಯಿಂದ ಈ ಕುಂಬಿಯ ಕಡೆಗೆ ಜಿಗಿದಾಡುತ್ತ ಹಾಯಾಗಿಯೇ ಇದ್ದವು.

ಹೀಗೆಯೇ ಏಳೆಂಟು ತಿಂಗಳು ಕಳೆದವು. ಆ ಮಂಗಗಳ ಗುಂಪಿನಲ್ಲಿ ಒಂದು ಹೆಣ್ಣು ಮಂಗಕ್ಕೆ ಅದೇನಾಯಿತೋ ಏನೋ ! ಅದು ಇದ್ದಕ್ಕಿದ್ದಂತೆ ಗಿಡದ ಮೇಲಿನಿಂದ ಕೆಳಕ್ಕೆ ಜಿಗಿದು, ಗಂಡಸರು, ಹೆಂಗಸರು, ಚಿಕ್ಕ ಮಕ್ಕಳು ಹೀಗೆ ಯಾವುದೇ ಭೇದ- ಭಾವ ಮಾಡದೇ ಎಲ್ಲರನ್ನೂ ಕಚ್ಚಿ ,ಪರಚಿ ಗಾಯಗೊಳಿಸತೊಡಗಿತು.

ಜನರು ಆ ಹುಚ್ಚು ಮಂಗನ ದಾಳಿಯಿಂದ ಹೈರಾಣಾದರು. ಅದರಲ್ಲೂ ಆಗ 2004 ನೆಯ ಇಸವಿಯ ಮೇ ತಿಂಗಳು.

ಬಿಸಿಲಿನ ಅಸಹ್ಯ ತಾಪದಿಂದ ಮುಕ್ತಿ ಹೊಂದಲು ಜನರು ರಾತ್ರಿ ಹೊತ್ತು ಅಂಗಳದಲ್ಲಿ, ಮನೆಯ ಮಾಳಿಗೆಯ ಮೇಲೆ ಮಲಗಿಕೊಳ್ಳುತ್ತಿದ್ದರು.

ಆ ದಿನ ಬೆಳ್ಳಂಬೆಳಿಗ್ಗೆ ಸುರೇಶ ಕೋಪರ್ಡೆ ಅವರ ಹತ್ತು ವರ್ಷದ ಮಗನನ್ನು ಹುಚ್ಚು ಮಂಗವು ಕಚ್ಚಿ ಗಂಭೀರವಾಗಿ ಗಾಯಗೊಳಿಸಿತ್ತು.

ನಾನು ಜಮಖಂಡಿಯ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಈ ವಿಷಯ ತಂದೆ. ಅವರು ತಮ್ಮ ಸಿಬ್ಬಂದಿಯವರನ್ನು ಕಳಿಸಿ , ಮಂಗಗಳನ್ನು ಹಿಡಿಯಲು ಪ್ರಯತ್ನಿಸಿದರು. ಆದರೆ ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಅವರು ಮೀನು ಹಿಡಿಯುವ ಬಲೆ ಅವುಗಳ ಮೇಲೆ ಎಸೆದು ಹಿಡಿಯಲು ನೋಡಿದರು. ಅದರಿಂದ ಅವು ಬಲೆಯಲ್ಲಿ ಸಿಲುಕಲಿಲ್ಲ !

ನಾನು ಅವರಿಗೆ ಮೊದಲೇ ಹೇಳಿದ್ದೆ. ಬಲೆಯಲ್ಲಿ ಬೀಳಲು ಅವು ಮೀನುಗಳಲ್ಲ ಎಂದು. 1978 ರಲ್ಲಿ ರಬಕವಿಯಲ್ಲಿ ಹೀಗೆಯೇ ಕಪ್ಪು ಮೋತಿಯ ಮಂಗಗಳ ಹಾವಳಿ ಅತಿಯಾಗಿತ್ತು. ಆಗ ಮಿರಜ್ ಶಹರದಿಂದ ಇಸ್ಮಾಯಿಲ್ ಬಂದರವಾಲೆ ಎಂಬವರನ್ನು ಕರೆಸಿ ಆಗ ಆ ಎಲ್ಲ ಮಂಗಗಳನ್ನು ಹಿಡಿಸಿ ಅರಣ್ಯ ಪ್ರದೇಶದಲ್ಲಿ ಬಿಡಲಾಗಿತ್ತು. ಆಗ ರಬಕವಿ – ಬನಹಟ್ಟಿ ಪುರಸಭೆಯ ಮುಖ್ಯಾಧಿಕಾರಿಗಳಾಗಿ ಇಬ್ರಾಹಿಮ್ ಎಂಬವರು ಇದ್ದರು. ಪುರಸಭೆಯವರೆ ಆ ಮಂಗಗಳನ್ನು ಹಿಡಿದವನಿಗೆ ಬಿಲ್ಲು ಕೊಟ್ಟಿದ್ದರು. ಅದು ನನಗೆ ಗೊತ್ತಿತ್ತು. ಆಗಲೂ ನಾನು ಆ ಮಂಗಗಳ ಹಾವಳಿ ಬಗ್ಗೆ ಬಾಬುರೆಡ್ಡಿ ತುಂಗಳ ಅವರ ‘ ಕುರುಕ್ಷೇತ್ರ ‘ ಪತ್ರಿಕೆಯಲ್ಲಿ ವರದಿ ಮಾಡಿದ್ದೆ.

ಈಗಲೂ ಕೂಡ ನಾನು ಜಮಖಂಡಿಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಿರಜ್ ನಿಂದ ಬಂದರ್ವಾಲೆ ಎಂಬುವರನ್ನು ಕರೆಸುವಂತೆ ಹೇಳಿದೆ. ಆದರೆ ಅವರು ಅದೇಕೋ ಅಷ್ಟೊಂದು ಮನಸ್ಸಿನ ಮೇಲೆ ತೆಗೆದು ಕೊಂಡಂತೆ ಕಾಣಲಿಲ್ಲ. ಬದಲಾಗಿ ನೀವೇ ಯಾರನ್ನಾದರೂ ಕರೆಸಿಕೊಳ್ಳಿರಿ. ಅವರು ಮಂಗಗಳನ್ನು ಹಿಡಿದು ಆದ ಮೇಲೆ ಬಿಲ್ಲು ಮಂಜೂರು ಮಾಡುತ್ತೇವೆ ಅಂದರು.

ನಾನು ಈ ಅರಣ್ಯ ಇಲಾಖೆಯವರ ಬೆನ್ನು ಹತ್ತಿದರೆ , ತಮ್ಮದೂ ಅರಣ್ಯರೋದನ ವಾಗುತ್ತದೆಂದು ಮನಗಂಡು, ಅವರ ಗೊಡವೆ ಬಿಟ್ಟೆ.

ರಬಕವಿ – ಬನಹಟ್ಟಿ ನಗರಸಭೆಯ ಪೌರಾಯುಕ್ತರಾಗಿ ಶ್ರೀ. ಬೆಳ್ಳಿಕಟ್ಟಿ ಎಂಬವರು ಇದ್ದರು. ನಾನು ಅವರನ್ನು ಭೆಟ್ಟಿಯಾಗಿ ರಬಕವಿ ನಗರದಲ್ಲಿ ಕಪಿಚೇಷ್ಟೆಯಿಂದಾಗಿ ಜನರು ಪಡುತ್ತಿರುವ ಯಾತನೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದೆ. ಅವರು ನನಗೆ ಮಾತು ಕೊಟ್ಟರು. ಅತ್ತ ಮಂಗಗಳನ್ನು ಹಿಡಿದ ನಂತರ ಮರುದಿನವೇ ಮಂಗ ಹಿಡಿದವರ ಬಿಲ್ಲಿನ ಹಣವನ್ನು ಕೊಡುವುದಾಗಿ ಹೇಳಿದರು.

ನಾನು 2004 ನೆಯ ಮೇ ತಿಂಗಳ 30 ರಂದು ಬೆಳಿಗ್ಗೆ ಮಿರಜ್ ಕಡೆಗೆ ಹೊರಟೆನು. ನನ್ನ ಜೊತೆಗೆ ಮಂಗಗಳಿಂದ ತೊಂದರೆಗೆ ಒಳಗಾಗಿದ್ದ ಪ್ರಲ್ಹಾದ ಪತ್ತಾರ ಅವರೂ ಮಿರಜಗೆ ಬರಲು ರೆಡಿಯಾಗಿ ಬಂದಿದ್ದರು.

ಅಲ್ಲಿಯ ಪ್ರಸಿದ್ಧ ಮೀರಾಸಾಬ ದರ್ಗಾದ ಎದುರಿಗೆ ಇರುವ ಹೈಸ್ಕೂಲ್ ರೋಡಿನಲ್ಲಿ ಮಂಗಗಳನ್ನು ಹಿಡಿಯುವ ಇಸ್ಮಾಯಿಲ್ ಬಂದರವಾಲೆ ಅವರನ್ನು ಭೇಟಿಯಾಗಿ ಎಲ್ಲವನ್ನೂ ಅವರಿಗೆ ವಿವರಿಸಿ ಹೇಳಿದೆವು.

ಆತ ಎಲ್ಲವನ್ನೂ ಆಲಿಸಿ ತಾನು ಮರುದಿನವೇ ಮಂಗಗಳ ಪಿಂಜರಾಗಳನ್ನು ತೆಗೆದುಕೊಂಡು ಟೆಂಪೊ ಮೂಲಕ ರಬಕವಿಗೆ ಬರುತ್ತೇನೆಂದು ಹೇಳಿದನು.

ನಾನು ಆಗ ಸರ್ಕಾರಿ ಚಾವಡಿ ಹತ್ತಿರದ ರಾಜು ( ಡಿಸ್ಕೊ ) ಉಮದಿ ಅವರ ಮನೆಯಲ್ಲಿ ವಾಸಿಸುತ್ತಿದ್ದೆ. ಮಂಗ ಹಿಡಿಯುವವರಿಗೆ ನನ್ನ ವಿಳಾಸವನ್ನು ಕೊಟ್ಟೆ.

2004 ನೆಯ ಮೇ ತಿಂಗಳ 31 ರಂದು ಬಾಗಲಕೋಟೆಯಲ್ಲಿ ನನ್ನ ಆತ್ಮೀಯ ಸ್ನೇಹಿತರಾದ, ಡೆಂಟಿಸ್ಟ್ ಡಾ. ಬಸವರಾಜ್ ಡಂಗಿ ಅವರ ಮದುವೆ ಇತ್ತು.

ಆ ಮದುವೆಯಲ್ಲಿ ಭಾಗವಹಿಸಿ ಸಂಜೆ ನಾಲ್ಕು ಗಂಟೆಗೆ ರಬಕವಿಗೆ ವಾಪಸ್ ಬಂದೆ. ಅಷ್ಟರಲ್ಲಿ ಮನೆಯ ಸಮೀಪ ಬಂದಾಗ ಜನರು ಗುಂಪುಗೂಡಿದ್ದು ನೋಡಿದೆ. ಮಂಗ ಹಿಡಿಯುವವರು ಬಂದಿದ್ದರಲ್ಲದೇ ಆವಾಗಲೇ ಅವರು ಏಳು ಮಂಗಗಳನ್ನು ತಮ್ಮ ಕಬ್ಬಿಣದ ಸಲಾಕೆ ಇರುವ ಪಿಂಜರಾದಲ್ಲಿ ಹಿಡಿದಿದ್ದರು.

ಹೀಗೆ ಆ ದಿವಸ ಎಲ್ಲಾ ಹದಿನಾಲ್ಕು ಮಂಗಗಳನ್ನು ಅವರು ಹಿಡಿದಿದ್ದರು. ಮರುದಿನ ನಗರಸಭೆಯ ಕಚೇರಿಗೆ ಹೋಗಿ ಆತನ ಬಿಲ್ಲು ಪೌರಾಯುಕ್ತ ಬೆಳ್ಳಿಕಟ್ಟಿ ಅವರಿಂದ ಚೆಕ್ ಮೂಲಕ ಕೊಡಿಸಿದೆ.

ಮಂಗಗಳನ್ನು ಅರಣ್ಯ ಪ್ರದೇಶದಲ್ಲಿ ಭಾರವಾದ ಹೃದಯದಿಂದ ಸುರಕ್ಷಿತವಾಗಿ ಬಿಡಲಾಯಿತು.


– ನೀಲಕಂಠ ದಾತಾರ

- Advertisement -
- Advertisement -

Latest News

ಮಣ್ಣು ಉಳಿಸಿ ಹೋರಾಟಕ್ಕೆ ಬೆಂಬಲ ನೀಡೋಣ – ಅಶೋಕ ಅಲ್ಲಾಪೂರ

ಸಿಂದಗಿ - ಜಗತ್ತಿನ ಜೀವ ಸಂಕುಲಕ್ಕೆ ಆಶ್ರಯವಾದ ಭೂಮಿಯನ್ನು ಮತ್ತು ಮಣ್ಣನ್ನು ಉಳಿಸಿ ಮುಂದಿನ ಜನಾಂಗಕ್ಕೆ ಫಲವತ್ತಾದ ಭೂಮಿ ನೀಡಲು ಶ್ರೀ ಸದ್ಗುರು ಜಗ್ಗಿ ವಾಸುದೇವ್...
- Advertisement -

More Articles Like This

- Advertisement -
close
error: Content is protected !!