spot_img
spot_img

ಸುಡು ಬಿಸಿಲನ್ನೂ ಬೆಳದಿಂಗಳಾಗಿಸಿದ ಅವಿಸ್ಮರಣೀಯ ಸಾಹಿತ್ಯೋತ್ಸವ…

Must Read

ಮೇ 11ರಂದು ಬಳ್ಳಾರಿಯಲ್ಲಿ, ಸಂಸ್ಕೃತಿ ಪ್ರಕಾಶನ, ಡಾ.ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಹಾಗೂ ಕರ್ನಾಟಕ ಕಹಳೆ ಡಾಟ್ ಕಾಮ್. ಬಳ್ಳಾರಿ ಇವರ ಸಹಯೋಗದಲ್ಲಿ ಜನಸೇವಕ, ಗಾಂಧೀವಾದಿ ಸಿ.ಈಶಪ್ಪನವರ 35 ನೇ ಪುಣ್ಯ ಸ್ಮರಣೆ ಅಂಗವಾಗಿ ನಡೆದ ‘ಸಾಹಿತ್ಯೋತ್ಸವ’ ದಲ್ಲಿ ಪಾಲ್ಗೊಂಡು, ಅಪೂರ್ವ ಸಮಾರಂಭದ ಅಭೂತಪೂರ್ವ ಯಶಸ್ಸಿನ ಭಾಗವಾಗಿದ್ದು ನನ್ನ ಸುಕೃತ.

“ಒಂದು ಮಾದರಿ ಸಾಹಿತ್ಯೋತ್ಸವ ಹೇಗಿರಬೇಕೆಂಬ ಪ್ರಶ್ನೆಗೆ ಸೂಕ್ತ ಉತ್ತರದಂತಿತ್ತು ಈ ಸಮಾರಂಭ”.. ಸಸಿಗೆ ನೀರೆರೆಯುವುದರ ಮೂಲಕ ವಿಭಿನ್ನ ರೀತಿಯಲ್ಲಿ ವೇದಿಕೆಯ ಗಣ್ಯರಿಂದ ಸಾಹಿತ್ಯೋತ್ಸವದ ಉದ್ಘಾಟನೆ. ಕಾರ್ಯಕ್ರಮದ ರೂವಾರಿ ಮಂಜುನಾಥರಿಂದ ಔಚಿತ್ಯಪೂರ್ಣ ಪ್ರಾಸ್ತಾವಿಕ. ಉದ್ಘಾಟಕರ, ಅತಿಥಿಗಳ ಅರ್ಥಪೂರ್ಣ ವಾಗ್ಲಹರಿ. ನಂತರ ಡಾ.ನಾಗರತ್ನ ಭಾವಿಕಟ್ಟಿಯವರ ‘ನನ್ನೊಡೆಯ ಬುದ್ಧ ಪ್ರಿಯ” ಕೃತಿ ಲೋಕಾರ್ಪಣೆ. ಹಿರಿಯ ಸಾಹಿತಿ ಗಂಗಾಧರ ಪತ್ತಾರರಿಂದ ಚೆಂದದ ಕೃತಿ ಪರಿಚಯ. ಕವಯಿತ್ರಿಯ ಭಾವಪೂರ್ಣ ನುಡಿಗಳು. ಶಿವಾನಂದ್ ಸಾರಥ್ಯದ ‘ಅಪ್ಪ ಪ್ರಕಾಶನದ’ ಲೋಗೋ ಬಿಡುಗಡೆ.

ತದನಂತರ ಕವಿಕಾವ್ಯ ವಾಚನ ಗಾಯನ. ಆಹ್ವಾನಿತ ಕವಿಗಳಿಂದ ಕವನ ವಾಚನ. ಜೊತೆಗೆ ಅದೇ ಕವಿತೆಗಳಿಗೆ ರಾಗ ಸಂಯೋಜಿಸಿ, ಮಧುರ ಗಾಯನ ಜನಪ್ರಿಯ ಪ್ರತಿಭಾವಂತ ಗಾಯಕಿ ಶ್ರೀಮತಿ ಶಾರದ ಮೇಡಂ ತಂಡದವರಿಂದ. ನಂತರ ವಿವಿಧ ಕ್ಷೇತ್ರದ ಐವರು ಅಪ್ರತಿಮ ಸಾಧಕರಿಗೆ ಪ್ರತಿಷ್ಠಿತ ಅಪ್ಪ ಪ್ರಶಸ್ತಿ ಪ್ರದಾನ. ಮತ್ತು ದಿ.ಈಶಪ್ಪನವರ ಸಮಾಜಸೇವಾ ಒಡನಾಡಿಗಳಿಗೆ ಗೌರವ ಪುರಸ್ಕಾರ. ಬಸವರಾಜ ಅಮಾತಿಯವರ ನಿರೂಪಣೆ ಇಡೀ ಕಾರ್ಯಕ್ರಮಕ್ಕೆ ಕಳಶಪ್ರಾಯವಾಗಿತ್ತು. ಕಡೆಗೆ ರುಚಿಯಾದ ಹೋಳಿಗೆ ಸಹಿತ ಬೂರಿ ಭೋಜನದೊಂದಿಗೆ ಸಮಾರಂಭದ ಮುಕ್ತಾಯ.

ಹೀಗೆ ವೈವಿಧ್ಯಮಯ, ವರ್ಣರಂಜಿತ, ವೈಶಿಷ್ಟ್ಯಪೂರ್ಣ ಕಾರ್ಯಕ್ರಮನ್ನೊಳಗೊಂಡ ಈ ಸಮಾರಂಭ ನಿಜಕ್ಕೂ ಪರಿಪೂರ್ಣ ಸಾಹಿತ್ಯೋತ್ಸವಕ್ಕೆ ಪಕ್ಕಾ ನಿದರ್ಶನ. ಇಂತಹ ಅನನ್ಯ ಸಾಹಿತ್ಯೋತ್ಸವಕ್ಕೆ ಆಮಂತ್ರಿಸಿ, ಕವಿಕಾವ್ಯ ಗಾಯನದ ಅಧ್ಯಕ್ಷ ಪೀಠದ ಗೌರವ ನೀಡಿ ಪುರಸ್ಕರಿಸಿ, ನನ್ನೊಳಗೆ ಧನ್ಯತಾಭಾವ ಮೂಡಿಸಿ ಅವಿಸ್ಮರಣೀಯ ನೆನಪುಗಳ ಕಾಣಿಕೆ ನೀಡಿದ ಮಂಜುನಾಥ್ ಮತ್ತು ಬಳಗಕ್ಕೆ ನಾನು ಅಭಾರಿ.

ಅಪ್ಪನ ಪುಣ್ಯ ಸ್ಮರಣೆಯಂದು, ಅವರ ಹೆಸರಿನಲ್ಲಿ ಮನೆಯಲ್ಲಿ ಸಿಹಿಯೂಟ ಚಪ್ಪರಿಸಿ ಕಾಟಾಚಾರದ ಆಚರಣೆ ಮಾಡುವವರ ಮಧ್ಯೆ, ಅಪ್ಪನ ಸಮಾಜ ಸೇವೆ, ಹಿರಿಮೆ-ಗರಿಮೆಗಳನ್ನು ಜನಮಾನಸದೆಲ್ಲೆಲ್ಲಾ ಹರಡುವ, ಪ್ರಶಸ್ತಿ ಪ್ರಧಾನದ ಮೂಲಕ ನಾಡಿನ ಮನೆ-ಮನೆಗಳಲ್ಲೂ ಅವರ ಹೆಸರನ್ನು ಪಸರಿಸುವ, ಸಾಹಿತ್ಯಾರಾಧನೆಯ ಮೂಲಕ ಅವರಿಗೊಂದು ನಿಜವಾದ ಶ್ರದ್ಧಾಂಜಲಿ ಸಲ್ಲಿಸುತ್ತಿರುವ ಮಂಜುನಾಥ್ ಮತ್ತು ಸಹೋದರರು ಹಾಗೂ ಬಂಧು ವರ್ಗ, ಇತರರಿಗೆ ಅಕ್ಷರಶಃ ಆದರ್ಶಪ್ರಾಯರೆನಿಸುತ್ತಾರೆ. ಅನುಕರಣೀಯರೆನಿಸುತ್ತಾರೆ.

ಇಂತಹ ಹೃದಯಸ್ಪರ್ಶಿ ಸಮಾರಂಭದ ಭಾಗಿಯಾಗಿದ್ದು ನನ್ನನ್ನೂ ಸೇರಿದಂತೆ ಪ್ರತಿಯೊಬ್ಬರ ಸೌಭಾಗ್ಯವೇ ಸರಿ. 5-6 ವರ್ಷಗಳಿಂದ ಮುಖಪುಸ್ತಕ, ವಾಟ್ಸಾಪು ಬಳಗಗಳ ಮೂಲಕ ಪರಿಚಯವಾಗಿದ್ದರೂ ಮುಖಾಮುಖಿಯಾಗಿರದ ಹಲವಾರು ಕವಿಮನಸುಗಳನ್ನು, ಸಾಹಿತ್ಯಕ ಸಹೃದಯರನ್ನೂ ಭೇಟಿಯಾಗಿ ಬೆರೆತಿದ್ದು ಹೃನ್ಮನಗಳನ್ನು ಪುಳಕಗೊಳಿಸಿತು.

ಗಂಗಾಧರ ಪತ್ತಾರ್ ಸಾರ್, ಅಶೋಕ್ ಭಾವಿಕಟ್ಟಿ ಸಾರ್, ಗೀತಾ ಮೇಡಂ, ತಿಪ್ಪೇಸ್ವಾಮಿ ಸಾರ್, ಶೋಭಾ-ಪ್ರಕಾಶ್ ಮಲ್ಕಿ ಒಡೆಯರ್ ದಂಪತಿಗಳು, ಸಿರಿಕಂಠದ ಶಾರದಾ ಮೇಡಂ, ಶಿವಾನಂದ್ ಸಾರ್, ಮಂಜುನಾಥ್ ಕುಟುಂಬ, ಬಂಧು ವರ್ಗ ಅಬ್ಬಾ ಅದೆಷ್ಟು ಆತ್ಮೀಯ ಸ್ನೇಹವೃಂದ.. ಸಂಜೆಯವರೆಗೂ ಕಾಯ್ದು ತೋರಣಗಲ್ಲಿಗೆ ನನ್ನನ್ನು ಕರೆದೊಯ್ದು ಅಕ್ಕರೆಯಿಂದ ಸತ್ಕರಿಸಿದ ಶ್ರೀಮತಿ ಸುಷ್ಮಾ ಮೇಡಂ ಹಾಗೂ ಜಗದೀಶ ದಂಪತಿಗಳಿಗೆ, ಮಲ್ಲಿಕಾರ್ಜುನ್ ಅವರಿಗೆ ನಾನು ಅಕ್ಷರಶಃ ಶರಣು.

ಕಾರವಾರದ ಕರಾವಳಿ ಮಡಿಲಿಂದ ಐನೂರುಮೈಲು ದೂರ ಹಾರಿ, ಬಳ್ಳಾರಿಯ ಬಿಸಿಲ ತೊಟ್ಟಿಲಿನಲ್ಲಿ ಇಂತಹ ಅನುಪಮ ಸಾಹಿತ್ಯೋತ್ಸವದ ಬೆಳದಿಂಗಳಲ್ಲಿ ಮೀಯುವಂತಾಗಿದ್ದು ನಿಮ್ಮಿಂದ ಮತ್ತು ನೀವು ಬರೆಸಿದ ಅಕ್ಷರಗಳಿಂದ. ಹಾಗಾಗಿ ನಾನು ನಿಮಗೆ ಮತ್ತು ಅಕ್ಷರಗಳಿಗೆ ಚಿರ ಋಣಿ. ಸತತ ಪ್ರವಾಸ, ಕಾರ್ಯಕ್ರಮ ಹಾಗೂ ಕೆಲವು ಒತ್ತಡಗಳಿಂದ ಈ ಎಲ್ಲ ಸಂಭ್ರಮದ ವಿವರ ನಿಮಗೊಪ್ಪಿಸಲು ನಾಲ್ಕು ದಿನ ತಡವಾಯಿತು. ಕ್ಷಮೆಯಿರಲಿ…


ಎ.ಎನ್.ರಮೇಶ್. ಗುಬ್ಬಿ.

- Advertisement -
- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!