ಮೂಡಲಗಿ – ನ್ಯಾಯ ಬೇಡಿ ಬರುವ ಜನರಿಗೆ ಜಾತಿ ಮತ ಭೇದವಿಲ್ಲದೆ ನ್ಯಾಯಾಧೀಶರು ಯಾವುದೇ ಒತ್ತಡಕ್ಕೆ ಮಣಿಯದೆ ನ್ಯಾಯ ಒದಗಿಸಿಕೊಡಬೇಕು ಎಂದು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದರು.
ಮೂಡಲಗಿ ನಗರದ ನೂತನ ಕೋರ್ಟ್ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
೭.೨೦ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಹೊಸ ನ್ಯಾಯಾಲಯ ಕಟ್ಟಡ ಎಲ್ಲರಿಗೂ ನ್ಯಾಯ ನೀಡಬೇಕು. ಅದರಲ್ಲೂ ಮಹಿಳೆಯರು ಹೆಚ್ಚಾಗಿ ವಕೀಲರಾಗಿ ಬರಬೇಕು. ಮಹಿಳಾ ವಕೀಲರ ಸಂಖ್ಯೆ ಕಡಿಮೆ ಇದೆ ಈ ತಾರತಮ್ಯ ಹೋಗಬೇಕು. ಮಹಿಳೆಯರಿಗೂ ಗೌರವ ಸಿಗಬೇಕು ಎಂದರು.
ಹಲವು ವರ್ಷಗಳಿಂದ ಪೆಂಡಿಂಗ್ ಇರುವ ಕೇಸುಗಳು ಬೇಗ ಮುಗಿಯಬೇಕು. ಇದಕ್ಕೆ ವಕೀಲರು ಸಂಕಲ್ಪ ಮಾಡಬೇಕು. ಜನರಿಗೆ ಬೇಗ ನ್ಯಾಯ ಸಿಗಬೇಕು. ಜನರ ವಿಶ್ವಾಸ ನ್ಯಾಯಾಂಗದ ಮೇಲೆ ಇದೆ ಇದು ಸತತ ಇರಬೇಕು ಇದು ತ್ವರಿತವಾಗಿ ನ್ಯಾಯ ಕೊಟ್ಟಾಗ ಮಾತ್ರ ಸಾಧ್ಯ. ರಾಜ್ಯ ಕಾನೂನು ಪ್ರಾಧಿಕಾರ ಜನರ ನೆರವಿಗಾಗಿಯೇ ಇದೆ ಬಡವರು ಪ್ತಾಧಿಕಾರಕ್ಕೆ ಬನ್ನಿ ಎಂದ ಅವರು, ವಕೀಲರು ಜನರಲ್ಲಿ ಕಾನೂನು ತಿಳಿವಳಿಕೆ ನೀಡುವ ಕಾರ್ಯಗಳನ್ನು ಹಾಕಿಕೊಳ್ಳಬೇಕು ಎಂದರು.
ನ್ಯಾಯಾಧೀಶ ಪ್ರಸನ್ನ ಬಿ ವರಾಳೆ ಮಾತನಾಡಿ, ಯುವಕರಲ್ಲಿ ಅಪಾರ ಶಕ್ತಿ ಇದೆ. ಸಾವಿರಾರು ಅಣುಬಾಂಬ್ ಗಳಿಗಿಂತ ಹೆಚ್ಚಿನ ಶಕ್ತಿ ಯುವಕರಲ್ಲಿ ಇದ್ದು ಅದರ ಸದುಪಯೋಗವಾಗಬೇಕು. ನ್ಯಾಯಾಂಗಕ್ಕೆ ಯುವಕರು ಬರಬೇಕು. ಅದರಲ್ಲೂ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಬೇಕು. ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಅಗತ್ಯವಾಗಿದೆ ಎಂದರಲ್ಲದೆ, ಮೂಡಲಗಿ ಗ್ರಾಮ ಪಂಚಾಯಿತಿಯು ಈ ಹಿಂದೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದನ್ನು ನ್ಯಾಯಮೂರ್ತಿಗಳು ಶ್ಲಾಘಿಸಿದರು. ಮೂಡಲಗಿ ತಾಲೂಕಾ ಹೋರಾಟದ ದಿನಗಳನ್ನೂ ನೆನಪಿಸಿಕೊಂಡರು.ಈ ನೆಲದಲ್ಲಿಯೇ ಹೋರಾಟದ ಗುಣಧರ್ಮವಿದೆ ಎಂದರು
ಕೆ ಪಿ ಮಗದುಮ್ ವಕೀಲರು ಪ್ರಾಸ್ತಾವಿಕವಾಗಿ ಮಾತನಾಡಿ, ಮೂಡಲಗಿ ನ್ಯಾಯಾಲಯ ಕಟ್ಟಡ ನಿರ್ಮಾಣದ ಹಂತಗಳನ್ನು ನೆನೆಸಿಕೊಂಡರು
ಪ್ರಧಾನ ಸತ್ರ ಜಿಲ್ಲಾ ನ್ಯಾಯಾಧೀಶ ಮುಸ್ತಫಾ ಹುಸೇನ್ ಸ್ವಾಗತ ಕೋರಿದರು.
ವೇದಿಕೆಯ ಮೇಲೆ ನ್ಯಾ ಮೂ. ಶ್ರೀಮತಿ ಪಿ ಎಸ್ ಹೇಮಲೇಖಾ, ನ್ಯಾ ಮೂ. ಅನಿಲ ಬಿ. ಕಟ್ಟಿ, ನ್ಯಾ. ಮೂ. ರಾಮಚಂದ್ರ ಹುದ್ದಾರ, ನ್ಯಾ ಮೂ. ವಿಜಯಕುಮಾರ ಪಾಟೀಲ, ನ್ಯಾ ಮೂ. ಕೆ ಎಸ್ ಭರತಕುಮಾರ, ನ್ಯಾ ಮೂ. ಕರ್ನಾಟಕ ರಾಜ್ಯ ವಕೀಲರ ಪರಿಷತ್ ಉಪಾಧ್ಯಕ್ಷ ವಿನಯಕುಮಾರ, ದಿವಾಣಿ ಜೆಎಮ್ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶೆ ಶ್ರೀಮತಿ ಜ್ಯೋತಿ ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಸುಧೀರ ಗೋಡಿಗೌಡರ ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರ್ವಹಣೆ ಲಕ್ಷ್ಮಣ ಅಡಿಹುಡಿ ಮಾಡಿದರು, ವಕೀಲರ ಸಂಘದ ಕಾರ್ಯದರ್ಶಿ ಬಿ ವಾಯ್ ಹೆಬ್ಬಾಳ ವಂದಿಸಿದರು.