ಮೂಡಲಗಿ: ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದಲ್ಲಿ ಅನಗತ್ಯವಾಗಿ ರಾಜಕೀಯ ಪ್ರವೇಶವಾದ ನಂತರ ಗುರುನಾನಕ ಜಯಂತಿಯಂದು ಮೂರು ಕೃಷಿ ಕಾಯ್ದೆಗಳನ್ನು ಪ್ರಧಾನಿ ವಾಪಸ್ ಪಡೆದಿದ್ದಾರೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.
ಶುಕ್ರವಾರ ನ.19 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡಿ, 2014 ರಿಂದ ಇಲ್ಲಿಯವರೆಗೆ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ನಮ್ಮ ಸರ್ಕಾರ ಹೆಚ್ಚು ಆದ್ಯತೆ ನೀಡಿದರು ಕೂಡಾ ಕೆಲವು ರೈತರು ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವುದು, ಅದನ್ನು ಕೆಲವು ಪಕ್ಷಗಳು ಹೈಜಾಕ್ ಮಾಡಿ ರಾಜಕೀಯ ಸೇರ್ಪಡೆ ಮಾಡಿರುವುದರಿಂದ ಮೂರು ಕೃಷಿ ಕಾನೂನುಗಳನ್ನು ಹಿಂಪಡೆದುಕೊಳ್ಳುವುದಾಗಿ ಪ್ರಧಾನಿ ಘೋಷಿಸಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ವಿರೋಧ ಪಕ್ಷಗಳು ರೈತರ ವಿಷಯಗಳಲ್ಲಿ ರಾಜಕೀಯ ಮಾಡದೆ ಅವರ ಅಭಿವೃದ್ಧಿಗಾಗಿ ಚಿಂತಿಸಬೇಕಾದ ಅಗತ್ಯ ಇದೆ ಎಂದು ಅಭಿಪ್ರಾಯ ಪಟ್ಟರು.
ರೈತರ ಅಭಿವೃದ್ಧಿ ನಮ್ಮ ಪ್ರಮುಖ ಆದ್ಯತೆಯಾಗಿದೆ. ಸ್ವಾಂತಂತ್ರ್ಯಾ ನಂತರ ಕೃಷಿ ಬಜೆಟ್‍ಗೆ 1 ಲಕ್ಷ 42 ಸಾವಿರದ 750 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಇದು ಹಿಂದಿನ ಸರ್ಕಾರಗಳಿಗಿಂತ 5 ಪಟ್ಟು ಹೆಚ್ಚಾಗಿದೆ. ಕಿಸಾನ್ ಸಮ್ಮಾನ್ ನಿಧಿಯಡಿ 1 ಲಕ್ಷ 62 ಸಾವಿರ ಕೋಟಿ ರೂಪಾಯಿಗಳನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ. ರಸಗೊಬ್ಬರಗಳಿಗೆ ಪ್ರತಿ ವರ್ಷಕ್ಕೆ 14770 ಕೋಟಿ ರೂಪಾಯಿಗಳ 50% ಸಬ್ಸಿಡಿ ನೀಡಿದೆ. ರೈತರಿಗೆ ವಿಮೆಗಳು ಸಮರ್ಪಕವಾಗಿ ಸಿಗುವಂತೆ ಖಾತರಿ ಪಡಿಸಲಾಗಿದೆ. ಕನಿಷ್ಠ ಬೆಂಬಲ ಬೆಲೆಯನ್ನು (ಎಂ.ಎಸ್.ಪಿ) ಹೆಚ್ಚಿಸಲು ಹಾಗೂ ಸಗಟು ವ್ಯಾಪಾರ ಮಾರುಕಟ್ಟೆ ವ್ಯವಹಾರಗಳನ್ನು ಆನ್‍ಲೈನ್‍ನಲ್ಲಿ ನಡೆಸುವಂತೆ ಮಾಡಲು ನಾವು ಕ್ರಮಗಳನ್ನು ಕೈಗೊಂಡಿದ್ದೇವೆ. ಸಣ್ಣ ರೈತರನ್ನು ಕೂಡ ವಿಮೆಯ ಅಡಿ ತರಲಾಗಿದೆ. ಕೇಂದ್ರ ಸರ್ಕಾರದಿಂದ ಈವರೆಗೂ 22 ಕೋಟಿಗೂ ಅಧಿಕ ಮಣ್ಣಿನ ಆರೋಗ್ಯ ಕಾರ್ಡ್‍ಗಳನ್ನು ರೈತರಿಗೆ ನೀಡಲಾಗಿದೆ. ಕಿರು ನೀರಾವರಿ ಅನುದಾನ ಹಂಚಿಕೆಯು ಈಗ 10,000 ಕೋಟಿ ರೂ. ಇದೆ. ಪಶು ಸಂಗೋಪನೆ ಮತ್ತು ಮೀನುಗಾರಿಕೆಯಲ್ಲಿ ತೊಡಗಿರುವವರನ್ನೂ ವಿವಿಧ ಯೋಜನೆಗಳ ಫಲಾನುಭವಿಗಳ ಅಡಿಯಲ್ಲಿ ತರಲಾಗಿದೆ ಎಂದು ತಿಳಿಸಿದರು.
ಈ ರೀತಿ ರೈತರ ಆರ್ಥಿಕ ಸ್ಥಿತಿಯ ಬದಲಾವಣೆಗೆ ಅಮೂಲಾಗ್ರ ಕ್ರಮಗಳನ್ನು ನಾವು ಕೈಗೊಂಡರೂ ಸಹಿತ ವಿರೋಧ ಪಕ್ಷಗಳು ರೈತರನ್ನು ಸರ್ಕಾರದ ವಿರುಧ್ಧ ಎತ್ತಿಕಟ್ಟುವ ಕೆಲಸ ಮಾಡಿವೆ. ಮುಂದಾದರೂ ರೈತರ ಅಭಿವೃದ್ಧಿಗೆ ಪ್ರಮಾಣಿಕ ಚಿಂತನೆ ನಡೆಸಬೇಕೆಂದು ವಿರೋಧ ಪಕ್ಷಗಳಿಗೆ ಸಲಹೆ ನೀಡಿದರು.