ಬೀದರ – ಹವಾ ಮಲ್ಲಿನಾಥ ನೀರಗುಡಿ ಮುತ್ಯಾ ವಿರುದ್ಧ ಶ್ರೀ ಸದ್ಗುರು ಬಸವ ಪ್ರಭು ಸ್ವಾಮಿಯವರು ಪೇಸಬುಕ್ ನಲ್ಲಿ ಪೊಸ್ಟ್ ಮಾಡಿದ್ದು ಸದ್ದು ಮಾಡುತ್ತಿದೆ.
ಇದರಿಂದಾಗಿ ಬಸವಣ್ಣನವರ ಕರ್ಮಭೂಮಿ ಬೀದರ್ ನಲ್ಲಿ ಮತ್ತೆ ಇಬ್ಬರು ಸ್ವಾಮಿಗಳ ಮಧ್ಯೆ ಜಟಾಪಟಿ ಬಹಿರಂಗವಾಗಿದ್ದು ಒಬ್ಬರ ಮೇಲೆ ಒಬ್ಬರು ಟೀಕಾ ಪ್ರಹಾರ ನಡೆಸುತ್ತ ಸುದ್ದಿಯಾಗುತ್ತಿದ್ದಾರೆ.
ಹವಾ ಮಲ್ಲಿನಾಥ ನೀರಗುಡಿ ಮುತ್ಯಾ ಅವರು ಪಾದಯಾತ್ರೆ ಮಾಡುವ ವೇಳೆ ಭಕ್ತರು ರಸ್ತೆ ಮೇಲೆ ಅಡ್ಡವಾಗಿ ಮಲಗಿದ್ದು ಅವರ ಮೇಲೆ ಕಾಲು ಇಟ್ಟುಕೊಂಡು ಹವಾ ಮಲ್ಲಿನಾಥ ನೀರಗುಡಿ ಮುತ್ಯಾ ನಡೆಯುತ್ತಿರುವ ವೀಡಿಯೋ ಫೇಸ್ ಬುಕ್ ನಲ್ಲಿ ಬಂದಿದ್ದು ಅದಕ್ಕೆ ಬಸವಕಲ್ಯಾಣದ ಶ್ರೀ ಸದ್ಗುರು ಬಸವ ಪ್ರಭು ಸ್ವಾಮಿಗಳು ಕಮೆಂಟ್ ಮಾಡಿ ಹವಾ ಮಲ್ಲಿನಾಥ ಹುಸಿ ಬಸವ ಪ್ರೇಮಕ್ಕೆ ದಿಕ್ಕಾರವಿರಲಿ ಎಂದಿದ್ದಾರೆ.
ಶ್ರೀ ಸದ್ಗುರು ಬಸವ ಪ್ರಭು ಸ್ವಾಮಿಗಳು ಕಮೆಂಟ್ ನಲ್ಲಿ ಬರೆದಿದ್ದು:
ಶೋಧಿಸಿ ನೋಡು
ತತ್ತೇರಿ…! ಹವಾ ಮಲ್ಲಿನಾಥನ ಹುಸಿ ಬಸವಪ್ರೇಮಕ್ಕೆ ದಿಕ್ಕಾರವಿರಲಿ..! ಮಟಕ, ಜಟಕ, ಮಂತ್ರ, ತಂತ್ರ ಎಂದು ಊರುಗಳಲ್ಲಿ-ಕಂಡ ಕಂಡ ಬಡವರ ಹೊಲಗಳಲ್ಲಿ ತನ್ನ ಪೋಟೋ ಹಚ್ಚಿಸಿಕೊಂಡು, ರಾಜಕಾರಣಿಗಳಿಗೆ ಗಾಳ ಹಾಕುತ್ತಾ ಎಲ್ಲೆಲ್ಲೋ ಮೆರವಣಿಗೆ, ಉರವಣಿಗೆ ಮಾಡಿಸಿಕೊಳ್ಳುತ್ತಾ ರಾಜವೈಭವದ ಮೆರೆಯುತ್ತಿದ್ದ ಹವಾ ಮಲ್ಲಿನಾಥರು ಕೊನೆಗೂ ಬಸವಣ್ಣನ ಕಡೆಗೆ ವಾಲಿದರೆಂದು ತುಸು ಖುಷಿಯಾಯಿತು. ಆದರೆ ಒಂದೇ ದಿನದಲ್ಲಿ ಆ ಖಷಿಗೆ ತಣ್ಣೀರೆರೆಚಿದರು ಹವಾಧೀಶರು.
ಬಸವ ಯಾತ್ರೆಯ ಹೆಸೆರಿನಲ್ಲಿ ಹವಾ ಮಲ್ಲಿನಾಥರು ಅಶ್ವಾರೂಢ ಬಸವಣ್ಣನ ಮೂರ್ತಿಯೊಂದಿಗೆ ಕೂಡಲ ಸಂಗಮದಿಂದ ಪಾದಯಾತ್ರೆಯ ಮೂಲಕ ಬರುವಾಗ ದಾರಿಯ ಮಧ್ಯದಲ್ಲಿ ಕಾಲಿಗೆ ಬಿದ್ದವರನ್ನು ತುಳಿದುಕೊಂಡು ಬರುತ್ತಿರುವುದು ನಾಚಿಕೆಗೇಡಿನ ಸಂಗತಿ.
“ಎನಗಿಂತ ಕಿರಿಯರಿಲ್ಲ; ಶಿವ ಭಕ್ತರಿಗಿಂತ ಹಿರಿಯರಿಲ್ಲ, ಮೇಲಾಗಲೊಲ್ಲೆದೆ ಕೀಳಾಗುವೆನು, ಮಾವಿನ ಕಾಯಿಯೊಳಗೊಂದು ಎಕ್ಕೆ ಕಾಯಿ ನಾನು, ನಿಮ್ಮ ಶರಣರ ಚಮ್ಮಾವುಗೆಯ ಕಾಯ್ದು ಬದುಕಿಸು” ಎಂದು ಜಂಗಮ ಪ್ರೇಮಿಯಾಗಿ ಭಕ್ತಿ ಭಂಡಾರಿ ಎನಿಸಿದ ಅಪ್ಪ ಬಸವಣ್ಣನವರ ತತ್ವಕ್ಕೆ ಚುತಿ ತರುವಂತಹ ಕೆಲಸ ಮಾಡಿದ ಹವಾ ಮಲ್ಲಿನಾಥರಿಗೆ ದಿಕ್ಕಾರವಿರಲಿ..!! ನಿಮ್ಮಲ್ಲಿ ಬಸವ ಪ್ರೇಮ ಇದ್ದುದ್ದೇ ಆದರೆ ನಿಮ್ಮ ತಂತ್ರಗಾರಿಕೆಯನ್ನು ಬಿಟ್ಟು ಲಿಂಗ ಕಟ್ಟಿಕೊಂಡು ಭಕ್ತರಿಗೆಲ್ಲ ಲಿಂಗಧಾರಣೆ ಮಾಡಿಸಿ ಲಿಂಗಾಯತ ಧರ್ಮ ಸ್ವೀಕರಿಸಿರಿ ಇಲ್ಲವೆ ಬಸವಣ್ಣನವರ ಹೆಸರು ಹಾಳು ಮಾಡದೆ, ನಿಮ್ಮ ಡೋಂಗಿ ಉದ್ಯೋಗ ಮುಂದುವರೆಸಿರಿ… ಬಸವಣ್ಣನವರ ಹೆಸರಿನಲ್ಲಿ ಮೌಢ್ಯತೆ ಬಿತ್ತುವುದು ಸರಿಯಲ್ಲ.
ಬಸವಭಕ್ತರು ಎಲ್ಲಿ ಅಡಗಿ ಕುಳಿತಿರುವಿರಿ. ನಿಮ್ಮ ಈ ಜಾಣ ದುರುಪಯೋಗವಾಗುತ್ತಿದೆ, ಮೌನ ಮುರಿದು ಪ್ರತಿಭಟಿಸಿರಿ.
-ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ
ಹೀಗೆ ಸ್ವಾಮೀಜಿಗಳಿಬ್ಬರ ಬಸವ ಪ್ರೇಮ ಹಾಗೂ ನಿಷ್ಠೆ ಪರಸ್ಪರ ಟೀಕೆಗಳಿಗೆ ತುತ್ತಾಗಿದ್ದು ಇದು ಎಲ್ಲಿಗೆ ಮುಟ್ಟುವುದೆಂಬುದನ್ನು ಕಾಲವೇ ಹೇಳಬೇಕು.
ವರದಿ: ನಂದಕುಮಾರ ಕರಂಜೆ, ಬೀದರ