ಕನ್ನೊಳ್ಳಿ – “ಹಿಂದಿನ ಸಾಧು, ಸಿದ್ಧರು ಹೇಗೆ ಬರೆದು ಇಟ್ಟಿದ್ದಾರೋ ಹಾಗೆ ನಡೆದರೆ ಈ ನರ ಜನ್ಮಕ್ಕೆ ಮುಕ್ತಿ ಸಿಗುತ್ತದೆ ಎಂದು ಮಲ್ಲಿಕಾರ್ಜುನ ಎಂ. ಉಪ್ಪಾರ ಆಧ್ಯಾತ್ಮ ಚಿಂತಕರು ಹೇಳಿದರು.
534ನೇ ಶ್ರೀ ಕನಕದಾಸರ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡುತ್ತಾ, ಕರ್ನಾಟಕದ ಸಂತರು ಜಗತ್ತಿನಲ್ಲಿಯೇ ಶ್ರೇಷ್ಠರು ಅವರಲ್ಲಿ ದಾಸ ಶ್ರೇಷ್ಠ ಕನಕದಾಸರು ಪ್ರಮುಖರು ಎಂದು ಹೇಳಿದರು.
ಕನಕದಾಸರು ಹೇಳುವ ‘ ನಾಮವಿಲ್ಲದ ಹೋಮವೇತಕ್ಕಯ್ಯ’ ಪ್ರತಿಯೊಬ್ಬರಿಗೂ ಗುರುಬೇಕು, ಗುರುವಿನ ನಾಮ, ಭಗವಂತನ ನಾಮ ಸ್ಮರಣೆ ಮಾಡಬೇಕು. ಹೋಮವೆಂದರೆ ಮನುಷ್ಯನಲ್ಲಿರುವ ಅಜ್ಞಾನವನ್ನು ಸುಡುವುದು ಎಂದು ಹೇಳುತ್ತಾರೆ. ವಿದ್ಯಾರ್ಥಿಗಳು ಪಠ್ಯದ ಅನುಭವಗಳನ್ನು ತಮ್ಮ ಜೀವನಕ್ಕೆ ಅನ್ವಯಿಸಿಕೊಳ್ಳಬೇಕು. ಬೆಳಗಿನ ಜಾವ 3 ರಿಂದ 5 ಗಂಟೆವರೆಗೆ ಬ್ರಹ್ಮ ಮೂಹೂರ್ತವಿರುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಧ್ಯಯನ ಮಾಡಬೇಕು ಎಂದು ಹೇಳಿದರು.
ಎಸ್. ಎ. ಗಚ್ಛಿನಮಠ ಮುಖ್ಯೋಪಾಧ್ಯಾಯರು ಸರಸ್ವತಿ ವಿದ್ಯಾನಿಕೇತನ ಪ್ರೌಢಶಾಲೆ, ಹಿರೇಮಠ ಕನ್ನೊಳ್ಳಿ ಇವರು ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ವಿದ್ಯಾರ್ಥಿಗಳು ಯಾವಾಗಲು ಮೂರು ಜನರನ್ನು ಗೌರವಿಸಬೇಕು. ಗುರುಗಳನ್ನು, ತಂದೆ-ತಾಯಿಯರನ್ನು ಮತ್ತು ಹಿರಿಯರನ್ನು ಗೌರವಿಸಬೇಕು. ಪುಸ್ತಕವನ್ನು ಗುರುವಿನ ರೂಪದಲ್ಲಿ ಕಾಣಬೇಕು, ವಿದ್ಯೆಯು ಸಿದ್ಧಿಯಾಗುತ್ತದೆ ಎಂದು ಹೇಳಿದರು.
ಸಿ. ಎಸ್. ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡುತ್ತಾ, ನಾಮದ ಬಲದಿಂದ ಮನುಷ್ಯರಲ್ಲಿನ ದೋಷ ಪರಿಹಾರವಾಗುತ್ತದೆ. ಆದರ್ಶ ವ್ಯಕ್ತಿಗಳನ್ನು ಕಂಡು ಅವರ ಜೀವನ ಶೈಲಿಯು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಆರ್.ವ್ಹಿ. ಭಿಂಗೆ ಪ್ರಾಚಾರ್ಯರು ಕಾರ್ಯಕ್ರಮದಲ್ಲಿ ವಂದಿಸಿದರು. ಆರ್. ಎಸ್. ಗಾಯಕವಾಡ ಉಪನ್ಯಾಸಕರು ಅತಿಥಿಗಳನ್ನು ಸ್ವಾಗತಿಸಿದರು. ಎಸ್. ಸಿ. ದುದ್ದಗಿ ಉಪನ್ಯಾಸಕರು ಕಾರ್ಯಕ್ರಮವನ್ನು ನಿರೂಪಿಸಿದರು. ಮಹಾವಿದ್ಯಾಲಯದ ಎಲ್ಲಾ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.