ಸ್ವಯಂ ಸ್ಪೂರ್ತಿಯ ಕಡಲು ನಮ್ಮ ಅಂಗೈಯಲ್ಲೇ ಇದೆ!

Must Read

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...

ಹೆಣ್ಣು ಮಕ್ಕಳು ಪೌಷ್ಠಿಕ ಆಹಾರ ಸೇವನೆ ಮಾಡಬೇಕು – ಡಾ.ನಯನಾ ಭಸ್ಮೇ

ಸವದತ್ತಿ - “ಹೆಣ್ಣು ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಸದೃಢವಾಗಿರಬೇಕು ಅವರು ಹದಿ ಹರೆಯದ ವಯಸ್ಸಿಗೆ ಬಂದಾಗ ಅವರಲ್ಲಿ ನೈಸರ್ಗಿಕವಾದ ಬದಲಾವಣೆಗಳು ಆಗುತ್ತವೆ ಅಂತಹ ಸಂದರ್ಭದಲ್ಲಿಯೂ...

ಪ್ರೊ.ಅಲಕಾ ಕುರಣೆ ಯವರಿಗೆ ‘ ಶಿಕ್ಷಕ ಶ್ರೀ ‘ ರಾಜ್ಯ ಮಟ್ಟದ ಪ್ರಶಸ್ತಿ

ಬೆಳಗಾವಿ: ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ, ಧಾರವಾಡ ಬೆಂಗಳೂರು ಘಟಕದಿಂದ ನೀಡಲಾಗುವ ರಾಜ್ಯ ಮಟ್ಟದ ಶಿಕ್ಷಕ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿಯ...

ಏಕೋ ಏನೋ ಗೊತ್ತಿಲ್ಲ ಯಾವುದೇ ಕೆಲಸದಲ್ಲೂ ಆಸಕ್ತಿಯೇ ಇಲ್ಲ. ಹೇಗೋ ಮನಸ್ಸಿಗೆ ಒಪ್ಪಿಸಿ ಹುಮ್ಮಸ್ಸು ಮೂಡಿಸಿಕೊಂಡು ಯಾವ ಕೆಲಸವನ್ನು ಆರಂಭಿಸಿದರೂ ಅರ್ಧಂಬರ್ಧ ಮಾಡಿ ನಿಲ್ಲಿಸಿ ಬಿಡ್ತಿನಿ ಅನ್ನೋದು ಬಹುತೇಕ ಜನರ ಚಿಂತೆ. ಸಾಮಾನ್ಯವಾಗಿ ಬಹಳಷ್ಟು ಜನರನ್ನು ಮೇಲಿಂದ ಮೇಲೆ ಈ ತೊಂದರೆ ಕಾಡುತ್ತದೆ. ಮೇಲ್ನೋಟಕ್ಕೆ ಈ ಸಮಸ್ಯೆ ದೊಡ್ಡದೇನಲ್ಲ ಆದರೆ ಇದರ ಬೇರುಗಳನ್ನು ಬಲಗೊಳ್ಳಲು ಬಿಟ್ಟರೆ ಸಮಸ್ಯೆ ತಪ್ಪಿದ್ದಲ್ಲ. ಏನೆಲ್ಲ ಇದ್ದರೂ ಏನೂ ಸಾಧಿಸಲು ಸಾಧ್ಯವಾಗುವುದಿಲ್ಲ ಅಂಥ ಪರಿಸ್ಥಿತಿ ನಿರ್ಮಾಣ ಮಾಡಿ ಬಿಡುತ್ತದೆ. ‘ಒಂದು ದುರ್ಬಲ ಮನಸ್ಸು ಒಂದು ಸೂಕ್ಷ್ಮ ದರ್ಶಕದಂತೆ. ಅದು ಸಣ್ಣ ವಿಷಯಗಳನ್ನು ದೊಡ್ಡದಾಗಿಸುತ್ತದೆ. ಆದರೆ ದೊಡ್ಡದನ್ನು ಪಡೆಯಲಾರದು.’ ಸ್ವಯಂ ಸ್ಪೂರ್ತಿ ಇರದಿದ್ದರೆ ಸಂಕಟ, ನೋವು, ಅವಮಾನ ಹಾಗೂ ಬೇಸರಗಳು ಬೆನ್ನು ಹತ್ತಿ ಜೀವ ತಿನ್ನುತ್ತವೆ.ಜೀವನವನ್ನು ನಿಸ್ಸಾರಗೊಳಿಸುತ್ತವೆ.ಇತರರ ಮುಂದೆ ತಲೆ ತಗ್ಗಿಸುವಂತೆ ಮಾಡುತ್ತವೆ.ಕೆಲವೊಮ್ಮೆ ಶಿಕ್ಷೆಯನ್ನು ಅನುಭವಿಸುವಂತೆ ಮಾಡುತ್ತವೆ. ಸ್ಪೂರ್ತಿ ಇಲ್ಲದ ಸ್ಥಿತಿಯಲ್ಲಿ ನಿರಂತರ ಎಲ್ಲದರಲ್ಲೂ ಅವಮಾನದ ಪೆಟ್ಟಿನ ಅನುಭವ ಎದೆಗೆ ಬಿಸಿ ನೀರಾಗಿಸಿ ಹುಯ್ಯುತ್ತದೆ. ಸದಾ ನಮ್ಮನ್ನು ನಾವು ಸ್ಪೂರ್ತಿಯುತವಾಗಿ ಇಟ್ಟುಕೊಳ್ಳುವುದು ಅತಿ ಮುಖ್ಯ. ಮನಸ್ಸಿದ್ದಲ್ಲಿ ಮಾರ್ಗ ತಾನಾಗಿ ಕಾಣುತ್ತದೆ. ಆದರೂ ಈ ನಿಟ್ಟಿನಲ್ಲಿ ನಮ್ಮ ದೃಷ್ಟಿಕೋನ ಬದಲಾಗದಿದ್ದರೆ ‘ಆಯುಧವು ತನ್ನ ಯಜಮಾನನಿಗೂ ಶತ್ರುವೇ ಆಗಿದೆ’ ಎಂಬಂತಾಗುತ್ತದೆ. ಕಲ್ಲಾಗಿರುವ ಮನಸ್ಸೆಂಬ ಆಯುಧವನ್ನು ಹೂವಿನಂತೆ ಮೆದುವಾಗಿಸಬೇಕು.ಹೊರಗಿನ ವಸ್ತುಗಳನ್ನು ಉಪಯೋಗಿಸಿ ಒಳ ಮನಸ್ಸನ್ನು ಹದಗೊಳಿಸಿ ಸ್ವಯಂ ಸ್ಪೂರ್ತಿಗೊಳಿಸಿಕೊಳ್ಳುವುದು ಹೇಗೆ ಎಂಬುದನ್ನು ನೋಡೋಣ ಬನ್ನಿ

ಶಕ್ತಿ ತುಂಬುವ ವಸ್ತುಗಳನ್ನು ಬಳಸಿ

ನಿಮಗೆ ಹಿತ ನೀಡುವ, ಇಷ್ಟವಾಗುವ, ನೀವು ಪ್ರೀತಿಸುವ, ವಸ್ತುಗಳು ನಿಮಗೆ ಶಕ್ತಿಯನ್ನು ತುಂಬುತ್ತವೆ. ಹೀಗಾಗಿ ಇವುಗಳಿಗೆ ನಿಮ್ಮ ಸುತ್ತಲೂ ಜಾಗ ನೀಡಿ. ಅವು ತಾಜಾ ಹೂಗಳು,ಸುಂದರ ಪೇಂಟಿಂಗ್ಸ್ ಇಲ್ಲವೇ ನುಡಿಮುತ್ತುಗಳಾಗಿರಬಹುದು. ಇವು ನಿಮ್ಮನ್ನು ಸ್ಪೂರ್ತಿಗೊಳಿಸಲು ತುದಿಗಾಲಲ್ಲೇ ನಿಂತಿರುತ್ತವೆ.

ನೀರಸಗೊಂಡ ಮನಸ್ಸು ತಕ್ಷಣಕ್ಕೆ ಉತ್ಸಾಹದಿಂದ ಎದ್ದು ನಿಲ್ಲುತ್ತದೆ.ಒಂದು ನವಿಲು ತನ್ನ ಗರಿಗಳನ್ನು ತೆರೆದಿಟ್ಟಾಗ ಮತ್ತು ನವಿಲಿನಂತೆ ನಡೆದಾಗ ಮಾತ್ರ ಸುಂದರವಾಗಿ ಆಕರ್ಷಕವಾಗಿ ಕಾಣಬಲ್ಲದು. ಅಂತೆಯೇ ನಿಮ್ಮ ಪ್ರಪಂಚದಲ್ಲಿ ನೀವು ಬಹಳಷ್ಟು ಬಯಸುವುದನ್ನೆಲ್ಲ ಸುತ್ತುವರಿಸಿಕೊಂಡರೆ ಮನಾನಂದ ನೀಡುವದರ ಜೊತೆಗೆ ಮನಸ್ಸನ್ನು ಮಹತ್ತರ ಕಾರ್ಯಕ್ಕೆ ಸಿದ್ಧಗೊಳಿಸುತ್ತದೆ. ವಿಪರ್ಯಾಸದ ಸಂಗತಿಯೆಂದರೆ ಇದರತ್ತ ಅತೀ ಕಡಿಮೆ ಗಮನ ನೀಡುತ್ತಿದ್ದೇವೆ. ಇವುಗಳತ್ತ ಚಿತ್ತ ಹರಿಸಿದರೆ ಕಾಲದ ಗತಿಯಲ್ಲಿ ನಿಜಕ್ಕೂ ಶ್ರೇಷ್ಠ ಮಟ್ಟದಲ್ಲಿ ಸ್ಪೂರ್ತಿ ಮನೆ ಮಾಡುತ್ತದೆ. ಯಾವಾಗಲೂ ಸುಂದರ ವಸ್ತುಗಳು ನಿಮ್ಮ ಕಣ್ಣ ಮುಂದಿರಲಿ.

ಹೆಚ್ಚಿನ ಸಮಯ ಓದಿ

- Advertisement -

ಓದು ಬಹಳಷ್ಟನ್ನು ಕಲಿಸುತ್ತದೆ. ಹೊಸ ಹೊಸ ಆಲೋಚನೆಗಳು ಮನಸ್ಸನ್ನು ಪ್ರವೇಶಿಸುತ್ತವೆ. ಕಥೆ, ಕಾದಂಬರಿ, ಸದಭಿರುಚಿ ಪುಸ್ತಕಗಳ ಓದಿನಲ್ಲಿ ನಿರತರಾದರೆ ಸ್ಪೂರ್ತಿಯ ಮಟ್ಟ ಏರುತ್ತದೆ.

ಸೃಜನಶೀಲತೆಯನ್ನೂ ಹೆಚ್ಚಿಸುತ್ತದೆ. ಓದಿನಲ್ಲಿಯ ಯಾವುದೇ ಒಂದು ವಿಚಾರ ನಿಮ್ಮಲ್ಲಿ ಸ್ಪೂರ್ತಿಯ ಕಿಡಿಯನ್ನು ಹೊತ್ತಿಸಬಹುದು.ಓದಿನ ಮೌಲ್ಯವನ್ನು ಅರಿತು ಅನುಸರಿಸಿದರೆ ಸ್ಪೂರ್ತಿಗೆ ಮಹಾನ್ ಪಾಠ ದೊರೆಯುವುದು. ಈಗಿನ ಗ್ಯಾಜೆಟ್ ದುನಿಯಾದಲ್ಲಿ ಪುಸ್ತಕ ಓದುವದಕ್ಕಿಂತ ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥಗೊಳಿಸುವುದೇ ಹೆಚ್ಚಾಗುತ್ತಿದೆ.

ಇದು ಒಂಟಿತನಕ್ಕೆ ಜಾರಿಸುತ್ತಿದೆ. ‘ಎಲ್ಲ ಸಮಸ್ಯೆಗಳನ್ನು ತಪ್ಪಿಸಿ ಬಿಡುವ ಬದಲು ಎದುರಿಸಿದರೆ ಅವು ಚಿಕ್ಕದಾಗುತ್ತವೆ.’ ಸ್ಪೂರ್ತಿಯಿದ್ದಲ್ಲಿ ನಮ್ಮೆಲ್ಲ ಕನಸುಗಳನ್ನು ಬೆನ್ನಟ್ಟಿ ಗೆಲ್ಲಬಹುದು. ಎಂಬುದು ಓದಿನಿಂದ ಬಹು ಬೇಗ ಅರ್ಥವಾಗುತ್ತದೆ.ಒಬ್ಬ ಒಳ್ಳೆಯ ಓದುಗನು ಅವಕಾಶಗಳನ್ನು ಒಳ್ಳೆಯ ಭಾಗ್ಯವನ್ನಾಗಿ ಬದಲಾಯಿಸುತ್ತಾನೆ. ಯಾವಾಗಲಾದ್ರೂ ಓದಿದ್ರಾಯ್ತು ಎಂದು ಉದಾಸೀನ ಮಾಡಿದರೆ ಜೀವನ ಸ್ಪೂರ್ತಿಯನ್ನು ಸವಿಯಲಾಗುವುದಿಲ್ಲ.

ಸಂಗೀತ ಆಲಿಸಿ

‘ನಾನು ಮೂರು ದಿನ ಸಂಗೀತ ಅಭ್ಯಾಸ ಮಾಡದಿದ್ದರೆ ನನ್ನ ಗಾಯನದಲ್ಲೇನೋ ಕೊರತೆಯಿದೆ ಎಂದು ನನ್ನ ಮನೆಯಾಕೆಗೆ ತಿಳಿಯುತ್ತದೆ. ಎರಡು ದಿನ ಅಭ್ಯಾಸ ಬಿಟ್ಟರೆ ತಟ್ಟನೆ ನನ್ನ ಅಭಿಮಾನಿಗಳು ಗುರುತಿಸಬಲ್ಲರು. ಇಲ್ಲ ಒಂದೇ ಒಂದು ದಿನ ಅಭ್ಯಾಸವನ್ನು ಬಿಟ್ಟರೂ ನನ್ನ ಆಲಾಪದಲ್ಲೇನೋ ಕೊರತೆಯಿದೆ ಎಂದು ಖುದ್ದು ನನಗೆ ಗೊತ್ತಾಗುತ್ತದೆ.

’ಇದು ಸಂಗೀತದ ದೈತ್ಯ ಪ್ರತಿಭೆ ಎಂದೇ ಖ್ಯಾತರಾದ ಜಗಜೀತ್ ಸಿಂಗ್ ತನ್ನ ಅಭ್ಯಾಸದ ಕುರಿತು ಸ್ವಾರಸ್ಯಕರವಾಗಿ ಹೇಳಿದ ರೀತಿ. ಸಂಗೀತವು ಮನಸ್ಸನ್ನು, ಸುಂದರ ಭಾವನೆಗಳನ್ನು ಅರಳಿಸುತ್ತದೆ. ನಿಮಗೆ ಬೇಕಾದುದನ್ನು ಪಡೆಯಲು ಕಷ್ಟ ಪಟ್ಟು ಕೆಲಸ ಮಾಡಿದ ನಂತರ, ಅದನ್ನು ಸಂತೋಷದಿಂದ ಅನುಭವಿಸಲು ಸಮಯ ಪಡೆದುಕೊಳ್ಳಿ. ಗಜಿ ಬಿಜಿಯಾಗಿರುವ ಮನಸ್ಸಿಗೆ ವಿಶ್ರಾಂತಿ ನೀಡಿ ಮುದಗೊಳಿಸುತ್ತದೆ. ಸೂರ್ತಿಯತ್ತ ವಾಲಿಸುತ್ತದೆ.

ದಿನಚರಿ ಬದಲಿಸಿ

‘ಮಾಡಿದ್ದನ್ನೇ ಮಾಡುತ್ತ ವಿಭಿನ್ನವಾದ ಫಲಿತಾಂಶವನ್ನು ನಿರೀಕ್ಷಿಸುವುದು ಮೂರ್ಖತನ.’ ಎಂದು ಹೇಳಿದ್ದಾನೆ ಜಗತ್ತಿನ ಮೇಧಾವಿ ವಿಜ್ಞಾನಿ ಅಲ್ಬರ್ಟ್ ಐನಸ್ಟೀನ್. ದಿನ ನಿತ್ಯ ಅದೇ ಕೆಲಸ ಅದೇ ಜನರು ಅದೇ ಗೊಣಗಾಟ ಜಂಜಾಟ. ಹೀಗಿದ್ದಾಗ್ಯೂ ದಿನಚರಿಯಲ್ಲಿ ಬದಲಾವಣೆಗೆ ಮನಸ್ಸು ಮಾಡುವುದು ಕಮ್ಮಿ. ಇಲ್ಲವೇ ಇಲ್ಲವೆನ್ನುವಷ್ಟು ಬದಲಾವಣೆಯನ್ನು ದೈನಂದಿನ ಕೆಲಸಗಳಲ್ಲಿ ತರುತ್ತೇವೆ.

ನಿರಾಸಕ್ತಿಯಿಂದ ಅದನ್ನೇ ನಿಯಮಿತವಾಗಿ ಪಾಲಿಸುತ್ತೇವೆ. ಒಂದೇ ದಾರಿಯಲ್ಲೇ ಓಡಾಡುತ್ತೇವೆ. ಒಂದೇ ಹೊಟೆಲ್ಲಿನಲ್ಲಿ ಕಾಫೀ ಹೀರುತ್ತೇವೆ. ತಿನ್ನುವ ತಿಂಡಿ ತಿನಿಸು ಬದಲಿಸಲೂ ಹಿಂಜರಿಯುತ್ತೇವೆ. ಒಟ್ಟಿನಲ್ಲಿ ಏಕತಾನತೆಗೆ ಗಂಟು ಬಿದ್ದಿರುತ್ತೇವೆ. ಬದಲಾವಣೆ ಮನಸ್ಸಿಗೆ ಆಗಿ ಬರುವ ಮಾತಲ್ಲ. ದಿನಚರಿ ಬದಲಿಸಲು ಮನಸ್ಸು ಅಷ್ಟು ಸುಲಭವಾಗಿ ಒಪ್ಪುವುದೂ ಇಲ್ಲ.

ಹೊಸ ಸವಾಲುಗಳು ತಲೆ ತಿನ್ನುವ ಸಮಸ್ಯೆಗಳೆನಿಸದೇ, ಹೊಸ ಆಯಾಮದಲ್ಲಿ ಹೊಸ ಅನುಭವಗಳಾಗಬೇಕೆಂದರೆ ಸೂರ್ತಿಯುತ ದಿನಚರಿಗೆ ಅಣಿಯಾಗಬೇಕು. ‘ಸಮುದ್ರ ಶಾಂತವಾಗಿದ್ದಾಗ ಯಾರು ಬೇಕಿದ್ದರೂ ಚುಕ್ಕಾಣಿ ಹಿಡಿಯಬಹುದು.’ ಮನಸ್ಸು ಶಾಂತವಾಗಿರುವಾಗ ಅದನ್ನು ಪುಟ್ಟ ಮಗುವನಂತೆ ಮುದ್ದಿಸಿ ಹೊಸ ಬದಲಾವಣೆಗೆ ಒಪ್ಪಿಸಬೇಕು. ’ಅತ್ಯುತ್ತಮ ದಿನಚರಿ ನಮ್ಮದಾಗಿದ್ದರೆ ಸ್ವಯಂ ಸ್ಪೂರ್ತಿಯ ನಮ್ಮ ಅಂಗೈಯಲ್ಲೇ ಇದೆ.

ದೇಶ ಸುತ್ತಿ

ಶೈಕ್ಷಣಿಕ ಪ್ರವಾಸ ಇಲ್ಲವೇ ಸಣ್ಣ ಪುಟ್ಟ ಪ್ರಯಾಣಗಳು ನವನವೀನ ಅನುಭವಗಳನ್ನು ನೀಡುತ್ತವೆ. ವಿಚಾರದ ದಿಕ್ಕನ್ನು ಉತ್ತಮತೆಯತ್ತ ಹೊರಳಿಸುತ್ತವೆ. ದೂರದ ದೇಶಕ್ಕೆ ಪಯಣಿಸಬೇಕೆಂದೇನೂ ಇಲ್ಲ. ವಾಸವಿರುವ ನಗರವನ್ನೇ ಸುತ್ತಬಹುದು.

ನೀವಿನ್ನೂ ನೋಡಿರದ ಪಾರ್ಕ್‍ನಲ್ಲಿ ಸುತ್ತಾಡಿ. ಹೊಸ ಮಠ ಮಂದಿರಗಳಿಗೆ ಕುಟುಂಬ, ಗೆಳೆಯರೊಂದಿಗೆ ಹೋಗಿ ಬನ್ನಿ.ವಿವಿಧ ಹಾದಿ ಬೀದಿಗಳಲ್ಲಿ ತಿರುಗುವುದು ವಿಶಿಷ್ಟ ಸ್ಪೂರ್ತಿಗೆ ದಾರಿಯಾಗುತ್ತದೆ. ಪಕ್ಕದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರೂ ಲವಲವಿಕೆ ತುಂಬಿಕೊಳ್ಳುತ್ತದೆ. ಅಜ್ಞಾನದ ಅಂದಕಾರವನ್ನು ಕಡಿಮೆಗೊಳಿಸಿ ಜ್ಞಾನ ಕ್ಷಿತಿಜವನ್ನು ಅಗಲಿಸುತ್ತವೆ.

ಎತ್ತರದ ಗುರಿಯಿರಲಿ

ತಮಗೆಲ್ಲ ಗೊತ್ತಿರುವಂತೆ ಓಲಂಪಿಕ್ಸ್ ನಾಲ್ಕು ವರ್ಷಕ್ಕೊಮ್ಮೆ ಬರುವ ಕ್ರೀಡಾಕೂಟ. ಆದರೆ ಲಕ್ಷೋಪಲಕ್ಷ ಕ್ರೀಡಾ ಪಟುಗಳು ಓಲಂಪಿಕ್ಸ್ ನಲ್ಲಿ ಬಂಗಾರದ ಪದಕ ಕೊರಳಿಗೇರಿಸಿ ಗೆಲುವಿನ ರುಚಿ ನೋಡಲು ದಿನ ನಿತ್ಯ ಬೆವರು ಹರಿಸುತ್ತಿರುತ್ತಾರೆ. ಉಸೇನ್ ಬೋಲ್ಟ್ ನೂರು ಮೀಟರ್ ಕ್ರಮಿಸಲು ಬೇಕಾಗಿರುವ ಅವಧಿ ಬರೀ ಒಂಭತ್ತುವರಿ ಸೆಂಕೆಡುಗಳಷ್ಟೇ! ಆದರೆ ನಿತ್ಯದ ಅಭ್ಯಾಸ? ಉಳಿದ ಓಟಗಾರನಿಗಿಂತ ನೂರು ಪಟ್ಟು ಹೆಚ್ಚು ಮಾಡಲೇಬೇಕು.

ಅಷ್ಟರ ಮಟ್ಟದ ಸ್ವಯಂ ಸ್ಪೂರ್ತಿ ಇರದಿದ್ದರೆ ಉಸೇನ್ ಬೋಲ್ಟ್ ಜಾಗತಿಕ ಮಟ್ಟದಲ್ಲಿ ನಂಬರ್ ಒನ್ ಓಟಗಾರನಾಗಿ ಮಿಂಚಲು ಸಾಧ್ಯವಾಗುತ್ತಿರಲಿಲ್ಲ. ಸ್ವಯಂ ಸ್ಪೂರ್ತಿಯಿಲ್ಲದೇ ಗೆಲುವು ಕಂಡಿರುವ ವ್ಯಕ್ತಿ ಇರುವುದು ಅಸಾಧ್ಯ. ‘ಸಣ್ಣ ಗುರಿಗಳನ್ನು ಹೊಂದುವುದು ಅಪರಾಧ’ಎಂದಿದ್ದಾರೆ ಅಬ್ದುಲ್ ಕಲಾಂ. ಎತ್ತರದ ಆಗಸಕ್ಕೆ ಹಾರುವುದು ನಮ್ಮ ಗುರಿಯಾಗಿರಬೇಕು.

ನಾವು ಅಲ್ಲಿಗೆ ತಲುಪದಿರಬಹುದು ಆದರೆ ನಾವಿರುವ ಮಟ್ಟದಲ್ಲೇ ಇರುವ ವಸ್ತುವಿಗೆ ಗುರಿಯಿಟ್ಟರೆ ಹಾರುವ ಮಟ್ಟಕ್ಕಿಂತ ಕಡಿಮೆ ಮಟ್ಟಕ್ಕೆ ನಮ್ಮ ಗುರಿಯ ಬಾಣ ಹಾರುತ್ತದೆ. ಎಲ್ಲಿಯವರೆಗೂ ನಾವು ಸ್ವಯಂ ಸ್ಪೂರ್ತಿಗೆ ಹಾತೊರೆಯುವುದಿಲ್ಲವೋ ಅಲ್ಲಿಯವರೆಗೆ ಗೆಲುವು ನಮಗೆ ದಕ್ಕುವುದಿಲ್ಲ. ನಾವು ಯಾವುದನ್ನಾದರೂ ಸಾಕಷ್ಟು ಪ್ರೀತಿಸಿದರೆ, ಅದು ತನ್ನ ರಹಸ್ಯಗಳನ್ನೆಲ್ಲ ಬಿಟ್ಟು ಕೊಡುತ್ತದೆ. ಆದ್ದರಿಂದ ಅಂಗೈಯಲ್ಲಿರುವ ಸ್ವಯಂ ಸ್ಪೂರ್ತಿಯನ್ನು ಪ್ರೀತ್ಸೋಣ ದೊಡ್ಡ ಗೆಲುವಿನ ನಗೆ ಬೀರೋಣ.


ಜಯಶ್ರೀ.ಜೆ. ಅಬ್ಬಿಗೇರಿ 9449234142

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...
- Advertisement -

More Articles Like This

- Advertisement -
close
error: Content is protected !!