ಬಂಧುಗಳು ಆದವರು ಬಂದುಂಡು ಹೋಗುವರು
ಬಂಧನವ ಕಳೆಯಲರಿಯರು ಗುರುವಿಂದ
ಬಂಧುಗಳು ಉಂಟೆ ? ಸರ್ವಜ್ಞ
ಬಂಧುಗಳು ಅಂದರೆ ಏನೆಂಬುದನ್ನು ನಾನು ಎರಡು ಚುಟುಕು ಬರೆದಿದ್ದೇನೆ.
ಬಂಧುಗಳೆಂದರೆ
ನನಗೆ ಆಗುವುದಿಲ್ಲ
ಏಕೆಂದರೆ ಅವರು
ನನ್ನ ಕಷ್ಟ ಕಾಲಕ್ಕೆ
ಆಗುವುದಿಲ್ಲ !
ತಿಥಿ ತೊಟ್ಟಿಲ
ಮದುವೆ ಮುಂಜಿಗಳಿಗೆ
ಬಂದು ಬಂದು
ತಿಂದು ಹೋಗುವವನೆ ಬಂಧು !
ಅದಕ್ಕೆ ಸರ್ವಜ್ಞ ಬಂಧುಗಳು ಆದವರು ತಿಂದುಂಡು
ಹೋಗುವರು ಎಂದು ಹೇಳಿದ್ದಾನೆ. ಅವರು ನಮ್ಮ ಕಷ್ಟ
ಕಾರ್ಪಣ್ಯ ಕಳೆಯುವುದಿಲ್ಲ. ನಿಜವಾದ ಬಂಧು ಯಾರೆಂದರೆ
ನಮ್ಮ ಕಷ್ಟ ಕಾಲದಲ್ಲಿ ಸಹಾಯ ಮಾಡುವವನು ಮಾತ್ರ.
ಉಳಿದವರು ಮಾತ್ರ ರಕ್ತ ಸಂಬಂಧಿಗಳು. ನಿಜವಾದ
ಬಂಧುಗಳು ತಂದೆ ತಾಯಿ ಗುರು ಮತ್ತು ಅತಿಥಿಗಳು.
ಅದಕ್ಕೆ ಮಾತೃ, ಪಿತೃ ,ಆಚಾರ್ಯ, ಅತಿಥಿ ದೇವೋ ಭವ
ಎಂದು ಹೇಳುತ್ತಾರೆ. ಇವರಿಂದ ನಮ್ಮ ತೊಂದರೆ ನೀಗುತ್ತದೆ.
ಆದರೆ ವಿಶೇಷವಾಗಿ ಗುರು ಈ ಭವ ಬಂಧನ ಕಳೆದುಕೊಳ್ಳುವ ಮಾರ್ಗ ತೋರುತ್ತಾನೆ. ಗುರುವೇ ಎಲ್ಲ ಬಂಧು ಬಳಗ ತಂದೆ ತಾಯಿ ಮತ್ತು ಅತಿಥಿ. ಇಂಥ ಗುರುವಿನ ಸೇವೆಯಿಂದ ನಮಗೆ ಸಂಸಾರ ಬಂಧನದಿಂದ ಬಿಡುಗಡೆ ಸಿಗುತ್ತದೆ.
ತಂದೆಗೂ ಗುರುವಿಗೂ ಒಂದು ಅಂತರವುಂಟು
ತಂದೆ ತೋರುವನು ಸದ್ಗುರುವ ಗುರುವಿಂದ
ಬಂಧನವು ಬಯಲು ಸರ್ವಜ್ಞ
ತಂದೆ ಪೋಷಣೆ ಪಾಲನೆ ಮಾಡುತ್ತಾನಷ್ಟೆ ಮತ್ತು ಬದುಕುವ
ಮಾರ್ಗವನ್ನು ತೋರಿಸುತ್ತಾನೆ.ಅದರ ಜೊತೆಗೆ ನಿಜವಾದ
ಗುರುವನ್ನು ತೋರಿಸುತ್ತಾನೆ. ತಂದೆ ಮೇಲಿದ್ದವನನ್ನು ತಂದೆ ಎಂದಾಗ ತಾಯಿ ತಾ ,ಈ(ಕೊಡು)ಎಂದು ಗರ್ಭದಲ್ಲಿ ಪಡೆದು ಜನ್ಮ ಕೊಡುತ್ತಾಳೆ. ತಂದೆ ಗುರುವಿನ ಅಂತರವನ್ನು
ಸರ್ವಜ್ಞ ಒಂದೆ ಮಾತಿನಲ್ಲಿ ಹೇಳುತ್ತಾನೆ. ತಂದೆ
ಮೇಲಿದ್ದವನನ್ನು ಭೂಮಿಗೆ ತಂದರೆ ಗುರು ಇಲ್ಲಿದ್ದವನನ್ನು ಮತ್ತೆ ಮರಳಿ ಅಲ್ಲಿಗೆ ಹೋಗುವ ಅಧ್ಯಾತ್ಮ ವಿದ್ಯೆ ಕಲಿಸುತ್ತಾನೆ.
ಹೀಗಾಗಿ ಭೂಮಿಗೆ ತಂದ ತಂದೆತಾಯಿಗಿಂತ ಕರುಣಾಮಯಿ ಗುರುವಿಂದ ಭವಬಂಧನ ತೊಲಗುತ್ತದೆ. ಗುರುವೆ ಅಧಿಕ. ನಗುರೋರಧಿಂ ಎಂಬ ಮಾತು ದಿಟ.
ಗುರುವಿಂಗೆ ದೈವಕ್ಕೆ ಹಿರಿದು ಅಂತರವುಂಟು
ಗುರುತೋರ್ವ ದೈವದೆಡೆಯನು ದೈವ ತಾ
ಗುರುವ ತೋರುವುದೆ ? ಸರ್ವಜ್ಞ
ಇಲ್ಲಿ ಸರ್ವಜ್ಞ ಹರ ಮತ್ತು ಗುರುವಿನ ಅಂತರವನ್ನು ಹೇಳಿದ್ದಾನೆ. ಗುರು ದೇವರನ್ನು ತೋರಿಸುತ್ತಾನೆ.ಆದರೆ
ದೇವರಿಗೆ ಗುರುವನ್ನು ತೋರಿಸಲಾಗುವುದಿಲ್ಲ. ಏಕೆಂದರೆ
ದೇವರು ನಿರಾಕಾರ. ಕಣ್ಣಿಗೆ ಕಾಣುವ ಗುರುವೆ
ನಿಜವಾದ ದೇವರು ಎಂಬುದು ಸರ್ವಜ್ಞನ ಅಭಿಪ್ರಾಯ.
ಅಂಥ ಗುರುವು ದೇವರಿಗಿಂತ ಮಿಗಿಲಾದವನು. ಹರ
ಮುನಿದರೆ ಗುರು ಕಾಯುತ್ತಾನೆ.ಆದರೆ ಗುರು ಮುನಿದರೆ
ಹರನು ಸಹ ಕಾಯುವುದಿಲ್ಲ. ಅಂಥ ಸಾಮರ್ಥ್ಯ ಗುರುವಿನಲ್ಲಿ
ಇರುತ್ತದೆ. ಗುರು ಲಿಂಗ ಮತ್ತು ಜಂಗಮ ಈ ಮೂರು
ಬೇರೆಬೇರೆಯಲ್ಲ. ಮೂವರು ಬಂಧನ ಬಿಡಿಸುವವರು.
ಮೂವರು ಪೂಜೆಗೊಳ್ಳುವವರು.
ಎನ್.ಶರಣಪ್ಪ ಮೆಟ್ರಿ ಗಂಗಾವತಿ
9449030990