ಹರಿವ ಹಕ್ಕಿಯ ನುಂಗಿ ನೊರೆವಾಲ ಕುಡಿವಾತ
ಹರಿಹರನಕ್ಕುಅಜನಕ್ಕು ಲೋಕಕ್ಕೆ
ಅರಿವು ತಾನಕ್ಕು ಸರ್ವಜ್ಞ
ಹರಿದಾಡುವ ಮನವೆಂಬ ಹಕ್ಕಿಯ ಕಣ್ಣೆಂಬ ಕಾಲು
ಹಿಡಿಯಲು ಉಸಿರಾಟವೆಂಬ ರೆಕ್ಕೆಯ ಬಡಿದಾಟ
ನಿಂತು ಮನಸ್ಸು ಕೈಗೆ ಸಿಗುತ್ತದೆ.ಅದನ್ನು ನುಂಗುತ್ತ ಮೇಲೆ
ಅಮೃತವೆಂಬ ನೊರೆಹಾಲು ಕುಡಿದರೆ ಆತ ಬ್ರಹ್ಮ ವಿಷ್ಣು
ಮಹೇಶ್ವರನಂತೆ ದೇವನಾಗುತ್ತಾನೆ. ತ್ರಿಕಾಲ ಜ್ಞಾನಿಯಾಗುತ್ತಾನೆ. ಅಂದರೆ ದೃಷ್ಟಿಯಿಟ್ಟು ಲಿಂಗವನ್ನು
ನೋಡುತ್ತ ಇದ್ದರೆ ಕಣ್ಣಾಲಿ ನಿಂತರೆ ಗಾಳಿಯ ಉಸಿರಾಟವು
ಹಿಡಿತಕ್ಕೆ ಬರುತ್ತದೆ.ಗಾಳಿ ಸಮಸ್ಥಿತಿಗೆ ಬಂದರೆ ಆಗ
ಧ್ಯಾನ ತಂತಾನೆ ಘಟಿಸಿ ಮನ ನಿಲ್ಲುತ್ತದೆ. ಮನ ನಿಂತರೆ
ಸಾಕು ಆಗ ವಿಶ್ವಶಕ್ತಿ ಮೆದುಳಿನಲ್ಲಿ ಇಳಿದು ಅಮೃತರಸ
ಸೂಸುತ್ತದೆ.ಆಗ ಆನಂದ ಆರೋಗ್ಯ ಬ್ರಹ್ಮಜ್ಞಾನ
ಉಂಟಾಗುತ್ತದೆ.
ವಿಷಯದ ಬೇರನ್ನು ಬಿಸಿಮಾಡಿ ಕುಡಿದಾತ
ಪಶುಪತಿಯಕ್ಕು ಸಸಿನಕ್ಕು ಮೆಯ್ಬಣ್ಣ
ಮಿಸುನಿಯಂತಕ್ಕು ಸರ್ವಜ್ಞ
ವಿಷಯ ಸುಖ ವಿಷಕಿಂತ ಘನಘೋರ.ವಿಷಯ ಸುಖವೆಂದರೆ ಪಂಚೇಂದ್ರಿಯಗಳ ರೂಪ ರುಚಿ ಗಂಧ ಶಬ್ಧ ಸ್ಪರ್ಶ ಸುಖಗಳು. ಅದರ ಬೇರನ್ನು ಕಿತ್ತಿ ಅಂದರೆ ನಿಗ್ರಹಿಸಿ ಜ್ಞಾನವೆಂಬ ಬಿಸಿನೀರು ಕುಡಿದರೆ ಆತನೆ ಪರಮಾತ್ಮನಾಗುವನು. ಇಂದ್ರಿಯ ನಿಗ್ರಹಿಸಿದವನ
ಮೈಯ್ಯಿ ಮುಖ ಸುಂದರವಾಗಿ ಆರೋಗ್ಯಪೂರ್ಣವಾಗಿ
ಬಂಗಾರದಂತೆ ತೇಜಸ್ಸಿನಿಂದ ಹೊಳೆಯುತ್ತದೆ. ಯೋಗಿಯ
ಮುಖ ನೋಡಲು ಶಿವಕಳೆಯಿಂದ ಆಕರ್ಷಕವಾಗಿ
ಇರುತ್ತದೆ ಎಂದು ಸರ್ವಜ್ಞ ಯೋಗಿಯ ಲಕ್ಷಣವನ್ನು
ತಿಳಿಸಿದ್ದಾನೆ.
ಕಚ್ಚೆ ಕೈಬಾಯಿಗಳು ಇಚ್ಛೆಯಲಿ ಇದ್ದಿಹರೆ
ಅಚ್ಯುತನಪ್ಪ ಅಜನಪ್ಪ ಲೋಕದಲಿ
ನಿಶ್ಚಿಂತನಪ್ಪ ಸರ್ವಜ್ಞ
ಮಾಣಿ(ಜನನೇಂದ್ರಿಯ) ಪಾಣಿ(ಕರ) ವಾಣಿ(ಮಾತು)
ಯಾರು ತನ್ನ ವಶದಲ್ಲಿ ಇಟ್ಟುಕೊಳ್ಳುತ್ತಾರೋ ಅವರು
ವಿಷ್ಣು ಬ್ರಹ್ಮ ಮಹೇಶ್ವರರಂತೆ ನಿಶ್ಚಂತೆಯುಳ್ಳ ಯೋಗಿಗಳು
ಆಗುತ್ತಾರೆ ಎಂದು ಸರ್ವಜ್ಞ ಹೇಳುತ್ತಾನೆ.
ಪರಸ್ತ್ರೀ ಗಮನ, ಕಳ್ಳತನ ಮಾಡದಿರುವುದು ಮತ್ತು ಚಾಡಿ
ಸುಳ್ಳು ನಿಂದನೆ ಆಡಿಕೊಳ್ಳುವುದು ,ರುಚಿಯೆಂದು ಅತಿ ತಿನ್ನುವುದು ಹೀಗೆ ಜನನೇಂದ್ರಿಯ ಕೈಬಾಯಿಗಳು ಹಿಡಿತದಲ್ಲಿರಬೇಕು. ಹಾಗಾದರೆ ಅವನು ಭೂಲೋಕದ ದೇವನಾಗುತ್ತಾನೆ. ಈ ಮೂರನ್ನು ನಿಗ್ರಹಿಸಲು
ಸರ್ವಜ್ಞ ಹೇಳುತ್ತಾನೆ
ಎನ್.ಶರಣಪ್ಪ ಮೆಟ್ರಿ ಗಂಗಾವತಿ 9449030990