ಒಂದು ಊರಿನಲ್ಲಿ ಒಂದು ಆಫೀಸ್ ಇರುತ್ತದೆ. ಅಲ್ಲಿ ನೂರಾರು ಜನ ಕೆಲಸ ಮಾಡುತ್ತಿರುತ್ತಾರೆ. ಆ ಆಫೀಸಿನಲ್ಲಿ ಒಬ್ಬ ಬಾಸ್ ಇರುತ್ತಾನೆ.
ದೀಪಾವಳಿ ಹಬ್ಬ ಬರುತ್ತದೆ. ಅಲ್ಲಿಯ ನೌಕರರು ಚೆನ್ನಾಗಿ ಕೆಲಸ ಮಾಡಿದ್ದರಿಂದ ಆ ಆಫೀಸಿನ ಬಾಸ್ ನಿಗೆ ಬಹಳಷ್ಟು ಲಾಭವಾಗಿರುತ್ತದೆ. ಆಗ ಆತ ತನ್ನ ಸಿಬ್ಬಂದಿಗಳಿಗೆ ಭರಪೂರ ಬೋನಸ್ ಹಣ ಕೊಡುತ್ತಾನೆ. ಅಷ್ಟೇ ಅಲ್ಲದೇ ತನ್ನ ಸಿಬ್ಬಂದಿಗಳಿಗೆ ಒಂದು ಸ್ಪರ್ಧೆ ಏರ್ಪಡಿಸುತ್ತಾನೆ.
ನೂರಾರು ಮೊಸಳೆಗಳು ಇರುವ ದೊಡ್ಡ ಕೆರೆಯಲ್ಲಿ ಒಂದು ದಡದಿಂದ ಇನ್ನೊಂದು ದಡಕ್ಕೆ ಈಜುತ್ತ ಸೇರಬೇಕು. ಮೊಸಳೆಗಳ ಹಿಡಿತದಿಂದ ಪಾರಾಗಿ ದಡಕ್ಕೆ ಬಂದು ಸೇರಿದರೆ , ಐವತ್ತು ಲಕ್ಷ ರೂಪಾಯಿ ಬಹುಮಾನ ಇರುತ್ತದೆ. ಒಂದು ವೇಳೆ ಮೊಸಳೆಗಳ ಹಿಡಿತದಿಂದ ತಪ್ಪಿಸಿಕೊಳ್ಳದೇ , ಅಲ್ಲಿಯೇ ಹುತಾತ್ಮನಾದರೆ , ಆತನ ವಾರಸುದಾರರಿಗೆ ಹತ್ತು ಲಕ್ಷ ರೂಪಾಯಿ ಎಂದು ಘೋಷಿಸುತ್ತಾನೆ.
ಅಲ್ಲಿ ಕೂಡಿರುವ ಸಿಬ್ಬಂದಿ ವರ್ಗದ ಪೈಕಿ ಯಾರೂ ನೀರಿಗೆ ಇಳಿಯುವ ಸಾಹಸ ತೋರಿಸಲಿಲ್ಲ .
ಆದರೆ ಸ್ವಲ್ಪ ಸಮಯದ ನಂತರ ಅಕಸ್ಮಾತ್ತಾಗಿ ಒಬ್ಬ ಕೆರೆಗೆ ಹಾರಿರುತ್ತಾನೆ. ಅವನನ್ನು ಹಿಡಿದು ತಿನ್ನಲು , ಮೊಸಳೆಗಳು ಅವನ ಹಿಂದೆ ಬೆನ್ನು ಬೀಳುತ್ತವೆ. ಮೊಸಳೆಗಳು ರಭಸವಾಗಿ ತನ್ನ ಕಡೆಗೇ ಬರುವುದನ್ನು ನೋಡಿದ ಆತ ಹಾಗೂಹೀಗೂ ಏದುಸಿರು ಬಿಡುತ್ತ , ಬದುಕಿದೆಯಾ ಬಡ ಜೀವವೇ ಎನ್ನುತ್ತ , ಮತ್ತೊಂದು ದಡಕ್ಕೆ ಸೇರುತ್ತಾನೆ.
ಆಫೀಸಿನ ಬಾಸ್ ನಿಗೆ ಬಹಳಷ್ಟು ಖುಷಿಯಾಗುತ್ತದೆ. ನಮ್ಮ ಆಫೀಸಿನಲ್ಲಿ ಇಂಥ ಒಬ್ಬ ಧೈರ್ಯಶಾಲಿ ಸಿಬ್ಬಂದಿ ಇರುವುದು ಅವನಿಗೆ ತುಂಬಾ ಸಂತಸ ತಂದಿರುತ್ತದೆ.
ಮೊದಲೇ ನಿರ್ಧಾರವಾದಂತೆ , ಆತನಿಗೆ ಐವತ್ತು ಲಕ್ಷ ರೂಪಾಯಿಯ ಚೆಕ್ಕನ್ನು ಕೊಡಲು ಬಾಸ್ ಬಂದಾಗ , ಅವನು “ನನ್ನನ್ನು ಹಿಂದಿನಿಂದ ಕೆರೆಯಲ್ಲಿ ನೂಕಿದವರು ಯಾರು ? ಮೊದಲು ಹೇಳ್ರೀ ” ಅನ್ನುತ್ತಾನೆ.
ಅಲ್ಲಿಯೇ ಬದಿಯಲ್ಲಿ ನಿಂತಿದ್ದ ಆತನ ಹೆಂಡತಿ “ನಾನs ನಿಮ್ಮನ್ನು ತಳ್ಳಿದ್ದು ; ಹ್ಯಾಗೂ ಈಸಿ ಬಂದ್ರ ಐವತ್ತು , ಬರದಿದ್ದರೆ ಹತ್ತು ಲಕ್ಷ ಇತ್ತಲ್ಲಾ ; ಅದಕ್ಕ ನಾನs ತಳ್ಳೇನಿಯಳ್ರೀ ” ಎನ್ನಬೇಕೆ ?
“ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ”
( ಸುಮ್ಮನೇ ಒಸಿ ನಕ್ಕು ಬಿಡಿ)
– ನೀಲಕಂಠ ದಾತಾರ.