ಬೀದರ – ಬೀದರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಪ್ರತಿಯೊಂದು ಲೇ ಔಟ್ ಮಾಡಲು ದುಡ್ಡು ಕೊಡಲೇಬೇಕು. ಈ ಲಂಚದ ಹಣ ಬುಡಾ ಕಚೇರಿಯ ಆಯುಕ್ತರಿಗೆ ಹಾಗೂ ಎಲ್ಲರಿಗೂ ಹಂಚಿಕೆಯಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರಿಗೂ ಹೋಗುತ್ತದೆ ಎಂದು ಚಂದ್ರಕಾಂತ ರೆಡ್ಡಿ ಹೇಳಿದ್ದಾರೆ ಎಂದು ಸತೀಶ ನೌಬಾದೆ ಗಂಭೀರ ಆರೋಪ ಮಾಡಿದರು.
ಮೊನ್ನೆ ಲೋಕಾಯುಕ್ತರು ದಾಳಿ ಮಾಡಿ ಬುಡಾ ಆಯುಕ್ತರು ಹಾಗೂ ಇನ್ನಿಬ್ಬರು ಸಹಾಯಕರನ್ನು ಬಂಧಿಸಿದ ಹಿನ್ನೆಲೆಯಲ್ಲಿ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಗಂಭೀರ ಆರೋಪ ಮಾಡಿದರು.
ನನ್ನ ಲೇ ಔಟ್ ವಿನ್ಯಾಸ ಬಿಡುಗಡೆಗೆ ಒಂದು ಕೋಟಿ ರೂ. ಲಂಚದ ಬೇಡಿಕೆ ಇಟ್ಟಿದ್ದರು. ನನ್ನ ನಿವೇಶನ ಮಾರಾಟ ಮಾಡಿದರೂ ಅಷ್ಟೊಂದು ಬರೋದಿಲ್ಲ ಅಂತ ನಾನು ಐವತ್ತು ಲಕ್ಷ ಕೊಡಲು ಒಪ್ಪಿದೆ. ಅದರಂತೆ ನ.೨೨ ರಂದು ೧೦ ಲಕ್ಷ ರೂ. ಕೊಡುವಾಗ ಲೋಕಾಯುಕ್ತರು ದಾಳಿ ಮಾಡಿ ಚಂದ್ರಕಾಂತ ರೆಡ್ಡಿ ತನ್ನ ಆಪ್ತ ಸಿದ್ದು ಹೂಗಾರನನ್ನು ಬಂಧಿಸಿದರು. ಬುಡಾ ಆಯುಕ್ತ ಶ್ರೀಕಾಂತ ಚಿಮಕೊಡೆ ಅವರ ಆದೇಶದ ಮೇರೆಗೆ ಇವರು ಕೆಲಸ ಮಾಡುತ್ತಿದ್ದರು ಎಂದರು.
ಈಗ ಲೋಕಾಯುಕ್ತರಿಗೆ ದೂರು ಕೊಟ್ಟಿದ್ದಕ್ಕೆ ನನಗೆ ಅವರ ಸಹಚರರಿಂದ ಬೆದರಿಕೆ ಹಾಕುತ್ತಿದ್ದಾರೆ ಎಂದ ನೌಬಾದೆ, ನಾನು ಮಾರಾಟ ಮಾಡಿರುವ ನಿವೇಶನಗಳ ಮಾಲೀಕರಿಗೂ ಸಹ ತಪ್ಪು ಮಾಹಿತಿ ನೀಡಿ, ಅವರ ಲೇಔಟ್ ಕಾನೂನು ಬಾಹಿರವಾಗಿದೆ, ಖರೀದಿಸಬೇಡಿ ಕೊಟ್ಟಿರುವ ಹಣ ವಾಪಸ್ ಪಡೆದುಕೊಳ್ಳಿ ಎಂದು ರೆಡ್ಡಿ ಹೇಳುತ್ತಿದ್ದು ಅನೇಕರು ನನಗೆ ವಿನಾಕಾರಣ ಕಿರುಕುಳ ಕೊಡುತ್ತಿದ್ದಾರೆ. ಸಬ್ ರಜಿಸ್ಟ್ರಾರ ಕೂಡ ನೌಬಾದೆಯವರ ನಿವೇಶನಗಳನ್ನು ತೆಗೆದುಕೊಳ್ಳಬೇಡಿ ಎಂದು ಹೇಳುತ್ತಿದ್ದಾರೆ. ಬೆಂಗಳೂರಿನ ಕಚೇರಿ ಆಯುಕ್ತರು ಹೇಳಿದರು ಕಿಮ್ಮತ್ತು ಸಿಗುತ್ತಿಲ್ಲ ವಿನಾಕಾರಣ ನನಗೆ ತೊಂದರೆ ಕೊಡುತ್ತಿದ್ದಾರೆ ಎಂದರು.
ನನ್ನ ಲೇಔಟ್ ವಿನ್ಯಾಸ ಬಿಡುಗಡೆಗಾಗಿ ಬುಡಾ ಕಚೇರಿಗೆ ಅಲೆದಾಡಿದರೂ ಕೊಡುತ್ತಿಲ್ಲ. ಹಣ ಕೊಟ್ಟರೆ ಮಾತ್ರ ಕೊಡುವುದಾಗಿ ಹೇಳಿದರು. ನಿವೇಶನ ಲೇಔಟ್ ವಿಚಾರದಲ್ಲಿ ಸಾರ್ಜನಿಕರಿಂದ ಹಣ ದೋಚುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇದರಿಂದ ಬೇಸತ್ತು ನಾನು ಲೋಕಾಯುಕ್ತರಿಗೆ ದೂರು ನೀಡಿದ್ದೇನೆ ಎಂದು ಸತೀಶ ನೌಬಾದೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಮಕೃಷ್ಣ ಸಾಳೆ ಇದ್ದರು. ಲೋಕಾಯುಕ್ತರು ಭ್ರಷ್ಟ ಅಧಿಕಾರಿಗಳ ವಿರುದ್ಧ ಯಾವ ರೀತಿಯ ಕ್ರಮ ಜರುಗಿಸುತ್ತಾರೆ ಕಾದು ನೋಡಬೇಕು.
ವರದಿ : ನಂದಕುಮಾರ ಕರಂಜೆ, ಬೀದರ