spot_img
spot_img

Guru Poornima: ಗುರುವಿಲ್ಲದಾ ಜೀವನ ಸೂತ್ರವಿಲ್ಲದ ಗಾಳಿಪಟ

Must Read

- Advertisement -

(ಇಂದು ಗುರು ಪೂರ್ಣಿಮಾ; ತನ್ನಿಮಿತ್ತ ಈ ಲೇಖನ)

   “ಗುರುವಿಲ್ಲದಾ ಜೀವನ ಸೂತ್ರವಿಲ್ಲದ ಗಾಳಿಪಟ. ಭಗವಂತನ ಕರುಣೆ ಗುರುಗಳ ಮೂಲಕ ಹರಿದು ಬರುತ್ತದೆ. ಗಾಳಿಪಟವು ಸೂತ್ರವಿಲ್ಲದೇ ಹೇಗೆ ಸರಿಯಾಗಿ ಹಾರಲಾಗದೋ . ಹಾಗೆಯೇ ಗುರುವಿನ ಮಾರ್ಗದರ್ಶನವಿಲ್ಲದೇ ನಮ್ಮ ಬದುಕಿನಲ್ಲಿ ನಡೆಯಲಾಗದು. ಮನುಷ್ಯನಿಗೆ ಗುರುವನ್ನು ಬಿಟ್ಟು ಬೇರೆ ಗತಿಯಿಲ್ಲ. ಅಂದರೆ ಮುಕ್ತಿ ಇಲ್ಲ.ಮುಕ್ತಿಯನ್ನು ಹೊಂದುವುದೇ ಮಾನವ ಜನ್ಮದ ಸಾಫಲ್ಯವು.ಇಂಥಹ ಒಂದು ಸಾರ್ಥಕತೆಯನ್ನು ಹೊಂದಬೇಕಾದರೆ ಮುಖ್ಯವಾಗಿ ಗುರುವನ್ನು ಆಶ್ರಯಿಸಬೇಕು.ಹಾಗಾದರೆ ಗುರು ಏನು ಮಾಡುವನು ಎಂದರೆ ಮಾನವರಾದ ನಮ್ಮನ್ನು ದೇವಮಾನವರನ್ನಾಗಿ ಮಾಡುವರು. ಅವರು ನಮ್ಮ ಕಣ್ಣು,ಕಿವಿ, ಮನಸ್ಸುಗಳಿಗೆ ಆಗಾಗ ಕವಿಯುವ ಪೊರೆಯನ್ನು ತಮ್ಮ ಜ್ಞಾನಾಮೃತ ನುಡಿಗಳಿಂದ ಜಿಡ್ಡುಗಳನ್ನು ತಗೆದು ಮುಕ್ತಿ ನೀಡುವರು.

- Advertisement -

ಗುರು ಎಂದರೆ ಒಂದು ನಿರ್ದಿಷ್ಟ ವಿಭಾಗದಲ್ಲಿ ಹೆಚ್ಚಿನ ಜ್ಞಾನ,ಬುದ್ದಿವಂತಿಕೆ ಮತ್ತು ನಿಪುಣತೆಯನ್ನು ಹೊಂದಿರುವ ಮತ್ತು ಇತರರಿಗೆ ನಿರ್ದೇಶನವನ್ನು ನೀಡಲು(ಶಿಕ್ಷಕ) ಈ ಬುದ್ದಿವಂತಿಕೆಯನ್ನು ಬಳಸುವ ವ್ಯಕ್ತಿ. ಸಂಸ್ಕೃತದಲ್ಲಿ “ಗು”ಎಂದರೆ ಅಂಧಕಾರ “ರು” ಎಂದರೆ ಬೆಳಕು ಅಂದರೆ ಅರಿವಿನ ಅಭಿವೃದ್ದಿಯ ಒಂದು ಮೂಲತತ್ವವಾಗಿ ಈ ಪದ ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುತ್ತದೆ ಎಂಬ ಅರ್ಥವನ್ನು ನೀಡುತ್ತದೆ.

ಗುರು ಬ್ರಹ್ಮ ಗುರು ವಿಷ್ಣು

ಗುರುದೇವೋ ಮಹೇಶ್ವರ

- Advertisement -

ಗುರುಸಾಕ್ಷಾತ್ ಪರಬ್ರಹ್ಮ   ತಸ್ಮೈ ಶ್ರೀಗುರುವೇನಮ:

ಎಂದು ಪ್ರಾರ್ಥಿಸುವ ಪರಂಪರೆಯ ದೇಶ ನಮ್ಮದು. ವೇದ, ಉಪನಿಷತ್, ಕಾಲದಿಂದಲೂ “ಗುರು”ವಿಗೆ ತನ್ನದೇ ಆದ ವೈಶಿಷ್ಟö್ಯತೆಯಿದೆ.ನಾವು  “ಮಾತೃದೇವೋಭವ,ಪಿತೃದೇವೋಭವ ಆಚಾರ್ಯ ದೇವೋಭವ”ಎಂದು ಸಾರಿ ಸಾರಿ ಹೇಳುತ್ತೇವೆ.

ಪರುಷ ಲೋಹವ ಮುಟ್ಟಿ

ವರುಷವಿರಬಲ್ಲುದೇ ಪರಷವೆಂತಂತೆ ಶಿಷ್ಯಂಗೆ

ಗುರುವಿನ ಸ್ಪರುಶನವೆ ಮೋಕ್ಷ ಸರ್ವಜ್ಞ

ನಮ್ಮ ದೇಶದಲ್ಲಿ ಗುರುವಿಗೆ ಎಂಥಹ ಸ್ಥಾನವಿತ್ತು ಎಂದು ಇಂಥ ಉಕ್ತಿಗಳಿಂದ ತಿಳಿದು ಬರುತ್ತದೆ. ಮೊದಲು ವಿದ್ಯಾಭ್ಯಾಸ ಗುರುಕುಲಗಳಲ್ಲಿ ನಡೆಯುತ್ತಿತ್ತು.ಶಿಷ್ಯರು ಗುರುವಿನ ಜೊತೆಯಲ್ಲಿಯೇ ಇದ್ದು ಅವರ ಸೇವೆ ಮಾಡುತ್ತಾ ಯಜ್ಞ-ಯಾಗಾದಿಗಳಲ್ಲಿ ತೊಡಗಿ ಅವರಿಗೆ ನೆರವಾಗಿ ಅವರಿಂದ ವಿದ್ಯೆ ಕಲಿಯುತ್ತಿದ್ದರು ಆಗ ವಿದ್ಯೆ ಕೇವಲ ಅಕ್ಷರಾಭ್ಯಾಸವಾಗಿರದೇ ಆತ್ಮಜ್ಞಾನ ಅಥವಾ ಬ್ರಹ್ಮಜ್ಞಾನ ತಿಳಿಯುವ ಮಾರ್ಗವಾಗಿತ್ತು ಮಹಾರಾಜರಿಂದ ಹಿಡಿದು ಸಾಮಾನ್ಯ ಭಕ್ತನವರೆಗೂ “ಗುರು”ವಿಗೆ ತೋರುವ ನಿಷ್ಠೆ ಅನನ್ಯವಾದುದು.

ಮೊಸರ ಕಡೆಯಲು ಬೆಣ್ಣೆ

ಒಸೆದು ತೋರುವ ತೆರದಿ ಹಸನುಳ್ಳ ಗುರುವಿನುಪದೇಶ-

ದಿಂ ಮುಕ್ತಿ ವಶವಾಗದಿಹುದೆ ಸರ್ವಜ್ಞ

ವಚನ ಯುಗದಲ್ಲಿನ ಎಲ್ಲ ವಚನಕಾರರು ಗುರು ಹಾಗೂ ಶಿಷ್ಯ ಸಂಬಂಧ ಕುರಿತು ತಮ್ಮದೇ ಆದ ನಿಲುವನ್ನು ಮಹತ್ವವನ್ನು ತಮ್ಮ ವಚನಗಳಲ್ಲಿ ಹೇಳಿರುವರು.      

ಭಕ್ತಿಯೆಂಬ ಪೃಥ್ವಿಯ ಮೇಲೆ

ಗುರುವೆಂಬ ಬೀಜವಂಕುರಿಸಿ

ಲಿಂಗವೆಂಬ ಎಲೆಯಾಯಿತ್ತು

ಲಿಂಗವೆಂಬ ಎಲೆಯ ಮೇಲೆ

ವಿಚಾರವೆಂಬ ಹೂವಾಯಿತ್ತು

ಆಚಾರವೆಂಬ ಕಾಯಾಯಿತ್ತು

ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಕಳಚಿ ಬೀಳುವಲ್ಲಿ

ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ

-ಬಸವಣ್ಣ

ಹೀಗೆ ಬಸವಣ್ಣನವರು ಗುರುವೆಂಬ ಬೀಜದಿಂದಲೇ ಲಿಂಗ,ವಿಚಾರ,ಆಚಾರಗಳು ಉದ್ಬವವಾಗಿವೆಯೆಂದು ಸದ್ಗುರುವಿನ ವಚನದಿಂದ ನಮಗೆ ಕಟ್ಟಿರುವ ಕಳಂಕದಿಂದ ಹೊರಬರಲು ಸಾದ್ಯವೆಂಬುದನ್ನು ಹೇಳುತ್ತ”

ಎನ್ನಗುರು ಪರಮಗುರು ನೀವೇ

ಎನ್ನ ಗತಿ ಮತಿ ನೀವೆ

ಎನ್ನ ಅರಿವಿನ ಜ್ಯೋತಿ ನೀವೆ,

ಎನ್ನಂತರಂಗದ ಬಹಿರಂಗದ ಮಹವು ನೀವೇ ಕಂಡಯ್ಯ ಕೂಡಲಸಂಗಮದೇವಾ”

ಎಂದು ಗುರುವಿನಲ್ಲಿ ಭಕ್ತಿಪೂರ್ವಕವಾಗಿ

ಬೇಡಿಕೊಳ್ಳುತ್ತಾರೆಗುರುವಿನ ಕರುಣೆ ಕೃಪೆಗಳಿಂದ ಭಕ್ತರ ಜೀವನದಲ್ಲಿಯ ಕಷ್ಟಗಳ ಪರಿಹಾರ ಸಾದ್ಯ ಎಂದು ಗುರುಮಹಿಮೆಯ ತಿಳಿಸಿರುವರು.

ಶಿವಶರಣೆ ಅಕ್ಕಮಹಾದೇವಿಯು ಗುರುವನ್ನು ಅನೇಕ ವಿಧವಾಗಿ ಕೊಂಡಾಡಿರುವಳು.

ಅರಸಿ ಮೊರೆ ಪುಕ್ಕಡೆ ಕಾವ ಗುರುವೆ

ಜಯ ಜಯ ಗುರುವೆ

ಆರೂ ಅರಿಯದ ಬಯಲೊಳಗೆ

ಬಯಲಾಗಿ ನಿಂದ ನಿಲವ

ಹಿಡಿದೆನ್ನ ಕರದಲ್ಲಿ ತೋರಿದ ಗುರುವೆ

ಶ್ರೀ ಗುರುವಿನ ಸಾನಿದ್ಯದಿಂದ ನಾನು ಬದುಕಿದೆನೆಯ್ಯಾ

ಚೆನ್ನಮಲ್ಲಿಕಾರ್ಜುನಾ

ಎಂದು ಗುರುವಿಗೆ ಭಕ್ತಿಗೌರವಗಳನ್ನು ಅರ್ಪಿಸುತ್ತಾಳೆ. ಶಿವ ಸಂಹಿತದಲ್ಲಿ ಗುರುವನ್ನು ವಿಮೋಚನೆಗೆ ಅಗತ್ಯವಿರುವ ಅಂಶವೆಂದು ಪವಿತ್ರವಾಗಿ ಗುರುತಿಸಲಾಗಿದೆ. ವಿಷ್ಣುಸ್ಮೃತಿ ಹಾಗೂ ಮನುಸ್ಮೃತಿಗಳಲ್ಲಿಯೂ ಕೂಡ ಆಚಾರ್ಯರನ್ನು ತಂದೆ ಹಾಗೂ ತಾಯಿಯೊಂದಿಗೆ ಅತೀ ಗೌರವ ವ್ಯಕ್ತಿಗಳೆಂದು ಪರಿಗಣಿಸಲಾಗಿದೆ. 

ನರಜನ್ಮವ ತೊಡೆದೆ ಹರಜನ್ಮವ ಮಾಡಿದ ಗುರುವೆ ನಮೋ:

ಭವಬಂಧವ ಬಿಡಿಸಿ ಪರಮಸುಖವ ತೋರಿದ ಗುರುವೆ ನಮೋ

ಭವಿಯೆಂಬುದ ತಡೆದು ಭಕ್ತಿಯೆಂದಿನಿಸಿದ ಗುರುವೆ.ನಮೋ

ಚೆನ್ನಮಲ್ಲಿಕಾರ್ಜುನನ ತಂದೆನ್ನ

ಕೈವಶಕ್ಕೆ ಕೊಟ್ಟ ಗುರುವೆ ನಮೋ ನಮೋ

ಎಂದು ಅಕ್ಕಮಹಾದೇವಿಯು ತನ್ನ ಆಧ್ಯಾತ್ಮಕ ಜೀವನದಲ್ಲಿ ಗುರುವಿನ ಪ್ರಭಾವ ಆಗಿರುವುದೆಂದು ಗುರುವನ್ನು ಕೊಂಡಾಡಿರುವಳು.”ಪರಮ ದೇವರಾಗಿರುವುದನ್ನು ಗ್ರಹಿಸಿಕೊಳ್ಳಲು ಒಬ್ಬ ಮನುಷ್ಯ ತನ್ನ ಸ್ವಯಂ ಅನ್ನು “ವೇದಗಳ”ರಹಸ್ಯಗಳನ್ನು ಅರಿತ ಗುರುವಿನ ಎದಿರು ಅರ್ಪಣೆ ಮಾಡಬೇಕು ಎಂದು “ಮುಂಡಕ್ ಉಪನಿಷತ್”ಹೇಳಿದೆ. ಗುರುವಿನ ಪಾತ್ರದ ಸಂಬಂಧ ಸ್ವಾಮಿ ಶಿವಾನಂದರು ” ಮನುಷ್ಯನ ವಿಕಸನದಲ್ಲಿ ಗುರುವಿನ ಪಾತ್ರದ ಪವಿತ್ರ ಪ್ರಾಮುಖ್ಯತೆ ಹಾಗೂ ಉನ್ನತ     ಮಹತ್ವವನ್ನು ತಿಳಿದುಕೊಳ್ಳಿ ಹಿಂದಿನ ಭಾರತ ಗುರು ತತ್ವದ ದೀಪವನ್ನು ಜಾಗರೂಕವಾಗಿ ರ‍್ಯೆಕೆ ಮಾಡುತ್ತಿತ್ತು ಮತ್ತು ಸಜೀವವಾಗಿತ್ತು ದು:ಖ ಹಾಗೂ ಸಾವಿನ ಗುಲಾಮಗಿರಿಯನ್ನು ವೈಯುಕಿಕವಾಗಿ ಮೀರಲು ಮತ್ತು ಸತ್ಯಜ್ಞಾನದ ಅನುಭವ ಪಡೆಯಲು ಒಬ್ಬ ವ್ಯಕ್ತಿಗೆ ಗುರು ಏಕ ಮಾತ್ರ ಭರವಸೆ”ಎಂದು ಗುರು ಮಹತ್ವವನ್ನು ಸಾರಿದ್ದಾರೆ.

“ನಮ್ಮ ಆಲೋಚನೆಗಳು ಉಪಯೋಗವಿಲ್ಲದ ವಿಚಾರಗಳತ್ತ ಯೋಚಿಸದೇ ಗುರುವಿನ ಮುಖೇನ ಒಳ್ಳೆಯ ಆಲೋಚನೆಯನ್ನು ಹೊಂದೋಣ ಎನ್ನುತ್ತ ಹಿಂದೆ ಬಲ್ಕ ಒಂದು ರಾಜ್ಯವಿತ್ತು. ಅಲ್ಲಿ ಒಬ್ಬ ರಾಜನಿದ್ದ.ಸುಭೀಕ್ಷವಾದ ರಾಜ್ಯವಾಗಿತ್ತು.ಸೂಫಿ ಸಂತರ ನಾಡು.ರಾಜ ಅಂತಪುರದಲ್ಲಿ ಮಲಗಿದ್ದಾಗ ಮಹಡಿಯ ಮೇಲೆ ಯಾರೋ ಓಡಾಡಿದಂತೆ ಸದ್ದು ಕೇಳಿ ‘ಯಾರವರು.?” ಎಂದು ಪ್ರಶ್ನಿಸಿದ.ಆಗ ಮಹಡಿಯ ಮೇಲಿದ್ದ ವ್ಯಕ್ತಿ ‘ನಾನು ಮಹಡಿಯ ಮೇಲೆ ಓಡಾಡುತ್ತಿದ್ದುದು ಬಹಳ ದಿನವಾಗಿದೆ.’ ಎಂದು ಹೇಳಿದ.ಆಗ ರಾಜ ಪ್ರತಿಕ್ರಯಿಸಿ ‘ಅದು ಸರಿ ನೀನು ಬಹಳ ದಿನಗಳಿಂದ ಓಡಾಡುತ್ತಿರಬಹುದು.ನನಗೆ ಇವತ್ತು ಗೊತ್ತಾಗಿದೆ.

ಮೇಲೆ ಓಡಾಡಲು ಕಾರಣ.?” ಎಂದ. ಆಗ ಆತ ‘ನನ್ನ ಒಂಟೆ ಕಳುವಾಗಿದೆ.ಅದನ್ನು ಹುಡುಕುತ್ತಿರುವೆ.’ ಎಂದನು.ರಾಜನಿಗೆ ಆಶ್ಚರ್ಯ ‘ಹುಚ್ಚಪ್ಪ ಮಹಡಿಯ ಮೇಲೆ ಒಂಟೆ ಹತ್ತುತ್ತದೆಯೇ,?’ ಎಂದ ಆಗ ಆತ ‘ ಬೋಗ ಐಶ್ಚರ್ಯ ಅಧಿಕಾರದಿಂದ ಸುಖ ಸಿಗುತ್ತದೆ ಎಂದರೆ ಮಹಡಿಯ ಮೇಲೆ ಒಂಟೆ ಸಿಗಬಾರದೇ.?”ಎಂದು ಹೇಳಿ ಕಣ್ಮರೆಯಾದ. ರಾಜನಿಗೆ ಈ ಮಾತು ವಿಚಿತ್ರವೆನಿಸಿದರೂ ಅದರ ತಾತ್ಪರ್ಯ ತಿಳಿಯಲು ರಾತ್ರಿಯಿಡೀ ನಿದ್ರಿಸಲಿಲ್ಲ. ಮರುದಿನ ಅಂತಃಪುರದಲ್ಲಿ ಮಂತ್ರಿಗಳ ಸಭೆ ಸೇರಿತ್ತು. ಒಬ್ಬ ವ್ಯಕ್ತಿ ದ್ವಾರ ಬಾಗಿಲಿನಲ್ಲಿ ನಿಂತಿದ್ದ ರಾಜಭಟರನ್ನು ಲೆಕ್ಕಿಸದೇ ಅಂತಃಪುರ ಪ್ರವೇಶಿಸಿದ.

ಹಿಂದಿನಿಂದ ರಾಜಭಟರು ಓಡಿ ಬಂದರೂ ಅವನು ನಿಲ್ಲದೇ ರಾಜನೆದುರಿಗೆ ಬಂದು ನಿಂತ.ಆಗ ರಾಜ ‘ ಈ ರೀತಿ ಹೇಳದೇ ಕೇಳದೇ ಒಳ ನುಗ್ಗಲು ಇದೇನು ಧರ್ಮಶಾಲೆಯೇನು.? ಎಂದ. ಆಗ ಆ ಅಪರಿಚಿತ ‘ ಹೌದು ಇದೊಂದು ಧರ್ಮಶಾಲೆ. ಈ ಹಿಂದೆ ನಾನು ಬಂದಾಗ ಬೇರೊಬ್ಬ ರಾಜನಿದ್ದ. ನಂತರ ಹಲವು ದಶಕ ಕಳೆದು ಬಂದಾಗ ಮತ್ತೊಬ್ಬ ರಾಜನಿದ್ದ ಈಗ ನೀವಿರುವಿರಿ.ಮತ್ತೆ ಇದೊಂದು ಧರ್ಮಶಾಲೆಯಲ್ಲದೇ ಬೇರೇನು.? ಬಂದು ಹೋಗುವ ಮನುಜನಿಗೆ ಇದೊಂದು ಧರ್ಮಶಾಲೆಯಲ್ಲದೇ ಮತ್ತೇನು.?” ಎನ್ನಲು ರಾಜನಿಗೆ ಜ್ಞಾನೋದಯವಾಯಿತು. ಒಂಟೆ ಹುಡುಕಲು ಬಂದ ಮಹಾತ್ಮ ಇವರು. ಇವರ ಮಾತುಗಳು ಸತ್ಯ. ಈ ಶರೀರ ಶಾಶ್ವತವಲ್ಲ.ಇದು ನಶ್ವರ ಎಂದು ತಿಳಿದು ಅವರನ್ನು ಉಪಚರಿಸಿದ. ರಾಜ ತನ್ನ ಸಾಮ್ರಾಜ್ಯವನ್ನು ತೊರೆದು ಸೂಫಿ ಸಂತನಾದನು

ಇನ್ನು ಜ್ಞಾನ ವೈರಾಗ್ಯನಿಧಿ ಪ್ರಭುದೇವರು ಅಂತರಂಗದ ಅರಿವಿನ ಗುರುವಿಗೆ ಶಿಷ್ಯನಾದೊಡೆ ಭಕ್ತಿಯಿಂದ ಗುರುವಿನ ಮಾರ್ಗದರ್ಶನದಲ್ಲಿ ನಡೆಯುವಲ್ಲಿ ಬಹಿರ್ಮುಖದ ಅರಿವಿನೊಡನೆ ಬದುಕನ್ನು ಪಾವನಮಾಡಿಕೊಳ್ಳುವಲ್ಲಿ ಜೀವನದಸಾರ್ಥಕತೆಯಡಗಿದೆ ಎಂಬುದನ್ನು ಈ ವಚನದಲ್ಲಿ ಉಲ್ಲೇಖಿಸಿರುವರು

ಅಯ್ಯಾ ನೀನೆನಗೆ ಗುರುವಪ್ಪಡೆ

ನಾ ನಿನಗೆ ಶಿಷ್ಯನಪ್ಪಡೆ

ಎನ್ನ ಕರಣಾದಿ ಗುಣಂಗಳ ಕಳೆದು

ಎನ್ನ ಪ್ರಾಣದ ಧರ್ಮವ ನಿಲಿಸಿ

ನೀನೆನ್ನ ಕಾಯದಲಡಗಿ

ನೀನೆನ್ನ ಪ್ರಾಣದಲಡಗಿ

ನೀನೆನ್ನ ಭಾವದಲಡಗಿ ನೀನೆನ್ನ ಕರಸ್ಥಲಕ್ಕೆ ಬಂದು ಕಾರುಣ್ಯವ ಮಾಡು ಗುಹೇಶ್ವರ

ಒಬ್ಬ ಉತ್ತಮ ಗುರುವನ್ನು ಪಡೆದುಕೊಳ್ಳುವುದು ಆತ್ಮಜ್ಞಾನವನ್ನು ಹೊಂದಲು ಒಂದು ಪೂರ್ವತಯಾರಿ ಎಂಬುದನ್ನು ಹೇಳುವ ಜೊತೆಗೆ ಸಾವಿರಾರು ಸೂರ್ಯ ಚಂದ್ರರು ಹುಟ್ಟಿಬಂದರೂ ಕೂಡ ಹೃದಯದ ಒಳಗಿನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವುದು ಸಾದ್ಯವಿಲ್ಲ ಇದನ್ನು ಕೇವಲ ಗುರುವಿನ ಅನುಗ್ರಹದಿಂದ ಮಾತ್ರ ಹೊಡೆದು ಹಾಕಲಾಗುತ್ತದೆ ಎಂಬ ಗುರುನಾನಕ್ ರ ನುಡಿಯನ್ನು ನೆನಪಿಸುತ್ತ ಕರ್ಮಯೋಗಿ ಸಿದ್ದರಾಮೇಶ್ವರರು ಗುರು ಕುರಿತ ವಚನದಲ್ಲಿ                            

ಗುರುವೆ ಇಹಪರ ಗುರುವೆ,ಗುರುವೆ ಕರುಣಾಕರನೆ,

ಗುರುವೆ,

ಶುದ್ದಾತ್ನನೆ ನಿರ್ಮಳಾಂಗ,

ಗುರುವೆ,

ನಿನ್ನಂತೆ ಎನ್ನವನು ಮಾಡಿಹ

ಗುರುವೇ,ನೀನು ಕಪಿಲಸಿದ್ದಮಲ್ಲಿನಾಥ.

ಎಂದು ಗುರುವಿಗೆ ನಮನ ಸಲ್ಲಿಸಿರುವರು.ಗುರುವಿನ ಕೃಪೆಯಿಂದ ಸಾದಾರಣ ತನುವನ್ನು ಮರೆದು,ಗುರುವಿನ ಶಿವಜ್ಞಾನವೆಂಬ ಬೆಳಕು ಪಡೆದು ಅಸಂಖ್ಯಾತ ಶರಣರೆಲ್ಲರ ಸಹವಾಸ ಉಪದೇಶಗಳಿಂದ ಅನುಭಾವಗೋಷ್ಠಿಗಳಿಂದ ಸಿದ್ದರಾಮರು ಗುರುನಮನವನ್ನು ತಮ್ಮ ವಚನದಲ್ಲಿ ಬಿಂಬಿಸಿರುವರು.

ಪಾಶ್ಚಾತ್ಯ ಬಳಕೆಯಲ್ಲಿ “ಗುರು”ಶಬ್ದದ ಅರ್ಥವು ಅನುಯಾಯಿಗಳನ್ನು ಹೊಂದುವ ಸಾಮರ್ಥ್ಯ ಹೊಂದಿರುವ ಯಾವುದೇ ವ್ಯಕ್ತಿಗೂ ಕೂಡಾ ಬಳಸಬಹುದಾಗಿದೆ ಎಂದಿರುವರು.ಒಬ್ಬ ವ್ಯಕ್ತಿಯ ಪ್ರಾಪಂಚಿಕವಾದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತಮ ಜ್ಞಾನ,ನೈಪುಣ್ಯತೆಯನ್ನು ಹೊಂದಿದ್ದರೂ ಕೂಡ “ಗುರು”ಎಂಬ ಶಬ್ದ ಬಳಸುತ್ತಾರೆ.”ಗುರು”ಎಂಬ ಶಬ್ದದ ಪದ ಉತ್ಪತ್ತಿ ಬಗ್ಗೆ “ಗುರು ಗೀತಾ”ದಲ್ಲಿ “ಗು”ಎಂದರೆ ಗುಣಗಳನ್ನು ಮೀರಿ :”ರು” ಎಂದರೆ ಆಕಾರರಹಿತ ಎಂದಿದ್ದಾರೆ.ಅಂತೆಯೇ ಭಕ್ತಿ,                                

ಜ್ಞಾನ,ಕ್ರಿಯೆ,ವೈರಾಗ್ಯಗಳ ಆದರ್ಶಮಯ ಸಮನ್ವಯವನ್ನು ಶ್ರೀಗುರುವಿನಲ್ಲಿ ಕಾಣಬಹುದು

ಆಚಾರ ಗುರು,ಸಮಯ ಗುರು,ಜ್ಞಾನಗುರು,

ಆಚಾರಗುರು ಬ್ರಹ್ಮನ ಕಲ್ಪವ ತೊಡೆಯಬೇಕು

ಸಮಯಗುರು ವಿಷ್ಣುವಿನ ಸ್ಥಿತಿಯ ಹರಿಯಬೇಕು.

ಜ್ಞಾನಗುರು ಉತ್ಪತ್ತಿ ಸ್ಥಿತಿ ಲಯ ಮೂರನು ಕಳೆಯಬೇಕು.

ತ್ರಿವಿಧಗುರು ಏಕವಾದಲ್ಲಿ ಸದ್ಗುರು ಸದ್ಗುರು ಮಹಾಗುರುವೆಂಬೆ ನಿ:ಕಳಂಕ ಮಲ್ಲಿಕಾರ್ಜುನಾ

ತರ್ಕಾತೀತ ಜ್ಞಾನ(ವಿದ್ಯೆ) ತಿಳಿಸಿಕೊಡುವ ಒಬ್ಬ ಗುರುವನ್ನು ಹುಡುಕುವ ಮಹತ್ವಕ್ಕೆ ಹಿಂದೂ ಮತದಲ್ಲಿ ಪ್ರಾಧಾನ್ಯ ನೀಡಲಾಗಿದೆ.ವೈದಿಕ ಜ್ಯೋತಿಷ ಶಾಸ್ತ್ರದಲ್ಲಿ ಗುರು ಅಥವಾ ಒಬ್ಬ ಬೃಹಸ್ಪತಿಯು ಕಲಿಕೆಯ ಮೇಲೆ ಪ್ರಭಾವ ಬೀರುತ್ತಾರೆ ಹಿಂದಿಯಂತಹ ಹಲವಾರು ಭಾರತೀಯ ಭಾಷೆಗಳಲ್ಲಿ ಬೃಹಸ್ಪತಿವಾರ ಅಥವಾ ಗುರುವಾರ(ವಾರ ಎಂದರೆ ಸಪ್ತಾಹದ ಒಂದು ದಿನ)ಎಂದು ನಿಗದಿಗೊಳಿಸಿರುವರು. ಗುರು ಲಿಂಗ ಜಂಗಮ ಎಂಬ ಕಲ್ಪನೆಯಿಂದಲೇ ವಚನ ಸಾಹಿತ್ಯವು ಗುರುವಿನ ಮಹತ್ವ ಹಾಗೂ ಆ ಗುರುವನ್ನು ಅನುಸರಿಸುವ ಶಿಷ್ಯನ ಕರ್ತವ್ಯಗಳು ಎಲ್ಲ ವಿಷಯಗಳ ಕುರಿತು ಚರ್ಚೆ ನಡೆದಿದೆ ಅಂಥ ಕೆಲವು ವಚನಗಳನ್ನು ಇಲ್ಲಿ ಕಾಣಬಹುದು.

ಅಮುಗಿದೇವಯ್ಯನು ಗುರು ಹೇಗಿರಬೇಕೆನ್ನುವುದನ್ನು ಗುರುವಾದಲ್ಲಿ ಶಿಷ್ಯ ಅಂಗದಲ್ಲಿ ಶಿಲೆಯಲ್ಲಿ ಉರಿಯಡಗಿದಂತಿರಬೇಕು ಎಂದು ಶಿಷ್ಯನ ಅಂತರಂಗವೇ ಗುರುವಿನ ಸ್ಥಾನ ಎಂದಿರುವನು”.

ಘಟದೊಳಗೆ ತೋರುವ ಸೂರ್ಯನಂತೆ” ಸರ್ವರಲ್ಲಿರುವ ಶಿವಚೈತನ್ಯವನ್ನು ಗುರುವಿಂದಲ್ಲದಾಗದು ಕಾಣಾ ಕಲಿದೇವರದೇವಾ ಎಂದು ಹೇಳುವ ಈ ವಚನವು ಗುರುವಿನ ಮೂಲಕವೇ ಆತನ ಚೈತನ್ಯವನ್ನು ಕಾಣಲು ಸಾದ್ಯ.

ಗುರುವಿಂಗೂ ಶಿಷ್ಯಂಗೂ ಆವುದ ದೂರ.?

ಗುರುವೆ ಶಿಷ್ಯನಾದ ತನ್ನ ವಿನೋದಕ್ಕೆ

ಶಿಷ್ಯನೆ ಗುರುವಾದ ತನ್ನ ವಿನೋದಕ್ಕೆ

…ಮುನ್ನಲಾದ ಪದತತ್ವಮಂ ತಿಳಿದು ನೋಡಲು

ನೀನೆ ಸ್ವಯಂಜ್ಯೋತಿ ಪ್ರಕಾಶವೆಂದರಿಯಲು

ನಿನಗೆ ನೀನೆ ಗುರುವಲ್ಲದೆ

ನಿನ್ನಿಂದಧಿಕ ಗುರುವುಂಟೇ.?

ಇದು ಕಾರಣ.

ಗುಹೇಶ್ವರ ಲಿಂಗವು ತಾನೆಂಬುದನು

ನಿನ್ನಿಂದ ನೀನೇ ಅರಿಯಬೇಕು ನೋಡಾ

ಗುರು-ಶಿಷ್ಯರು ಬೇರೆ ಬೇರೆಯಾಗಿ ಕಾಣುತ್ತಾರೆ ಅಷ್ಟೆ. ಆದರೆ ಅಂಶತ: ಅವರರಿಬ್ಬರೂ ಬೇರೆಯಲ್ಲ.ತನ್ನ ವಿನೋದಕ್ಕಾಗಿ ಗುರುವೆ ಶಿಷ್ಯನಾಗುತ್ತಾನೆ,ಶಿಷ್ಯನು ತನ್ನ ಆದ್ಯಾತ್ಮಿಕ ಸಾಧನೆ ಶಿವಾನುಭವದ ಸದಾಚರಣೆಗಳಿಂದ ಗುರುವಾಗಲು ಸಾದ್ಯ.

ಇನ್ನು ನಿಜಗುಣ ಶಿವಯೋಗಿಗಳು ಶ್ರೀ ಗುರುವಿನ ವಚನ ಉಪದೇಶದಿಂದ ಮುಕ್ತಿ ಸಾದ್ಯವೆಂಬುದನ್ನು ಬಹು ಮಾರ್ಮಿಕವಾಗಿ ಹೇಳಿರುವರು

ಶ್ರೀ ಗುರು ವಚನೋಪದೇಶವನಾಲಿಸಿ

ದಾಗಳಹುದು ನರರಿಗೆ ಮುಕುತಿ

ದುರಿತ ಕರ್ಮವನೊಲ್ಲದಿರು,

ಪುಣ್ಯವನೆ ಮಾಡು

ಹರನಡಿವಿಡಿ,

ಶಾಂತರೊಡನಾಡು

ಕರುಣವಿರಲಿ ಜೀವದೊಳು,ನೀತಿವದನನಾಗು

ಮುಂತಾದ ನೈತಿಕ ನಡೆನುಡಿಗಳನ್ನು ಕುರಿತು ತಿಳಿಸಿರುವರು. ಒಬ್ಬ ಉತ್ತಮ ಗುರುವನ್ನು ಪಡೆದುಕೊಳ್ಳುವುದು ಆತ್ಮಜ್ಞಾನವನ್ನು ಹೊಂದಲು ಒಂದು ಪೂರ್ವ ತಯಾರಿ ಎಂದು ಹೇಳಲಾಗುತ್ತದೆ.ವಿದ್ಯೆಯನ್ನು ಕಲಿಯಲು ಗುರುಸೇವೆ,ಗುರುವಿನಿಂದ ಪಡೆಯುವುದು ಅದರ ಪರಿಪಾಲನೆ ಎಲ್ಲವನ್ನು ವಚನಗಳಲ್ಲಿ ಅನೇಕ ವಚನಕಾರರು ಹೇಳಿರುವರು.

ಕತ್ತಲಿನಿಂದ ಬೆಳಕಿನೆಡೆಗೆ,ಅಸತ್ಯದಿಂದ ಸತ್ಯದೆಡೆಗೆ,ಮೃತತ್ವದಿಂದ ಅಮೃತತ್ವದೆಡೆಗೆ ಕರೆದೊಯ್ಯುವ ಜ್ಞಾನಜ್ಯೋತಿ ಗುರು.ಈ ಕಾರ್ಯಗೈಯ್ಯುವಾಗ ಶಿಕ್ಷೆಯೂ ಉಂಟು ರಕ್ಷೆಯು ಉಂಟು. ಒಳ್ಳೆಯದನ್ನು ಗುರುತಿಸಿ ಪ್ರೋತ್ಸಾಹಿಸುವುದರ ಜೊತೆಗೆ ಕೆಟ್ಟದನ್ನು ಶಿಕ್ಷಿಸುವ ಮೂಲಕ ಸರಿದಾರಿಗೆ ತುವುದು ಗುರುವಿನ ಕರ್ತವ್ಯ.ಆದರೆ ಇಂದಿನ ದಿನಗಳಲ್ಲಿ ಅದು ದೂರವಾಗುತ್ತಿದೆ,              

ಗುರು ಶಿಷ್ಯಸಂಬಂಧಗಳು ಮೊದಲಿನಂತಿಲ್ಲ. ಇದನ್ನು ನೆನೆದಾಗ ಹಿಂದೆಯೇ ಗುರು-ಶಿಷ್ಯ ಸಂಬಂಧ ಬಹುಶ: ಇಂದಿನದನ್ನು ನಮ್ಮ ಅಲ್ಲಮಪ್ರಭುದೇವರು ಅಂದು ಕಂಡುಕೊಂಡಿದ್ದರೇನೋ ಎಂಬಂತೆ ಗುರುಶಿಷ್ಯ ಸಂಬಂಧ ಇಂದಿನದನ್ನು ಉಲ್ಲೇಖಿಸುಂತೆ ಬರೆದ ವಚನ

ಕೃತಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಬಡಿದು ಬುದ್ದಿಯ ಕಲಿಸಿದರೆ

ಆಗಲಿ ಮಹಾ ಪ್ರಸಾದವೆಂದನಯ್ಯಾ

ತ್ರೇತಾಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಬಯ್ದು ಬುದ್ದಿಯ ಕಲಿಸಿದರೆ ಆಗಲಿ ಮಹಾ ಪ್ರಸಾದವೆಂದನಯ್ಯಾ

ದ್ವಾಪರಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಝಂಕಿಸಿ ಬುದ್ದಿಯ ಕಲಿಸಿದರೆ ಆಗಲಿ ಮಹಾ ಪ್ರಸಾದವೆಂದನಯ್ಯಾ

ಕಲಿಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ವಂದಿಸಿ ಬುದ್ದಿಯ ಕಲಿಸಿದರೆ

ಆಗಲಿ ಮಹಾಪ್ರಸಾದವೆಂದೆನಯ್ಯಾ…ಗುಹೇಶ್ವರಾ ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆರಗಾದೆನು.

ಈ ವಚನವು ಕಾಲಾಂತರದಲ್ಲಿ ಗುರುಶಿಷ್ಯ ಸಂಬಂಧವು ಹೇಗೆ ಬದಲಾಗುತ್ತ ಹೋಗುತ್ತದೆ ಎಂಬುದನ್ನು ತುಂಬಾ ಮಾರ್ಮಿಕವಾಗಿ ಹೇಳಿರುವರು.ಕಲಿಯುಗದಲ್ಲಿ ನಿಜಕ್ಕೂ ಇವರಿಬ್ಬರ ಸಂಬಂಧದಲ್ಲಿ ಸಡಿಲತೆ ಉಂಟಾಗಿರವುದು “ಕೇವಲ ಉದ್ಯೋಗಕ್ಕಾಗಿಯೇ ಶಿಕ್ಷಣ ಕಲಿಯಬೇಕು” ಎಂಬ ವಾತಾವರಣ ಬೆಳೆಯುತ್ತಿರುವುದು ಕೂಡ ಕಾರಣವಿರಬಹುದು ಮೌಲ್ಯಗಳ ಕೊರತೆಯೂ ಇದಕ್ಕೆ ಕಾರಣ.ಗಣಕಯಂತ್ರ,ಅಂತರ್ಜಾಲ,ಸೀಡಿ,ಪ್ಲಾಪಿ,ಇಂಟರ್ ನೆಟ್ ಮುಂತಾದವುಗಳ ಬಳಕೆ ಕೂಡ ಗುರುವಿನ ಮಾರ್ಗದರ್ಶನ ಗುರುಪ್ರಯತ್ನಗಳ ಕೊರತೆಯನ್ನು ಅಂದರೆ ಅದರ ಪರಿಚಯವಾದರೆ ಸಾಕು ತಮ್ಮದೇ ಲೋಕದಲ್ಲಿ ವಿಹರಿಸುವ ಸಂಸ್ಕೃತಿ ಕೂಡ ಗುರುಶಿಷ್ಯ ಪರಂಪರೆಯಲ್ಲಿ ಗೊಂದಲ ಮೂಡಲು ಕಾರಣವಾಗಿರಬಹುದು.

ಇನ್ನು ಸರ್ವಜ್ಞ ಕೂಡ ಗುರುವನ್ನು ಕುರಿತು ತನ್ನ ತ್ರಿಪದಿಗಳಲ್ಲಿ ಈ ರೀತಿ ಹೇಳಿರುವನು

ಮೂರು ಕಣ್ಣೀಶ್ವರನ ತೋರಿ ಕೊಡಬಲ್ಲ ಗುರು

ಬೇರದರೊಳೊಂದು ತೆರನಿಲ್ಲ ಗುರುಕರುಣ

ತೋರುವುದು ಹರನ ಸರ್ವಜ್ಞ

ಊರಿಂಗೆ ದಾರಿಯನು ಆರು ತೋರಿದಡೇನು

ಸಾರಯದ ನಿಜವು ತೋರುವ ಗುರು ತಾ

ನಾರಾದಡೇನು ಸರ್ವಜ್ಞ

ಹರ ತನ್ನೊಳಿರ್ದು ಗುರು,ತೋರದಿರೆ ತಿಳಿವುದೇ

ಮರದೊಳಗೆ ಅಗ್ನಿ ಇರುತಿರ್ದು ತನ್ನತ್ತಾ

ನರಿಯಬೇಕೆಂದ ಸರ್ವಜ್ಞ

ಸುರುತರವು ಮರವಲ್ಲ,ಸುರಭಿ ಯೊಂದಾವಲ್ಲ

ಪುರುಷ ಪಾಷಣ ದೊಳಗಲ್ಲ ಗುರುರಾಯ

ನರರೊಳಗಲ್ಲ ಸರ್ವಜ್ಞ

ಗುರುವೇ ನಿಮ್ಮನು ನೆನೆದು ಉರಿವ ಕಿಚ್ಚವ ಹೋಗಲು

ಉರಿತಗ್ಗಿ ಉದಕ ಕಂಡಂತೆ ನಿಮ್ಮಯ

ಕರುಣವುಳ್ಳವರಿಗೆ ಸರ್ವಜ್ಞ

ಎತ್ತಾಗಿ ತೊತ್ತಾಗಿ,ಹಿತ್ತಲದ ಗಿಡನಾಗಿ

ಮತ್ತೆ ಪಾದದ ಕೆರವಾಗಿ ಗುರುವಿನ

ಹತ್ತಲಿರು ಎಂದ ಸರ್ವಜ್ಞ

ಹೀಗೆ “ಗುರುವಿನ ಗುಲಾಮನಾಗುವ ತನಕ ದೊರೆಯದನ್ನ ಮುಕುತಿ”ಎಂಬ ಪುರಂದರದಾಸರ ವಾಣಿಯಂತೆ ಸರ್ವಜ್ಞ ಕೂಡ ಗುರುವಿನ ಮೇಲೆ ಅನನ್ಯವಾದ ಭಕ್ತಿ ವಿಶ್ವಾಸವಿಟ್ಟಲ್ಲಿ ದೊರೆಯುವ ಫಲಗಳು ಕುರಿತು ತನ್ನ ತ್ರಿಪದಿಗಳಲ್ಲಿ ತಿಳಿಸಿರುವನು.

ಮುಂದೆ ಗುರಿಯಿರಲಿ

ಹಿಂದೆ ಗುರುವಿರಲಿ

ಶಿಷ್ಯ ಕೋಟಿಯು

ನಡುವೆ ಸಾಗಲಿ ನಿರಂತರ

ಮಕ್ಕಳ ಮುಕ್ತ ಮನಸ್ಸಿನ ಅನಂತ ಕನಸು-ಕಲ್ಪನೆಗಳಿಗೆ ಬಣ್ಣ ತುಂಬುವ,ಚಿತ್ತಾರ ಬಿಡಿಸುವ ವಿಶಿಷ್ಟ ಬದುಕು ಶಿಕ್ಷಕರದು ಸಪ್ಟಂಬರ್ ೫ ರಂದು  ಶಿಕ್ಷಕರ ದಿನಾಚರಣೆಗೆ ನಾವೆಲ್ಲ ಅಣಿಯಾಗುತ್ತಿದ್ದೇವೆ.ಇತರೇ ವೃತ್ತಿಗಳಿಗಿಂತ ಭಿನ್ನವಾದ ಮತ್ತು ವಿಭಿನ್ನವಾದ ವೃತ್ತಿ ಇದು.ಅಕ್ಷರ ಸಂಸ್ಕೃತಿಯ ವಾರಸುದಾರಿಕೆಯ ಮಿಡಿತ ತುಂಬಿದ ತೃಪ್ತಿಯೊಂದಿಗೆ ಬೀಗುವ ದೇಶವನ್ನು ಕಟ್ಟಿ ಬೆಳೆಸುವ ಮಾನವ ಸಂಪನ್ಮೂಲವನ್ನು ನಿರ್ಮಿಸಿ ಕೊಡುವ ಹೊಣೆಗಾರಿಕೆ ಇಂದಿನ ಶಿಕ್ಷಕರ ಮೇಲಿದೆ.

ಪ್ರಾಚೀನ ಕಾಲದ ಗುರುಕುಲ ಪದ್ದತಿ,ಬೌದ್ದ ಧರ್ಮದ ಸಂಘ ಮತ್ತು ವಿಹಾರಗಳು,ಇಸ್ಲಾಂ ಧರ್ಮದ ಮದರಸ.ಹೀಗೆ ಸಾಗಿದ ನಮ್ಮ ಶಿಕ್ಷಣ ಈಗ ಆಧುನಿಕ ತಂತ್ರಜ್ಞಾನ ಬಳಸುವ ಮೂಲಕ ಮಕ್ಕಳಲ್ಲಿ ವೈಚಾರಿಕತೆಯ ಮೂಲಕ ಸಾಗುತ್ತಿರುವಾಗ ಇಂದಿನ ಶಿಕ್ಷಕರು ತಮ್ಮ ವೃತ್ತಿಯನ್ನು ನೂತನ ತಂತ್ರಜ್ಞಾನವನ್ನು ಅರಿತು ಬೋಧನೆಗೆ ತೊಡಗಬೇಕಾಗಿದೆ. ಇದರ ಜೊತೆಗೆ ನಮ್ಮ ಸಂಸ್ಕೃತಿಯನ್ನು ಕಲಿಸಬೇಕಾಗಿದೆ.

ಏನೇ ಆಗಲಿ ಎಲ್ಲಿಯವರೆಗೆ ಮಾನವೀಯ ಮೌಲ್ಯಗಳನ್ನು ನಾವು ಹೊಂದುವುದಿಲ್ಲವೋ ಅಂದಿನವರೆಗೂ ಕೊಲೆ. ಸುಲಿಗೆ.ಮೋಸ.ವೈಚಾರಿಕತೆಯ ಸಂಸ್ಕೃತಿಗಳ ಕೊರತೆ ಕಟ್ಟಿಟ್ಟ ಬುತ್ತಿ ಎಂಬುದು ದಿಟ. ಈ ಮಾನವ ಜನ್ಮದಲ್ಲಿ ನಾವೆಲ್ಲ ಗುರುವಿನ ಕರುಣೆಯ ಕೃಪೆಗೆ ಪಾತ್ರರಾಗಬೇಕು. ತಂತಿಯಲ್ಲಿ ವಿದ್ಯುತ್ ಹೇಗೆ ಪ್ರವಹಿಸುತ್ತವೆಯೋ ಹಾಗೆಯೇ ಗುರು ಕರುಣೆ ನಮ್ಮ ಶರೀರದ ಜ್ಞಾನಚಕ್ಷÄವಿನ ಮೂಲಕ ಹರಿದು ಬರುವುದು.”


ವೈ.ಬಿ.ಕಡಕೋಳ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಹೂಗಾರ ಮಾದಣ್ಣ ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನ ಒಂದು ಕ್ರಾಂತಿಯ ಕಾಲ. ಅಪ್ಪ ಬಸಣ್ಣನವರ ನೇತೃತ್ವದಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ರಂಗದಲ್ಲಿ ಪರಿವರ್ತನೆಯಾಯಿತು. ವ್ಯಕ್ತಿ ಹಾಗೂ ಸಮಾಜದ...
- Advertisement -

More Articles Like This

- Advertisement -
close
error: Content is protected !!
Join WhatsApp Group