spot_img
spot_img

ಭೀಮಪ್ಪ ಗಡಾದಗೆ ರಸ್ತೆಗಳ ಬಗ್ಗೆ ಮಾತನಾಡುವ  ಯಾವುದೇ ನೈತಿಕತೆ ಇಲ್ಲ : ಹನಮಂತ ಗುಡ್ಲಮನಿ, ಸುಭಾಸ ಪಾಟೀಲ

Must Read

spot_img

ಅಲಿಗೇಶನ್ ಮಾಡುವುದು, ಆಮೇಲೆ ಹಿಂತೆಗೆದುಕೊಳ್ಳುವುದು ಇವರ ಚಾಳಿ

ಮೂಡಲಗಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೋಟ್ಯಂತರ ರೂಪಾಯಿ ಅನುದಾನ ತಂದು ಗುರ್ಲಾಪೂರ-ಮೂಡಲಗಿ ಮತ್ತು ಸುಣಧೋಳಿ-ಮೂಡಲಗಿ ರಸ್ತೆ ಸುಧಾರಣೆ ಕಾಮಗಾರಿ ಪ್ರಗತಿಯಲ್ಲಿರುವಾಗ ಭೀಮಪ್ಪ ಗಡಾದ ಅವರು, ಕಳಪೆ ಕಾಮಗಾರಿ ನೆಪವೊಡ್ಡಿ ಇಲಾಖಾ ಮೇಲಾಧಿಕಾರಿಗಳಿಗೆ ದೋಷಾರೋಪಣೆ ಪತ್ರ ಬರೆಯುತ್ತಾರೆ. ನಂತರ ಗುತ್ತಿಗೆದಾರರನ್ನು ಮನೆಗೆ ಕರೆಸಿಕೊಂಡು ಮಾತುಕತೆ ನಡೆಸಿ ಮೇಲಾಧಿಕಾರಿಗಳಿಗೆ ಬರೆದ ಪತ್ರವನ್ನು ಹಿಂಪಡೆಯುತ್ತಾರೆ. ಇಂತಹವರು ರಸ್ತೆಗಳ ಬಗ್ಗೆ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ಮೂಡಲಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಮತ್ತು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ ಪ್ರಶ್ನಿಸಿದರು.

ಈ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರ ಆರೋಪಕ್ಕೆ ಜಂಟಿ ಹೇಳಿಕೆಯನ್ನು ನೀಡಿರುವ ಅವರು, ಗಡಾದ್ ಅವರು ರಸ್ತೆಗಳ ವಿಷಯದಲ್ಲಿ ಸಾಕಷ್ಟು ಪತ್ರಗಳನ್ನು ಕೂಡ ಮೇಲಾಧಿಕಾರಿಗಳಿಗೆ ಕಳಿಸಿದ್ದಾರೆ. ನಂತರ ಹಿಂಪಡೆದಿದ್ದಾರೆ. ಇವರಿಗೆ ರಸ್ತೆಗಳು ಸುಧಾರಿಸುವುದು ಬೇಕಾಗಿಲ್ಲ. ಅಲಿಗೇಷನ್ ಮಾಡುವುದೇ ಅವರ ಕೆಲಸವಾಗಿದೆ. ರಸ್ತೆಗೆ ಒಂದು ಹಿಡಿ ಮಣ್ಣನ್ನು ಹಾಕುವ ತಾಕತ್ತು ನಿಮಗಿಲ್ಲ. ಪರಿಸ್ಥಿತಿ ಹೀಗೇಯೇ ಮುಂದುವರೆದರೆ ಮುಂದೊಂದು ದಿನ ಜನರೇ ನಿಮ್ಮ ಮನೆ ಬಾಗಿಲಿಗೆ ಬಂದು ಪ್ರಶ್ನೆ ಮಾಡುವ ಕಾಲ ದೂರವಿಲ್ಲ ಎಂದು ಅವರು ಹೇಳಿದರು.

ಕಳೆದ ನಾಲ್ಕೂವರೆ ವರ್ಷಗಳಿಂದ ಸುಮ್ಮನಿದ್ದ ಭೀಮಪ್ಪ ಗಡಾದ ಅವರು ಇನ್ನೇನು ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಾಲಿಶತನದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗಿಂತ ಜನರೊಂದಿಗೆ ನಾಟಕವಾಡುವುದೇ ಇವರ ಕಾಯಕವಾಗಿದೆ. ಕಳೆದ ನಾಲ್ಕುವರೆ ವರ್ಷಗಳಲ್ಲಿ ಅರಭಾವಿ ಮತಕ್ಷೇತ್ರದಲ್ಲಿ ಸರ್ಕಾರದ ನೆರವಿನಿಂದ ನೂರಾರು ಕೋಟಿ ರೂಪಾಯಿಗಳ ರಸ್ತೆ ಕಾಮಗಾರಿಗಳು ನಡೆದಿವೆ. ಜೊತೆಗೆ ಈ ಬಗ್ಗೆ ಅಂಕಿ ಅಂಶಗಳನ್ನು ಸಹ ನಾವು ನೀಡುತ್ತೇವೆ ಎಂದು ಗಡಾದ್‍ಗೆ ಸವಾಲೆಸೆದಿದ್ದಾರೆ.

ಆ ದೇವರು ನಮ್ಮ ಶಾಸಕರಿಗೆ ಸ್ವಂತ ರಸ್ತೆಗಳನ್ನು ನಿರ್ಮಿಸುವ ಶಕ್ತಿ ನೀಡಿದ್ದಾನೆ. ಜನರ ಏಳಿಗೆ ಹಾಗೂ ಅಭಿವೃದ್ಧಿಯೇ ಅವರಿಗೆ ಮುಖ್ಯವಾಗಿದೆ. ಬೇರೆಯವರ ತರಹ ಮುಖವಾಡ ಹಾಕಿಕೊಳ್ಳುವ ರಾಜಕಾರಣಿ ಅವರಲ್ಲ ಎಂದು ಹೇಳಿದ್ದಾರೆ.

2019ರಲ್ಲಿ ನೆರೆ ಪ್ರವಾಹ ಬಂದ ಸಂದರ್ಭದಲ್ಲಿ ಸಂತ್ರಸ್ತರೊಂದಿಗೆ ಭೀಮಪ್ಪ ಗಡಾದ ಅವರು ರಾಜಕೀಯ ಮಾಡಿದ್ದಾರೆ ಅವರೊಂದಿಗೆ ಚೆಲ್ಲಾಟವನ್ನು ಆಡಿದ್ದಾರೆ. ನಮ್ಮ ಸರ್ಕಾರದಿಂದ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಕ್ಷೇತ್ರದ ನದಿತೀರದ ಸಂತ್ರಸ್ತರಿಗೆ ಸುಮಾರು 9 ಸಾವಿರಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. ಕೆಲ ಅಧಿಕಾರಿಗಳ ದೋಷದಿಂದ ಶೇಕಡ 2ರಷ್ಟು ಲೋಪದೋಷಗಳು ಆಗಿರಬಹುದು. ಮುಂದಿನ ದಿನಗಳಲ್ಲಿ ಇದನ್ನು ಸಹ ಸರಿಪಡಿಸಿ ಸಂತ್ರಸ್ತರಿಗೆ ಇನ್ನೂ ಹೆಚ್ಚಿನ ಅನುಕೂಲವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾಡಿಕೊಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಗೆ ಕೆಎಂಎಫ್ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಇರುವುದರಿಂದ ಕ್ಷೇತ್ರದಲ್ಲಿ ಬರಲಿಕ್ಕೆ ಸಾಧ್ಯವಾಗದಿರಬಹುದು. ಅಭಿವೃದ್ಧಿ ಕಾರ್ಯಗಳನ್ನು ಮತ್ತು ಕೆಎಂಎಫ್‍ನ ಬಹುದೊಡ್ಡ ಜವಾಬ್ದಾರಿಯನ್ನು ಬಾಲಚಂದ್ರ ಜಾರಕಿಹೊಳಿ ಅವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಅರಭಾವಿ ಕ್ಷೇತ್ರದ ಜನರೊಂದಿಗೆ ಸತತ ನಿಕಟ ಸಂಪರ್ಕವನ್ನು ಇಟ್ಟುಕೊಂಡು ಅವರ ಕಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದಾರೆ. ಒಂದು ವೇಳೆ ಕ್ಷೇತ್ರದಲ್ಲಿ ಬಾಲಚಂದ್ರ ಜಾರಕಿಹೊಳಿಯವರು ಇರದೇ ಇದ್ದರೂ ಅವರ ಎನ್‍ಎಸ್‍ಎಫ್ ಸಿಬ್ಬಂದಿಗಳು ಅಹೋರಾತ್ರಿ ಜನರ ಕಷ್ಟ ಕಾರ್ಪಣ್ಯಗಳಿಗೆ ಸದಾ ಸ್ಪಂದಿಸುತ್ತಿದ್ದಾರೆ. ಮದುವೆ, ಜಾತ್ರೆ, ಸಭೆ-ಸಮಾರಂಭ ಹಾಗೂ ಸುಖ-ದುಃಖ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗುತ್ತಾರೆ ಎಂದು ಅವರು ಹೇಳಿದರು.

2023ರಲ್ಲಿ ಎಪ್ರಿಲ್ ತಿಂಗಳಲ್ಲಿ ಜರಗುವ ಸಾರ್ವತ್ರಿಕ ಚುನಾವಣೆಯಲ್ಲಿ ಭೀಮಪ್ಪ ಗಡಾದ ಅವರು ಯಾವ ಪಕ್ಷದಿಂದ ಸ್ಪರ್ಧಿಸಿದರೂ ಅದನ್ನು ಸಮರ್ಥವಾಗಿ ನಮ್ಮ ನಾಯಕರು ಎದುರಿಸುತ್ತಾರೆ. ಬಾಲಚಂದ್ರ ಜಾರಕಿಹೊಳಿಯವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ. ಆದರೆ ಗಡಾದ ಅವರು ಇನ್ನೂ ಯಾವ ಪಕ್ಷದ ಟಿಕೆಟ್ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ ಜೆಡಿಎಸ್, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿಯ ಸಂಪರ್ಕದಲ್ಲಿರುವ ಗಡಾದ್ ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಸೋಲು ಕಟ್ಟಿಟ್ಟ ಬುತ್ತಿ ಎಂದು ಅವರು ತಿಳಿಸಿದ್ದಾರೆ.

- Advertisement -
- Advertisement -

Latest News

ಸೈನಿಕರಂತೆ ಸದಾ ಸೇವೆ ಸಲ್ಲಿಸುವ ಪೊಲೀಸರ ಕಾರ್ಯ ಸ್ತುತ್ಯರ್ಹ- ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಸಾರ್ವಜನಿಕರ ನೆಮ್ಮದಿ ಬದುಕಿಗೆ ಪೊಲೀಸರು ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಸ್ತುತ್ಯರ್ಹವೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು. ರವಿವಾರದಂದು ತಾಲೂಕಿನ ಕುಲಗೋಡ...
- Advertisement -

More Articles Like This

- Advertisement -
close
error: Content is protected !!