ಅಬ್ಬಾ ! ನಿದ್ರೆ ಮಾಡೋರು ಹೇಗೆ ಶ್ರೀಮಂತರು ಆಗ್ತಾರೆ ಅನ್ಸುತ್ತೆ ಹೌದು ನಿದ್ರೆ ಮಾಡದೆ ಇರೋರು ಯಾರಾದ್ರೂ ಇದಾರ, ಇಲ್ಲವೇ ಇಲ್ಲ. ಪ್ರತಿಯೊಬ್ಬರೂ ನಿದ್ರೆ ಮಾಡ್ತಾರೆ ಅದರಲ್ಲೇನು ಸ್ಪೆಷಲ್ ಇರತ್ತೆ ನಿದ್ರೆಯಲ್ಲಿ ಅನ್ನೋರು ಇರಬಹುದು. ನೆಮ್ಮದಿಯ ನಿದ್ರೆ ಎಂದರೆ ಮನಸ್ಸು ಮತ್ತು ದೇಹದ ಸ್ಥಿತಿ ಸಂಪೂರ್ಣ ಶಾಂತಿ ಹಾಗೂ ವಿಶ್ರಾಂತಿ ಸ್ಥಿತಿಯಲ್ಲಿ ಇದ್ದು, ಚಿಂತೆ ಅಥವಾ ಕಳವಳದಿಂದ ಮುಕ್ತವಾಗಿರುವ ನಿದ್ರೆ ಎಂದರ್ಥ.
ಇಂದಿನ ಆಧುನಿಕ ಯುಗದಲ್ಲಿ ಬಹುತೇಕ ಜನರು ಹಣ, ಆಸ್ತಿ, ಅಂತಸ್ತು, ಹೆಸರು, ಪ್ರತಿಷ್ಠೆ ಎಂಬ ಓಡು ಕುದುರೆಯ ಬೆನ್ನತ್ತಿ ತಮ್ಮ ಬಗ್ಗೆ ತಾವು ಯೋಚಿಸುವುದನ್ನೇ ಬಿಟ್ಟಿದ್ದಾರೆ. ಆರೋಗ್ಯದ ಕಡೆಗೆ, ತನ್ನ ಸುತ್ತಮುತ್ತಲಿರುವ ಸಂಬಂಧಗಳ ಕಡೆಗೆ ಕನಿಷ್ಠಪಕ್ಷ ತನಗೆ ತಾನೆ ಏನೆಂಬ ಅರಿವಿನ ಪರಿವೆ ಇಲ್ಲದೆ ಬದುಕುತ್ತಿರುವವರು ಎಷ್ಟು ಜನರೋ ಲೆಕ್ಕಕ್ಕೇ ಇಲ್ಲ. ಬದುಕಿನಲ್ಲಿ ಗೆಲ್ಲಬೇಕು, ಯಶಸ್ವಿ ವ್ಯಕ್ತಿಯಾಗಬೇಕು, ನಾನಿಲ್ಲದ ಕಾಲಕ್ಕೆ ಈ ಸಮಾಜದಲ್ಲಿ ನನ್ನ ಹೆಸರು ರಾರಾಜಿಸಬೇಕು ಎನ್ನುವ ಆಸೆ ಯಾರಿಗೆ ಇರುವುದಿಲ್ಲ ಎಲ್ಲರಿಗೂ ಇರುತ್ತದೆ. “ಬುದ್ಧ ಹೇಳಿರುವಂತೆ ಆಸೆಯೇ ದುಃಖಕ್ಕೆ ಮೂಲ” ಆದರೆ ಅದರರ್ಥ ಆಸೆಯೇ ಇರಬಾರದು ಅಂತ ಅಲ್ಲ. ಆಸೆಪಟ್ಟದ್ದನ್ನು ಪಡೆದುಕೊಳ್ಳಲು ಅತಿಯಾಸೆಯಿಂದ ಅಡ್ಡದಾರಿ ಹಿಡಿಯುವುದು ಮಾತ್ರ ತಪ್ಪು. ಹಾಗಾಗಿ ಬುದ್ಧ ಬದುಕಿನಲ್ಲಿ ಆಸೆ ಇರಬೇಕು ಅದನ್ನು ಪಡೆದುಕೊಳ್ಳಲು ಶ್ರಮ ಪಡಬೇಕೇ ಹೊರತು ಹಾಯಾಗಿ ಕುಳಿತು ಇರುವಲ್ಲಿಯೇ ಯಶಸ್ಸು, ಸಂಭ್ರಮ ನಮ್ಮನ್ನು ಬಂದು ತಬ್ಬಿಕೊಳ್ಳುವುದಿಲ್ಲ ಎಂಬುದಾಗಿ ಹೇಳಿದ್ದಾರೆ ಎಂದು ನನ್ನ ಅನಿಸಿಕೆ.
ಒಳ್ಳೆಯ ಆಲೋಚನೆ, ಒಳ್ಳೆಯ ಕೆಲಸಗಳು ಮಾತ್ರ ನಮ್ಮನ್ನು ಶ್ರೀರಕ್ಷೆಯಾಗಿ ಕಾಯಬಲ್ಲದೇ ಹೊರತು ಯಾರ ಹರಕೆ, ಹಾರೈಕೆಗಳು ಕಾಯುವುದಿಲ್ಲ. ನೆಮ್ಮದಿಯ ಬದುಕಿನ ಸೂತ್ರಗಳೆಂದರೆ ತಲೆ ಮೇಲೊಂದು ನೆಮ್ಮದಿಯ ಸೂರು, ಕೈಯಲ್ಲೊಂದು ಯಾರ ತಲೆ ಮೇಲೆಯೂ ಹೊಡೆಯದೆ ಮಾಡುವ ಕೆಲಸ ಸಣ್ಣದಾದರೂ ಅದು ಯಾವುದೇ ಆಗಿರಲಿ ಕೈಯ್ಯಲ್ಲೊಂದು ಕೆಲಸ, ಹೊಟ್ಟೆ ತುಂಬಾ ಊಟ, ಮೈತುಂಬಾ ಬಟ್ಟೆ, ಚಂದದ ಕುಟುಂಬ, ನಾಲ್ಕು ಜನರಿದ್ದ ಬಳಿ ಹೋದರೆ ಬನ್ನಿ ಅಂತ ಕರಿಸ್ಕೊಳೋವಷ್ಟು ಮರ್ಯಾದೆ ಇಷ್ಟೇ ಇಷ್ಟೇ ಇದ್ದರೆ ಬದುಕಿನಲ್ಲಿ ಗೆದ್ದಂತೆ. ಅಷ್ಟಲ್ಲದೆ ಎಷ್ಟೇ ದಣಿದು ಬಂದರು ಕೊಂಚ ಸಮಾಧಾನ, ಸಂಯಮ ಜೊತೆಗಿದ್ದು ಮನೆಯವರೆಲ್ಲರೊಟ್ಟಿಗೆ ಕುಳಿತು ಪ್ರೀತಿಯಿಂದ ನಾಲ್ಕು ಮಾತುಗಳನ್ನಾಡಿದ್ರೆ, ಕಷ್ಟ ಅಂತ ಬಂದಾಗ ಮನೆಯಲ್ಲಿ ಯಾರಿಗೆ ಇರಲಿ ನಿನ್ನ ಜೊತೆ ನಾವಿದೀವಿ ಅಂತ ಬೆನ್ನಿಗೆ ನಿಲ್ಲೋ ನಮ್ಮೋರು ಅನ್ನಿಸ್ಕೊಂಡಿರೋರು ಇದ್ರೆ ಸಾಕು ಬದುಕಿಗಿನ್ನೇನು ಬೇಕು ಅಷ್ಟೇ ಜೀವನ ಪರಮಪಾವನ.
ಇನ್ನು ಕೆಲವರು ಎಷ್ಟೇ ಸಂಪಾದನೆ ಮಾಡಿದರು, ಇನ್ನೆಷ್ಟೇ ಗಳಿಸಿದ್ರು, ಮೂರು ಜನ್ಮಕ್ಕಾಗುವಷ್ಟು ಕುಳಿತು ತಿಂದರು ಕರಗದಷ್ಟು ಬೆಟ್ಟದಷ್ಟು ಇದ್ರೂ ಚೂರುಪಾರು ನೆಮ್ಮದಿಯೂ ಇಲ್ಲದೆ ಒತ್ತಡದಲ್ಲಿ ಬದುಕುವವರನ್ನು ಕಂಡಿದ್ದೇನೆ. ದಿನ ಬೆಳಗಾದ್ರೆ ಸಾಕು ಒಬ್ಬರಿಗೊಬ್ರು ಮುಖ ನೋಡೋದು ಇರಲಿ, ಕುಳಿತು ಸಂಯಮದಿಂದ ಸಮಯ ಕೊಟ್ಟು ಮಾತನಾಡದ ಪರಿಸ್ಥಿತಿಯಲ್ಲಿ ಬಹುತೇಕರು ಇದ್ದಾರೆ. ಯಾವಾಗ ಸಂಜೆಯಾಗತ್ತೆ ಅಂತ ಕೆಲಸದೊತ್ತಡದಲ್ಲಿ ಕಾಯ್ತಾ ಸಂಜೆಯಾದ್ರೆ ಸಾಕು ಮನೆಗೆ ಬಂದು ನಾಳೆ ಕೆಲ್ಸಗಳ ಒತ್ತಡದಲ್ಲಿ ಮತ್ತೆ ಮಾತುಗಳು ಮೂಲೆ ಸೇರತ್ತೆ ಹೀಗೆ ಬದುಕು ಸಾಗ್ತಾ ಇರತ್ತೆ. ಇನ್ನು ಯಾರೋ ಏನೋ ಅಂದದ್ದನ್ನ, ಮಾಡೋ ಕೆಲಸ ಮಾಡೋದು ಬಿಟ್ಟು ಅವ್ರೇನ್ ಅನ್ಕೋತಾರೋ, ಇವ್ರೇನ್ ಅನ್ಕೋತಾರೋ ಅಂತ ಅವರಿವರ ಮಾತುಗಳಿಗೆ ಕಿವಿಗೊಟ್ಟು, ಅವ್ರು ಹಾಗಿದರೆ, ಇವ್ರು ಹಾಗಿದ್ದಾರೆ ಅನ್ಕೊಂಡು ಅವರಿವರ ಬದುಕಿನ ಬಗ್ಗೆ ಯೋಚಿಸ್ತಾ ನಿಂತುಕೊಂಡು ನಾನೇನು ಅನ್ನೋದನ್ನೇ ಮರ್ತು ಬದುಕೋ ಸ್ಥಿತಿಯಲ್ಲಿದ್ದಾಗ ನೆಮ್ಮದಿ ಆದ್ರೂ ಹೇಗೆ ಲಭಿಸತ್ತೆ ಸಾಧ್ಯನೇ ಇಲ್ಲ. ಇಲ್ಲದ, ಅಲ್ಲದ ವಲ್ಲದ ಸಂಗತಿಗಳು ಕೈ ಹಿಡಿದು ಎಳೆಯಬಲ್ಲವು, ಕಾಲು ಕಿತ್ತಿಡಲು ಬಿಡದೆ ಹೋಗಬಹುದು ಆದರೆ ಇದು ನಮ್ಮ ಬದುಕು, ನಮ್ಮದೇ ಬದುಕು ಯಾರದೋ ಮೆಚ್ಚುಗೆಗಾಗಿ, ಇನ್ನ್ಯಾರದೋ ಪ್ರಶಂಸೆಗಾಗಿ ಬದುಕಬೇಕಿಲ್ಲ, ಮನಸ್ಸಿಗೊಪ್ಪುವಂತೆ, ಮನೆಯವರಿಗೊಪ್ಪುವಂತೆ ಬದುಕಿದರೆ ನನ್ನ ಪ್ರಕಾರ ಅದೇ ಜೀವಮಾನದ ಸಾಧನೆ. ಕೆಲವು ಆಸಾಮಿಗಳಂತೂ ಯಾವುದಕ್ಕೂ ಕೊರತೆ ಇಲ್ಲವೆಂಬಂತೆ ಇರುತ್ತವೆ ಆದರೆ ಅವರಿಗೆ ಗೊತ್ತಿಲ್ಲದೇ ಕೆಲವು ಕೊರತೆಗಳು ಕಾಡುತ್ತಿರುತ್ತವೆ.
ಎಲ್ಲ ಇದ್ದೂ ಬದುಕಿನಲ್ಲಿ ನೆಮ್ಮದಿ ಇಲ್ಲದೆ ಬದುಕುವವರನ್ನು ಕಂಡಿದ್ದೇನೆ. ಅಂತಹ ನಾಲ್ಕಾರು ಇಂಟ್ರೆಸ್ಟಿಂಗ್ ಸ್ಟೋರಿಗಳನ್ನು ಹತ್ತಿರದಿಂದಲೇ ನೋಡಿದೆ. ಅವರದೇ ಕಥೆಗಳನ್ನು ಅವರುಗಳು ಹೇಳಿದ್ದನ್ನು ಕರ್ಣಪಟಲಗಳಿಗೂ ತಾಕಿಸಿಕೊಂಡೆ ಏಕೆಂದರೆ ಅದೇನೇ ಇರಲಿ ನಮ್ಮ ಬಳಿ ಅವರಾಗೆ ಅವರು ಯಾರು ಏನೇ ಹೇಳಿದರು ಕೇಳಿಸಿಕೊಳ್ಳಬೇಕು. ಒಳ್ಳೆಯದನ್ನು ಮೈಗೂಡಿಸಿಕೊಳ್ಳಬೇಕು, ಕೆಟ್ಟದ್ದನ್ನು ಮೈಗೊಡವಿಬಿಡಬೇಕು. ಹೀಗೆ ಅಪರೂಪಕ್ಕೆ ಸಿಕ್ಕವರು, ನನ್ನ ಪಾಲಿನ ಬದುಕಿನಲ್ಲಿ ಅಚಾನಕ್ ಆಗಿ ಪರಿಚಯ ಆದವರು, ನಮ್ಮವರೇ ಅನಿಸಿಕೊಂಡವರು ಹೀಗೆ ಕೆಲವರ ಬದುಕಿನ ಕಥೆಯನ್ನ ಆಲಿಸಿದಾಗ ಬದುಕು ಬಂದಂತೆ ಸ್ವೀಕರಿಸಬೇಕು ಆದರೆ ಬದಲಾವಣೆಗಳು ನಮ್ಮನ್ನೇ ಆಧರಿಸಿರುತ್ತದೆ, ಆಯ್ಕೆಯೂ ನಮ್ಮನ್ನೇ ಅವಲಂಭಿಸಿರುತ್ತದೆ ಎಂದನಿಸಿತು. ತೀರ ಇತ್ತೀಚಿಗೆ ಒಬ್ಬರು ಯಾವುದೋ ಕಾರಣಕ್ಕೆ ಸಾಲ ಮಾಡಿಕೊಂಡು ಅದು ಯಾವುದೊ ಎನ್ನುವುದಕ್ಕಿಂತ ಇತ್ತೀಚೆಗೆ ಸಾಮಾನ್ಯರ ಬದುಕಿನಲ್ಲಿ ಈ ಬೆಟ್ಟಿಂಗ್ ಎನ್ನುವ ಭೂತ ಬೆನ್ನತ್ತಿ ಅತಿಯಾಗಿ ಸಾಲ ಮಾಡಿದ ವ್ಯಕ್ತಿಯೊಬ್ಬರು ಸಾಲ ಕೊಟ್ಟವರ ಕಿರಿಕಿರಿ ತಾಳಲಾರದೇ ಅವರ ಬಾಯಿಂದ ಬರುವ ಅವಾಚ್ಯ ಶಬ್ದಗಳನ್ನು ಕೇಳಲಾಗದೆ ಪರ ಊರಿಗೆ ದುಡಿಮೆ ಹರಸಿ ಅದನ್ನು ತೀರಿಸಿಯೇತೀರುತ್ತೇನೆ. ಸಾಲದಿಂದ ಶಾಂತಿ, ಸಮಾಧಾನ,ನೆಮ್ಮದಿಯ ನಿದ್ರೆ ಇಲ್ಲವೆಂದು ಪರಿಚಿತರು ಕರೆ ಮಾಡಿದರು ಕರೆ ಸ್ವೀಕರಿಸದೆ ಮೊಬೈಲ್ ಸ್ವಿಚ್ ಆಫ್ ಮಾಡುತ್ತಿದ್ರು. ಅವರಾಗೆ ಒಮ್ಮೆ ಕರೆ ಮಾಡಿ ಇಷ್ಟೆಲ್ಲಾ ಆಗಿದೆ ಎಲ್ಲವೂ ನನ್ನಿಂದ ನಾನೇ ಮಾಡಿಕೊಂಡೆ, ನನ್ನಿಂದ ಮನೆಯಲ್ಲೂ ನೆಮ್ಮದಿ ಇಲ್ಲದಾಗಿದೆ. ಕಣ್ಮುಚ್ಚಿದ್ರೆ ನೂರಾರು ಆಲೋಚನೆಗಳು, ಇತ್ತ ನಾನಾಗೆ ಮಾಡಿಕೊಂಡ ಅವಾಂತರಕ್ಕೆ ಎಲ್ಲಿ ಹೋದ್ರು ಸಮಾಧಾನ ಇಲ್ಲ ಎಂದು ಗೋಳೋ ಎನ್ನುವ ವ್ಯಕ್ತಿಯ ಕಥೆ ಕೇಳಿದ್ದಾಯ್ತು. ಇದು ಒಂದಾದ್ರೆ ಇನ್ನೊಬ್ರು ಹಿರಿಯ ವ್ಯಕ್ತಿಯೊಬ್ಬರ ಮನೆಯಲ್ಲಿ ಕೈಗೊಬ್ಬರು ಕಾಲಿಗೊಬ್ಬರು ಆಳುಗಳು ಕೆಲಸಕ್ಕೆ ಇದ್ದಾರೆ. ಯಾವುದಕ್ಕೂ ಕೊರತೆ ಇಲ್ಲ, ಬಿಸಿಲಿನ ಮುಖವನ್ನೇ ನೋಡದಿರುವ ಆಸಾಮಿ ಅದು. ಅವರೋ ಸಿಕ್ಕಾಗಲೆಲ್ಲ ಹೀಗೆ ಮಾತಿಗಿಳಿಯುತ್ತಾರೆ. ಏನ್ ಚನಾಗಿದೀರಾ ಅಂದ್ರು ಹಾಂ ನಾನು ಚನ್ನಾಗಿದೀನಿ ನೀವ್ ಹೇಗಿದೀರಾ ಅಂತ ಕೇಳಿದ್ಕೆ ಅಯ್ಯೋ ನನ್ ಕಥೆ ಯಾರಿಗೆ ಹೇಳನ ಬಿಡು ಅಂದ್ರು. ಅರೆ ಯಾಕೆ ನಿಮಗೇನ್ ಆಗಿದೆ ಒಳ್ಳೆ ಗುಂಡುಕಲ್ಲು ಇದ್ದಹಾಗೆ ಇದ್ದೀರಾ ಅದ್ದಿದ್ಕೆ ಹೌದು ಹೌದು ನೋಡೋಕೆ ಮಾತ್ರ ಅಂತ ಹೇಳ್ತಾ ಕಣ್ ತುಂಬಾ ನೀರು ತಂದುಕೊಂಡ್ರು. ಸಮಾಧಾನ ಮಾಡಬೇಕು ಅನ್ನೋವಷ್ಟರಲ್ಲಿ ಮಾತಿಗಿಳಿದು ಇಷ್ಟಕ್ಕೂ ಇವರಿಗೇನು ಕಡಿಮೆ ಭಗವಂತ ಅಗತ್ಯಕ್ಕಿಂತ ಹೆಚ್ಚೇ ಕೊಟ್ಟಿದ್ದಾನೆ ಅಂತ ನೋಡೋರಿಗೆ ಅನ್ಸತ್ತೆ ಅಂದಿದ್ದಾರೆ ಕೂಡ. ಆದರೆ ನನ್ನ ನೋವು ನನಗೆ ಗೊತ್ತು ಅಂತ ಹೇಳ್ತಾ ಮೈತುಂಬಾ ಶುಗರ್, ಬಿಪಿ, ಥೈರಾಯಿಡ್, ಮೊಣಕಾಲು ನೋವು ಹೀಗೆ ರೋಗಗಳನ್ನೇ ಹೊತ್ಕೊಂಡು ಇಷ್ಟ ಪಟ್ಟಿದ್ದನ್ನ ತಿನ್ನೋಕಾಗದೆ, ಎಲ್ಲೂ ಹೋಗೋಕೂ ಆಗದೆ, ಬಿಡದೆ ಇರೋಹಾಗೆ ಮಾತ್ರೆಗಳನ್ನ ತಗೋಳೋದ್ರಲ್ಲೇ ಜೀವನ ಆಗೋಯ್ತು, ಅಪರೂಪಕ್ಕೆ ಬಂಧುಗಳ ಮನೆಗೂ ಹೋಗೋಕೆ ಆಗದೆ ತಪ್ಪದೆ ಆಸ್ಪತ್ರೆಗೆ ಹೋಗೋದ್ರಲ್ಲೇ ನಾನು ಹೀಗಾಗೋಗಿದೀನಿ ಎಷ್ಟು ಸಿರಿ ಸಂಪತ್ತು ಇದ್ರೆ ಏನ್ ಬಂತು ರಾತ್ರಿ ಆದ್ರೆ ನೆಮ್ಮದಿಯಾಗಿ ನಿದ್ರೆ ಇಲ್ಲ, ನನ್ನ ಈ ಗೋಳಾಟದಿಂದ ಮನೆಯವರಿಗೂ ನಿದ್ರೆ ಹಾಳು ಇದಕ್ಕಿಂತ ಭಗವಂತ ನನ್ನ ಒಯ್ದುಬಿಟ್ರೆ ಎಷ್ಟೋ ನೆಮ್ಮದಿ ಇರತ್ತೆ ಅಂತ ಅಬ್ಬರಿಸಿತು ಆ ಜೀವ.
ಅಬ್ಬಬ್ಬಾ ಒಬ್ಬೊಬ್ಬರದು ಒಂದೊಂದು ಕಥೆ ಅನ್ಕೊಂಡು ಸುಮ್ಮನೆ ಕುತ್ಕೊಂಡು ಯೋಚ್ನೆ ಮಾಡಿದಾಗ ಬದುಕು ತುಂಬಾ ಚೆನಾಗಿದೆ ಅದರಲ್ಲಿ ಕಷ್ಟಗಳು ಬರತ್ತೆ, ಸಂಕಟಗಳು ಬಾಧಿಸತ್ತೆ, ಖುಷಿ, ಸಂಭ್ರಮ ಸಡಗರ ಎಲ್ಲವೂ ಇದೆ. ಆದರೆ ಅದನ್ನ ಅಷ್ಟೇ ಚನ್ನಾಗಿ ಅನುಭವಿಸಬೇಕು ಅಂದರೆ ನಮ್ಮ ಆಯ್ಕೆ ಮತ್ತು ಬಳಕೆ ಎರಡೂ ನಮ್ಮ ಸಾಮರ್ಥ್ಯದ ಮೇಲೇಯೇ ನಿರ್ಧರಿಸುತ್ತದೆ ಎನಿಸಿತು. ಇನ್ನು ಇರುವುದರಲ್ಲೇ ಖುಷಿ ಕಾಣುವ ದಂಪತಿಗಳಿಬ್ಬರಿಗೆ ವಿವಾಹವಾಗಿ ಸರಿಸುಮಾರು ಇಪ್ಪತ್ತು ವರ್ಷಗಳೇ ಕಳೆದಿದ್ದವು. ಅದ್ಯಾವ ದೈವದ ಮೊರೆ ಹೋಗಿದ್ದರೋ ಮಕ್ಕಳಿಲ್ಲ ಎನ್ನುವ ಅವರಿವರ ಮಾತುಗಳಿಗೆ ನೊಂದಿದ್ದ ಆ ಜೀವಗಳ ಕೂಗು ಭಗವಂತನಿಗೂ ಮುಟ್ಟಿತ್ತೇನೋ ಅವರಿಗೂ ಒಂದು ಗಂಡುಮಗು ಜನಿಸಿತು. ಎಷ್ಟೋ ದಿನಗಳು ಮಕ್ಕಳಿಲ್ಲದ ಕೊರಗು ಅನುಭವಿಸಿದ್ದ ಅವರುಗಳು ತುಂಬಾ ಮುದ್ದಾಗಿ ಸಾಕಿದ ಆ ಮಗುವನ್ನು ತಮ್ಮ ಮುಂದಿನ ಭವಿಷ್ಯವೆಂದೇ ಭಾವಿಸಿದ ಅವರು ಚೆನ್ನಾಗಿ ವಿದ್ಯಾಭ್ಯಾಸ ಮಾಡಿಸಬೇಕು ಎಂದು ಹಣ ಕಟ್ಟಿ ಒಳ್ಳೆಯ ಶಾಲೆಗೆ ಸೇರಿಸಿದ್ದೂ ಆಯ್ತು. ಹೇಗೋ ಓದಿ ಕಾಲೇಜ್ ದಿನಗಳಿಗೆ ಬಂದ ಆ ಮಗು ಅಪ್ಪ ಅಮ್ಮನ ಬಳಿ ಹಣ ಪಡೆದು ಮೋಜು ಮಾಡ್ತಿದ್ದ ಈ ವಿಷಯ ತಿಳಿದ ಅಪ್ಪ ಬೈದು ಬುದ್ದಿವಾದ ಹೇಳಿದ್ದಕ್ಕೆ ನೀವು ಹೀಗೆ ಬೈತಿದ್ರೆ ನಾನು ಸಾಯ್ತಿನಿ ಅಂತ ಆ ಮಗು ಹೆದರಿಸಿದ ತಕ್ಷಣ ತಂದೆ ತಾಯಿ ಭಯದಿಂದ ಏನಾದ್ರು ಮಾಡ್ಕೊಳಿ ಯಾಕ್ ಬೇಕು ಇರೋದು ಒಬ್ನೇ ಅಂತ ಏನು ಅನ್ನದೇ, ಸಣ್ಣವನಿದ್ದಾಗಿನಿಂದ ಮುದ್ದಿಸಬಾರದಾಗಿತ್ತು ಅಂತ ನೊಂದುಕೊಂಡು ಅವನ ಭವಿಷ್ಯದ ಕುರಿತೇ ಯೋಚಿಸುತ್ತ ನೆಮ್ಮದಿಯಾಗಿ ನಾವು ನಿದ್ರಿಸಿದ ದಿನಗಳೇ ಇಲ್ಲ.
ಮೊದಲು ಮಕ್ಕಳಿಲ್ಲ ಅನ್ನೋ ಚಿಂತೆ ಕಾಡ್ತಿತ್ತು ಆದರೆ ಈಗ ಇರೋ ಮಗುವಿನ ಭವಿಷ್ಯ ಏನು ಇವನು ಒಳ್ಳೆಯ ದಾರಿಯಲ್ಲಿ ನಡೀತಾ ಇಲ್ಲ ಅನ್ನೋ ಚಿಂತೆ ಹೀಗೆ ಕಣ್ಮುಚ್ಚಿದ್ರೆ ನಿದ್ರೆಗಿಂತ ಮುಂಚೆ ಚಿಂತೆಗಳೇ ಕಾಡ್ತವೆ ಎಂದವರ ಮಾತುಗಳು ಕೇಳಿ ನನಗೆ ಹಿರಿಯರ ಒಂದು ಮಾತು ನೆನಪಾಯ್ತು. ಅದೇನೆಂದರೆ “ಇದ್ದವನಿಗೆ ಒಂದು ಚಿಂತೆಯಾದರೆ ಇಲ್ಲದವನಿಗೆ ನೂರು ಚಿಂತೆ” ಸತ್ಯ ಎಂದನಿಸಿತು. ಇನ್ನು ಎರಡು ಮುದಿ ಜೀವಗಳು ಮಕ್ಕಳು ಮೊಮ್ಮಕ್ಕಳಿಗಾಗಿ ತಮ್ಮ ಇಡೀ ಬದುಕನ್ನೇ ಸವೆಸಿದ್ರು ಆದರೆ ಅವರನ್ನೇ ಮಕ್ಕಳು ದೂರವಿಟ್ಟಾಗ ಆ ಕರುಳಿನ್ನೆಷ್ಟು ನೊಂದಿರಬೇಡ. ಇಡೀ ಬದುಕನ್ನ ಅವರಿಗಾಗಿ ಗಂಧದಂತೆ ತೇಯ್ದುಬಿಟ್ಟೆವು. ಕನಿಷ್ಠಪಕ್ಷ ಒಂದು ಹೊತ್ತು ಹೊಟ್ಟೆಗೆ ಹಿಟ್ಟಾಕುವ ಯೋಗ್ಯತೆಯೂ ಇಲ್ಲದ ಮಕ್ಕಳನ್ನ ನಾವು ಹೆತ್ತಿದೀವಿ ಅದಕ್ಕಾಗಿ ಇಬ್ಬರು ಮಕ್ಕಳಿದ್ದರು ಮೂರನೇ ಒಲೆಯಲ್ಲಿ ಬೇಯಿಸಿ ತಿನ್ನುವ ಕರ್ಮ ನಮ್ಮದಾಗಿದೆ ಯಾವ ಜನ್ಮದಲ್ಲಿ ನಾವೇನ್ ಪಾಪ ಮಾಡಿದ್ವೋ ಕಾಣೆವು ಈ ಇಳಿ ವಯಸ್ಸಿನಲ್ಲೂ ದುಡಿತಿದೀವಿ, ನೆಮ್ಮದಿಯಾಗಿ ಕುಳಿತು ತಿನ್ನುವ ಪ್ರಾಯದಲ್ಲೂ ಕಾಯಕ ಹೊರೆಯುತ್ತಿದ್ದೀವಿ. ನಿಮ್ ಮನೆಯಾಗ ಹಿರಿಯರನ್ನ ಚಂದಂಗೆ ನೋಡ್ಕೊವ ನನ್ ಮಕ್ಕಳಂಗೆ ಮಾಡ್ಬೇಡಿ, ಹಣ್ಣು ಜೀವಗಳು ಅಯ್ಯೋ ಅಂದ್ರೆ ಒಳ್ಳೆಯದಾಗಾಕಿಲ್ಲವಾ ಕಣ್ತುಂಬ ಎಂದೂ ನಾವು ನಿದ್ದೆ ಕಂಡಿಲ್ಲ ಅಂದ್ರು ಅದನ್ನ ಕೇಳ್ದಾಗ ತುಂಬಾ ಬೇಸರ ಅನ್ಸ್ತು. ಇನ್ನು ಒಬ್ಬ ಮಹಿಳೆ ಅವರೋ ಯಾರ್ ಏನ್ ಮಾಡ್ತಾರೆ ಅದನ್ನ ಮಾಡದೇ ಹೋದ್ರೆ ಅವರಿಗೆ ಸಮಾಧಾನ ಇಲ್ಲ. ಪಕ್ಕದ ಮನೆಯಲ್ಲಿ ಏನೋ ತಂದ್ರು, ಅವ್ರು ಬಂಗಾರ ಮಾಡ್ಸಿದ್ರು, ಇವ್ರು ಇದನ್ನ ತಂದ್ರು ಅಂತ ಹೊರಗೆ ಮೈಮುರಿದು ದುಡಿದು ಬರೋ ಮನೆ ಯಜಮಾನಿಗೆ ಅದು ಬೇಕು ಇದು ಬೇಕು ಅಂತ ಹಠ ಮಾಡಿ ಮನೆಗೆ ಅಗತ್ಯ ಇರದೇ ಹೋದ್ರು ಅದು ಇದು ಅಂತ ಆ ಮನುಷ್ಯನ ಬಳಿ ಕೇಳಿ ಕೇಳಿ ಆ ವ್ಯಕ್ತಿ ಸಾಲ ಮಾಡಿ ತಂದುಕೊಟ್ಟು ಸಾಕಾಗಿ ಈಗ ಸಾಲ ಕಟ್ಟೋಕೆ ಆಗದೆ ಜಮೀನು ಮಾರಾಟ ಮಾಡಿ ಇರೋಬರೋ ಆಸ್ತಿ ಕಳ್ಕೊಂಡು ಬಂಗಾರಕ್ಕಿಂತ ಬೆಲೆ ಬಾಳೋ ಜಾಗ ಕಳ್ಕೊಂಡು ಬಿಟ್ಟೆ ಎಲ್ಲ ನಿಮ್ಮಿಂದ ಅಂತ ಆ ಹೆಣ್ಮಗಳ ಜೊತೆ ಮಾತು ಬಿಟ್ಟು ಕಣ್ಮುಚ್ಚಿದ್ರು ನಿದ್ರೆ ಬಾರದೆ ಇರುವಷ್ಟು ಒತ್ತಡದಿಂದಲೇ ಬದುಕನ್ನು ಸವೆಸುತ್ತಿದ್ದಾರೆ. ಹೀಗೆ ಇವು ಒಂದೆರಡು ಪ್ರಕರಣಗಳು ಮಾತ್ರ ಇದಕ್ಕಿಂತ ಭಯಾನಕ ಸಂಗತಿಗಳು ಬಹುತೇಕರನ್ನು ಬಾಧಿಸುತ್ತಲೇ ಇರಬಹುದು. ನಿಮ್ಮ ನೆಮ್ಮದಿಯ ನಿದ್ರೆಯನ್ನು ಅವುಗಳು ಕಸಿದಿರಬಹುದು ಆದರೆ ಅವೆಲ್ಲವುಗಳನ್ನು ಪರಿಪೂರ್ಣವಾಗಿ ಅಲ್ಲದಿದ್ದರೂ ಕೊಂಚಮಟ್ಟಿಗೆ ಸರಿಪಡಿಸಿಕೊಳ್ಳುವ ಮಾರ್ಗವನ್ನು ನಾವೇ ಕಂಡುಕೊಳ್ಳಬೇಕು. ಎಂದೋ ಒಂದು ದಿನ ಬದುಕಿನಿಂದ ನಾವು ಎದ್ದು ಹೊರಟಾಗ ಈ ಖುಷಿ, ಸಂಭ್ರಮ, ನೋವು ಸಂಕಟ ಯಾವು ಇರಲಾರವು ನಮ್ಮೊಟ್ಟಿಗೆ ಅವು ಕೊನೆಗೊಳ್ಳುತ್ತವೆ. ಇರುವಷ್ಟು ದಿನ ಬದುಕನ್ನ ಬದುಕಿನಂತೆ, ಮನಸ್ಸಿಗೊಪ್ಪುವಂತೆ, ಇತರರಿಗೆ ಕೆಡುಕು ಬಯಸದೆ ಬದುಕಿದರೆ ಅದಕ್ಕಿಂತ ಸಾರ್ಥಕವಾದದ್ದು ಇನ್ನೇನಿದೆ.
ಅದೇನೇ ಇರಲಿ ಯಾರ ಬದುಕನ್ನು ಯಾರಿಗೂ ಹೋಲಿಕೆ ಮಾಡಿಕೊಳ್ಳದೆ, ನಮ್ಮವರನ್ನು ನೋಯಿಸದೆ, ದಾರಿ ಇರುವಲ್ಲೆಲ್ಲಾ ಹೆಜ್ಜೆ ಇರಿಸಿ ನಮ್ಮೊಟ್ಟಿಗೆ ನಮ್ಮವರನ್ನು ಕರೆದುಕೊಂಡು ಹೋಗಬೇಕು. ಬದುಕಿನಲ್ಲಿ ನಮ್ಮಿಂದ ಆದಷ್ಟು ಒಳ್ಳೆಯದನ್ನೇ ಮಾಡಬೇಕು. ಯಾರೋ ನಾವಾಗಲು ಅಥವಾ ನಾವು ಇನ್ನ್ಯಾರೋ ಆಗಲು ಸಾಧ್ಯವಿಲ್ಲ. ಕಷ್ಟಪಟ್ಟು ದುಡಿದ ಹಣ, ನೆಮ್ಮದಿಯ ಸೂರಿನ ಕೆಳಗೆ ಸಾರ್ಥಕ ಬದುಕು ಬದುಕಿದರೆ ಅದಕ್ಕಿಂತ ದೊಡ್ಡದೇನಿದೆ. ಒಳ್ಳೆಯ ಆಲೋಚನೆ, ಒಳ್ಳೆಯ ಕೆಲಸಗಳು ನಮ್ಮನ್ನು ಬೆಳೆಸುತ್ತವೆ ಅದೇ ಮಾರ್ಗದಲ್ಲಿ ನಡೆಯಬೇಕು. ಎಷ್ಟೋ ಜನರು ನಾವಿರುವ ಸ್ಥಾನಕ್ಕಿಂತಲೂ ಕೆಳಗಿರುತ್ತಾರೆ, ಯಾವಾಗಲು ನಮ್ಮದೇ ಕಷ್ಟ ಎಂದು ಭಾವಿಸುವುದಕ್ಕಿಂತ ನಮಗಿಂತಲೂ ಕಷ್ಟ ಪೊರೆವವರನ್ನು ಕಂಡು ಸಮಾಧಾನ ಮಾಡಿಕೊಳ್ಳಬೇಕು. ಇರಲು ಸೂರಿಲ್ಲದೆ ಬದುಕುವವರು ಇರುತ್ತಾರೆ, ಸೂರು ಎನ್ನುವುದು ಎಷ್ಟೋ ಜನರ ಕನಸು, ಯಾವುದಾದರು ಒಂದು ಉದ್ಯೋಗ ಪೊರೆಯಬೇಕೆನ್ನುವುದು ಇನ್ನೆಷ್ಟೋ ಜನರ ಕನಸು, ನಾಲ್ಕು ಜನರ ನಡುವೆ ನನ್ನ ಹೆಸರು ರಾರಾಜಿಸಬೇಕು ಹೀಗೆ ನೂರಾರು ಕನಸೊತ್ತು ಅವುಗಳು ಈಡೇರುವ ದಿನಕ್ಕಾಗಿ ನಿದ್ರೆಗೆಟ್ಟು ಕಾಯುತ್ತಾ ಕೂರುವುದಲ್ಲ ಅದಕ್ಕಾಗಿ ಶ್ರಮ ಪಡಬೇಕು. ನಮ್ಮ ಕನಸುಗಳ ಸಾಕಾರಕ್ಕಾಗಿ ಅಗತ್ಯ ನಿದ್ರೆಯೂ ಬೇಕು. ಕನಸನ್ನು ಸಾಕಾರಗೊಳಿಸಿಕೊಳ್ಳಲು ನನ್ನ ಪ್ರಕಾರ ಬ್ಯುಟಿಫುಲ್ ಆಗಿ ಯೋಚ್ನೆ ಮಾಡಬೇಕು. ಅದು ನನಗು ಹೀಗೆ ಒಬ್ಬ ಸಕ್ಸಸ್ ವ್ಯಕ್ತಿಯಿಂದ ಅದು ತಿಳಿಯಿತು. ಒಳ್ಳೆ ಪದವೀಧರ ಸಾಕಷ್ಟು ಪರೀಕ್ಷೆಗಳನ್ನು ಬರೆದು ಸ್ವಲ್ಪದರಲ್ಲೇ ಕೈ ತಪ್ಪಿ ಹೋಗ್ತಿತ್ತು ಕೆಲಸ. ಹೀಗಾಗಿ ಅತಿಯಾಗಿ ಯೋಚ್ನೆ ಮಾಡ್ತಾ ಸುಮಾರು ದಿನಗಳ ಕಾಲ ಹೊಟ್ಟೆಗೆ ಊಟ ಸೇರದೆ, ಕಣ್ಣಿಗೆ ನಿದ್ರೆ ಬಾರದೆ ಜೀವನ ಬೇಡ ಅನ್ನುವಷ್ಟರ ಮಟ್ಟಿಗೆ ಯೋಚಿಸಿ ಮನೆಯೊಂದರ ಕೊಣೆಯಲ್ಲಿ ಯಾರೊಂದಿಗೂ ಬೆರೆಯದೇ ಒಬ್ಬನೇ ಕುಳಿತು ಜೀವನ ಇಷ್ಟೇ ಅನ್ಕೊಳ್ತಿದ್ದ. ಹೀಗಿರುವಾಗ ಅಚಾನಕ್ ಆಗಿ ನನಗೊಮ್ಮೆ ಫೋನ್ ಮಾಡಿ ಮಾತನಾಡುವಾಗ ಸುಮ್ನೆ ಓದಿದಿನಿ ಕೆಲಸ ಇಲ್ಲ, ಮಣ್ಣು ಇಲ್ಲ ಅಂತ ಬೇಸರದಿಂದ ಆ ವ್ಯಕ್ತಿ ಹೇಳಿದಾಗ ಏನಾದರು ಸ್ವಂತ ಕೆಲಸ ಪ್ರಾರಂಭ ಮಾಡಬಹುದಲ್ವಾ? ಅಂದಾಗ ಇಲ್ಲ ಬೆಂಗಳೂರು ಹೋಗ್ಬೇಕು ಅನ್ಕೊಂಡಿದೀನಿ ಅಂತ ಹೇಳಿದ. ಅರೆ ಒಟ್ನಲ್ಲಿ ದುಡಿಮೆ ಇದ್ರೆ ಸಾಕು, ಯಾವ್ದೋ ಒಂದು ಇನ್ನೊಬ್ಬರ ಮೇಲೆ ಅವಲಂಬಿತ ಆಗೋಕಿಂತ ಅಗತ್ಯಕ್ಕಿಂತ ಕಡಿಮೆ ಸಂಬಳ ದೊರೆತರು ಪರವಾಗಿಲ್ಲ ಹೇಗೆ ನಿಭಾಯಿಸಬೇಕು ಅನ್ನೋದು ತಿಳಿದಿರ್ಬೇಕು ಅಷ್ಟೇ ಅಂತ ಈ ಕಡೆಯಿಂದ ನಾನು ಹೇಳಿದಾಗ ಹೌದು ಹೌದು ಅಂತ ದುಡಿಯೋಕೆ ಹೋದಂತ ವ್ಯಕ್ತಿ ವರ್ಷದಲ್ಲಿ ಮತ್ತೆ ಊರಿಗೆ ವಾಪಾಸ್ ಆದ. ನನಗಲ್ಲಿ ಸರಿ ಹೋಗಲಿಲ್ಲ, ಅಲ್ಲಿ ಬದುಕೇ ದುಬಾರಿ ಅನ್ಸ್ತು, ಆ ಕಿರಿ ಕಿರಿ, ನೆಮ್ಮದಿ ಇಲ್ಲದೆ ಇರೋ ಜೀವನ, ಹಗಲು ಯಾವ್ದೋ ರಾತ್ರಿ ಯಾವ್ದೋ ತಿಳಿಯಲ್ಲ ಯಾವಾಗಲು ಜಾತ್ರೆ ತರ ಗಲಾಟೆ ಯಪ್ಪಾ ಆ ಜೀವನ ಯಾರಿಗೂ ಬೇಡ ಅಂದ. ಮತ್ತಿನ್ನೇನು ಮಾಡ್ತಿಯಾ ಅಂತ ಮನೆಯವರು ಕೇಳ್ತಿದಾರೆ ನೆಮ್ಮದಿ ಇಲ್ಲ ಅಂದಾಗ ಅರೆ ಯಾಕಿಲ್ಲ ನೆಮ್ಮದಿ ಇದ್ದೆ ಇರತ್ತೆ ಅದನ್ನ ಕಂಡುಕೊಳ್ಳಬೇಕಷ್ಟೆ ಮಾಡೋರಿಗೆ ನೂರಾರು ಕೆಲಸ, ಓದ್ಕೊಂಡವರಿಗೆಲ್ಲ ಸರಕಾರಿ ನೌಕರಿ ಸಿಕ್ಕಿದ್ದಾದ್ರೆ, ಅವ್ರೆಲ್ಲ ನೆಮ್ಮದಿಯಿಂದ ಇರೋದೇ ಆಗಿದ್ರೆ ಸರಕಾರಿ ಕೆಲಸ ಇಲ್ಲದೇನೆ ದುಡಿದು ಬದುಕುವ ನೆಮ್ಮದಿಯ ಬದುಕು ಪೊರೆವವರು ಎಷ್ಟೋ ಜನರು ನಮಗೆ ಸಾಕ್ಷಿಯಾಗಿ ಸಿಗ್ತಾರೆ. ಅಷ್ಟೇ ಯಾಕೆ ಸರಕಾರಿ ನೌಕರಿ ಮಾಡುವ ಒಬ್ಬರು ಸಂಬಂಧಿಕರೆಲ್ಲ ಯಾವುದೇ ಕಾರ್ಯಕ್ರಮ, ಮತ್ತೊಂದು ಅಂತ ಕರೆದಾಗ ಅಯ್ಯೋ ರಜೆ ನೆ ಇಲ್ಲ, ಸಾಕಾಗಿದೆ ಈ ಕೆಲಸದೊತ್ತಡ ನೆಮ್ಮದಿ ಇಲ್ಲ ಅಂತ ಯಾರ್ ನೋಡಿದ್ರು ಹೀಗೆ ಹೇಳೋರನ್ನೇ ನೋಡಿದೀನಿ ಸುಮ್ನೆ ದಿನ ಬೆಳಗಾದ್ರೆ ಪ್ರತಿ ಮನೆಗಳಲ್ಲೂ ಹಾಲು, ಮೊಸರು ಮಜ್ಜಿಗೆ ಅಂತ ಪ್ರತಿಯೊಬ್ಬರಿಗೂ ಅವಶ್ಯವಿರುವಂತದ್ದು ಹಾಗಾಗಿ ಯಾಕೆ ಹಸುಗಳನ್ನ ಸಾಕಬಾರ್ದು ಅಂತ ಅಂದಾಗ ಅದರ ಬಗ್ಗೆ ಮನೆಯಲ್ಲಿ ತಾತನಿಗೆ ಅರಿವಿದ್ದರಿಂದ ನಾಲ್ಕು ಹಸುಗಳನ್ನ ಅವರ ಮಾರ್ಗದರ್ಶನದಲ್ಲಿ ತಂದು ಚನ್ನಾಗಿ ಆರೈಕೆ ಮಾಡಿ ಅದರಿಂದ ಸಕ್ಸಸ್ ಕಂಡ ಆ ವ್ಯಕ್ತಿ ನಾಲ್ಕು ಎಂಟು, ಎಂಟು ಹನ್ನೆರಡು ಹೀಗೆ ಹೆಚ್ಚುತ್ತಾ ನಲವತ್ತು ಹಸು ಐದು ಎಮ್ಮೆಗಳನ್ನ ಮಾಡಿ ಕೇವಲ ಎರಡು ವರ್ಷಗಳಲ್ಲಿ ಎರಡು ಕುಟುಂಬಗಳಿಗೆ ಸಂಬಳ ಕೊಟ್ಟು ಆರ್ಗ್ಯನಿಕ್ ಆಗಿ ತರಕಾರಿ, ಸೊಪ್ಪು ಬೆಳೆಗಳನ್ನ ಬೆಳೆದು ಮತ್ತೊಬ್ಬರಿಗೆ ಆದರ್ಶವಾಗಿ ಬದುಕುತ್ತಿದ್ದಾನೆ. ಮೊದಲು ಮೊದಲು ಜನ ಒಳ್ಳೆ ಚನ್ನಾಗಿ ಓದಿದಿಯ ದನ ಕಾಯೋ ಕೆಲಸ ಮಾಡ್ತಿಯಾ ಅಂದಾಗ ಬೇಸರ ಆಗಿದ್ದು ನಿಜ ಆದರೆ ನನಗೆ ಇದು ಖುಷಿ ಕೊಡತ್ತೆ, ನಾನು ಮಾಡೋ ಕೆಲಸದಲ್ಲಿ ನಿಷ್ಠೆ, ಪ್ರೀತಿ ಇದ್ರೆ ಸಕ್ಸಸ್ ಕಾಣೋಕೆ ಸಾಧ್ಯ ಅನ್ನೋದನ್ನ ಕಂಡುಕೊಂಡೆ. ಮತ್ತದೇ ಜನ ಈಗಿನ ಕಾಲದಲ್ಲಿ ಮಾಡೋಕೆ ಕೆಲಸ ಇಲ್ಲ ಅನ್ನೋಕಿಂತ ನಾಲ್ಕು ಹಸ ಕಟ್ಟಿದ್ರೆ ನೆಮ್ಮದಿಯಾಗಿ ಇರಬಹುದು ಅನ್ನೋರನ್ನ, ನನ್ ಜೊತೆ ಇದ್ದ ಸ್ನೇಹಿತರು ನಾವು ಸುಮ್ನೆ ಕೆಲಸ ಕೆಲಸ ಅಂತ ಬಡ್ಕೊಳೋಕಿಂತ ಸ್ವಂತ ಕೆಲಸ ಪ್ರಾರಂಭಿಸಬೇಕು ಅಂತಿದಾರೆ. ಸಕ್ಸಸ್ ಅಂದ್ರೆ ನನ್ನ ಪ್ರಕಾರ ಇದೆ. ಈಗ ಜೀವನ ಸಾಕಾಗಿದೆ ಅಂತಿದ್ದ ವ್ಯಕ್ತಿ ಫೋನ್ ಮಾಡಿ ಎಲ್ಲೋ ಹೋಗಿ ದುಡಿದು, ಮನೆಯವರಿಂದ ದೂರ ಇದ್ದೂ ನೆಮ್ಮದಿ ಇಲ್ದೆ, ಕಣ್ಣಿಗೆ ನಿದ್ರೆ ಇಲ್ದೆ ಬದುಕ್ತಿದ್ದ ನಾನು ಇವತ್ತು ಮನೆಮುಂದೆ ಹಸುಗಳು ನೋಡ್ಕೊಂಡು ನಾಲ್ಕು ಜನಕ್ಕೆ ಕೆಲಸ ಕೊಟ್ಟು ಅವ್ರು ನಾನು ವಯಸ್ಸಿನಲ್ಲಿ ಚಿಕ್ಕವನು ಹೆಸರಿನಿಂದ ಕರೀರಿ ಅಂದ್ರು ಸಹ ಯಜಮಾನ್ರೆ ಅಂತ ಕರೀತಾರೆ ಇದ್ದಿದ್ದ ಕಡೆನೇ ನೆಮ್ಮದಿ ಸೃಷ್ಟಿ ಮಾಡ್ಕೊಳೋದು ಅಂದ್ರೆ ಇದೆ ಅನ್ಸತ್ತೆ ಇದಕ್ಕಿಂತ ಇನ್ನೇನ್ ಬೇಕು ಅಂದಾಗ ಕೇಳೋಕೂ ಖುಷಿ ಅನ್ಸ್ತು.
ಇಷ್ಟೆಲ್ಲಾ ನೋಡಿದಾಗ, ಕೇಳಿದಾಗ ಮಾಡೋಕೆ ಇಂತದ್ದೇ ಅಂತಲ್ಲ, ಯಾರಿಗೂ ತೊಂದರೆ ಆಗದೆ ಇರೋ ಹಾಗೆ ಯಾವುದಾದರು ಒಂದು ಕೆಲಸ, ಯಾವುದಕ್ಕೂ ಅತಿಯಾಗಿ ಚಿಂತಿಸದೆ ಬರೋ ಸಮಸ್ಯೆಗಳನ್ನ ಭಾರ ಅಂತ ತಿಳಿದೇ, ಅಯ್ಯೋ ಅಂತ ತಲೆಮೇಲೆ ಕೈ ಹೋರದೇ ಸಮಸ್ಯೆಗಳು ಬಂದಾಗ ಅದನ್ನ ಬಗೆಹರಿಸಿಕೊಳ್ಳುವ ಕುರಿತು ಯೋಚನೆ ಮಾಡಬೇಕು. ಯಾರೂ ಶಾಶ್ವತ ಅಲ್ಲ, ಖುಷಿ, ಸಂಭ್ರಮ, ಆಗಾಗ ಬಂದು ಹೋಗುವ ಸಂಕಟಗಳು ಸಹ ಬಹು ಸಮಯ ನಿಲ್ಲುವುದಿಲ್ಲ. ಕಷ್ಟಗಳು ಮನುಷ್ಯನನ್ನ ಬಾಧಿಸುತ್ತವೆ ಹೊರತು ಬೆಳೆದು ನಿಂತ ಮರಗಳನ್ನಲ್ಲ ಹಾಗಾಗಿ ಅವುಗಳಿಂದ ಹೊರಬರುವ ಯೋಚನೆ ಮಾಡಬೇಕೆ ಹೊರತು ಕೊರಗುವುದಲ್ಲ. ಎಲ್ಲರಿಗೂ ಸಮಸ್ಯೆಗಳು ಇದ್ದದ್ದೇ, ಸಮಸ್ಯೆಗಳಿಂದ ಹೊರತಾದ ವ್ಯಕ್ತಿ ಇರಲು ಸಾಧ್ಯವೇ ಇಲ್ಲ. “ಬುದ್ದಿ ಯಸ್ಯ ಬಲಂ ಸತ್ಯ” ಎಂಬಂತೆ ಸಮಾಧಾನ ಚಿತ್ತದಿಂದ ಯೋಚಿಸಿ ನಿರ್ಣಯಿಸಿ ಬುದ್ದಿವಂತಿಗೆಯಿಂದ ಶಕ್ತಿ ಮತ್ತು ಬಲವನ್ನು ಪಡೆಯಲು ಸಾಧ್ಯ ಎಂದರ್ಥ. ಹಿರಿಯರು ಯಾವಾಗಲು ಸಾವಧಾನದಿಂದ ಇರಬೇಕು ಎಂಬುದನ್ನು ಇದಕ್ಕೆ ಹೇಳ್ತಾರೆ. “ಚಿಂತೆ ಮಾಡಿದರೆ ಸಂತೆ ಸಾಗೀತೆ”ಅಂದ್ರೆ ಬದುಕು ಚಿಂತೆ ಮಾಡಿದರೆ ಸಾಗಲ್ಲ ಹೇಗೆ ಬದುಕನ್ನು ಮುನ್ನಡೆಸಬೇಕೆಂಬ ನಿಟ್ಟಿನಲ್ಲಿ ಕಾಯಕ ಮಾಡಬೇಕು ಎಂದರ್ಥ. ನನಗೆ ತಿಳಿದ ಮಟ್ಟಿಗೆ ಮೊಗದಲ್ಲೊಂದು ಸಣ್ಣ ನಗೆ, ದೀರ್ಘ ನಿದ್ರೆ ಇವೆರಡು ಕೂಡ ಯಶಸ್ವಿ ಬದುಕಿಗೆ ಬೇಕಾಗಿರುವ ಮುಖ್ಯ ಸರಕುಗಳು. ನನ್ನ ಜೊತೆಗಿದ್ದವರು ಕೆಲವರು ಹೀಗೆ ಮಾತನಾಡುವಾಗ ನಿದ್ರೆ ಬಂದಂತೆ ಅನ್ಸತ್ತೆ ಮಲಗಿದ್ರೆ ನಿದ್ರೆ ಬರಲ್ಲ, ಇನ್ನು ಮಲಗಿರ್ತೀನಿ ಅನ್ನೋತರ ಅನ್ಸತ್ತೆ ಸುತ್ತ ಮುತ್ತ ಯಾರ್ ಏನೇ ಮಾತಾಡಿದ್ರು ಎಲ್ಲ ಕೇಳ್ಸ್ತತ್ತೆ ಕಣ್ಣು ಬಿಡೋಕಾಗಲ್ಲ, ನಿದ್ರೇನು ಆಗಿಲ್ಲ ಅನ್ನೋತರ ಅನ್ಸತ್ತೆ, ಇನ್ನು ಕೆಲವರು ಅಯ್ಯೋ ತಲೆ ನೆಲಕ್ಕಿಟ್ರೆ ನಾಳೆ ಬಗ್ಗೆ ಯೋಚ್ನೆ ಬರತ್ತೆ ಬಂದ ನಿದ್ರೇನು ಹಾರಿ ಹೋಗತ್ತೆ, ನೂರೆಂಟು ಚಿಂತೆಗಳು ಕಾಡತ್ತೆ, ನನಗೆ ಯಾರಾದ್ರೂ ಏನಾದ್ರು ಅಂದಿದಾರೆ ಅನ್ನೋ ಮಾತುಗಳು ನನಗೆ ಕೇಳಿದ್ರೆ ಸಹಿಸ್ಕೊಳೋಕೆ ಆಗಲ್ಲ ಅದರದೇ ಆಲೋಚನೆ ಹೀಗೆ ಬಹುತೇಕರು ಒತ್ತಡದಲ್ಲೇ ಜೀವನ ಕಳೆಯುತ್ತಿದ್ದಾರೆ. ಒಂದಲ್ಲ ಒಂದು ದಿನ ಎಲ್ಲವನ್ನೂ ಬಿಟ್ಟು ಸಾವೆಂಬ ಯಾತ್ರೆಗೆ ಹೊರಡಲೇಬೇಕು. ಈ ಅಂತೆ ಚಿಂತೆ ಕಂತೆಗಳನ್ನೆಲ್ಲ ಮೂಟೆ ಕಟ್ಟಿ ಪ್ರತಿ ದಿನವನ್ನ ಜೀವಿಸಬೇಕು. ಇದು ಯಾರದೋ ಬದುಕಲ್ಲ ನಮ್ಮದೇ ಬದುಕು ನಮಗಿಷ್ಟದಂತೆ ಬದುಕಬೇಕು. ಏನಿದ್ರೆ ಏನಂತೆ ನೆಮ್ಮದಿಯಾಗಿ ಕಣ್ತುಂಬ ನಿದ್ರೆ ಕಾಣಲಿಲ್ಲ ಅಂದ್ರೆ ಏನು ಗಳಿಸಿದ್ರೆ ಏನು? ನನ್ನ ಪ್ರಕಾರ ಶ್ರೀಮಂತಿಕೆ ಅಂದ್ರೆ ಹಣ, ಅಂತಸ್ತು, ಹೆಸರು ಗಳಿಸೋದು ಮಾತ್ರ ಅಲ್ಲ ತಲೆ ನೆಲಕ್ಕೆ ಸೋಕಿದ್ರೆ ಯಾರು ನೆಮ್ಮದಿಯಾಗಿ ನಿದ್ರೆ ಮಾಡ್ತಾರೋ ಅವರೇ ಶ್ರೀಮಂತರು. ಇನ್ನು ನೀವುಗಳು ಚಿಂತೆಯಲ್ಲೇ ದಿನ ಕಳೆಯೋರು ಆಗಿದ್ರೆ ಈಗಲೇ ಅದರಿಂದ ಹೊರಬಂದುಬಿಡಿ. ನಿಶ್ಚಿಂತೆಯಿಂದ ಬದುಕು ಬಂದಂತೆ ಸ್ವೀಕರಿಸಿ ಬರುವ ಸಮಸ್ಯೆಗಳನ್ನು ಹಂತ ಹಂತವಾಗಿ ಅದರಿಂದ ಹೊರಬರೋದರ ಕುರಿತಾಗಿ ಸಮಾಧಾನದಿಂದ ಇದ್ದು ಬದುಕನ್ನ ಗೆಲ್ಲಿ. ನೆಮ್ಮದಿಯಿಲ್ಲದೆ ಬದುಕುವ ಬದುಕು ಬದುಕೇ ಅಲ್ಲ, ಬದುಕಿನಲ್ಲಿ ಪಾಲಿಗೆ ಬರೋದೆಲ್ಲ ಬರಲಿ ಬಿಡಿ, ನೀವು ಕೂಡ ನೆಲಕ್ಕೆ ತಲೆ ತಾಕಿದರೆ ಸಾಕು ನಿದ್ರೆಗೆ ಜಾರುವಷ್ಟು ನೆಮ್ಮದಿಯನ್ನು ತಂದುಕೊಳ್ಳಿ.
ಡಾ ಮೇಘನ ಜಿ
ಉಪನ್ಯಾಸಕರು