spot_img
spot_img

ಓದುವ ಆ ಪರಿ ಈ ಪರಿ

Must Read

- Advertisement -

ಬಲ್ಲವನೇ ಬಲ್ಲ ಬೆಲ್ಲದ ರುಚಿಯೆಂದು ಬಲ್ಲವರು ಹೇಳಿದಂತೆ ಓದಿನ ಸವಿಯನ್ನು ಉತ್ತಮ ಓದುಗರೇ ಬಲ್ಲರು. ಓದಿನ ರುಚಿ ಒಮ್ಮೆ ಹತ್ತಿದರೆ ಮುಗಿಯಿತು. ಹೋದಲೆಲ್ಲ ಹೆಗಲಿಗೇರಿಸಿಕೊಂಡ ಚೀಲದಲ್ಲಿ ಪುಸ್ತಕಕ್ಕೆ ಮರೆಯದೇ ಜಾಗ ನೀಡಲಾಗುತ್ತದೆ. ಪ್ರಯಾಣದಲ್ಲಿ ಅದರಲ್ಲೂ ಚುಕುಬುಕು ಉಗಿಬಂಡಿಯ ಪಯಣದಲ್ಲಿಯಂತೂ ಕೈಯಲ್ಲಿ ಪುಸ್ತಕವನ್ನು ಹಿಡಿದು ಓದುವ ಖುಷಿ ಓದಿದವರಿಗೇ ಗೊತ್ತು.

ಹೋದಲ್ಲಿ ಬಂದಲ್ಲಿ ಜೊತೆಗಿರುವ ಪುಸ್ತಕ ನಮ್ಮ ಆತ್ಮೀಯ ಸಂಗಾತಿಯೇ ಹೌದು. ಹಳೆಯದಾಗಿದ್ದರೆ ಆ ಗ್ರಂಥದ ಘಮಲು ವಿಶಿಷ್ಟ. .ಪುಸ್ತಕ ಎಷ್ಟೇ ಹಳತಾದರೂ ಅದರಲ್ಲಿರುವ ಪದಗಳ ರುಚಿ ಬದಲಾಗಲ್ಲ ಅನ್ನೋದು ಸತ್ಯ. ಅಲ್ಲಲ್ಲಿ ಮಡಚಿದ ಮುಕ್ಕಾದ ಹಾಳೆಗಳನ್ನು ಸರಿಪಡಿಸಿ ಓದುವ ಮಜಾ ಪದಗಳಲ್ಲಿ ಹಿಡಿದಿಡಲಾಗದು. ಅದನ್ನು ಅನುಭವಿಸಿಯೇ ಖುಷಿಪಡಬೇಕು..

ಹೊಸ ಪುಸ್ತಕಗಳ ಪುಟಗಳನ್ನು ಗರಿ ಗರಿ ನೋಟುಗಳಂತೆ ತಿರುವಿದಾಗ ಖರ ಖರ ಸದ್ದು ಮಾಡುವ, ಕಣ್ಣು ಸೆಳೆಯುವ ಚೆಂದದ ಪದಪುಂಜಗಳು ಅಕ್ಷರ ಮಾಲೆಯನ್ನು ಒತ್ತೊತ್ತಾಗಿ ಇಟ್ಟಂತೆ ಭಾಸವಾಗುತ್ತದೆ. ಓದಿನ ಸವಿ ಹೇಗಿರುತ್ತೆಂದು ಕೇಳಿದರೆ ಬೆಲ್ಲ ತಿಂದ ಮೂಗನ ಸ್ಥಿತಿಯಂತಾಗುತ್ತದೆ ನಮ್ಮ ಸ್ಥಿತಿ. ಓದಿನ ಪರಿಯೇ ಅಂಥದು. ಇನ್ನು ಓದಿನ ಪರಿಣಾಮವಂತೂ ಅಗಾಧವಾದುದು. ಪರಿಣಾಮಕಾರಿ ಓದಿನ ಪ್ರಭಾವವಂತೂ ಮಾಪನಕ್ಕೆ ಸಿಗದು.

- Advertisement -

ಮೊದಲೆಲ್ಲ ಓದು ಎಂದರೆ ಪುಸ್ತಕದಲ್ಲಿ ಮಾತ್ರ ಇತ್ತು. ಆದರೆ ಡಿಜಿಟಿಲ್ ದುನಿಯಾದಲ್ಲಿ ಓದಿನ ರೂಪ ಸಿಕ್ಕಾಪಟ್ಟೆ ಎನ್ನುವಷ್ಟು ಬದಲಾಗಿದೆ. ನಮಗಾಗಿ ಬೇರೆ ಯಾರೋ ಓದಿದ್ದನ್ನು ಬರಿ ಆಲಿಸುವಿಕೆಯ ಪುಸ್ತಕಗಳು. ಕಂಪ್ಯೂಟರ್‍ನಲ್ಲಿ ಇಲ್ಲವೇ ಮೊಬೈಲಿನಲ್ಲಿ ಡೌನ್ ಲೋಡ್ ಮಾಡಿಕೊಂಡು ಓದುವ ಪುಸ್ತಕಗಳು ಲಭ್ಯ. ಮೊಬೈಲ್ ಮುಖವನ್ನು ಬೆರಳಿನಿಂದ ತಿಕ್ಕುತ್ತ ಕೆಲ ಹೊತ್ತು ಸಂದೇಶಗಳ ಮೇಲೆ ಇಲ್ಲವೇ ಕೆಲ ನೀತಿ ಕಥೆಗಳ ಅಥವಾ ಕವಿತೆಗಳ ಮೇಲೆ ಕೊಂಚ ಕಣ್ಣು ಹಾಯಿಸಿ ಓದಿಗೆ ಪೂರ್ಣ ವಿರಾಮ ಹಾಕುವವರ ಸಂಖ್ಯೆಯೇ ಹೆಚ್ಚಾಗುತ್ತಿದೆ. ಒಂದೇ ಗೂಗಿಯಂತೆ ಮೊಬೈಲ್ ಹಿಡಿದು ಮನೆಯ ಮೂಲೆಯಲ್ಲಿ ಕುಳಿತು ನಗೆಚಟಾಕಿಗಳನ್ನು ಓದಿ ಹಲ್ಕಿರಿಯುವುದಕ್ಕೆ ಮುಗಿದುಬಿಡುತ್ತದೆ.

ಹೀಗಾಗಿ ಹೋದಲೆಲ್ಲ ಹಾಳೆಗಳಿಂದ ಕಟ್ಟಲ್ಪಟ್ಟ ಅಕ್ಷರರಾಶಿಯನ್ನು ಹೊತ್ತೊಯ್ಯುವ ಪ್ರಸಂಗ ಕಡಿಮೆಯಾಗುತ್ತಿದೆ. ಆದರೂ ತೆರೆದ ಪುಸ್ತಕ ಅಂಗೈ ನಡುವಿಟ್ಟು ಪುಟ ತಿರುವುತ್ತಿದ್ದರೆ ಸ್ವರ್ಗದಲ್ಲಿರುವಂತೆ ಭಾಸವಾಗುತ್ತದೆ ಎನ್ನುವ ಜನ ಇನ್ನೂ ಇದ್ದಾರೆ. ಒಟ್ಟಿನಲ್ಲಿ ಅಪಾರವೆನಿಸುಷ್ಟು ಬದಲಾವಣೆ ಓದಿನಲ್ಲಿ ಆಗಿದೆ. ಅಂಗೈಯನ್ನು ಆವರಿಸಿದ ಪುಟ್ಟ ಮೊಬೈಲ್ ಮೇಲೆ ಬೆರಳಾಡಿಸಿದರೆ ಸಾಕು ಜಗತ್ತಿನ ಎಲ್ಲ ಸುದ್ದಿಗಳು ಬಣ್ಣ ಬಣ್ಣದ ಚಿತ್ರಗಳೊಂದಿಗೆ ಸಿಗುತ್ತವೆ.

ಮೊನ್ನೆ ಮೊನ್ನೆಯವರೆಗೂ ಅಂದರೆ ಟಿವಿ ಬರುವ ಮುನ್ನ ಸುದ್ದಿ ಹಾಗೂ ನಿಯತಕಾಲಿಕೆಗಳ ವಿವಿಧ ಲೇಖನಗಳನ್ನು ಓದಲು ಪತ್ರಿಕೆಗಾಗಿ ಮುಂಜಾನೆ ಪೇಪರ್ ಹಂಚುವ ಹುಡುಗ ಬರುವವರೆಗೂ ಕಾಯಬೇಕಿತ್ತು. ಅದರಲ್ಲಿ ಹುಡುಗ ಬರುವುದು ಕೊಂಚ ತಡಮಾಡಿದರಂತೂ ಶತಪಥ ಶುರುವಾಗುತ್ತಿತ್ತು. ಬಿಸಿ ಬಿಸಿ ಚಹ ಇಲ್ಲವೇ ಹಬೆಯಾಡುವ ಕಾಫೀ ಹೀರುತ್ತ ಮುಖ್ಯಾಂಶಗಳ ಮೇಲೆ ಕಣ್ಣಾಡಿಸಿದಾಗ ದಿನಚರಿ ಶುರುವಾದ ಹಿತಭಾವ. ಬಹಳ ಜನರಿದ್ದ ಮನೆಯಲ್ಲಿ ಎಲ್ಲರ ಕೈಗಳಲ್ಲಿ ಒಂದೊಂದು ಪುಟ ಹಂಚಿಹೋಗುತ್ತಿತ್ತು.

- Advertisement -

ಬೇರೆಯವರು ಓದುವ ಪುಟ ತಮಗೆ ಬೇಕಾದಾಗ ಮನೆಯ ವಾತಾವರಣ ಬಿಸಿಯಾಗುತ್ತಿತ್ತು. ಮನೆಯ ಹಿರಿಯರು ಕನ್ನಡಕ ಏರಿಸಿಕೊಂಡು ಛಾವಣಿಯಲ್ಲಿಟ್ಟ ಆರಾಮ ಕುರ್ಚಿಯಲ್ಲಿ ಅರ್ಧಂಬರ್ಧ ಮುಖ ಕಾಣುವಂತೆ ಪತ್ರಿಕೆ ಓದುವ ಗತ್ತುÉೂೀಣಿಯಲ್ಲಿ ಓಡಾಡುವ ಜನರನ್ನು ಮಕ್ಕಳನ್ನು ಆಕರ್ಷಿಸಿತ್ತಿತ್ತು. ಸ್ವಾರಸ್ಯಕರ ಸುದ್ದಿಗಳನ್ನು ಕಿವಿ ಕೇಳದ ಅಜ್ಜಿಗೆ ದೃಷ್ಟಿ ಮಂಜು ಮಂಜಾದ ಅಜ್ಜ ಜೋರಾಗಿ ಓದಿ ಹೇಳುವ ರೀತಿಯನ್ನಂತೂ ನೋಡಿಯೇ ಖುಷಿ ಪಡುವಂತಿರುತ್ತಿತ್ತು. ಅವರಿಬ್ಬರ ದಾಂಪತ್ಯದ ಸಾಂಗತ್ಯ ಪ್ರೀತಿ ಎದ್ದು ಕಾಣುತ್ತಿತ್ತು.

ಇನ್ನು ಕೆಲವರು ಓದುವ ರೀತಿ ಎಂಥವರಿಗೂ ಬೆರಗು ಮೂಡಿಸುತ್ತಿತ್ತು. ಅವರು ಪತ್ರಿಕೆಯ ಶೀರ್ಷಿಕೆಯಿಂದ ಹಿಡಿದು ಕೊನೆಯ ಪುಟದಲ್ಲಿ ಮುದ್ರಿಸಿದ ಮುದ್ರಕರ ಹೆಸರಿನವರೆಗೆ ಓದಿದ ಮೇಲೆ ಕೆಳಗಿಡುವ ಮಹನೀಯರು. ಅದರಲ್ಲೂ ಇಂಥವರೇನಾದರೂ ಊರಲ್ಲಿರುವ ಒಂದೇ ಒಂದು ಸಾರ್ವಜನಿಕ ವಾಚನಾಲಯದಲ್ಲಿ ಹೋಗಿ ಕುಳಿತರೆ ಮುಗಿಯಿತು. ಅಂದು ಉಳಿದವರು ಆ ಪತ್ರಿಕೆ ಓದಿದಂತೆಯೇ ಸರಿ. ಏನೇ ಹೇಳಿ ನಮ್ಮೆಲ್ಲರ ಅಜ್ಜ ಅಜ್ಜಿ ಅಪ್ಪ ಅವ್ವ ಓದಿದ ಪರಿ ನಿಜಕ್ಕೂ ಪರಿಣಾಮಕಾರಿಯಾದುದು.

ಗುರುಗಳು ಪಾಠ ಮಾಡುವಾಗ ಕಡ್ಡಾಯವಾಗಿ ಸಾಲಿನ ಕೆಳಗೆ ಬೆರಳಾಡಿಸಲೇಬೇಕು. ಕಣ್ಣು ಅಕ್ಷರಗಳ ಮೇಲೆ ಹಾಯಲೇಬೇಕು. ಗಮನ ಚೂರು ಆ ಕಡೆ ಈ ಕಡೆಯಾದರೂ ಬೆತ್ತದ ಕೆಂಪು ಗುರುತು ಬೆನ್ನಿನ ಮೇಲಿರುತ್ತಿತ್ತು. ನಡು ನಡುವೆ ತಪ್ಪಿದರೆ ಕೆನ್ನೆ ಕಿವಿ ಕೆಂಪಾಗುತ್ತಿದ್ದವು. ಕೆಲವೊಮ್ಮೆ ಸಹಪಾಠಿಗಳಿಂದ ಬೆನ್ನಿಗೆ ಗುದ್ದು ಮೂಗು ಹಿಡಿದು ಕೆನ್ನೆಗೆ ಹೊಡೆತಗಳೂ ಸಿಗುತ್ತಿದ್ದವು. ತರಗತಿಯಲ್ಲಿ ಓದಿನ ಸರದಿ ಯಾರನ್ನು ಬಿಡುತ್ತಿರಲಿಲ್ಲ. ಎದ್ದು ನಿಂತು ಸ್ಪಷ್ಟವಾಗಿ ಓದಲೇಬೇಕಿತ್ತು. ಇಲ್ಲದಿದ್ದರೆ ಗುರುಗಳ ಕೈಯಲ್ಲಿನ ಕೋಲು ತನ್ನ ರುಚಿ ತೋರಿಸುತ್ತಿತ್ತು.. ಹೀಗಾಗಿ ಮನೆಗೆ ಬಂದ ಮೇಲೆ ಅಕ್ಕ ಅಣ್ಣ ಇಲ್ಲವೇ ಚಿಕ್ಕಮ್ಮ ಅತ್ತೆ ಕಡೆ ಓದಿನ ಅಭ್ಯಾಸ ಜೋರಾದ ದನಿಯಲ್ಲಿ ನಡೆಯುತ್ತಿತ್ತು. ಶಿಕ್ಷಣ ಪಡೆದವರು ಮನೆಯಲ್ಲಿಲ್ಲವೆಂದರೆÀ ಪಕ್ಕದ ಮನೆಯ ಅಕ್ಕ ಅಣ್ಣ ಆಸರೆಗೆ ಬರುತ್ತಿದ್ದರು.

ಈಗ ಶಿಕ್ಷಣ ಎಲ್ಲರ ಮನೆಯ ಬಾಗಿಲು ತಟ್ಟಿದೆ. ಕಡ್ಡಾಯ ಶಿಕ್ಷಣ ಮಕ್ಕಳ ಹಕ್ಕುಗಳು ರೇಡಿಯೋ ಟಿವಿ ಪಾಠಗಳು ಸದ್ದು ಮಾಡುತ್ತಿವೆ.ಇಷ್ಟೆಲ್ಲ ಇರುವಾಗಲೂ ಮಕ್ಕಳು ನಮ್ಮಂತೆ ಗಟ್ಟಿಯಾಗಿ ಓದಲು ಸಮರ್ಥರಿಲ್ಲ. ಓದಿದರೂ ಓದಿನಲ್ಲಿ ಮನಸ್ಸಿಲ್ಲದೇ ನಮ್ಮ ಒತ್ತಾಯಕ್ಕಾಗಿ ಓದುತ್ತಾರೆ ಎನ್ನುವ ಮಾತುಗಳು ಕಿವಿಗೆ ಬೀಳುತ್ತವೆ. ಓದಿನ ಹವ್ಯಾಸ ತುಂಬಾ ಕಡಿಮೆಯಾಗುತ್ತಿದೆ ಅನ್ನುವ ಸಂಗತಿ ನಿಜಕ್ಕೂ ಅಪಾಯಕಾರಿ.ಸ್ಥಿತಿ ಹೀಗಿರುವಾಗಲೂ ಪುಸ್ತಕಗಳ ಮುದ್ರಣ ಏರುತ್ತಿದೆಂಬುದು ಸಮಾಧಾನ. ಓದುಗರು ಓದಿ ಖುಷಿಯ ನಗೆ ಬೀರಿದಾಗಲೇ ಜ್ಞಾನ ಹೆಚ್ಚಿಸಿಕೊಂಡಾಗಲೇ ಪುಸ್ತಕದ ಕತೃವಿನ ಶ್ರಮ ಸಾರ್ಥಕ.

ಈಗೀಗ ಇ ಪೇಪರ್‍ನ ಕ್ಲಿಕ್ ಮಾಡುವುದೇ ತಡ ಸಂಪೂರ್ಣ ಪೇಪರ್‍ನ ಪುಟಗಳು ಕ್ಷಣಾರ್ಧದಲ್ಲಿ ಕಣ್ಣೆದುರಿಗೆ ಬಂದು ನಿಲ್ಲುತ್ತವೆ. ಡೇಲಿ ಹಂಟ್‍ನಲ್ಲೂ ಮಾಹಿತಿಗಳು ಲಭ್ಯ. ಲೆಕ್ಕವಿಲ್ಲದಷ್ಟು ಪ್ರಾದೇಶಿಕ ಟಿವಿ ಚಾನೆಲ್‍ಗಳು ಆನ್ ಲೈನ್ ಪತ್ರಿಕೆಗಳಿರುವಾಗ ಮಾಹಿತಿಯ ಮಹಾಪೂರವೇ ಹರಿಯುತ್ತಿದೆ. ಅದರಲ್ಲಿ ನಮಗೆ ಯಾವುದು ಬೇಕೆಂದು ಆರಿಸಿಕೊಳ್ಳುವುದೇ ಒಂದು ಸವಾಲಿನ ವಿಷಯವಾಗಿದೆ. ವಿಜ್ಞಾನ ತಂತ್ರಜ್ಞಾದ ಬೆಳವಣಿಗೆಯಲ್ಲಿ ಓದು ಸಹ ತನ್ನ ರೂಪ ಬದಲಿಸಿಕೊಂಡಿದೆ. ಇ ಆಕಾರ ಪಡೆದುಕೊಂಡಿದೆ. ಬದಲಾವಣೆ ಜಗದ ನಿಯಮ. ಕಾಲಾಯ ತಸ್ಮೈ ನಮಃ. ಬದಲಾಗುವ ಕಾಲಕ್ಕೆ ಹೊಂದಿಕೊಳ್ಳೋಣ. ಆದರೆ ಪುಸ್ತಕ ಓದುವ ಸಂಸ್ಕøತಿ ಸವಿಯನ್ನು ಮರೆಯದಿರೋಣ. ಮರೆಯದೇ ಮಕ್ಕಳಿಗೆ ಮೊಮ್ಮಕ್ಕಳಿಗೆ ದಾಟಿಸೋಣ ಸ್ವಾಸ್ಥ್ಯ ಸುಭದ್ರ ಸಮಾಜ ಕಟ್ಟುವ ಹೊಣೆಯನ್ನು ಮೆರೆಯೋಣ.


ಜಯಶ್ರೀ.ಜೆ.ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ 9449234142

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group