ಆಚಾರ ವಿಚಾರ ನಡೆ-ನುಡಿಗಳಲ್ಲಿ ಧರ್ಮ ಅಡಗಿದೆ- ನ್ಯಾಯವಾದಿ ದಿನೇಶ ಪಾಟೀಲ ಅಭಿಮತ
ಹುಟ್ಟಿನಿಂದ ಸಾವಿನವರೆಗೆ ನಮ್ಮ ಆಚಾರ, ವಿಚಾರ, ನಡೆ-ನುಡಿಗಳಲ್ಲಿ ಧರ್ಮ ಅಡಗಿದೆ. ಧರ್ಮಗಳ ಕ್ರಮಗಳು ಭಿನ್ನವಾಗಿದ್ದರೂ ಮನುಷ್ಯನನ್ನು ದೈವಿಶಕ್ತಿಗೆ ಜೋಡಣೆ ಮಾಡುವುದೇ ಧರ್ಮವಾಗಿದೆ. ದೇವರನ್ನು ನಾವು ಹುಡುಕಬೇಕಾದರೆ ಅದು ಧರ್ಮದಲ್ಲಿಲ್ಲ ಆಚರಣೆಯಲ್ಲಿದೆ. ಭೇದ ಭಾವಗಳಲ್ಲೇ ಧರ್ಮಗಳು ವೈಮನಸ್ಸಿನ ದಾರಿಯತ್ತ ಹೋಗುತ್ತಿವೆ ಎಂದು ನ್ಯಾಯವಾದಿ ದಿನೇಶ ಪಾಟೀಲ ಹೇಳಿದರು.
ರವಿವಾರ ದಿ. 24ರಂದು ಲಿಂಗಾಯತ ಸಂಘಟನೆ ವತಿಯಿಂದ ಬೆಳಗಾವಿಯ ಫ. ಗು. ಹಳಕಟ್ಟಿ ಭವನದಲ್ಲಿ ಹಮ್ಮಿಕೊಳ್ಳಲಾದ’ ಧರ್ಮ ಮತ್ತು ಸಂಘಟನೆ ‘ಕುರಿತಾದ ವಿಶೇಷ ಚಿಂತನ ಸಭೆಯಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದರು.
ಜಾಗತಿಕವಾಗಿ ಶೇ. 85ರಷ್ಟು ಜನ ಯಾವುದಾದರೂ ಒಂದು ಧರ್ಮದ ಜೊತೆಗೆ ಹೊಂದಿಕೊಂಡು ಹೋಗುತ್ತಿದ್ದಾರೆ. ಕೆಲವರು ಮಾತ್ರ ದ್ವಂದ್ವದಲ್ಲಿದ್ದಾರೆ. ಭಾರತದ ಸಂವಿಧಾನದಲ್ಲಿ ಯಾವುದೇ ಧರ್ಮವನ್ನು ಕಡ್ಡಾಯಗೊಳಿಸುವುದಕ್ಕೆ ಅವಕಾಶವಿಲ್ಲ. ಮೊದಲಿಗೆ ನಮ್ಮ ಆತ್ಮ ಶುದ್ಧಿ ಆಗಬೇಕಿದೆ. ಆಯಾ ಧರ್ಮದವರು ಚುನಾವಣೆಯಲ್ಲಿ ನಿಂತಿದ್ದಾರೆ ಎಂದರೆ ಅವನನ್ನೇ ಇಡೀ ಸಮುದಾಯ ಬೆಂಬಲಿಸಬೇಕೆಂದೇನಿಲ್ಲ. ಅವನ ವ್ಯಕ್ತಿತ್ವ ನಡೆ-ನುಡಿ ಆಚಾರ ವಿಚಾರಗಳನ್ನು ಅರಿತುಕೊಂಡು ಬೆಂಬಲಿಸಿ ಆತನ ಸಹಾಯ ಪಡೆಯಿರಿ ಇಲ್ಲವಾದರೆ ಸಂವಿಧಾನ ವಿರೋಧಿ ಆದೀತು ಎಂದರು. ಯಾವುದೇ ರೀತಿಯ ಸಂಘಟನೆಯನ್ನು ನಡೆಸಿಕೊಂಡು ಹೋಗಲು ಯುವಕರು ಒಗ್ಗೂಡಬೇಕಿದೆ. ಹಿರಿಯರಿಂದ ಮಾತ್ರ ಸಂಘಟನೆ ಬೆಳೆಯುವುದು ಕಷ್ಟ ಸಾಧ್ಯ ಎಂದು ಸಂಘಟನೆ ಕುರಿತು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಅಧ್ಯಕ್ಷ ಈರಣ್ಣ ದೇಯನ್ನವರ ಮಾತನಾಡಿ, ಏನು ಉತ್ಪಾದನೆ ಇಲ್ಲದಿದ್ದರೂ ಜಗತ್ತನ್ನೇ ತನ್ನತ್ತ ಸೆಳೆಯುವ ದುಬೈ ದಂತಹ ಶ್ರೀಮಂತ ದೇಶದವರು ಸಹ ಈಗ ಧ್ಯಾನ ಮತ್ತು ಪ್ರಾರ್ಥನೆಯತ್ತ ವಾಲುತ್ತಿದ್ದಾರೆ ಅಂದರೆ ಪ್ರಾರ್ಥನೆಯಲ್ಲಿ ಅಡಗಿರುವ ಶಕ್ತಿ ಏನೆಂಬುದನ್ನು ಗಮನಿಸಿ ಎಲ್ಲರೂ ಪ್ರಾರ್ಥನೆ ಮತ್ತು ಸತ್ಸಂಗದಲ್ಲಿ ತೊಡಗಿಸಿಕೊಂಡು ಧರ್ಮವನ್ನು ಬೆಳೆಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಮಲಗೌಡ ಪಾಟೀಲ, ಶಿವಾನಂದ ತಲ್ಲೂರ, ಎಂ ವೈ ಮೆಣಸಿನಕಾಯಿ, ವಿ.ಕೆ ಪಾಟೀಲ ಭರಮಪ್ಪ ಜೇವಣಿ ವಿರೂಪಾಕ್ಷ ದೊಡ್ಡಮನಿ, ಬಾಬು ತಿಗಡಿ ಸುವರ್ಣ ತಿಗಡಿ ಅಕಮಹಾದೇವಿ ತೆಗ್ಗಿ , ಸಂಗಮೇಶ ತಿಗಡಿ, ಶಾಂತಮ್ಮ ತಿಗಡಿ ಸೇರಿದಂತೆ ಶರಣ ಬಳಗ ಉಪಸ್ಥಿತರಿದ್ದರು
ಕಾರ್ಯಕ್ರಮದ ಆರಂಭದಲ್ಲಿ ಮಹಾದೇವಿ ಅರಳಿ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಸಂಗಮೇಶ ಅರಳಿ ಸ್ವಾಗತಿಸಿದರು ಸುರೇಶ ನರಗುಂದ ನಿರೂಪಿಸಿ ವಂದಿಸಿದರು.