ಬೀದರ – ಕೋರೋನಾ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಶಾಲೆ ಕಾಲೇಜು ಬಂದ್ ಇರುವ ಹಿನ್ನೆಲೆಯಲ್ಲಿ ಕಳ್ಳರು ಶಾಲಾ ಮಕ್ಕಳ ಅಕ್ಕಿ ಮತ್ತು ಗ್ಯಾಸ್ ಸಿಲಿಂಡರ್ ಮೇಲೆ ಕಣ್ಣು ಹಾಕಿದ್ದು ಭಾಲ್ಕಿ ಪಟ್ಟಣದ ಜನತಾ ಕಾಲೊನಿಯ ಮೌನೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಸಕಾ೯ರಿ ಉರ್ದು ಪ್ರಾಥಮಿಕ ಶಾಲೆಗಳಲ್ಲಿನ ಆಹಾರ ಧಾನ್ಯ ದಾಸ್ತಾನು ಕೋಣೆಯ ಕೀಲಿ ಮುರಿದು ಈಚೆಗೆ 5 ಸಿಲಿಂಡರ್, 30 ಕೆ.ಜಿ. ಅಕ್ಕಿ ಕಳುವು ಮಾಡಿದ್ದಾರೆ.
ಜನತಾ ಕಾಲೊನಿಯ ಆರೋಪಿಗಳಾದ ರಾಜಶೇಖರ ಬಸಪ್ಪ ಶಿಂಧೆ, ಲಕ್ಷ್ಮಣ ಭೀಮಣ್ಣ ವಡ್ಡರ್, ಜ್ಞಾನೇಶ್ವರ ಶಿವಾಜಿ ಛತ್ರೆ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಡಿವೈಎಸ್ಪಿ ಡಾ.ದೇವರಾಜ್ ಅವರ ನೇತೃತ್ವದಲ್ಲಿ ಕಳ್ಳರನ್ನು ಹಿಡಿದು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ ಭಾಲ್ಕಿ ಪೋಲಿಸರು. ಸಿಪಿಐ ಟಿ.ಆರ್.ರಾಘವೇಂದ್ರ, ಅಪರಾಧ ವಿಭಾಗದ ಪಿಎಸ್‌ಐ ಮಲ್ಲಿಕಾರ್ಜುನ, ಸಿಬ್ಬಂದಿಗಳಾದ ಉಮಾಕಾಂತ ದಾನಾ, ರಮೇಶ, ಹಾವಣ್ಣ, ಶಿವಣ್ಣ, ಶ್ಯಾಮರಾಯ ನೇತೃತ್ವದ ತಂಡ ಬಂಧಿತ ಆರೋಪಿಗಳಿಂದ 3 ಸಿಲಿಂಡರ್ , 30 ಕೆ.ಜಿ. ಅಕ್ಕಿ ಜಪ್ತಿ ಮಾಡಿಕೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕಾಗಿ ಬಲೆ ಬೀಸಲಾಗಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ