spot_img
spot_img

ಕನ್ನಡ ಚಿತ್ರರಂಗದ ಶ್ರೇಷ್ಠ ಗೀತರಚನೆಕಾರರಾಗಿದ್ದ ಆರ್.ಎನ್.ಜಯಗೋಪಾಲ್ ಅವರ ಜನುಮ ದಿನ ಇಂದು

Must Read

spot_img

ಕನ್ನಡ ಚಿತ್ರರಂಗದ ಶ್ರೇಷ್ಠ ಗೀತರಚನಕಾರರಾದ ಆರ್. ಎನ್. ಜಯಗೋಪಾಲ್ ಅವರು ಜನಿಸಿದ ದಿನ ಆಗಸ್ಟ್ 17, 1935.  ಜಯಗೋಪಾಲರು, ಕನ್ನಡ ಚಿತ್ರರಂಗದ ಭೀಷ್ಮರೆನಿಸಿದ್ದ ಆರ್. ನಾಗೇಂದ್ರರಾಯರ ಪುತ್ರರು.  ಅವರ ಇಡೀ ಕುಟುಂಬವೇ ಕಲಾವಂತಿಕೆ ತುಂಬಿ ತುಳುಕಿದ ಕುಟುಂಬ.  ಅವರ ಸಹೋದರರಾದ ಸುದರ್ಶನ್ ಪ್ರಸಿದ್ಧ ನಟ.  ಮತ್ತೊಬ್ಬ ಸಹೋದರ ಕೃಷ್ಣಪ್ರಸಾದ್ ಪ್ರಸಿದ್ಧ ಛಾಯಾಗ್ರಾಹಕ.

ತಮ್ಮ ತಂದೆಯವರು ನಿರ್ಮಿಸಿದ ಮೊದಲ ಚಿತ್ರ ‘ಪ್ರೇಮದ ಪುತ್ರಿ’ಗೆ  ಆರ್. ಎನ್. ಜಯಗೋಪಾಲ್ ಅವರ ಬರೆದ ಹಾಡು ‘ತ್ರಿಭುವನ ಜನನಿ ಜಗನ್ಮೋಹಿನಿ’.  ಈ ಹಾಡು ಇಂದೂ ಕೂಡಾ ಜನರ ಮನದಲ್ಲಿ ನಲಿ ನಲಿದು ಬರುತ್ತಿದೆ. ಮುಂದೆ ಕನ್ನಡದಲ್ಲಿ ನವ್ಯ ಸಾಹಿತ್ಯದ ಹಾಡುಗಳನ್ನು ಬರೆದ ಆರ್. ಎನ್. ಜಯಗೋಪಾಲರ ಬಹಳಷ್ಟು ಹಾಡುಗಳು  ಶ್ರೇಷ್ಠ ಕವಿಯೊಬ್ಬನ ಕಲಾವಂತಿಕೆಯ ಪದಲಾಲಿತ್ಯವನ್ನು ಹೊರಸೂಸುವಂತದ್ದಾಗಿದೆ.

‘ನಾಂದಿ’ ಚಿತ್ರದ ‘ಹಾಡೊಂದ ಹಾಡುವೆ ನೀ ಕೇಳು ಮಗುವೆ’,  ‘ಗೆಜ್ಜೆಪೂಜೆ’ ಚಿತ್ರದ ‘ಗಗನವು ಎಲ್ಲೋ ಭೂಮಿಯು ಎಲ್ಲೋ ಒಂದೂ ಅರಿಯೇನಾ’,  ‘ನಾಗರಹಾವು’ ಚಿತ್ರದ ‘ಕರ್ಪೂರದಾ ಬೊಂಬೆ ನಾನು’, ದಾರಿ ತಪ್ಪಿದ ಮಗ ಚಿತ್ರದ ‘ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ’  ಇವೆಲ್ಲಾ ಒಂದಾದ ಮೇಲೊಂದರಂತೆ ಮನಸ್ಸು ತುಂಬುತ್ತವೆ.  ‘ಹೂವು ಚೆಲುವೆಲ್ಲಾ ನಂದೆಂದಿತು’, ‘ನೀರಿನಲ್ಲಿ ಅಲೆಯ ಉಂಗುರ’, ‘ಜೋಕೆ ನಾನು ಬಳ್ಳಿಯ ಮಿಂಚು’, ‘ಸನ್ಯಾಸಿ, ಸನ್ಯಾಸಿ ಅರ್ಜುನ ಸನ್ಯಾಸಿ’, ‘ವಹರ ಮೇರೆ ಮುರುಗ, ವಹರೆ ನನ್ನ ರಂಗ, ಸಿಂಗನ ಮುಂದೆ ರಂಗನು ಎಂದು ಇಂಗು ತಿಂದ ಮಂಗ’,   ಇವೆಲ್ಲಾ ಒಂದಕ್ಕಿಂತ ಒಂದು ಮಿಗಿಲಾದ ಶ್ರೇಷ್ಠ ವೈವಿಧ್ಯಗಳು.

‘ಬೆಳ್ಳಿ ಮೋಡದ ಆಚೆಯಿಂದ ಮೂಡಿ ಬಂದ ಮಿನುಗುತಾರೆ’, ‘ನೀ ಬಂದು ನಿಂತಾಗ ನಿಂತು ನೀ ನಕ್ಕಾಗ’, ‘ನಿನ್ನ ರೂಪ ಕಣ್ಣಲಿ’, ‘ಬಾಳೊಂದು ಭಾವಗೀತೆ’, ‘ಇವಳೇ ವೀಣಾಪಾಣಿ’, ‘ನೋಡು ನೋಡು ಕಣ್ಣಾರೆ ನಿಂತಿಹಳು’, ‘ಯಾವ ಹೂವು ಯಾರ ಮುಡಿಗೋ’, ‘ನಿನ್ನೊಲುಮೆ ನಮಗಿರಲಿ ತಂದೆ’, ‘ಮಾರಿಯೇ ಗತಿಯೆಂದು ಮನ್ನಿಸು ತಪ್ಪೆಂದು’, ‘ಸೋಬಾನ ಸೋಬಾನ ಸೋಬಾನವೇ’, ‘ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ’, ‘ನಗಬೇಕು ನಗಿಸಬೇಕು ಇದೇ ನನ್ನ ಧರ್ಮ’, ‘ನಗು ನಗುತಾ ನಲೀ ನಲೀ’, ‘ಹೂವೇ ಮರೆಸಿತು ಮೊಗವ’, ‘ಹಕ್ಕಿ ಹಾಡು ಚಿಲಿಪಿಲಿ ರಾಗ’  ಹೀಗೆ ಆರ್. ಎನ್. ಜಯಗೊಪಾಲರು ಬರೆದ ಒಂದೊಂದೂ ಹಾಡು  ಶ್ರೇಷ್ಠತೆಯ ಸೊಬಗಿನದು.  ಅವರು ಬರೆದ ಹಾಡುಗಳ ಸಂಖ್ಯೆ 1600ಕ್ಕೂ ಹೆಚ್ಚು.

ನನಗನ್ನಿಸುತ್ತದೆ ಆರ್. ಎನ್. ಜಯಗೋಪಾಲರ ಎಲ್ಲಾ ಹಾಡುಗಳನ್ನೂ ಸೇರಿಸಿ ಅದನ್ನು ಶ್ರೇಷ್ಠ ಗೀತಸಂಕಲನವಾಗಿಸುವ ಸಾಧ್ಯತೆ ಇದೆ.  ಅಂತಹ ಕೆಲಸ ಆಗಿದೆಯೋ ಇಲ್ಲವೋ ಅರಿಯೆ.  ಅಂತಹ ಕೆಲಸ ಆಗಲಿ ಎಂಬುದು ನಮ್ಮ ಆಶಯ.

ಆರ್. ಎನ್. ಜಯಗೋಪಾಲ್ ಅವರು ಮಣಿರತ್ನಂ ಅವರ  ನಾಯಗನ್ ಕನ್ನಡದ ಜೀವನದಿ ಅಂತಹ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.    ಸುಮಾರು 30 ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.

ಧೂಮಕೇತು, ನಾ ಮೆಚ್ಚಿದ ಹುಡುಗ, ಕೆಸರಿನ ಕಮಲ, ಮುತ್ತು ಒಂದು ಮುತ್ತು, ಮರೆಯದ ಹಾಡು, ಮಕ್ಕಳೇ ದೇವರು, ಅವಳ ಅಂತರಂಗ, ಹೃದಯ ಪಲ್ಲವಿ ಚಿತ್ರಗಳನ್ನು ಆರ್. ಎನ್. ಜಯಗೋಪಾಲ್ ನಿರ್ದೇಶಿಸಿದ್ದರು.  ‘ಧೂಮಕೇತು’ ಅವರೇ ನಿರ್ಮಿಸಿದ ಚಿತ್ರ.

ತಮಿಳುನಾಡಿನ ಕಲೈಮಾಮಾಣಿ, ಕರ್ನಾಟಕದ ಹಲವಾರು ರಾಜ್ಯಪ್ರಶಸ್ತಿಗಳನ್ನು ಜಯಗೋಪಾಲ್ ಗಳಿಸಿದ್ದರು.  ಇವೆಲ್ಲವನ್ನೂ  ಮೀರಿಸಿದ್ದು ಆರ್. ಎನ್. ಜಯಗೋಪಾಲರು ತಮ್ಮ ಸೊಗಸಾದ ಹಾಡುಗಳ ಸವಿಯನ್ನು ನಮ್ಮ ಮನಸ್ಸಿನಲ್ಲಿ ತುಂಬಿ ಹೋಗಿರುವ ಪರಿ.  ಆರ್. ಎನ್. ಜಯಗೋಪಾಲರು ಮೇ 2008ರ ವರ್ಷದಲ್ಲಿ ಈ ಲೋಕವನ್ನಗಲಿದರು.  ನಮ್ಮ ಈ ಜೀವ ಅಳಿಯುತ್ತದೆ.  ಜೀವ ಅಳಿದ ಮೇಲೂ ಒಬ್ಬ ಮನುಷ್ಯನ ಕೆಲಸ ಉಳಿಯುತ್ತದಲ್ಲಾ, ಆ ಕೆಲಸ ಆ ಜೀವದ ಶ್ರೇಷ್ಠತೆಯನ್ನು ಹೇಳುತ್ತದೆ.  ಆರ್. ಎನ್. ಜಯಗೋಪಾಲ್ ಅಂತಹ ಶ್ರೇಷ್ಠ ಜೀವ.  ಈ ಶ್ರೇಷ್ಠತೆಗೆ ನಮ್ಮ ಹೃದಯಪೂರ್ವಕ ನಮನ.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!