spot_img
spot_img

ದೇಶದ ರಾಜಕೀಯ ವ್ಯವಸ್ಥೆಯನ್ನು ನಂಬಿ ಕೆಟ್ಟವರೆ ಹೆಚ್ಚು

Must Read

spot_img
- Advertisement -

ರಾಜಕೀಯ ಎಂದರೆ ಜನರನ್ನು ಆಳೋದಷ್ಟೆ ಎನ್ನುವ ಅಜ್ಞಾನಕ್ಕೆ ಸಹಕಾರ ನೀಡಿದ ಪ್ರಜೆಗಳೆ ಇಂದು ಸಂಕಷ್ಟಗಳಿಂದ ಬಳಲುತ್ತಿದ್ದಾರೆ. ಮಾಡಿದ್ದುಣ್ಣೋ ಮಹಾರಾಯ ಎನ್ನುವಂತೆ ಭೂಮಿಯನ್ನಾಗಲಿ, ಭಾರತವನ್ನಾಗಲಿ, ಸ್ತ್ರೀ ಯನ್ನಾಗಲಿ ಆಳುವುದಕ್ಕೆ ಮೊದಲು ತಮ್ಮ ಒಳಗಿನ ಜ್ಞಾನವನ್ನು ಬೆಳೆಸಿಕೊಳ್ಳುವ ಶಿಕ್ಷಣವಿರಬೇಕಿತ್ತು.ಭಾರತೀಯ ಶಿಕ್ಷಣವನ್ನೇ ವಿದೇಶಿ ಶಿಕ್ಷಣವನ್ನಾಗಿಸಿ ವೈಜ್ಞಾನಿಕ ಯುಗವೆಂದು ಯಂತ್ರಮಾನವರನ್ನು ಸೃಷ್ಟಿಸಿ,ತಂತ್ರದಿಂದ ರಾಜಕೀಯ ನಡೆಸಿ ಆಳಿದರೆ  ಒಳಗಿದ್ದ ಮಂತ್ರಶಕ್ತಿ ಹಿಂದುಳಿಯುತ್ತದೆ.

ಮಂತ್ರದಿಂದ ಮಾವಿನಕಾಯಿ ಬೀಳೋದಿಲ್ಲ ಎನ್ನುವ ಕಾಲಕ್ಕೆ ಬಂದಿದ್ದರೂ ತಂತ್ರದಿಂದ ಮಾವಿನ ಕಾಯಿ ಉರುಳಿಸಿ ತಿಂದು ಅತಿ ಆಸೆಗೆ ಬಲಿಯಾದ ವ್ಯವಹಾರ ಜ್ಞಾನದಿಂದ ಇಡೀ ಮರವನ್ನೇ ಯಂತ್ರದಿಂದ ಉರುಳಿಸಿದರೆ ಸಿಗೋದು ಕೊನೆಗೆ ಗೊರಟಷ್ಟೆ. ಸರ್ಕಾರದ ರೀತಿಗಳನ್ನು ಜಾರಿಗೆ ತರುವ ಮೊದಲು ಅದನ್ನು ಆಧ್ಯಾತ್ಮದ ತಳಹದಿಯಲ್ಲಿಟ್ಟು ಭವಿಷ್ಯವನ್ನು ತಿಳಿಯುವ ತಾಳ್ಮೆ,ಜ್ಞಾನ ಇಂದಿನ ಪ್ರಜೆಗಳಿಗೆ ಶಿಕ್ಷಣದಲ್ಲಿಯೇ ನೀಡಿದರೆ ಮುಂದಿನ ದಿನಗಳಲ್ಲಿ ಉತ್ತಮ ಬದಲಾವಣೆ ಕಾಣಬಹುದು.

ಮುಂದಿನ ಪೀಳಿಗೆಯನ್ನೂ ಬಿಡದೆ ಅಜ್ಞಾನದೊಳಗಿದ್ದು ತಮ್ಮ ಅಧಿಕಾರಕ್ಕಾಗಿ ಭ್ರಷ್ಟಾಚಾರ ಬೆಳೆಸಿದರೆ ಇದೇ ಮುಂದೆ ಅಸುರರ ಸಾಮ್ರಾಜ್ಯಕ್ಕೆ ದಾರಿಯಾಗುತ್ತದೆ. ರಾಜಕೀಯ ಕೇವಲ ರಾಜಕೀಯಕ್ಷೇತ್ರದಲ್ಲಿಲ್ಲ. ದೇಶದ ಮೂಲವಾದ ಶಿಕ್ಷಣಕ್ಷೇತ್ರದಲ್ಲಿದ್ದು ಧಾರ್ಮಿಕ ಕ್ಷೇತ್ರ ಆವರಿಸಿ ನಂತರದ ದಿನಗಳಲ್ಲಿ ರಾಜಕೀಯ ಕ್ಷೇತ್ರ ಆರ್ಥಿಕಾಭಿವೃದ್ದಿಗಾಗಿ ಬಳಸಿಕೊಂಡು ಇಡೀ ಸಮಾಜದ ಜನರೊಳಗೆ ಮಕ್ಕಳು ಮಹಿಳೆಯರೆನ್ನದೆ ಆವರಿಸಿದೆ. ಇದನ್ನು ತಡೆಯಲು ಭ್ರಷ್ಟಾಚಾರ ದಿಂದ ಸಾಧ್ಯವಿಲ್ಲ.

- Advertisement -

ಅಸತ್ಯ ಅನ್ಯಾಯ, ಅಧರ್ಮಕ್ಕೆ ಜನಸಹಕಾರ ಸಿಗುತ್ತಿದ್ದರೆ ಸಹಕಾರಕ್ಕೆ ತಕ್ಕಂತೆ ಪ್ರತಿಫಲವಲ್ಲವೆ? ಮಾಧ್ಯಮ,ಮಧ್ಯವರ್ತಿಗಳು, ಮಹಿಳೆ,ಮಕ್ಕಳು ಎಲ್ಲಾ ಮಾನವರೆ ಆದರೆ,ಇವರಲ್ಲಿ ಎಷ್ಟು ಜನರಿಗೆ ಮಾನವೀಯತೆ, ಮಾನವಧರ್ಮದ ಅರಿವಿದೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಪ್ರಜಾಪ್ರಭುತ್ವದ ಅರ್ಥ ತಿಳಿಯದವರಿಗೆ ದೇಶ ಆಳುವ ಅಧಿಕಾರ ಕೊಟ್ಟವರೂ ಪ್ರಜೆಗಳೆ. ಇದನ್ನು ದುರ್ಬಳಕೆ ಮಾಡಿಕೊಂಡಿರುವವರು ಮಧ್ಯವರ್ತಿಗಳು. ಅರ್ಧಸತ್ಯದ ಪ್ರಚಾರ ಮಾಡಿಕೊಂಡು ಜನರನ್ನು ಮನೆಯಿಂದ ಹೊರಬಂದು ಹೋರಾಟ ನಡೆಸಲು ಪ್ರಚೋದನೆ ನೀಡುವುದು ಧರ್ಮವೆ? ಇಲ್ಲಿ ಕೇವಲ ರಾಜಕೀಯ ವಿಚಾರಕ್ಕೆ ಇದು ಸೀಮಿತವಾಗಿಲ್ಲ.ದೇವರು,ಧರ್ಮ, ಜಾತಿ, ಪಕ್ಷವೆನ್ನದೆ ತಮ್ಮ ತಮ್ಮ ಸ್ವಾರ್ಥ ಸುಖಕ್ಕಾಗಿ ಸರ್ಕಾರದ ದಾರಿ ತಪ್ಪಿಸಿ ಜನರನ್ನು ಅಡ್ಡದಾರಿಗೆಳೆದು ಆಳುತ್ತಿರುವವರನ್ನು ದೊಡ್ಡ ಸಾಧಕರೆಂದು ಮೆರೆಸಿದರೆ ಇದಕ್ಕಿಂತ ದೊಡ್ಡ ದುರಂತ ಇನ್ನೊಂದು ಇಲ್ಲ.

ಜೀವನದ ಮುಖ್ಯ ಗುರಿಯನ್ನು ಮರೆತು ಜನ ತನಗೆ ತಾನೇ ಮೋಸಹೋಗುತ್ತಿದ್ದರೂ ಜ್ಞಾನಿಗಳೆನ್ನಿಸಿಕೊಂಡವರಲ್ಲಿ ಇದಕ್ಕೆ ಪರಿಹಾರವಿಲ್ಲ. ಎಲ್ಲಾ ವಿಜ್ಞಾನದಿಂದಲೇ ಆಗುವಹಾಗಿದ್ದರೆ ಈಗಿನ ಎಲ್ಲಾ ಸಮಸ್ಯೆಗೂ ಇದೇ ಕಾರಣವೆಂಬುದೂ ಸತ್ಯವಲ್ಲವೆ? ಈಗಲೂ ಹಿಂದಿರುಗಿ ನೋಡದೆ ಮುಂದೆ ನಡೆದರೆ ಪರಿಹಾರ ಹೊರಗಿಲ್ಲ.ಒಳಗಿತ್ತು.ಎಲ್ಲಿದೆ ಸರ್ಕಾರ? ಜ್ಞಾನದಲ್ಲಿದೆಯೋ ವಿಜ್ಞಾನದಲ್ಲಿದೆಯೋ? ಮಾನವನಿಗೆ ಸಾಮಾನ್ಯಜ್ಞಾನ ಅಗತ್ಯವಿದೆ.

ಯಾರಾದರೂ ನಿನ್ನ ಕರ್ಮ ನಾನು ಮಾಡಿ ನಿನ್ನ ಸಾಲ ನಾನು ತೀರಿಸುತ್ತೇನೆಂದರೆ ಇದು ಅಜ್ಞಾನವಷ್ಟೆ. ಬೇಡೋರಿಗೆ ಕೊಟ್ಟು ದೇಶದ ಸಾಲ ಬೆಳೆದಿದೆ. ಬಿಕ್ಷುಗಳ ದೇಶ ಬಿಕ್ಷುಕರ ದೇಶವಾಗುತ್ತಿದೆ. ಭಾಗ್ಯೋದಯದ ಹೆಸರಲ್ಲಿ ಮಧ್ಯವರ್ತಿಗಳು ಬೆಳೆದಿದ್ದಾರೆ. ಸಾಲ ಎಂದರೆ ಋಣ ಎನ್ನುವ ಪದಕ್ಕೆ ಅರ್ಥ ತಿಳಿಸದ ಶಿಕ್ಷಣವನ್ನು ಸಾಲಮಾಡಿ ಕೊಡುತ್ತಿದ್ದಾರೆ. ಮಾನವೀಯತೆಯ ಹೆಸರಲ್ಲಿ ಎಷ್ಟೋ ಕಾರ್ಯ ಕ್ರಮ ನಡೆಸಿದ್ದರೂ ಅದೊಂದು ಮನರಂಜನೆಯಾಗಿದೆ. ಹಾಗಾದರೆ ಇದಕ್ಕೆ ಪರಿಹಾರವೇನಿದೆ? ಮೇಲಿನ ಎಲ್ಲಾ ಸಮಸ್ಯೆಗಳಿಗೆ ಕಾರಣವೆ ವೈಜ್ಞಾನಿಕ ಚಿಂತನೆ.

- Advertisement -

ವೈಚಾರಿಕತೆಯ ಪತನ.ವೈಚಾರಿಕತೆಯನ್ನು ಬೆಳೆಸುವುದಕ್ಕೆ ನಮ್ಮನ್ನು ನಾವು ಮೊದಲು ತಿದ್ದಿಕೊಂಡು ಸ್ಥಿತಪ್ರಜ್ಞ ರಾಗಿ ಚಿಂತನೆ ನಡೆಸಿ ಒಗ್ಗಟ್ಟಿನಿಂದ ಮುಂದೆ ನಡೆಯಬೇಕಿತ್ತು. ಚರಾಚರದಲ್ಲಿಯೂ ಅಡಗಿರುವ ಆ ಪರಾಶಕ್ತಿಯನ್ನು ಗಮನಿಸದೆ ಪರಮಾತ್ಮನ ಕಡೆಗೆ ನಡೆಯುತ್ತೇನೆಂದರೆ ಭೂಮಿತಾಯಿ ಸುಮ್ಮನಿರುವಳೆ? ಭಾರತಮಾತೆಯ ಜ್ಞಾನಬಿಟ್ಟು ವಿದೇಶಿಗರ ವಿಜ್ಞಾನವನ್ನು ತಲೆಗೆ ತುಂಬಿಕೊಂಡು ಅವರನ್ನು ಒಳಗೆಳೆದುಕೊಂಡು ನಮ್ಮವರನ್ನೇ ದ್ವೇಷ ಮಾಡುತ್ತಾ ರಾಜಕೀಯ ನಡೆಸಿದರೆ ನಮ್ಮತನಕ್ಕೆ ಮಾಡಿದ ಮೋಸ.ಇಲ್ಲಿ ಎಲ್ಲರಿಗೂ ಆಳುವ ಆಸೆ, ಆದರೆ ಅದಕ್ಕೆ ತಕ್ಕಂತೆ ಜ್ಞಾನ ಬೆಳೆಸಿಕೊಂಡು ಮಕ್ಕಳು ಮಹಿಳೆಯರಿಗೆ ಸಹಕಾರ ನೀಡದಿದ್ದರೆ ನಾವೇ ಕೊನೆಗೆ ಆಳಾಗಿರಬೇಕಷ್ಟೆ. ರಾಜಪ್ರಭುತ್ವದ ಪ್ರಚಾರ ಪ್ರಜಾಪ್ರಭುತ್ವದ ಅಧಿಕಾರ ಇದಕ್ಕೆ ಕಾರಣವಾಗಿದೆ.

ಒಟ್ಟಿನಲ್ಲಿ ರಾಜಕೀಯದ ಹಿಂದೆ ನಡೆದು ರಾಜಯೋಗದಿಂದ ಆತ್ಮಶಕ್ತಿ ದೂರವಾಗಿ ಜ್ಞಾನ ಕುಸಿದಿದೆ. ಪರಮಾತ್ಮನ ದಾಸನಾಗಬೇಕಿದ್ದ ಜೀವಾತ್ಮ ಇಂದು ಪರಕೀಯರ ವಶವಾಗಿದ್ದರೂ ಇದನ್ನು ಸಾಧನೆ ಎಂದು ನಂಬಿ ನಡೆದಿದೆ. ಕಲಿಪ್ರಭಾವವೋ ಅಜ್ಞಾನದ ಅತಿರೇಖವೋ ಒಟ್ಟಿನಲ್ಲಿ ಕಷ್ಟ ನಷ್ಟಕ್ಕೆ ನಮ್ಮ ಸಹಕಾರವೆ ಕಾರಣ. ಸತ್ಯವೇ ದೇವರೆಂದು ನಡೆದ ಹಿಂದಿನ ಮಹಾತ್ಮರಿಗೂ ಮಿಥ್ಯಕ್ಕೆ ಬೆಲೆಕೊಟ್ಟು ಒಳಗೆಳೆದುಕೊಂಡಿರುವ ಇಂದಿನ ನಮಗೂ ವ್ಯತ್ಯಾಸವಿದೆ. ಎಲ್ಲಿರುವರು ಮಹಾತ್ಮರು? ಎಲ್ಲಿದೆ ಸತ್ಯ? ಎಲ್ಲಿದೆ ಧರ್ಮ?

ಸರ್ಕಾರದ ಭಾಗ್ಯಗಳಿಂದ ಬಡತನ , ಬಡವರು, ಹಿಂದುಳಿದವರು, ದೀನದಲಿತರು, ಮಧ್ಯವರ್ತಿಗಳು, ರೋಗಿಗಳು ದೇಶದ ತುಂಬಾ ಹೆಚ್ಚಾಗುತ್ತಿದ್ದಾರೆಂದರೆ ಇದರ ಬಗ್ಗೆ ಸೂಕ್ಮವಾಗಿರುವ ಅಧ್ಯಾತ್ಮ ಚಿಂತನೆ ನಡೆಸಿದರೆ ಇದ್ದಲ್ಲಿಯೇ ಯಾವ ಸರ್ಕಾರದ ಸಹಾಯಕರ ಸಹಾಯವಿಲ್ಲದೆಜೀವನದ ಗುರಿ ತಿಳಿದು ಹಿಂದಿರುಗಬಹುದು.

ಇದು ಸಾಮಾನ್ಯಜ್ಞಾನದಿಂದಲೇ ಅರ್ಥ ಮಾಡಿಕೊಳ್ಳಲು ಸಾಮಾನ್ಯರಿಗೆ ಸಾಧ್ಯವಿತ್ತು.ಮೇಲಿನ ಹಾಗು ಕೆಳಗಿನವರ ರಾಜಕೀಯಕ್ಕೆ ಜನಸಾಮಾನ್ಯರ ಸಾಮಾನ್ಯಜ್ಞಾನ ಕುಸಿದಿದೆ.

ದೇಶದ ಪರವಾಗಿ ನಿಂತಾಗ ರಾಜಕೀಯವಿರಬಾರದು.ರಾಜಯೋಗದ ದೇಶಭಕ್ತಿ ಇರಬೇಕು. ದೇಶದಿಂದ ನನಗೇನು ಲಾಭ ಎನ್ನುವ ಸ್ವಾರ್ಥ ಬಿಟ್ಟು ದೇಶಕ್ಕಾಗಿ ನಾನೇನು ಮಾಡಬಹುದೆನ್ನುವ ಜ್ಞಾನ ನಮ್ಮೊಳಗೆ ಬೆಳೆಸಿಕೊಂಡರೆ ಜ್ಞಾನಿಗಳಿಂದ ದೇಶ ಉಳಿಸಬಹುದು. ಭೌತಿಕ‌ ಜಗತ್ತು ಅಧ್ಯಾತ್ಮ ಜಗತ್ತನ್ನು ಆಳಲು ಹೋದರೆ ಆಗೋದೆ ಹೀಗೆ. ಅಧ್ಯಾತ್ಮ ಜಗತ್ತನ್ನು ದೇವಾನುದೇವತೆಗಳೂ ಸಂಪೂರ್ಣ ಆಳಲಾಗಿಲ್ಲ. ಹುಲುಮಾನವನಿಗೆ ಸಾಧ್ಯವೆ? ವ್ಯವಹಾರಜ್ಞಾನಕ್ಕೆ ಧರ್ಮ ಕುಸಿದಿದೆ. ರಾಜಕೀಯ ಶಕ್ತಿಯ ಕೈಗೊಂಬೆಯಾಗಿದೆ.

ಮಾಧ್ಯಮಗಳ ಸುದ್ದಿ ಕೇವಲ ಕ್ರಾಂತಿಯನ್ನು ಹೆಚ್ಚಿಸಿ ಜನರ ಜೀವನ ಅಸ್ತವ್ಯಸ್ತಗೊಳಿಸಿದರೆ ಇದಕ್ಕೆ ಸರ್ಕಾರದ ಹಣದಿಂದ ಪರಿಹಾರವಿಲ್ಲ. ಜನರ ಸತ್ಯಧರ್ಮದ ಜ್ಞಾನದಲ್ಲಿದೆ. ಇದನ್ನು ಪ್ರಚಾರಮಾಡಲು ಮಾಧ್ಯಮ ತಯಾರಿಲ್ಲವೆಂದರೆ ಇಲ್ಲಿ ಯಾರ ರಾಜಕೀಯವಿದೆ? ನೇರವಾಗಿ ಹೇಳುವ ಅಗತ್ಯವಿಲ್ಲ.ಅರ್ಧಸತ್ಯದ ಪ್ರಚಾರಕರೂ ದೇಶದ ಸಾಮಾನ್ಯಪ್ರಜೆಗಳಾಗಿದ್ದು ಚಿಂತನೆ ನಡೆಸಿ ಅವರಂತೆ ಜೀವನ ನಡೆಸಿದ್ದರೆ ಪರಿಸ್ಥಿತಿಗೆ ನಾನೇ ಕಾರಣವೆನ್ನುವ ಸತ್ಯ ತಿಳಿಯಬಹುದು.

ಆಗಿಹೋದದ್ದನ್ನು, ಪುರಾಣವನ್ನು ಕೆದಕಿ,ಗಾಯ ಮಾಡಿ ಎಲ್ಲರಿಗೂ ರಕ್ತಹಂಚುವ ಬದಲು ಕೆದಕದೆ ಈಗಿನ ವಸ್ತು ಸ್ಥಿತಿಯ ಬಗ್ಗೆ ಇದ್ದಲ್ಲೇ ಚಿಂತನೆ ನಡೆಸಿ ನಮ್ಮಲ್ಲಿರುವ ಅಸತ್ಯ ಅಧರ್ಮ ಬಿಡುವ ಪ್ರಯತ್ನ ನಡೆಸಿದರೆ ಮುಂದಿನ ಭಾರತ ಸ್ವಚ್ಚವಾಗಬಹುದು. ಇದಕ್ಕೆ ಸ್ವಚ್ಚ ಶಿಕ್ಷಣದ ಅಗತ್ಯವಿದೆ. ಸ್ವಚ್ಚ ಪೋಷಕರ ಸಹಕಾರಬೇಕಿದೆ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಅಗತ್ಯ ದಾಖಲಾತಿಗಳನ್ನು ನೀಡಿ ಇ- ಆಸ್ತಿ ದಾಖಲಿಸಿಕೊಳ್ಳಿ-ತುಕಾರಾಮ ಮಾದರ

ಮೂಡಲಗಿ - ಪಟ್ಟಣದ ಪುರಸಭೆ ವ್ಯಾಪ್ತಿಯೊಳಗೆ ಬರುವ ಎಲ್ಲಾ ರೀತಿಯ ಕಟ್ಟಡ, ನಿವೇಶನಗಳಿಗೆ ಆಸ್ತಿ ತೆರಿಗೆಯನ್ನು ೨೦೨೪-೨೫ ನೇ ಸಾಲಿನ ಅಂತ್ಯದವರೆಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಿಕೊಂಡು...
- Advertisement -

More Articles Like This

- Advertisement -
close
error: Content is protected !!
Join WhatsApp Group