ಇದ್ದ ಅಲ್ಲಮ ಇಲ್ಲದಂತೆ
——————————
ಕಲ್ಯಾಣ ಹಣತೆ ಭಕ್ತಿ ರಸ ತೈಲ
ಅನುಭವ ಅಬ್ಬರ ಚಿಂತನೆ
ಹೊರಗೆ ದುಡಿ ಮದ್ದಳೆ ಸದ್ದು
ಒಳಗೊಳಗೆ ಮಿಡಿವ ತಂತಿ
ಕಾಣಲಾಗದ ತೋರಬಾರದ
ಮಹಾ ಘನವ ತೋರಿ
ಅರಿವು ಮರೆಯ ಜಾಣ.
ಅಂಧ ಮೌಡ್ಯಕೆ ಬಾಣ
ಜಗದ ಭೂತಲದ ಕಾಲಜ್ಞಾನ
ಶಬ್ದದೊಳಗಿನ ಮಹಾ ನಿಶಬ್ದ
ಬೀಜದೊಳಗಿನ ಉಲಿವ ಮರ.
ವ್ಯೋಮ ಕಾಯದ ಬಯಲು
ಮಂತ್ರ ಗೌಪ್ಯದ ಮುನ್ನುಡಿ
ಅನುಭೂತಿಯ ಕನ್ನಡಿ
ಅಲ್ಲಾನ ಆಗಮನ
ಲಾಮಾನ ನಿರ್ಗಮನ
ಮಧ್ಯ ಅಲ್ಲಮ ನಿನ್ನ ಜನನ
ಜ್ಞಾನದ ಚಿಜ್ಜ್ಯೋತಿ
ವೈರಾಗ್ಯದ ಮೂರುತಿ
ವಚನಗಳ ಹೆಗ್ಗೋಡೆಗೆ
ಕಲ್ಯಾಣದ ಕೀರುತಿ.
ಚರ್ಚೆ ಗೊಷ್ಠಿ ವಾದ
ಶೂನ್ಯ ಪೀಠದ ತೇಜ
ಇದ್ದ ಅಲ್ಲಮ ಇಲ್ಲದಂತೆ
————————————
ಜೀವವು
_______________
ನನ್ನ ಮುಖದಲಿ
ಅರಳಿ ನಿಲ್ಲುವ
ಮುಗುಳುನಗೆ
ನನ್ನದು
ಹುಡುಕಹತ್ತಿದೆ
ಏಕೆ ಹೀಗೆ
ಅದರ ಕಾರಣ
ನಿನ್ನದು
ಮಂದಹಾಸ
ಸರಸ ಸಂತಸ
ಹೃದಯ ಭಾವ
ನಮ್ಮದು
ಮಾತು ಮಾತಿಗೆ
ನಕ್ಕು ನಲಿದು
ಇದ್ದು ಬಾಳುವ
ಪ್ರೀತಿಯು
ಸುಖವೊ ದುಃಖ
ಏನೇ ಬರಲಿ
ಗಟ್ಟಿಗೊಳ್ಳಲಿ
ಜೀವವು
________________________
ಡಾ. ಶಶಿಕಾಂತ ಪಟ್ಟಣ ರಾಮದುರ್ಗ