ತ್ಯಾಜ್ಯ ವಿಲೇವಾರಿ ಘಟಕಕ್ಕೆ ದೊರಕಿಲ್ಲ ಉದ್ಘಾಟನಾ ಭಾಗ್ಯ. ನಿರ್ವಹಣೆ ಇಲ್ಲದೇ ಪಾಳು ಬಿದ್ದ ವಿಲೇವಾರಿ ಘಟಕ !
ಮೂಡಲಗಿ : ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸವನ್ನು ವೈಜ್ಞಾನಿಕವಾಗಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ವಿಲೇವಾರಿ ಮಾಡುವುದರ ಮೂಲಕ ಹಸಿ ಕಸ ಒಣ ಕಸವನ್ನು ಬೇರ್ಪಡಿಸುವ ಯೋಜನೆ ತಾಲೂಕಿನ ಯಾದವಾಡ ಗ್ರಾಮದಲ್ಲಿ ಸಂಪೂರ್ಣ ಹಳ್ಳ ಹಿಡಿದಿದೆ.
ಯಾದವಾಡದ ಹೊರವಲಯದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕ ಕೇವಲ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ. ಸರಕಾರ ಹೇಳುವಂತೆ ಕಸ ವಿಲೇವಾರಿ ವೈಜ್ಞಾನಿಕವಾಗಿ ನಡೆಯದ ಕಾರಣ ಪರಿಸರದ ಮೇಲೆ ಭಾರಿ ಪ್ರಮಾಣದ ದುಷ್ಟಾರಿಣಾಮ ಬೀರುತ್ತಿದೆ.
ಯಾದವಾಡ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಕಸ ವಿಲೇವಾರಿ ಘಟಕ ಗ್ರಾಪಂ ಆಡಳಿತದ ನಿರ್ಲಕ್ಷ್ಯದಿಂದಾಗಿ ಇದ್ದೂ ಇಲ್ಲದಂತಾಗಿದೆ. ಗ್ರಾಮದ ಹೊರವಲಯದಲ್ಲಿ ಗ್ರಾಪಂ ಅನುದಾನದಡಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಗೊಂಡಿದ್ದರೂ ಸಹ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಹಸಿಕಸ ಒಣ ಕಸ ಬೇರ್ಪಡಿಸದೇ ಕಸವನ್ನು ಘಟಕದಿಂದ ಸ್ವಲ್ಪ ದೂರದಲ್ಲಿರುವ ಖಾಲಿ ಜಾಗದಲ್ಲಿ ಎಲ್ಲೆಂದರಲ್ಲಿ ಎಸೆಯಲಾಗಿದೆ.
ರಾಸಾಯನಿಕಯುಕ್ತ ಪ್ಲಾಸ್ಟಿಕ್, ಆಸ್ಪತ್ರೆ ತ್ಯಾಜ್ಯ, ಸಾರ್ವಜನಿಕರ ಮನೆ ತ್ಯಾಜ್ಯ ಹಾಗೂ ವಾಣಿಜ್ಯ ಮಳಿಗೆಗಳ ತ್ಯಾಜ್ಯ ಸಾಗಿಸಲು ವ್ಯವಸ್ಥೆ ಮಾಡಲಾಗಿದೆ ಆದರೆ ಘಟಕದ ಸುತ್ತಲೂ ಸಂಗ್ರಹವಾಗುವ ಕಸವನ್ನು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ವಿಲೇವಾರಿ ಮಾಡುತ್ತಿಲ್ಲ ಎನ್ನವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಅಕ್ರಮ! :
ಯಾದವಾಡದ ತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆಗೊಳ್ಳದೇ ಮತ್ತು ತ್ಯಾಜ್ಯ ವಿಲೇವಾರಿ ನಡೆಯದೇ ಇದ್ದರೂ ಸಹ ಗ್ರಾಪಂ ದಲ್ಲಿ ಮಾತ್ರ ಘಟಕದ ನಿರ್ವಹಣೆ ಹಾಗೂ ಸಿಬ್ಬಂದಿವೇತನ ಹೆಸರಲ್ಲಿ ಹಣ ಸುರಿಯಲಾಗುತ್ತಿದೆ. 2023-24ನೇ ಸಾಲಿನ 15 ನೇ ಹಣಕಾಸು ಆಯೋಗದ ಕ್ರಿಯಾ ಯೋಜನೆಯಲ್ಲಿ ಕ್ರ.ಸಂ 24ರಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕದ ನಿರ್ವಹಣೆ ಹಾಗೂ ಘಟಕದಲ್ಲಿ ಕೆಲಸ ಮಾಡುವ ಒಕ್ಕೂಟ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರ ಗೌರವಧನಕ್ಕಾಗಿ 668551ರೂ. ಗಳ ಅನುದಾನವನ್ನು ಕಾಯ್ದಿರಿಸಿಲಾಗಿತ್ತು. ಆ ಹಣವು ಸದರಿ ಉದ್ದೇಶಕ್ಕೆ ಬಳಕೆಯಾಗಿರುವ ಲಕ್ಷಣ ಕಾಣದೆ ಅಕ್ರಮದ ವಾಸನೆ ಹೊಡೆಯುತ್ತಿದೆ.
ಇನ್ನು 2024-25ನೇ ಸಾಲಿನಲ್ಲೂ 15 ನೇ ಹಣಕಾಸು ಆಯೋಗದ ಕ್ರಿಯಾ ಯೋಜನೆಯಲ್ಲಿ ಕ್ರ.ಸಂ22ರಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕದ ನಿರ್ವಹಣೆ ಹಾಗೂ ಘಟಕದಲ್ಲಿ ಕೆಲಸ ಮಾಡುವ ಒಕ್ಕೂಟ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರ ಗೌರವಧನಕ್ಕಾಗಿ 728551ರೂ,ಗಳನ್ನು ಅನುದಾನವನ್ನು ಕಾಯ್ದಿರಿಸಲಾಗಿದೆ ಎನ್ನುವ ಬಗ್ಗೆ ದಾಖಲೆಗಳು ದೂರಕಿವೆ. ಸದರಿ ಹಣ ಸದುಪಯೋಗವಾಗಬೇಕು. ಯಾಕೆಂದರೆ ಇನ್ನೂ ಬಾಗಿಲನ್ನೇ ತೆರೆಯದ ತ್ಯಾಜ್ಯ ನಿರ್ವಹಣೆಗೆ ಎರಡು ವರ್ಷಗಳ ಕ್ರಿಯಾ ಯೋಜನೆಗಳಲ್ಲಿ ಸುಮಾರು 13.92 ಲಕ್ಷ ರೂ. ಗಳಷ್ಟು ಹಣ ತೆಗೆದಿರಿಸಿದ್ದು ಹಲವು ಗುಮಾನಿಗಳಿಗೆ ಕಾರಣವಾಗಿದೆ. ಸಾರ್ವಜನಿಕರ ತೆರಿಗೆ ದುಡ್ಡನ್ನು ಮನಬಂದಂತೆ ವ್ಯಯ ಮಾಡಲಾಗಿದೆ. ಇದೇರೀತಿ ಅನೇಕ ಯೋಜನೆಗಳಿಗಾಗಿ ಯಾದವಾಡ ಗ್ರಾಮ ಪಂಚಾಯಿತಿಗೆ ಎರಡು ವರ್ಷಗಳಲ್ಲಿ ಒಟ್ಟು 1.25 ಕೋಟಿಗಿಂತಲೂ ಹೆಚ್ಚಿನ ಅನುದಾನ ಬಂದಿದ್ದು ಅದು ಸರಿಯಾಗಿ ಉಪಯೋಗವಾಗಿದೆಯೋ ಇಲ್ಲವೋ….
ಈ ಬಗ್ಗೆ ಬೆಳಗಾವಿ ಜಿಪಂ ಮತ್ತು ತಾಪಂ ಅಧಿಕಾರಿಗಳು ಅಕ್ರಮ ಕುರಿತು ಪರಿಶೀಲನೆ ನಡೆಸಬೇಕಾಗಿದೆ. ಒಂದು ವೇಳೆ ಅಕ್ರಮವೇನಾದರೂ ಕಂಡು ಬಂದರೆ ತಪ್ಪಿತಸ್ತರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುತ್ತಾರಾ? ಎಂದು ಕಾದು ನೋಡಬೇಕು.
ಇದು ಯಾದವಾಡ ಪಂಚಾಯತಿ ಕಚೇರಿ, ಎದುರಿಗೆ ಸೋರುವ ಟ್ಯಾಂಕ್ !
ಅಡ್ರೆಸ್ ಇಲ್ಲದಂತೆ ಯಾವುದೇ ಫಲಕ ಇಲ್ಲದೆ ಇರುವ ಇದು ಯಾದವಾಡದ ಗ್ರಾಮ ಪಂಚಾಯಿತಿ ಕಚೇರಿಯ ಕಟ್ಟಡ ! ಹೊರಗಿನಿಂದ ನೋಡಿದರೆ ಒಂದು ಹಳೆಯ ಪ್ರಾಥಮಿಕ ಶಾಲೆಯಂತೆ ತೋರುತ್ತದೆ. ಅಲ್ಲಲ್ಲಿ ಸಿಮೆಂಟ್ ಬಿಟ್ಟು ಹೋಗಿ ಕಟ್ಟಡ ಶಿಥಿಲಗೊಂಡಿದೆ. ಪಂಚಾಯತಿ ಕಟ್ಟಡದ ಒಳಗೆ ಮಾತ್ರ ಎಲ್ಲ ರೀತಿಯ ಸೌಲಭ್ಯಗಳನ್ನು ಮಾಡಿಕೊಂಡಿದ್ದು ಜನರಿಗೆ ಯಾವ ರೀತಿಯ ಸೇವೆ ಸಿಗುತ್ತದೆಯೆಂಬುದನ್ನು ಹಲವು ಗ್ರಾಮಸ್ಥರು ಹೇಳಿಕೊಂಡಿದ್ದು ಅದರ ಬಗ್ಗೆ ಮುಂದಿನ ದಿನಗಳಲ್ಲಿ ಬರೆಯಲಾಗುವುದು.
ಪಂಚಾಯತಿ ಕಚೇರಿಯ ಎದುರಿಗೆ ಇರುವ ನೀರಿನ ಟ್ಯಾಂಕ್ ಸತತ ಸೋರುತ್ತಲೇ ಇರುತ್ತದೆ. ಹಲವಾರು ವರ್ಷಗಳಿಂದ ಇದು ಸೋರುತ್ತಲೇ ಇದ್ದರೂ ಅದನ್ನು ರಿಪೇರಿ ಮಾಡಿಸುವ ಮನಸ್ಸು ಇಲ್ಲಿನ ಪಿಡಿಓ ಗಾಗಲಿ, ಜನಪ್ರತಿನಿಧಿಗಳಿಗಾಗಲಿ ಇನ್ನೂ ಬಂದಿಲ್ಲ. ಆದರೆ ಅತ್ಯಮೂಲ್ಯವಾದ ನೀರು ವೃಥಾ ಹರಿದು ಹೋಗುತ್ತಿದ್ದರೂ ಯಾರ ಕಣ್ಣಿಗೂ ಕಾಣುತ್ತಿಲ್ಲ ಎಂಬುದೇ ವಿಪರ್ಯಾಸಕರ.